Banner Top
Banner Content

ಕನ್ನಡದ ಮೊದಲ ಕೃತಕ ಬುದ್ಧಿಮತ್ತೆ (AI) ಸಿನೆಮಾ ‘ಲವ್ ಯು’ ತೆರೆಗೆ ಸಿದ್ಧ

ಎ. ಐ ಚಿತ್ರ ‘ಲವ್ ಯು’ ಬಿಡುಗಡೆಗೆ ಸೆನ್ಸಾರ್ ಗ್ರೀನ್ ಸಿಗ್ನಲ್

‘ಲವ್ ಯು’ಗೆ ವಿಶ್ವದ ಮೊದಲ ಕೃತಕ ಬುದ್ಧಿಮತ್ತೆ (AI) ಆಧಾರಿತ ಚಲನಚಿತ್ರ ಎಂಬ ಹೆಗ್ಗಳಿಕೆ

ಜಗತ್ತಿನಲ್ಲಿ ಈಗ ಎಲ್ಲಿ ನೋಡಿದರೂ ಕೃತಕ ಬುದ್ಧಿಮತ್ತೆ (ಎ. ಐ)ಯದ್ದೇ ಮಾತು. ನಿಧಾನವಾಗಿ ಒಂದೊಂದೇ ಕ್ಷೇತ್ರವನ್ನು ಆವರಿಸಿಕೊಂಡು ಬರುತ್ತಿರುವ ಕೃತಕ ಬುದ್ಧಿಮತ್ತೆ (ಎ. ಐ) ಕೆಲ ಸಮಯದ ಹಿಂದೆಯೇ ಚಿತ್ರರಂಗವನ್ನೂ ಸ್ಪರ್ಶಿಸಿದೆ. ಈಗಾಗಲೇ ಸಿನೆಮಾಗಳ ಹಲವು ವಿಭಾಗಗಳಲ್ಲಿ, ಪ್ರೀ-ಪ್ರೊಡಕ್ಷನ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಎ. ಐ ಬಳಕೆ ನಿಧಾನವಾಗಿ ಹೆಚ್ಚಾಗುತ್ತಿದೆ. ಈಗ ಈ ವಿಷಯದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಒಂದು ಚಿತ್ರತಂಡ ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ (ಎ. ಐ) ಮೂಲಕವೇ ತಯಾರಾದ ‘ಲವ್ ಯು’ ಎಂಬ ಹೆಸರಿನ ಮೊದಲ ಸಿನೆಮಾವನ್ನು ತೆರೆಗೆ ತರುವ ತಯಾರಿಯಲ್ಲಿದೆ.

ಸಂಪೂರ್ಣ ಎ. ಐ (AI) ತಂತ್ರಜ್ಞಾನದಲ್ಲಿ ನಿರ್ಮಿತ ಸಿನೆಮಾ

‘ಲವ್ ಯು’ ಎಂಬ ಹೆಸರಿನ ಈ ಸಿನೆಮಾವನ್ನು ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ (ಎ. ಐ) ಬಳಸಿ ನಿರ್ಮಿಸಲಾಗಿದೆ. ಈಗಾಗಲೇ ಜಗತ್ತಿನ ಅನೇಕ ಚಿತ್ರರಂಗಗಳಲ್ಲಿ, ಸಿನೆಮಾಗಳ ವಿವಿಧ ವಿಭಾಗಗಳಲ್ಲಿ ಎ. ಐ (AI) ತಂತ್ರಜ್ಞಾನವನ್ನು ಬಳಸಲಾಗುತ್ತಿದೆಯಾದರೂ, ಸಂಪೂರ್ಣವಾಗಿ ಎ. ಐ ಮೂಲಕವೇ ಇಡೀ ಸಿನೆಮಾವನ್ನು ನಿರ್ಮಿಸುವ ಸಾಹಸ ಎಲ್ಲಿಯೂ ನಡೆದಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಸಂಪೂರ್ಣ ಎ. ಐ (AI) ತಂತ್ರಜ್ಞಾನವನ್ನೇ ಬಳಸಿಕೊಂಡು ‘ಲವ್ ಯು’ ಸಿನೆಮಾವನ್ನು ತಯಾರಿಸಲಾಗಿದೆ.

ವಿಶ್ವದಲ್ಲಿಯೇ ಮೊದಲ ಸಂಪೂರ್ಣ ಎ. ಐ (AI) ಸಿನೆಮಾ!

‘ಈ ಸಿನೆಮಾದ ನಿರ್ದೇಶಕರು, ನಿರ್ಮಾಪಕರನ್ನು ಹೊರತುಪಡಿಸಿದರೆ, ಮತ್ತೆಲ್ಲ ಕೆಲಸಗಳನ್ನೂ ಎ. ಐ (AI) ತಂತ್ರಜ್ಞಾನವೇ ಮಾಡಿರುವುದು ಇದರ ಮೊದಲ ವಿಶೇಷತೆ. ಇದು ವಿಶ್ವದಲ್ಲಿಯೇ ಸಂಪೂರ್ಣ ಎ. ಐ (AI) ನಿರ್ಮಿತ ಮೊದಲ ಸಿನೆಮಾ’ ಎನ್ನುತ್ತಾರೆ ಈ ಸಿನೆಮಾವನ್ನು ನಿರ್ಮಿಸಿ, ನಿರ್ದೇಶಿಸಿರುವ ಎಸ್. ನರಸಿಂಹ ಮೂರ್ತಿ. ‘ನಮ್ಮ ‘ಲವ್ ಯು’ ಸಿನೆಮಾದಲ್ಲಿ ಬರುವ ಪ್ರತಿ ಪಾತ್ರಗಳು, ಅವುಗಳ ಸಂಭಾಷಣೆ, ಸಂಗೀತ ಸಂಯೋಜನೆ, ಛಾಯಾಗ್ರಹಣ, ಸೌಂಡ್ ಡಿಸೈನ್, ಹಿನ್ನೆಲೆಯಲ್ಲಿ ಬರುವ ಸ್ಥಳಗಳು, ಕಲರಿಂಗ್ ಹೀಗೆ ಎಲ್ಲಾ ಕೆಲಸಗಳಿಗೂ ಎ. ಐ ತಂತ್ರಜ್ಞಾನ ಬಳಕೆ ಮಾಡಲಾಗಿದೆ. ನೂತನ್ ಎಂಬ ಎ. ಐ (AI) ಇಂಜಿನಿಯರ್ ತಮ್ಮ ತಾಂತ್ರಿಕ ನಾಯಕತ್ವ ಮತ್ತು ಸುಂದರ್ ರಾಜ್ ಗುಂಡೂರಾವ್ ಯೋಜನೆಯ ನೇತೃತ್ವದಲ್ಲಿ ಈ ಸಿನೆಮಾ ಸೃಜನಶೀಲವಾಗಿ ಮೂಡಿಬಂದಿದೆ’ ಎಂಬುದು ‘ಲವ್ ಯು’ ಎ. ಐ (AI) ಸಿನೆಮಾದ ನಿರ್ದೇಶಕ ಮತ್ತು ನಿರ್ಮಾಪಕ ಎಸ್. ನರಸಿಂಹ ಮೂರ್ತಿ ಮಾತು.

 ‘ಲವ್ ಯು’ ಎ. ಐ (AI) ಸಿನೆಮಾಗೆ ಸೆನ್ಸಾರ್ ಗ್ರೀನ್ ಸಿಗ್ನಲ್!

ಅಂದಹಾಗೆ, 95 ನಿಮಿಷಗಳ ‘ಲವ್ ಯು’ ಎ. ಐ (AI) ಸಿನೆಮಾದಲ್ಲಿ ಬರೋಬ್ಬರಿ 12 ಹಾಡುಗಳಿವೆ. ಅವೆಲ್ಲವೂ (AI) ಮೂಲಕ ಸಂಯೋಜಿಸಲ್ಪಟ್ಟು, ಮುದ್ರಣಗೊಂಡಿವೆ. ಈಗಾಗಲೇ ‘ಲವ್ ಯು’ ಸಿನೆಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಈ ಸಿನೆಮಾವನ್ನು ಇತ್ತೀಚೆಗೆ ವೀಕ್ಷಿಸಿದ ಸೆನ್ಸಾರ್ ಮಂಡಳಿ ‘ಲವ್ ಯು’ ಎ. ಐ (AI) ಸಿನೆಮಾಕ್ಕೆ ‘ಯು/ಎ’ ಪ್ರಮಾಣ ಪತ್ರವನ್ನು ನೀಡಿದೆ. ಈ ಮೂಲಕ ಸಂಪೂರ್ಣ ಕೃತಕ ಬುದ್ಧಿಮತ್ತೆ (ಎ. ಐ) ಮೂಲಕ ತಯಾರಾದ ‘ಲವ್ ಯು’ ಸಿನೆಮಾ ಥಿಯೇಟರಿನಲ್ಲಿ ಬಿಡುಗಡೆಯಾಗಲು ಸೆನ್ಸಾರ್ ಮಂಡಳಿಯಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದೆ. ತಮ್ಮ ಇಂಥದ್ದೊಂದು ಸಿನೆಮಾ ಯೋಜನೆಯ ಬಗ್ಗೆ ಮಾತನಾಡಿರುವ ‘ಲವ್ ಯು’ ಸಿನೆಮಾದ ನಿರ್ದೇಶಕ ಮತ್ತು ನಿರ್ಮಾಪಕ ಎಸ್. ನರಸಿಂಹ ಮೂರ್ತಿ, ‘ಇದು ಕೇವಲ ಸಿನೆಮಾ ಅಲ್ಲ, ಇದೊಂದು ಕ್ರಾಂತಿ. ಕಥೆ ಹೇಳುವಿಕೆ ಮತ್ತು ತಂತ್ರಜ್ಞಾನ ಸರಾಗವಾಗಿ ಬೆರೆಯುವ ಹೊಸ ಯುಗವನ್ನು ನಾವು ಪ್ರವೇಶಿಸುತ್ತಿದ್ದೇವೆ. ಕನ್ನಡ ಸಿನೆಮಾ ಜಾಗತಿಕ ಮಟ್ಟದಲ್ಲಿ ಇಂಥದ್ದೊಂದು ಬದಲಾವಣೆಗೆ ಉದಾಹರಣೆಯಾಗಿದೆ. ಭವಿಷ್ಯದಲ್ಲಿ ಈ ಬದಲಾವಣೆಗೆ ಹೊಂದಿಕೊಂಡು ನಮ್ಮ ಚಿತ್ರರಂಗ ಉಳಿದ ಚಿತ್ರರಂಗಗಳನ್ನು ಮುನ್ನಡೆಸುತ್ತಿದೆ ಎಂಬ ನಂಬಿಕೆ ನಮಗಿದೆ. ಇಂಥದ್ದೊಂದು ಕೆಲಸ ಮಾಡಿರುವುದಕ್ಕೆ ನನಗೆ ಹೆಮ್ಮೆ ಇದೆ’ ಎಂದು ಹೇಳಿದ್ದಾರೆ.

ಇದೇ ಮೇ ಅಥವಾ ಜೂನ್ ವೇಳೆಗೆ ತೆರೆಗೆ…

ಸದ್ಯ ಸೆನ್ಸಾರ್ ನಿಂದ ಪಾಸ್ ಆಗಿರುವ ಕೃತಕ ಬುದ್ಧಿಮತ್ತೆ (AI) ಸಿನೆಮಾ ‘ಲವ್ ಯು’ ವನ್ನು ಇದೇ ಮೇ ಅಥವಾ ಜೂನ್ ವೇಳೆಗೆ ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ ಚಿತ್ರತಂಡ. ಒಟ್ಟಾರೆ ಜಗತ್ತಿನ ಮೊದಲ ಸಂಪೂರ್ಣ ಎ. ಐ ನಿರ್ಮಿತ ಸಿನೆಮಾ ಎಂಬ ಹೆಗ್ಗಳಿಕೆ ಹೆೊತ್ತಿರುವ ‘ಲವ್ ಯು’ ತೆರೆಮೇಲೆ ಹೇಗಿರಲಿದೆ ಎಂಬುದು ಸಿನೆಮಾ ಥಿಯೇಟರಿಗೆ ಬಂದ ಮೇಲಷ್ಟೇ ಗೊತ್ತಾಗಲಿದೆ.

Banner Content
Tags: , , , ,

Related Article

Sponsored Ads1

error: Content is protected !!