Banner Top
Banner Content

ಡೇಟ್‌ ಲೈಫ್‌ ಬಗ್ಗೆ ವಿಜಯ್‌ ಟಾಕ್‌!

‘ಕರ್ಲಿಟೇಲ್ಸ್‌’ಗೆ ನೀಡಿದ ಸಂದರ್ಶನದಲ್ಲಿ ತಮ್ಮ ರಿಲೇಷನ್‌ ಶಿಪ್‌ ಸ್ಟೇಟಸ್‌ ಬಗ್ಗೆ ಮಾತನಾಡಿದ ದೇವರಕೊಂಡ

ಮತ್ತೆ ಮುನ್ನೆಲೆಗೆ ಬಂದ ರಶ್ಮಿಕಾ – ವಿಜಯ್‌ ರಿಲೇಷನ್‌ಶಿಪ್‌ ಸುದ್ದಿ

ಸಿನೆಮಾದ ಹೊರತಾಗಿ ಬೇರೆ ಬೇರೆ ವಿಷಯಕ್ಕೆ ಸುದ್ದಿಯಲ್ಲಿರುವ ನಟರ ಪೈಕಿ ಟಾಲಿವುಡ್‌ ನಟ ವಿಜಯ್‌ ದೇವರಕೊಂಡ ಕೂಡ ಒಬ್ಬರು. ಅದರಲ್ಲೂ ವಿಜಯ್‌ ದೇವರಕೊಂಡ ತಮ್ಮ ಸಿನೆಮಾದ ಹೊರತಾಗಿ ಅತಿ ಹೆಚ್ಚು ಸುದ್ದಿಯಾಗುತ್ತಿರುವುದು ತಮ್ಮ ಡೇಟ್‌ ಲೈಫ್‌ ವಿಚಾರದಲ್ಲಿ. ಆಗಾಗ ಕೊಡಗಿನ ಚೆಲುವೆ ರಶ್ಮಿಕಾ ಮಂದಣ್ಣ  ಜತೆ ರಿಲೇಷನ್‌ ಶಿಪ್‌ನಲ್ಲಿದ್ದಾರೆ ಎನ್ನುವ ವದಂತಿಗಳ ಸಲುವಾಗಿ ಸುದ್ದಿಯಾಗುತ್ತಿರುವ ವಿಜಯ್‌ ದೇವರಕೊಂಡ ಈಗ ಮತ್ತೆ ತಮ್ಮ ರಿಲೇಷನ್‌ಶಿಪ್‌ ವಿಷಯಕ್ಕೆ ಸುದ್ದಿಯಲ್ಲಿದ್ದಾರೆ.

ಮುಚ್ಚಿಟ್ಟ ಗುಟ್ಟು ಬಿಚ್ಚಿಟ್ಟ ವಿಜಯ್‌…

ಹೌದು, ಇಲ್ಲಿಯವರೆಗೆ ತಮ್ಮ ಡೇಟಿಂಗ್‌ ಬಗ್ಗೆ ಎಲ್ಲಿಯೂ ಮಾತನಾಡಿರದ ವಿಜಯ್‌ ದೇವರಕೊಂಡ, ಇದೀಗ ತಾನು ರಿಲೇಷನ್‌ ಶಿಪ್‌ನಲ್ಲಿ ಇದ್ದೇನೆ ಎಂದು ಸ್ವತಃ ಒಪ್ಪಿಕೊಂಡಿದ್ದಾರೆ. ‘ಕರ್ಲಿ ಟೇಲ್ಸ್‌‘ಗೆ ನೀಡಿದ ಸಂದರ್ಶನದಲ್ಲಿ, ‘ನಾನು ಸಿಂಗಲ್‌ ಅಲ್ಲ‘ ಎಂದು ಹೇಳಿದ್ದಾರೆ. ಈ ಮೂಲಕ ‘ಅರ್ಜುನ್‌ ರೆಡ್ಡಿ‘ ನಟ ತಮ್ಮ ರಿಲೇಷನ್‌ ಶಿಪ್‌ ಸ್ಟೇಟಸ್‌ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.

ಸಂದರ್ಶನದಲ್ಲಿ ವಿಜಯ್‌ ಏನಂದ್ರು..?

“ನನಗೆ 35 ವರ್ಷ, ನಾನು ಒಬ್ಬಂಟಿಯಾಗಿದ್ದೇನೆ ಎಂದು ನೀವು ಭಾವಿಸುತ್ತೀರಾ?” ಎಂದು ವಿಜಯ್‌ ಅವರೇ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ನೀವು ಮೊದಲು ಸಹನಟಿಯ ಜೊತೆ ಡೇಟಿಂಗ್ ಮಾಡಿದ್ದೀರಾ ಎಂದು ಸಂದರ್ಶಕರು ಕೇಳಿದಾಗ, “ಹೌದು, ನಾನು ಡೇಟಿಂಗ್‌ ಮಾಡುತ್ತಿದ್ದೇನೆ” ಎಂದು ಉತ್ತರಿಸುವ ಮೂಲಕ ತಾವು ಸಿಂಗಲ್‌ ಆಗಿಲ್ಲ ಎನ್ನುವುದು ಖಾತ್ರಿ ಪಡಿಸಿದ್ದಾರೆ.
“ಪ್ರೀತಿಸುವುದು ಹೇಗೆ ಎಂದು ನನಗೆ ತಿಳಿದಿದೆ ಮತ್ತು ಪ್ರೀತಿಸುವುದು ಏನು ಎಂಬುದನ್ನು ನಾನು ಚೆನ್ನಾಗಿ ಅರಿತಿದ್ದೇನೆ. ನನಗೆ ಷರತ್ತುಗಳಿರುವ ಪ್ರೀತಿ ಹೇಗೆ ಎಂಬುದು ತಿಳಿದಿಲ್ಲ. ಏಕೆಂದರೆ ನನ್ನ ಪ್ರೀತಿಯು ನಿರೀಕ್ಷೆಗಳೊಂದಿಗೆ ಬರುತ್ತದೆ. ಹಾಗಾಗಿ ನನ್ನ ಜೀವನದಲ್ಲಿ ಪ್ರೀತಿಯು ಷರತ್ತುಗಳನ್ನು ಹೊಂದಿಲ್ಲ” ಎಂದಿದ್ದಾರೆ.

ಫ್ರೆಂಡ್‌ಶಿಪ್‌ ಫಸ್ಟ್‌…, ಡೇಟಿಂಗ್‌ ನೆಕ್ಸ್ಟ್‌!

ವೈವಾಹಿಕ ಜೀವನ ವೃತ್ತಿಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎನ್ನುವ ಬಗ್ಗೆ ಪ್ರಶ್ನಿಸಿದಾಗ, “ಇದು ಮಹಿಳೆಯರಿಗೆ ಹೆಚ್ಚು ಸವಾಲಾಗಿದೆ. ಮದುವೆಯು ವೃತ್ತಿಜೀವನಕ್ಕೆ ಅಡ್ಡಿಯಾಗಬೇಕಾಗಿಲ್ಲ. ಇದು ನಿಮ್ಮ ವೃತ್ತಿಯನ್ನು ಅವಲಂಬಿಸಿರುತ್ತದೆ. ನಾನು ಸಾಮಾನ್ಯವಾಗಿ ಯಾರೊಂದಿಗೆ ಹೆಚ್ಚು ಡೇಟ್‌ಗೆ ಹೋಗುವುದಿಲ್ಲ. ಮೊದಲು ಬಲವಾದ ಸ್ನೇಹಕ್ಕೆ ಹೆಚ್ಚು ಆದ್ಯತೆ ನೀಡುತ್ತೇನೆ.‌ ಅವರನ್ನು ಸಂಪೂರ್ಣವಾಗಿ ತಿಳಿದುಕೊಂಡ ಬಳಿಕವಷ್ಟೇ ಅವರೊಂದಿಗೆ ಹೊರಗಡೆ ಹೋಗಲು ಇಷ್ಟಪಡುತ್ತೇನೆ” ಎಂದು ವಿಜಯ್‌ ದೇವರಕೊಂಡ ಮುಕ್ತವಾಗಿ ಹೇಳಿಕೊಂಡಿದ್ದಾರೆ.

‘ಅರ್ಜುನ್‌ ರೆಡ್ಡಿ‘ ರಶ್ಮಿಕಾ ಜತೆಗಿನ ಸಂಬಂಧ ದೃಢಪಡಿಸಿದ್ರಾ..? 

ಎಲ್ಲರಿಗೂ ಗೊತ್ತಿರುವಂತೆ ವಿಜಯ್‌ ದೇವರಕೊಂಡ – ರಶ್ಮಿಕಾ ಮಂದಣ್ಣ ಜೋಡಿ ‘ಗೀತಾ ಗೋವಿಂದಂ‘, ‘ಡಿಯರ್‌ ಕಾರ್ಮೆಡ್‌‘ ಸಿನೆಮಾದಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ. ಇದಾದ ಬಳಿಕ ಇಬ್ಬರೂ ಅನೇಕ ಕಡೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಪಾರ್ಟಿ, ಹಾಲಿಡೇ ಮೋಡ್‌ನಲ್ಲಿ ವಿಜಯ್‌ – ರಶ್ಮಿಕಾ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಇಬ್ಬರು ತಾವು ಸ್ನೇಹಿತರಷ್ಟೇ ಎಂದು ಹೇಳುತ್ತಾ ಬಂದಿದ್ದಾರೆ. ಆದರೆ ಇದೀಗ ವಿಜಯ್‌ ದೇವರಕೊಂಡ ಅವರು ರಿಲೇಷನ್‌‌ ಶಿಪ್ ಬಗ್ಗೆ ಮಾತನಾಡಿದ ಬಳಿಕ ರಶ್ಮಿಕಾ ಅವರ ಜತೆಗಿನ ಸಂಬಂಧವನ್ನು ಅವರು ದೃಢಪಡಿಸಿದ್ದಾರೆ ಎನ್ನುವ ಮಾತುಗಳು ಟಾಲಿವುಡ್‌ ಅಂಗಳದಲ್ಲಿ ಕೇಳಿ ಬರುತ್ತಿದೆ. ಇನ್ನು ಕಳೆದ ಕೆಲ ಸಮಯದಿಂದ ರಶ್ಮಿಕಾ ಬ್ಯಾಕ್‌ ಟು ಬ್ಯಾಕ್‌ ಹಿಟ್‌ ಸಿನೆಮಾಗಳಲ್ಲಿ ಅಭಿನಯಿಸುತ್ತಿದ್ದರೆ, ಮತ್ತೊಂದೆಡೆ ವಿಜಯ್‌ ದೇವರಕೊಂಡ ಅವರ ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಹೇಳಿಕೊಳ್ಳುವ ಮಟ್ಟಿಗೆ ಕಮಾಲ್‌ ಮಾಡುತ್ತಿಲ್ಲ. ಸದ್ಯ ವಿಜಯ್‌ ದೇವರಕೊಂಡ ಇನ್ನೂ ಹೆಸರಿಡದ ‘ವಿಡಿ12‘ ಸಿನೆಮಾದಲ್ಲಿ ಅಭಿನಯಿಸುತ್ತಿದ್ದರೆ, ಅತ್ತ ರಶ್ಮಿಕಾ ಮಂದಣ್ಣ ‘ಪುಷ್ಪ-2‘ ಸಿನೆಮಾದ ಬಿಡುಗಡೆ ಎದುರು ನೋಡುತ್ತಿದ್ದಾರೆ.

Banner Content
Tags: , , , ,

Related Article

Sponsored Ads1

error: Content is protected !!