Banner Top
Banner Content

ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದಂದು ‘ಮಾ ವಂದೇ’ ಬಯೋಪಿಕ್ ಘೋಷಣೆ

ಮೋದಿ ಪಾತ್ರದಲ್ಲಿ ಮಲಯಾಳಂ ನಟ.. ‘ವಿಶ್ವನೇತಾ’ ಆಗಲಿದ್ದಾರೆ ಉನ್ನಿ ಮುಕುಂದನ್

ಬಾಲ್ಯದಿಂದ ಪ್ರಧಾನಿಗಾದಿಯವರೆಗಿನ ಮೋದಿ‌ ಚಿತ್ರಣ

ಬೆಂಗಳೂರು, ಸೆಪ್ಟೆಂಬರ್‌ 17; ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬವನ್ನು ಇಂದು (17 ಸೆ. 2025)ರಂದು ದೇಶದಾದ್ಯಂತ ಅವರ ಅಭಿಮಾನಿಗಳು ಬಿಜೆಪಿ ಕಾರ್ಯಕರ್ತರು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ದೇಶದ ಅನೇಕ ರಾಜಕಾರಣಿಗಳು, ಉದ್ಯಮಿಗಳು, ತಾರೆಯರು ಪ್ರಧಾನಿ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಇನ್ನು ಪ್ರಧಾನಿ ಮೋದಿ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ಜೀವನ ಆಧರಿಸಿದ ಸಿನೆಮಾ ಒಂದನ್ನು ಘೋಷಣೆ ಮಾಡಲಾಗಿದೆ. ಈಗಾಗಲೇ ನರೇಂದ್ರ ಮೋದಿ ಜೀವನ ಆಧರಿಸಿದ ‘ಪಿಎಂ ನರೇಂದ್ರ ಮೋದಿ’ ಸಿನೆಮಾ 2019 ರಲ್ಲಿ ಬಿಡುಗಡೆ ಆಗಿತ್ತು. ಈ ಸಿನೆಮಾದಲ್ಲಿ ನರೇಂದ್ರ ಮೋದಿ ಪಾತ್ರದಲ್ಲಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ನಟಿಸಿದ್ದರು. ಇದೀಗ ಮತ್ತೊಮ್ಮೆ ನರೇಂದ್ರ ಮೋದಿ ಜೀವನ ಬೆಳ್ಳಿ ಪರದೆಗೆ ಬರಲಿದೆ. ಈ ಬಾರಿ ಮಲಯಾಳಂ ನಟ ಉನ್ನಿ ಮುಕುಂದನ್‌ ಅವರು ನರೇಂದ್ರ ಮೋದಿ ಪಾತ್ರದಲ್ಲಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ.

ನರೇಂದ್ರ ಮೋದಿ ಮೇಲೆ ಮತ್ತೊಂದು ಸಿನೆಮಾ…!

ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಅಂಗವಾಗಿ ‘ಸಿಲ್ವರ್ ಕ್ಯಾಸ್ಟ್ ಕ್ರಿಯೇಷನ್ಸ್’ ಎಂಬ ನಿರ್ಮಾಣ ಸಂಸ್ಥೆ ‘ಮಾ ವಂದೇ’ ಚಿತ್ರ ಘೋಷಣೆ‌ ಮಾಡಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಜೀವನ ಆಧಾರಿತ ಸಿನೆಮಾವಾಗಿದೆ. ವೀರ್ ರೆಡ್ಡಿ ಎಂ. ನಿರ್ಮಿಸಿರುವ ಈ ಚಿತ್ರದಲ್ಲಿ ಮಲಯಾಳಂ ನಟ ಉನ್ನಿ ಮುಕುಂದನ್ ನರೇಂದ್ರ ಮೋದಿಯವರ ಪಾತ್ರದಲ್ಲಿ ನಟಿಸಲಿದ್ದಾರೆ. ಇದು ನರೇಂದ್ರ ಮೋದಿ ಜೀವನದ ಬಗ್ಗೆ ನಿರ್ಮಾಣ ಆಗುತ್ತಿರುವ ಎರಡನೇ ಸಿನೆಮಾವಾಗಿದೆ. ಇತ್ತೀಚೆಗಿನ ಮಲೆಯಾಳಂ ಹಿಟ್ ಚಿತ್ರಗಳಾದ ‘ಮಾರ್ಕೊ’, ‘ಮಲ್ಲಿಕಾಪುರಂ’ ಇನ್ನೂ ಹಲವಾರು ಚಿತ್ರಗಳಲ್ಲಿ ನಟಿಸಿರುವ ಉನ್ನಿ ಮುಕುಂದನ್ ಅವರು ಸಿನೆಮಾನಲ್ಲಿ ಮೋದಿಯ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಸದ್ಯ ಉನ್ನಿ ಮುಕುಂದನನ್‌ ಮಲೆಯಾಳಂನ ‘ಮಂಡಿಯುಮ್ ಪರಂಜುಮ್’ ಸಿನೆಮಾದಲ್ಲಿ ನಟಿಸುತ್ತಿದ್ದು, ಆ ಸಿನೆಮಾದ ಬಳಿಕ ‘ಮಾ ವಂದೇ’ ಚಿತ್ರ ತೆರೆಗೆ ಬರಲಿದೆ.

ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂತೆ ‘ಮಾ ವಂದೇ’ ಚಿತ್ರ ನಿರ್ಮಾಣ

ಇನ್ನು ಕ್ರಾಂತಿ ಕುಮಾರ್ ಸಿ. ಎಚ್. ನಿರ್ದೇಶಿಸಲಿರುವ ‘ಮಾ ವಂದೇ’ ಸಿನೆಮಾ ಎಲ್ಲಾ ವರ್ಗಗಳ ಪ್ರೇಕ್ಷಕರನ್ನು ಗುರಿಯಾಗಿ ಇಟ್ಟುಕೊಂಡು ತೆರೆಗೆಲಾಗುವುದು.‌ ಸಮಾಜದ ಕನಸುಗಳನ್ನು ಹೊಂದಿರುವ ಚಿಕ್ಕ ಹುಡುಗನಿಂದ ಭಾರತದ ಪ್ರಧಾನಿಯಾಗುವವರೆಗಿನ ಮೋದಿಯವರ ಪ್ರಯಾಣವನ್ನು ಚಿತ್ರದಲ್ಲಿ ಕಟ್ಟಿಕೊಡಲಾಗುವುದು. ಈ ಚಿತ್ರವು ಅವರ ವೈಯಕ್ತಿಕ ಮತ್ತು ರಾಜಕೀಯ ಜೀವನ ಮತ್ತು ಸತ್ಯ ಘಟನೆಗಳ ಆಧಾರದ ಮೇಲೆ ಚಿತ್ರ‌ ಮೂಡಿ ಬರಲಿದೆ.

ಮೋದಿ ವೈಯಕ್ತಿಕ, ರಾಜಕೀಯ ಬದುಕಿನ ಕಥಾಹಂದರ

ನಿರ್ಮಾಪಕ ವೀರ್ ರೆಡ್ಡಿ ಮಾತನಾಡಿ, ‘ಪ್ರಧಾನಿ ಮೋದಿಯವರ ಹುಟ್ಟುಹಬ್ಬದಂದು, ನಮ್ಮ ‘ಸಿಲ್ವರ್ ಕ್ಯಾಸ್ಟ್ ಕ್ರಿಯೇಷನ್ಸ್’ ಬ್ಯಾನರ್ ಅಡಿಯಲ್ಲಿ ಅವರ ಜೀವನ ಚರಿತ್ರೆ ‘ಮಾ ವಂದೇ’ ಅನ್ನು ಘೋಷಿಸಲು ನಮಗೆ ಅಪಾರ ಹೆಮ್ಮೆಯಾಗುತ್ತದೆ. ಈ ಚಿತ್ರವು ಮೋದಿ ಅವರ ವೈಯಕ್ತಿಕ ಮತ್ತು ರಾಜಕೀಯ ಪ್ರಯಾಣದ ಘಟನೆಗಳು ಮತ್ತು ಮೈಲಿಗಲ್ಲುಗಳನ್ನು ಅಧಿಕೃತ ರೀತಿಯಲ್ಲಿ ಪ್ರಸ್ತುತಪಡಿಸುತ್ತದೆ. ‘ಮಾ ವಂದೇ’ ಚಿತ್ರವನ್ನು ಎಲ್ಲಾ ಪ್ಯಾನ್-ಇಂಡಿಯಾ ಭಾಷೆಗಳಲ್ಲಿ ಹಾಗೂ ಇಂಗ್ಲಿಷ್‌ನಲ್ಲಿ ನಿರ್ಮಿಸಲಾಗುವುದು. ಮೋದಿ ಜಿ ಮತ್ತು ಅವರ ತಾಯಿ ಹೀರಾಬೆನ್ ನಡುವಿನ ಬಾಂಧವ್ಯವನ್ನು ಚಿತ್ರದಲ್ಲಿ ಭಾವನಾತ್ಮಕವಾಗಿ ತೋರಿಸಲಾಗುವುದು. ರಾಷ್ಟ್ರ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ನಾಯಕನ ಗಮನಾರ್ಹ ಪ್ರಯಾಣವನ್ನು ನಾವು ಪ್ರೇಕ್ಷಕರಿಗೆ ತರುತ್ತಿದ್ದೇವೆ’ ಎಂದು ಹೇಳಿದರು. ಇನ್ನು ‘ಮಾ ವಂದೇ’ ಚಿತ್ರಕ್ಕೆ ರವಿಬಸ್ರೂರು ಸಂಗೀತ ನಿರ್ದೇಶನವಿದ್ದು, ಎಲ್ಲ ಅಂದುಕೊಂಡಂತೆ ನಡೆದರೆ, ಮುಂದಿನ ವರ್ಷಾಂತ್ಯಕ್ಕೆ ‘ಮಾ ವಂದೇ’ ಚಿತ್ರ ತೆರೆಗೆ ಬರುವ ಸಾಧ್ಯತೆಯಿದೆ.

Banner Content
Tags: , , , , , ,

Related Article

Sponsored Ads1

error: Content is protected !!