Banner Top
Banner Content

‘ಅಖಂಡ 2’ ಬಿಡುಗಡೆಗೆ ಹೊಸ ದಿನಾಂಕ ನಿಗದಿ

ನಂದಮೂರಿ ಬಾಲಕೃಷ್ಣ ಅಭಿನಯದ ಹೊಸಚಿತ್ರದ ಬಿಡುಗಡೆಗೆ ಗ್ರೀನ್‌ ಸಿಗ್ನಲ್‌

ಇದೇ ಡಿಸೆಂಬರ್‌ 12 ರಂದು ‘ಅಖಂಡ 2’ ಬಿಡುಗಡೆ

ಹೈದರಾಬಾದ್‌, ಡಿ. 9: ಎಲ್ಲ ಅಂದುಕೊಂಡಂತೆ ನಡೆದರೆ, ಇದೇ ಡಿಸೆಂಬರ್ 5 ರಂದು ತೆಲುಗು ನಟ ನಂದಮೂರಿ ಬಾಲಕೃಷ್ಣ ನಟನೆಯ ‘ಅಖಂಡ 2’ ಸಿನೆಮಾ ಬಿಡುಗಡೆ ಆಗಬೇಕಿತ್ತು. ಆದರೆ ಮದ್ರಾಸ್ ಹೈಕೋರ್ಟ್ ಆದೇಶದಿಂದಾಗಿ ಕೊನೆ ಕ್ಷಣದಲ್ಲಿ ‘ಅಖಂಡ 2’ ಸಿನೆಮಾದ ಬಿಡುಗಡೆಗೆ ತಡೆ ಬಿದ್ದಿತ್ತು. ಆದರೆ, ಇದೀಗ ‘ಅಖಂಡ 2’ ಸಿನೆಮಾದ ಬಿಡುಗಡೆಗೆ ಇದ್ದ ತಡೆ ನಿವಾರಣೆ ಆಗಿದ್ದು, ಹೊಸ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಲಾಗಿದೆ.

‘ಅಖಂಡ 2’ ರಿಲೀಸಿಗೆ ನ್ಯಾಯಾಲಯದ ಅನುಮತಿ

ಅಂದಹಾಗೆ, ‘ಅಖಂಡ 2′ ಸಿನೆಮಾ ನಿರ್ಮಿಸಿದ್ದ ’14 ರೀಲ್ಸ್ ಪ್ಲಸ್ ಎಂಟರ್‌ರ್ಟೈನ್​​ಮೆಂಟ್’ ಸಂಸ್ಥೆಯ ಮೇಲೆ ಸುಮಾರು 10 ವರ್ಷಗಳ ಹಿಂದಿನ ಹಣಕಾಸು ವಿವಾದದ ಕುರಿತಾಗಿ ‘ಎರೋಸ್ ಇಂಟರ್ನ್ಯಾಷನಲ್’ ಸಂಸ್ಥೆಯು ದಾವೆ ಹೂಡಿತ್ತು. ಈ ಕುರಿತಾಗಿ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್, ’14 ರೀಲ್ಸ್ ಪ್ಲಸ್ ಎಂಟರ್ ರ್ಟೈನ್​​ಮೆಂಟ್’ ನಿರ್ಮಾಣ ಮಾಡಿರುವ ‘ಅಖಂಡ 2’ ಸಿನೆಮಾದ ಬಿಡುಗಡೆಗೆ ತಡೆ ನೀಡಿತ್ತು. ಆದರೆ ಈಗ ನ್ಯಾಯಾಲಯವು ಸಿನೆಮಾದ ಬಿಡುಗಡೆಗೆ ನೀಡಿದ್ದ ತಡೆಯನ್ನು ತೆರವುಗೊಳಿಸಿದೆ.

‘ಅಖಂಡ 2’ ಬಿಡುಗಡೆ ಖಚಿತಪಡಿಸಿದ ನಿರ್ಮಾಣ ಸಂಸ್ಥೆ

ತೆಲುಗು ಚಿತ್ರರಂಗದ ಮೂಲಗಳ ಮಾಹಿತಿ ಪ್ರಕಾರ, ’14 ರೀಲ್ಸ್ ಪ್ಲಸ್ ಎಂಟರ್ಟೈನ್​​ಮೆಂಟ್’ ಸಂಸ್ಥೆಯು ‘ಇರೋಸ್​’ಗೆ ಬಾಕಿ ಚುಕ್ತಾ ಮಾಡಿ ಒಪ್ಪಂದ ಮಾಡಿಕೊಂಡಿದ್ದು, ಅದರಂತೆ ನ್ಯಾಯಾಲಯವು ‘ಅಖಂಡ 2’ ಸಿನೆಮಾದ ಬಿಡಗಡೆಗೆ ವಿಧಿಸಿದ್ದ ತಡೆಯನ್ನು ತೆರವು ಮಾಡಿದೆ. ಹಾಗಾಗಿ ‘ಅಖಂಡ 2’ ಸಿನೆಮಾ ಡಿಸೆಂಬರ್ 12 ರಂದು ಅಂದರೆ ಇದೇ ಶುಕ್ರವಾರ ಬಿಡುಗಡೆ ಆಗಲಿದೆ. ಈ ಬಗ್ಗೆ ಈಗಾಗಲೇ ಹಲವು ತೆಲುಗು ಮಾಧ್ಯಮಗಳು ವರದಿ ಮಾಡಿವೆ. ನಿರ್ಮಾಣ ಸಂಸ್ಥೆಯ ಕಡೆಯಿಂದ ಕೂಡ ‘ಅಖಂಡ 2’ ಸಿನೆಮಾ ಡಿಸೆಂಬರ್ 12 ರಂದು ಬಿಡುಗಡೆಯಾಗುವ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿದೆ.

‘ಅಖಂಡ 2’ ಬಿಡುಗಡೆ ರದ್ದಾಗಿದ್ದಕ್ಕೆ ಆಕ್ರೋಶ..!

ನಟ ನಂದಮೂರಿ ಬಾಲಕೃಷ್ಣ ಅಭಿನಯದ ‘ಅಖಂಡ 2’ ಸಿನೆಮಾ ಕಳೆದ ವಾರ (ಡಿಸೆಂಬರ್ 05) ಬಿಡುಗಡೆ ಆಗಬೇಕಿತ್ತು. ಸಿನೆಮಾದ ಅಡ್ವಾನ್ಸ್ ಬುಕಿಂಗ್ ಸಹ ಆಗಿಬಿಟ್ಟಿತ್ತು. ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಸಿನೆಮಾದ ಟಿಕೆಟ್ ದರ ಹೆಚ್ಚಳಕ್ಕೆ ಸರ್ಕಾರಗಳು ಅನುಮತಿ ಸಹ ನೀಡಿದ್ದವು. ಅಭಿಮಾನಿಗಳು ಸಹ ಚಿತ್ರಮಂದಿರಗಳನ್ನು ಸಿಂಗರಿಸಿ ಬಾಲಯ್ಯನ ಹೊಸ ಸಿನೆಮಾದ ಸ್ವಾಗತಕ್ಕೆ ಸಜ್ಜಾಗಿದ್ದರು. ಡಿಸೆಂಬರ್ 5 ರಂದು ‘ಅಖಂಡ 2’ ಸಿನಿಮಾ ಬಿಡುಗಡೆ ಆಗಬೇಕಿತ್ತು. ಡಿಸೆಂಬರ್ 4ರಂದೇ ಬೆಂಗಳೂರು ಸೇರಿದಂತೆ ಆಂಧ್ರ ಪ್ರದೇಶ, ತೆಲಂಗಾಣಗಳಲ್ಲಿ ಪ್ರೀಮಿಯರ್ ಶೋ ಆಯೋಜನೆ ಮಾಡಲಾಗಿತ್ತು. ಮುಂಗಡವಾಗಿ ಸಿನೆಮಾ ಟಿಕೆಟ್​​ಗಳನ್ನು ಮಾರಾಟ ಸಹ ಮಾಡಲಾಗಿತ್ತು. ಆದರೆ ಅಂತಿಮ ಕ್ಷಣದಲ್ಲಿ ಸಿನೆಮಾದ ಬಿಡುಗಡೆಯನ್ನು ರದ್ದು ಮಾಡಲಾಗಿತ್ತು. ಇದು ಬಾಲಕೃಷ್ಣ ಅಭಿಮಾನಿಗಳಿಗೆ ಭಾರಿ ಬೇಸರ ತಂದಿತ್ತು. ನಿರ್ಮಾಣ ಸಂಸ್ಥೆಯ ವಿರುದ್ಧ ಬಾಲಯ್ಯ ಅಭಿಮಾನಿಗಳು ಹರಿಹಾಯ್ದಿದ್ದರು.

ಆದರೆ ಇದೀಗ ಒಂದೇ ವಾರದಲ್ಲಿ ನಿರ್ಮಾಣ ಸಂಸ್ಥೆ ‘ಅಖಂಡ 2’ ಸಿನೆಮಾದ ಬಿಡುಗಡೆಯ ಹೊಸ ದಿನಾಂಕವನ್ನು ಘೋಷಿಸಿ, ಅಭಿಮಾನಿಗಳ ಆಕ್ರೋಶವನ್ನು ತಣಿಸುವುದರ ಜೊತೆಗೆ ವಿವಾದವನ್ನು ಬಗೆಹರಿಸಿಕೊಂಡಿದೆ. ಇನ್ನು ‘ಅಖಂಡ 2’ ಸಿನೆಮಾ ಇದೇ ಡಿಸೆಂಬರ್ 12 ರಂದು ಬಿಡುಗಡೆಯಾಗುತ್ತಿದ್ದು, ಬಾಲಯ್ಯ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸಿನೆಮಾವನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದು ‘ಅಖಂಡ 2’ ಸಿನೆಮಾ ಥಿಯೇಟರಿಗೆ ಬಂದ ಮೇಲಷ್ಟೇ ಗೊತ್ತಾಗಲಿದೆ.

Banner Content
Tags: , , , , ,

Related Article

Sponsored Ads1

error: Content is protected !!