Banner Top
Banner Content

‘ಬುದ್ದಿವಂತ’ನಿಗೆ ‘ಟೋಪಿ’ ಹಾಕಿದ ಖದೀಮರು!

ನಟ ಉಪೇಂದ್ರ, ಪತ್ನಿ ಪ್ರಿಯಾಂಕಾ ಉಪೇಂದ್ರ ಹೆಸರಿನಲ್ಲಿ ಹಲವರಿಗೆ ಹಣಕ್ಕಾಗಿ ಸಂದೇಶ… 

ರಿಯಲ್‌ ಸ್ಟಾರ್‌ ದಂಪತಿಗೆ ಹ್ಯಾಕರ್ಸ್‌ ಕಾಟ

ಬೆಂಗಳೂರು, ಸೆ. 15;  ಸೈಬರ್ ವಂಚಕರ ವಂಚನೆಯ ಜಾಲಕ್ಕೆ ಕನ್ನಡ ಚಿತ್ರರಂಗದ ನಟ ಕಂ ನಿರ್ದೇಶಕ ಉಪೇಂದ್ರ ಮತ್ತು ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಸಿಕ್ಕಿಕೊಂಡಿದ್ದಾರೆ. ಏಕಕಾಲಕ್ಕೆ ನಟ ಉಪೇಂದ್ರ ಮತ್ತು ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಮೊಬೈಲ್ ನಂಬರ್ ಹ್ಯಾಕ್ ಮಾಡಿರುವ ಸೈಬರ್‌ ವಂಚಕರು ಉಪೇಂದ್ರ ದಂಪತಿಗಳ ಹೆಸರಿನಲ್ಲಿ ಹಲವರಿಗೆ ಮೆಸೇಜ್ ಕಳಿಸಿ ಹಣಕ್ಕಾಗಿ ಮನವಿ ಮಾಡಿದ್ದಾರೆ. ಕೂಡಲೇ ಈ ಬಗ್ಗೆ ಎಚ್ಚೆತ್ತ ನಟ ಉಪೇಂದ್ರ ದಂಪತಿ ಪೊಲೀಸರಿಗೆ ದೂರು ನೀಡಿದ್ದಾರೆ.

ಏನಿದು ಘಟನೆ..?

ನಟ ಉಪೇಂದ್ರ ಮತ್ತು ಅವರ ಪತ್ನಿ ಪ್ರಿಯಾಂಕಾಗೆ  ಇಂದು (ಸೆಪ್ಟೆಂಬರ್ 15) ಸೈಬರ್ ಖದೀಮರು ಶಾಕ್ ನೀಡಿದ್ದಾರೆ. ಇಬ್ಬರ ಮೊಬೈಲ್ ನಂಬರ್‌ ಅನ್ನು ಏಕಕಾಲಕ್ಕೆ ಹ್ಯಾಕ್ ಮಾಡಲಾಗಿದೆ. ಬಳಿಕ ಪರಿಚಯದವರಿಗೆ ವಾಟ್ಸಪ್ ಮೂಲಕ ಸಂದೇಶ ಕಳಿಸಿ ಹಣ ಕೊಡುವಂತೆ ಮನವಿ ಮಾಡಿದ್ದಾರೆ. ಹ್ಯಾಕರ್​​ಗಳ ಈ ಜಾಲಕ್ಕೆ ಕೆಲವರು ಹಣ ಕಳೆದುಕೊಂಡಿದ್ದಾರೆ. ಸ್ವತಃ ಉಪೇಂದ್ರ ಅವರ ಮಗ ಆಯುಷ್ ಕೂಡ 55 ಸಾವಿರ ರೂಪಾಯಿ ಕಳೆದುಕೊಂಡಿದ್ದಾರೆ. ಈ ಘಟನೆ ಹೇಗೆ ನಡೆಯಿತು ಎಂಬುದನ್ನು ಉಪೇಂದ್ರ ಅವರು ವಿವರಿಸಿದ್ದಾರೆ. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಬಳಿಕ ಉಪೇಂದ್ರ ಮಾಧ್ಯಮಗಳ ಜೊತೆ ಮಾತನಾಡಿ ನಡೆದಿರುವ ಘಟನೆಯನ್ನು ವಿವರಿಸಿದ್ದಾರೆ.

ಮೊಬೈಲ್‌ ಹ್ಯಾಕಿಂಗ್‌ ಬಗ್ಗೆ ಉಪೇಂದ್ರ ದಂಪತಿ ಏನಂದರು..? 

‘ಯಾರಿಗೂ ಈ ರೀತಿ ಆಗಬಾರದು. ಯಾವುದೋ ಒಂದು ನಂಬರ್​​ನಿಂದ ಪ್ರಿಯಾಂಕಾ ಅವರಿಗೆ ಕರೆ ಬಂತು. ನೀವು ಏನೋ ಐಟಂ ಆರ್ಡರ್ ಮಾಡಿದ್ದೀರಿ, ಅದಕ್ಕೆ ನಿಮ್ಮ ಅಡ್ರೆಸ್ ಹುಡುಕುತ್ತಿದ್ದಾರೆ, ಸ್ಟಾರ್ ಹಾಗೂ ಹ್ಯಾಶ್ ಇರುವ ಒಂದು ನಂಬರ್​​ಗೆ ಕರೆ ಮಾಡಿ ಎಂದು ಹ್ಯಾಕರ್​​ಗಳು ಹೇಳಿದರು. ಪ್ರಿಯಾಂಕಾ ಫೋನ್​​ನಿಂದ ಆಗಲಿಲ್ಲ. ಬಳಿಕ ನನ್ನ ಫೋನ್ ಹಾಗೂ ಮ್ಯಾನೇಜರ್ ಮಾದೇವ ಅವರ ಫೋನ್​​ನಿಂದ ಪ್ರಯತ್ನಿಸಿದೆವು. ಮೂವರ ಮೊಬೈಲ್ ಕೂಡ ಹ್ಯಾಕ್ ಆಯಿತು’ ಎಂದು ಉಪೇಂದ್ರ ಹೇಳಿದ್ದಾರೆ.

‘ಹ್ಯಾಕ್ ಆದ ಬಳಿಕ ನಮ್ಮ ಫೋನಿಂದ ಬೇರೆಯವರಿಗೆ ಮೆಸೇಜ್ ಹೋಗುತ್ತಿದೆ. ಅರ್ಜೆಂಟಾಗಿ 55 ಸಾವಿರ ರೂಪಾಯಿ ಕಳಿಸಿ ಅಂತ ಎಲ್ಲರಿಗೂ ಕೇಳುತ್ತಿದ್ದಾರೆ. ಖಚಿತಪಡಿಸಿಕೊಳ್ಳಲು ಫೋನ್ ಮಾಡಿದರೆ ರೀಚ್ ಆಗುವುದಿಲ್ಲ. ಏನೋ ಎಮರ್ಜೆನ್ಸಿ ಇರಬಹುದು ಎಂದು ನಮಗೆ ಗೊತ್ತಿರುವ ಕೆಲವರು ದುಡ್ಡು ಕಳಿಸಿದ್ದಾರೆ. ಕೂಡಲೇ ನಾವು ಇಲ್ಲಿ ಬಂದು ದೂರು ನೀಡಿದ್ದೇನೆ. ಇಂಥ ಮೆಸೇಜ್ ಬಂದರೆ ದಯವಿಟ್ಟು ಯಾರೂ ಕೂಡ ದುಡ್ಡು ಕಳಿಸಬೇಡಿ’ ಎಂದು ಉಪೇಂದ್ರ ಅವರು ಎಚ್ಚರಿಕೆ ನೀಡಿದ್ದಾರೆ.

‘ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ. ನನ್ನ ಮಗನಿಗೂ ಹಾಗೆಯೇ ಆಗಿದೆ. ನಿಜ ಇರಬಹುದು ಎಂದುಕೊಂಡು ಅವರು ದುಡ್ಡು ಹಾಕಿದ್ದಾನೆ. ಕೆಲವು ಸ್ನೇಹಿತರದ್ದೂ ಸೇರಿ ಲಕ್ಷಾಂತರ ರೂಪಾಯಿ ಹೋಗಿದೆ. ಇನ್ನೂ ಯಾರೆಲ್ಲ ಮಾಡಿದ್ದಾರೋ ಗೊತ್ತಿಲ್ಲ. ಅದನ್ನೆಲ್ಲ ಚೆಕ್ ಮಾಡಬೇಕು’ ಎಂದಿದ್ದಾರೆ ಉಪೇಂದ್ರ. ಎಲ್ಲರೂ ಎಚ್ಚರಿಕೆಯಿಂದ ಇರಬೇಕು’ ಎಂದು ಅವರು ತಿಳಿಸಿದ್ದಾರೆ.

ಹ್ಯಾಕರ್​​​ಗಳ ಕೃತ್ಯದ ಬಗ್ಗೆ ತಿಳಿಯುತ್ತಿದ್ದಂತೆಯೇ ಉಪೇಂದ್ರ ಮತ್ತು ಪ್ರಿಯಾಂಕಾ ಅವರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಹ್ಯಾಕರ್​​ಗಳ ಜಾಲಕ್ಕೆ ಹೆಚ್ಚಿನ ಜನರು ಸಿಕ್ಕಿಕೊಳ್ಳದಂತೆ ತಪ್ಪಿಸಲು ಪ್ರಯತ್ನಿಸಿದ್ದಾರೆ. ಸದ್ಯ ಉಪೇಂದ್ರ ನೀಡಿರುವ ದೂರನ್ನು ದಾಖಲಿಸಿಕೊಂಡಿರುವ ಪೊಲೀಸರು ಹ್ಯಾಕರ್‌ಗಳ ಪತ್ತೆಗೆ ಮುಂದಾಗಿದ್ದು, ತನಿಖೆ ಬಳಿಕವಷ್ಟೇ ಇದರ ಹಿಂದೆ ಯಾರಿದ್ದಾರೆ ಎಂಬ ಮಾಹಿತಿ ಸಿಗಬೇಕಿದೆ.

Banner Content
Tags: ,

Related Article

Sponsored Ads1

error: Content is protected !!