‘ಸನ್ ನೆಕ್ಸ್ಟ್’ ಓಟಿಟಿಯಲ್ಲಿ ‘ಕಾಲಾಪತ್ಥರ್’ ರಿಲೀಸ್

‘ಸನ್ NXT’ OTTಯಲ್ಲಿ ‘ಕಾಲಾಪತ್ಥರ್’ ಸ್ಟ್ರೀಮಿಂಗ್
ಕಳೆದ ವರ್ಷ ಬಿಡುಗಡೆಯಾಗಿ, ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದ ‘ಕಾಲಾಪತ್ಥರ್’ ಸಿನೆಮಾ ಈಗ ಓಟಿಟಿ ಪ್ಲಾಟ್‌ಫಾರ್ಮ್ ಮೂಲಕ ವೀಕ್ಷಕರ ಮುಂದೆ ಬರುತ್ತಿದೆ. ಹೌದು, ‘ಕಾಲಾಪತ್ಥರ್’ ಸಿನೆಮಾದ ಓಟಿಟಿ ಹಕ್ಕುಗಳನ್ನು ‘ಸನ್ NXT’ ಪಡೆದುಕೊಂಡಿದ್ದು, ಇದೀಗ ‘ಕಾಲಾಪತ್ಥರ್’ ಸಿನೆಮಾ ‘ಸನ್ NXT’ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಿದೆ.
‘ಕಾಲಾಪತ್ಥರ್’ ಸಿನೆಮಾವನ್ನು ‘ಭುವನ್ ಮೂವೀಸ್’ ಬ್ಯಾನರಿನಲ್ಲಿ ಭುವನ್ ಸುರೇಶ್ ಮತ್ತು ನಾಗರಾಜು ಬಿಲ್ಲಿನಕೋಟೆ ಜಂಟಿಯಾಗಿ ಬಂಡವಾಳ ಹೂಡಿ ನಿರ್ಮಿಸಿದ್ದು, ವಿಕ್ಕಿ ವರುಣ್ ಈ ಸಿನೆಮಾದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿರುವುದರ ಜೊತೆಗೆ ನಿರ್ದೇಶನವನ್ನೂ ಮಾಡಿದ್ದಾರೆ. ಧನ್ಯಾ ರಾಮಕುಮಾರ್ ‘ಕಾಲಾಪತ್ಥರ್’ ಸಿನೆಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಟಿ. ಎಸ್. ನಾಗಾಭರಣ, ಅಚ್ಯುತ ಕುಮಾರ್, ಸಂಪತ್ ಮೈತ್ರೇಯ, ರಾಜೇಶ್ ನಟರಂಗ, ಗಿಲ್ಲಿ ನಟ, ಕಾಂತರಾಜು ಮೊದಲಾದವರು ‘ಕಾಲಾಪತ್ಥರ್’ ಸಿನೆಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
‘ಕಾಲಾಪತ್ಥರ್’ ಸಿನೆಮಾದ ಹಾಡುಗಳಿಗೆ ಜೆ. ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಸಂದೀಪ್ ಕುಮಾರ್ ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. 2024ರ ಸೆಪ್ಟೆಂಬರ್ 13ರಂದು ಬಿಡುಗಡೆಯಾದ ‘ಕಾಲಾಪತ್ಥರ್’ ಸಿನೆಮಾ ಬಾಕ್ಸಾಫೀಸ್‌ನಲ್ಲಿ ಹೇಳಿಕೊಳ್ಳುವ ಮಟ್ಟಿಗೆ ಯಶಸ್ಸು ಕಾಣದಿದ್ದರೂ, ಸಿನೆಮಾಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸದ್ಯ ಥಿಯೇಟರಿನಿಂದ ಓಟಿಟಿ ಮೂಲಕ ಕಿರುತೆರೆಗೆ ಬಂದಿರುವ ‘ಕಾಲಾಪತ್ಥರ್’ ಸಿನೆಮಾವನ್ನು OTT ಪ್ಲಾಟ್‌ಫಾರ್ಮ್‌ನಲ್ಲಿ ಉಚಿತವಾಗಿ ನೋಡಬಹುದು. ಆಸಕ್ತರು ‘ಕಾಲಾಪತ್ಥರ್’ ಸಿನೆಮಾವನ್ನು ಈಗ ‘ಸನ್ NXT’ ಅಪ್ಲಿಕೇಶನ್‌ನಲ್ಲಿ ಅಥವಾ ಆನ್‌ಲೈನ್‌ನಲ್ಲಿ sunnxt.com ನಲ್ಲಿ ವೀಕ್ಷಿಸಬಹುದು.