ʼಭೀಮʼನ ʼಬೂಮ್ ಬೂಮ್ ಬೆಂಗಳೂರು…ʼ ಸಾಂಗ್ ರಿಲೀಸ್
ಹೊರಬಂತು ‘ಭೀಮʼನ ಮತ್ತೊಂದು ಮಾಸ್ ಸಾಂಗ್
ಗಿರಿಜನರ ಜಾನಪದ ಶೈಲಿಯ ಹಾಡಿಗೆ ಹೊಸ ಟಚ್
ದುನಿಯಾ ವಿಜಯ್ ನಟನೆ ಮತ್ತು ನಿರ್ದೇಶನದ ‘ಭೀಮʼ ಸಿನೆಮಾ ತೆರೆಗೆ ಬರಲು ತಯಾರಾಗುತ್ತಿದೆ. ಈಗಾಗಲೇ ತನ್ನ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿ, ಸೆನ್ಸಾರ್ ಮುಂದಿರುವ ‘ಭೀಮʼನ ಹಾಡೊಂದು ಈಗ ಬಿಡುಗಡೆಯಾಗಿದೆ.
‘ಬೂಮ್ ಬೂಮ್ ಬೆಂಗಳೂರು…ʼ ಎಂಬ ಸಾಲುಗಳಿಂದ ಶುರುವಾಗುವ ಈ ಹಾಡಿಗೆ ಚರಣ್ ರಾಜ್ ಸಂಗೀತ ಸಂಯೋಜಿಸಿದ್ದು, ನಾಗರಹೊಳೆಯ ಗಿರಿಜನ ಮತ್ತು ಬುಡಕಟ್ಟು ಜನರ ಜಾನಪದ ಗೀತೆಯನ್ನು ಹೊಸ ರೀತಿಯಲ್ಲಿ ಪ್ರೇಕ್ಷಕರ ಮುಂದೆ ತರಲಾಗಿದೆ. ‘ಗಿರಿಜನ ಸಮಗ್ರ ಅಭಿವೃದ್ಧಿ ಕಲಾಕೇಂದ್ರ ಸಂಸ್ಥೆʼಯ ಕಲಾವಿದರು ಈ ಗೀತೆಗೆ ಧ್ವನಿಯಾಗಿದ್ದಾರೆ. ಜನಪದ ಶೈಲಿಯ ಈ ಗೀತೆಗೆ ಹೊಸ ರೂಪಕೊಟ್ಟು ಕೇಳುಗರ ಮುಂದೆ ತರಲಾಗಿದ್ದು, ‘ಭೀಮʼ ಸಿನೆಮಾದ ಈ ಗೀತೆ ಇದೀಗ ‘ಆನಂದ ಆಡಿಯೋʼ ಯು-ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ.
‘ಭೀಮʼ ಸಿನೆಮಾದ ‘ಬೂಮ್ ಬೂಮ್ ಬೆಂಗಳೂರು…ʼ ಹಾಡಿನ ಲಿರಿಕಲ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಬಹುದು…
ಜೋರಾಗಿ ಸಾಗುತ್ತಿದೆ ‘ಭೀಮʼನ ಪ್ರಚಾರ ಕಾರ್ಯ
ಇನ್ನು ‘ಭೀಮʼ ಸಿನೆಮಾದ ಪ್ರಚಾರ ಕಾರ್ಯಗಳು ಭರದಿಂದ ನಡೆಯುತ್ತಿದ್ದು, ಇದೇ ಆಗಸ್ಟ್ ತಿಂಗಳಿನಲ್ಲಿ ‘ಭೀಮʼನನ್ನು ತೆರೆಗೆ ತರುವ ಯೋಚನೆ ಹಾಕಿಕೊಂಡಿದೆ ಚಿತ್ರತಂಡ. ‘ಕೃಷ್ಣ ಕ್ರಿಯೇಶನ್ಸ್ʼ ಮತ್ತು ‘ಜಗದೀಶ್ ಫಿಲಂಸ್ʼ ಬ್ಯಾನರ್ ನಲ್ಲಿ ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ಜಂಟಿಯಾಗಿ ನಿರ್ಮಿಸುತ್ತಿರುವ ‘ಭೀಮʼ ಸಿನೆಮಾಕ್ಕೆ ಶಿವ ಸೇನ ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ‘ಭೀಮʼನಿಗೆ ಮಾಸ್ತಿ ಸಂಭಾಷಣೆ ಬರೆದಿದ್ದು, ಸಿನೆಮಾದ ಹಾಡುಗಳಿಗೆ ಧನಂಜಯ್, ರಾಜು ನೃತ್ಯ ಸಂಯೋಜಿಸಿದ್ದಾರೆ. ಒಟ್ಟಾರೆ ‘ಸಲಗʼ ಸಿನೆಮಾದ ಬಳಿಕ ಬರುತ್ತಿರುವ ದುನಿಯಾ ವಿಜಯ್ ಅಭಿನಯ ಮತ್ತು ನಿರ್ದೇಶನದ ‘ಭೀಮʼ ಎಷ್ಟರ ಮಟ್ಟಿಗೆ ಪ್ರೇಕ್ಷಕರಿಗೆ ಕಿಕ್ ಕೊಡಲಿದೆ ಎಂಬುದು ಆಗಸ್ಟ್ ಅಂತ್ಯದ ವೇಳೆಗೆ ಗೊತ್ತಾಗಲಿದೆ.















