ಶಾರ್ಟ್ ಮೂವಿ ‘ಅಮೃತಾಂಜನ್’, ಈಗ ಬಿಗ್ ಮೂವಿಯಾಗಿದೆ!
ಕಿರುತೆರೆಯ ‘ಅಮೃತಾಂಜನ್’ ಹಿರಿತೆರೆಯತ್ತ…
ಜನಮನಗೆದ್ದ ‘ಅಮೃತಾಂಜನ್’ ಕಿರುಚಿತ್ರಕ್ಕೆ ಹಿರಿದಾದ ರೂಪ
ಇದೇ 2026ರ ಜನವರಿ 30ಕ್ಕೆ ‘ಅಮೃತಾಂಜನ್’ ಥಿಯೇಟರಿಗೆ
ಬಹುತೇಕರು ಯು-ಟ್ಯೂಬ್‌ನಲ್ಲಿ ಕನ್ನಡದ ‘ಅಮೃತಾಂಜನ್’ ಎಂಬ ಹೆಸರಿನ ಕಿರುಚಿತ್ರವನ್ನು ನೋಡಿರುತ್ತೀರಿ. ಕೋಟ್ಯಂತರ ಕನ್ನಡಿಗರ ಮನಗೆದ್ದ ‘ಅಮೃತಾಂಜನ್’ ಶಾರ್ಟ್ ಫಿಲಂ ಈಗ ಸಿನೆಮಾಗಿ ಬಿಗ್ ಸ್ಕ್ರೀನ್‌ಗೆ ಬರಲು ತಯಾರಾಗಿದೆ. ಈ ಹಿಂದೆ ಕನ್ನಡದಲ್ಲಿ ‘ಸೋಡಾಬುಡ್ಡಿ’ ಎಂಬ ಸಿನೆಮಾವನ್ನು ನಿರ್ದೇಶನ ಮಾಡಿದ್ದ ಜ್ಯೋತಿರಾವ್ ಮೋಹಿತ್, ‘ಅಮೃತಾಂಜನ್’ ಶಾರ್ಟ್ ಫಿಲಂಗೆ ನಿರ್ದೇಶನ ಮಾಡಿದ್ದರು.
ಸುಧಾಕರ್, ಶ್ರೀ ಭವ್ಯಾ, ಗೌರವ್ ಶೆಟ್ಟಿ, ಪಾಯಲ್ ಚೆಂಗಪ್ಪ, ಕಾರ್ತಿಕ್ ರೆಡ್ಡಿ, ರಮಿತಾ ಶ್ರೀ, ದರ್ಶನ್ ಶೆಟ್ಟಿ ಮೊದಲಾದ ಕಲಾವಿದರು ‘ಅಮೃತಾಂಜನ್’ ಕಿರುಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು.
ಇದೀಗ ಕಿರುತೆರೆಯಲ್ಲಿ ಎಲ್ಲರನ್ನೂ ನಕ್ಕು ನಗಿಸಿ ಯಶಸ್ವಿಯಾಗಿದ್ದ ಅದೇ ‘ಅಮೃತಾಂಜನ್’ ತಂಡ, ಅದೇ ‘ಅಮೃತಾಂಜನ್’ ಎಂಬ ಹೆಸರಿನಲ್ಲಿ ಸಿನೆಮಾವನ್ನು ಮಾಡಿ, ಪ್ರೇಕ್ಷಕರ ಮುಂದೆ ತರಲು ತಯಾರಾಗಿದೆ. ‘ಅಮೃತಾಂಜನ್’ ಶಾರ್ಟ್ ಫಿಲಂನಲ್ಲಿ ಬಹುತೇಕ ಅದೇ ಕಲಾವಿದರು ಮತ್ತು ತಂತ್ರಜ್ಞರೇ ‘ಅಮೃತಾಂಜನ್’ ಸಿನೆಮಾದಲ್ಲೂ ಕೆಲಸ ಮಾಡಿದ್ದು, ಕಿರುತೆರೆಯಲ್ಲಿ ಸಿಕ್ಕ ಅದೇ ಯಶಸ್ಸು ಹಿರಿತೆರೆಯಲ್ಲೂ ಸಿಗಬಹುದು ಎಂಬ ನಿರೀಕ್ಷೆಯಲ್ಲಿದೆ ಚಿತ್ರತಂಡ.
‘ಅಮೃತಾಂಜನ್’ ಜನಪ್ರಿಯತೆ ಕೈ ಹಿಡಿಯುವ ಆಶಯ…
ಈಗಾಗಲೇ ‘ಅಮೃತಾಂಜನ್’ ಶಾರ್ಟ್ ಮೂವೀಗೆ ನಿರೀಕ್ಷೆಗೂ ಮೀರಿ ಪ್ರೇಕ್ಷಕರಿಂದ ಪ್ರತಿಕ್ರಿಯೆ ಸಿಕ್ಕಿದ್ದು, ‘ಅಮೃತಾಂಜನ್’ ಸಿನೆಮಾಗೂ ಅದೇ ರೀತಿಯ ಪ್ರತಿಕ್ರಿಯೆ, ಬೆಂಬಲ ಸಿಗಬಹುದು ಎಂಬ ನಿರೀಕ್ಷೆಯಲ್ಲಿದೆ ಚಿತ್ರತಂಡ. ‘ಅಮೃತಾಂಜನ್’ ಶಾರ್ಟ್ ಫಿಲಂ ಇದೀಗ ಸಿನೆಮಾವಾಗುತ್ತಿರುವುದರ ಬಗ್ಗೆ ಮಾತನಾಡಿರುವ ನಿರ್ದೇಶಕ ಜ್ಯೋತಿರಾವ್ ಮೋಹಿತ್,
‘ನಾನು ಇದಕ್ಕೂ ಮೊದಲು ‘ಸೋಡಾಬುಡ್ಡಿ’ ಎಂಬ ಸಿನೆಮಾ ಮಾಡಿದ್ದೆ ಅದು ಸೋತು ಹೋಯ್ತು. ಆಮೇಲೆ ಕೆಲಸ ಇಲ್ಲದೆ ಇದ್ದಾಗ ಒಂದು ಶಾರ್ಟ್ ಮೂವಿ ಮಾಡಿದ್ದೆ, ಅದೇ ‘ಅಮೃತಾಂಜನ್’. ಇತಿಹಾಸದ ಥರನೇ ಆಗೋಯ್ತು. ಆಮೇಲೆ ಏನಾದ್ರು ಮಾಡ್ಬೇಕು ಅಂತ ಯೋಚ್ನೆ ಮಾಡ್ತಾ ಇದ್ದಾಗ ‘ಅಮೃತಾಂಜನ್’ ಸಿನೆಮಾವನ್ನೇ ಬಿಗ್ ಸ್ಕ್ರೀನ್ ಗೆ ಮಾಡೋಣ ಎನ್ನುವ ನಿರ್ಧಾರಕ್ಕೆ ಬಂದೆವು. ಆ ಬಳಿಕ ಸಿನೆಮಾ ಫಾರ್ಮೆಟ್ ಗೆ ಏನೆಲ್ಲಾ ಬೇಕೋ ಅದೆಲ್ಲ ತಯಾರಿಯನ್ನು ಮಾಡಿಕೊಂಡೆವು’ ಎಂದಿದ್ದಾರೆ.
ಶಾರ್ಟ್ ಮೂವಿಯಾಗಿ ಗೆದ್ದಿರುವ ‘ಅಮೃತಾಂಜನ್’ ಮೇಲೆ ಥಿಯೇಟರಿನಲ್ಲಿ ನಿರೀಕ್ಷೆ
‘ಅಮೃತಾಂಜನ್’ ಸಿನೆಮಾದ ಬಗ್ಗೆ ಇಟ್ಟುಕೊಂಡಿರುವ ನಿರೀಕ್ಷೆಗಳ ಬಗ್ಗೆ ಮಾತನಾಡಿರುವ ನಿರ್ದೇಶಕ ಜ್ಯೋತಿರಾವ್ ಮೋಹಿತ್, ‘ಈ ಸಿನೆಮಾದ ಮೇಲೂ 100% ನಿರೀಕ್ಷೆಯನ್ನ ಇಟ್ಟುಕೊಳ್ಳಬಹುದು. ಎಷ್ಟು ಡೀಪ್ ಆಗಿ ವರ್ಕ್ ಮಾಡಿದ್ದೀವಿ ಅಂದ್ರೆ ಒಂದು ವರ್ಷ ಕೂತು ಕಥೆ ಬರೆದಿದ್ದೀವಿ, 3 ತಿಂಗಳು ರಿಹರ್ಸಲ್ ಮಾಡಿದ್ದೀವಿ.
ಸೇಮ್ ಟೀಂ ವರ್ಕ್ ಮಾಡಿದ್ದೀವಿ. ಸಿನೆಮಾ ನೋಡುವಾಗ ಮನಸ್ಸಾರೆ 40-45 ಸಲ ಮನಸ್ಸಾರೆ ನಗಬಹುದು. ಪ್ರತಿ ಸೀನ್ ನಲ್ಲೂ ನಗುವಿಗೆ ಪ್ರಾಮುಖ್ಯತೆ ನೀಡಿದ್ದೇವೆ. ಶಾರ್ಟ್ ಫಿಲ್ಮ್ ನಲ್ಲಿ ಏನು ಹೊಸವಿಷಯ ಕೊಟ್ವಿ, ಇಲ್ಲು ಒಂದಷ್ಟು ಹೊಸ ವಿಷಯಗಳನ್ನ ಜನರಿಗೆ ಕೊಟ್ಟಿದ್ದೀವಿ. ನಾನು ಕುಡಿಯೋದು ಬಿಟ್ಟರೆ ನೀನು ಮೇಕಪ್ ಹಾಕೋದು ಬಿಡ್ತೀಯಾ. ಈ ಡೈಲಾಗ್ ಒಂದು ಕ್ಯಾರಿ ಮಾಡಿದ್ದೀವಿ. ಬಿಟ್ರೆ ಕಥೆ ಎಳೆ ತುಂಬಾನೇ ಹೊಸದಾಗಿದೆ. ಪ್ರತಿಯೊಬ್ಬ ತಂದೆ – ತಾಯಿನು ಮಕ್ಕಳಿಗೆ ಈ ಥರ ಮಾಡ್ಬೇಕು ಅಂದ್ಕೊಳ್ತಾರೆ’ ಎಂದು ವಿವರಣೆ ನೀಡುತ್ತಾರೆ.
ಹೊಸ ರೂಪದಲ್ಲಿ ‘ಅಮೃತಾಂಜನ್’ ರಿಲೀಫ್…!
‘ಅಮೃತಾಂಜನ್’ ಸಿನೆಮಾದ ಮುಂದಿದ್ದ ಸವಾಲುಗಳ ಬಗ್ಗೆ ಮಾತನಾಡಿರುವ ಚಿತ್ರತಂಡ, ‘ಮೊದಲು ನಾವು ಸಿನೆಮಾ ಮಾಡೋಕೆ ಹೊರಟಾಗ ನೀವೂ ಶಾರ್ಟ್ ಫಿಲ್ಮ್ ಮೇಕರ್ಸ್ ಅಂದ್ರು, ಶಾರ್ಟ್ ಫಿಲ್ಮ್ ಮಾಡಿದಂಗೆ ಮಾಡುದ್ರೆ ಯಾರು ಸಿನೆಮಾ ನೋಡಲ್ಲ. ಮೊಬೈಲ್ ನೋಡೋ ವೀವರ್ಸ್ ಥಿಯೇಟರ್ ಗೆ ಬರಲ್ಲ, ಇದು ವರ್ಕೌಟ್ ಆಗಲ್ಲ ಹೀಗೆ ಸಾಕಷ್ಟು ಚಾಲೆಂಜಸ್ ಬಂತು. ನಾರ್ಮಲ್ ಆಗಿ ಹೊಸದಾಗಿ ಮಾಡ್ತೀವಿ ಅಂದಾಗ ಈ ರೀತಿಯ ಮಾತುಗಳು ಸರ್ವೇ ಸಾಮಾನ್ಯ. ಸೆನ್ಸಾರ್ ಆಗಿದೆ. ಕರೆಕ್ಷನ್ ಇದ್ರೆ ಒಳಗೆ ಕರೆದು ಹೇಳ್ತಾರೆ. ಆದರೆ ಅವರೆ ಬಂದು, ಕೈ ಕುಲುಕಿ ತುಂಬಾ ಚೆನ್ನಾಗ್ ಮಾಡಿದ್ದೀಯಾ ಸಿನೆಮಾನ ಅಂತ ಹೇಳಿದ್ರು. ಅದೊಂದು ಈಗ ಪ್ಲಸ್ ಪಾಯಿಂಟ್. ಫ್ಯಾಮಿಲಿ ಆಡಿಯನ್ಸ್ ಆಗಿರಬಹುದು, ಯೂಥ್ಸ್ ಆಗಿರಬಹುದು ಯಾರಿಗೂ ಬೋರ್ ಹೊಡೆಸಲ್ಲ. ಇದೊಂದು ಸ್ಟ್ರೆಸ್ ಬಸ್ಟರ್ ಥರ ಇರುತ್ತೆ ಸಿನೆಮಾ. ಲೈಫ್ ನಲ್ಲಿ ನಿಮ್ಗೆನಾದ್ರೂ ಬೇಜಾರಾಗಿದ್ರೆ ನಮ್ಮ ಸಿನೆಮಾಗೆ ಬನ್ನಿ ಮನಸ್ಸಾರೆ ನಕ್ಕು ಹೋಗ್ತೀರಾ ಅನ್ನೋ ಭರವಸೆ ನೀಡುತ್ತದೆ’
ಇದೇ ತಿಂಗಳಾಂತ್ಯಕ್ಕೆ ‘ಅಮೃತಾಂಜನ್’ ರಿಸಲ್ಟ್…
ಇನ್ನು ‘ಅಮೃತಾಂಜನ್’ ಸಿನೆಮಾದಲ್ಲಿ ಮಾಂಟೇಜಸ್ ಸಾಂಗ್ಸ್ ಇದೆ. 80% ಕಾಮಿಡಿ ಇದ್ರೆ 10-15% ಎಮೋಷನ್ಸ್ ಇದೆಯಂತೆ. ಅಪ್ಪ-ಮಗನ ಬಗ್ಗೆ ದೊಡ್ಡ ಎಮೋಷನ್ಸ್ ಇದೆ. ಕಥೆಗೆ ಏನ್ ಬೇಕೋ ಆ ಸಾಂಗ್ಸ್ ಚಿತ್ರದಲ್ಲಿದ್ದು, ಬೆಂಗಳೂರು, ಮಂಗಳೂರು, ಉಡುಪಿ ಸುತ್ತಮುತ್ತ ‘ಅಮೃತಾಂಜನ್’ ಸಿನೆಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ. ಅಂದಹಾಗೆ, ಇದೇ 2026ರ ಜನವರಿ 31ಕ್ಕೆ ‘ಅಮೃತಾಂಜನ್’ ಸಿನೆಮಾ ರೂಪದಲ್ಲಿ ಥಿಯೇಟರಿಗೆ ಬರಲಿದ್ದು, ಕಿರುತೆರೆಯಂತೆ, ಹಿರಿತೆರೆಯಲ್ಲೂ ಚಿತ್ರ ನೋಡುಗರ ಮನಗೆಲ್ಲಲಿದೆ ಎಂಬ ಭರವಸೆಯಲ್ಲಿದೆ ಚಿತ್ರತಂಡ.















