Street Beat

ವಸಿಷ್ಠ ಸಿಂಹ ಕೈಯಲ್ಲಿ ‘ಪಿಸ್ತೂಲ್’ ಪೋಸ್ಟರ್!

‘ಪಿಸ್ತೂಲ್’ ಪೋಸ್ಟರ್ ಬಿಡುಗಡೆ ಮಾಡಿದ ವಸಿಷ್ಠ ಎನ್. ಸಿಂಹ 

ಸ್ಯಾಂಡಲ್‌ವುಡ್‌ ನಲ್ಲಿ ಪ್ರಬೀಕ್‌ ಮೊಗವೀರ್‌ ನಿರ್ಮಾಣದ ಮಾಸ್‌ ಅಂಡ್‌ ಕ್ಲಾಸ್‌ ‘ಪಿಸ್ತೂಲ್’…

ಪ್ರೀ-ಪ್ರೊಡಕ್ಷನ್‌ ಮುಕ್ತಾಯ, ‘ಪಿಸ್ತೂಲ್’ ಟೈಟಲ್‌ ಅನಾವರಣ

ಕಳೆದ ಒಂದು ದಶಕದಿಂದ ಕನ್ನಡ ಚಿತ್ರರಂಗದಲ್ಲಿ ನಟ, ನಿರ್ಮಾಪಕ ಮತ್ತು ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಕರ್ನಾಟಕದ ಕಡಲ ತಡಿಯ ಪ್ರತಿಭೆ ಪ್ರಬೀಕ್‌ ಮೊಗವೀರ್‌, ಈ ಬಾರಿ ‘ಪಿಸ್ತೂಲ್’ ಹಿಡಿದು ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಹೌದು, ಪ್ರಬೀಕ್‌ ಮೊಗವೀರ್‌ ಕಥೆ, ಚಿತ್ರಕಥೆ ಬರೆದು ನಿರ್ಮಾಣ ಮಾಡುತ್ತಿರುವ ಹೊಸಚಿತ್ರಕ್ಕೆ ‘ಪಿಸ್ತೂಲ್’ ಎಂದು ಟೈಟಲ್‌ ಇಡಲಾಗಿದ್ದು, ಇತ್ತೀಚೆಗೆ ನಟ ವಸಿಷ್ಠ ಎನ್‌. ಸಿಂಹ ಈ ಸಿನೆಮಾದ ಟೈಟಲ್‌ ಪೋಸ್ಟರ್‌ ಅನ್ನು ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.

ಪ್ರಬೀಕ್‌ ಹೊಸಚಿತ್ರಕ್ಕೆ ವಸಿಷ್ಠ ಸಿಂಹ ಸಾಥ್‌!

ಇನ್ನು ‘ಪಿಸ್ತೂಲ್’ ಸಿನೆಮಾದ ಟೈಟಲ್‌ ಪೋಸ್ಟರ್‌ ಬಿಡುಗಡೆ ಮಾಡಿ ಮಾತನಾಡಿದ ನಟ ವಸಿಷ್ಠ ಎನ್‌. ಸಿಂಹ, ‘ಕನ್ನಡದಲ್ಲಿ ಹೊಸಕಥಾಹಂದರದ ಸಿನೆಮಾಗಳು ನಿರಂತರವಾಗಿ ಬರುತ್ತಿರಬೇಕು. ಅಂಥ ಹೊಸ ಥರದ ಸಿನೆಮಾಗಳ ಸಾಲಿಗೆ ‘ಪಿಸ್ತೂಲ್’ ಕೂಡ ಸೇರ್ಪಡೆಯಾಗುತ್ತದೆ ಎಂಬ ವಿಶ್ವಾಸವಿದೆ. ‘ಪಿಸ್ತೂಲ್’ ಸಿನೆಮಾದ ಟೈಟಲ್‌ ಪೋಸ್ಟರ್‌ ಗಮನ ಸೆಳೆಯುವಂತಿದ್ದು, ಒಂದಷ್ಟು ಕುತೂಹಲವನ್ನು ಮೂಡಿಸುವಂತಿದೆ. ಅಂಥದ್ದೇ ಕುತೂಹಲ ಸಿನೆಮಾದಲ್ಲೂ ಇರಬಹುದು. ಇಂಥದ್ದೊಂದು ಹೊಸ ಪ್ರಯತ್ನ ಮಾಡಲು ಹೊರಟ ಇಡೀ ಚಿತ್ರತಂಡ ಒಳ್ಳೆಯದಾಗಲಿ’ ಎಂದು ಶುಭ ಹಾರೈಸಿದರು.

‘ಪಿಸ್ತೂಲ್’ ಚಿತ್ರಕ್ಕೆ ಯುವ ನಿರ್ದೇಶಕ ವೇದ್‌ ಆಕ್ಷನ್‌-ಕಟ್‌

‘ಆತ್ಮ ಸಿನೆಮಾಸ್‌’ ಬ್ಯಾನರಿನಲ್ಲಿ ಪ್ರಬೀಕ್‌ ಮೊಗವೀರ್‌ ಕಥೆ, ಚಿತ್ರಕಥೆ ಬರೆದು ನಿರ್ಮಾಣ ಮಾಡುತ್ತಿರುವ ‘ಪಿಸ್ತೂಲ್’ ಸಿನೆಮಾಕ್ಕೆ ಯುವ ಪ್ರತಿಭೆ ವೇದ್‌ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಕನ್ನಡದಲ್ಲಿ ‘ಸ್ಕೂಲ್ ರಾಮಾಯಣ’, ‘ರಾವೆನ್’ ಚಿತ್ರಗಳನ್ನು ನಿರ್ದೇಶನ ಮಾಡಿರುವ ವೇದ್ ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದಾರೆ. ಇನ್ನು ಪ್ರಬೀಕ್‌ ಮೊಗವೀರ್‌ ಕೂಡ ಈ ಸಿನೆಮಾದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಬಿಕ್ ಮೊಗವೀರ್ ಈ ಹಿಂದೆ ಕನ್ನಡದಲ್ಲಿ ‘ಗಡಿಯಾರ’ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿ ತೆರೆಗೆ ತಂದಿದ್ದರು. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಹಿಂದಿ ಭಾಷೆಯಲ್ಲೂ ಈ ಚಿತ್ರ ಬಿಡುಗಡೆಯಾಗಿ ತೆರೆಗೆ ಬಂದಿತ್ತು. ಅದಾದ ನಂತರ ನಿರ್ಮಾಣದ ಜೊತೆಗೆ ನಟನೆಯ ಕಡೆಗೆ ಹೆಚ್ಚು ಗಮನ ಕೊಟ್ಟಿರುವ ಪ್ರಬಿಕ್ ಮೊಗವೀರ್, ಈಗಾಗಲೇ ‘ತನಿಖೆ’, ‘ಶಾಂತಿಯನ್ನು ಕಳೆದುಕೊಳ್ಳಬೇಡಿ’ ಚಿತ್ರದಲ್ಲಿ ನಟಿಸಿದ್ದರು . ‘ಸದ್ಯ ನಾಯಿ ಇದೆ ಎಚ್ಚರಿಕೆ!!’, ‘ಅಸುರನ ಕೈಯಲ್ಲಿ ಪಾರಿಜಾತ’, ‘ರಾವೆನ್’ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿರುವ  ಪ್ರಬಿಕ್ ಮೊಗವೀರ್, ಆ ಚಿತ್ರಗಳ ಬಿಡುಗಡೆಗೂ ಮುನ್ನವೆ ‘ಪಿಸ್ತೂಲ್’ ಚಿತ್ರದಲ್ಲಿ ನಟಿಸಲು ತಯಾರಾಗಿದ್ದಾರೆ.

ಏನಿದು ‘ಪಿಸ್ತೂಲ್’ ಕಹಾನಿ..?

ಇನ್ನು ‘ಪಿಸ್ತೂಲ್’ ಸಿನೆಮಾ ಔಟ್‌ ಅಂಡ್‌ ಔಟ್‌ ಸಸ್ಪೆನ್ಸ್‌ ಕಂ ಕ್ರೈಂ-ಥ್ರಿಲ್ಲರ್‌ ಕಥಾಹಂದರದ ಸಿನೆಮಾ ಎಂಬುದು ಚಿತ್ರತಂಡದ ಮಾತು. ಆದರೆ ಚಿತ್ರದ ಕಥಾಹಂದರದ ಬಗ್ಗೆ ಹೆಚ್ಚಿನ ಗುಟ್ಟು ಬಿಟ್ಟುಕೊಡದ ನಟ ಕಂ ನಿರ್ಮಾಪಕ  ಪ್ರಬೀಕ್‌ ಮೊಗವೀರ್‌, ‘ಸಿನೆಮಾದ ಟೈಟಲ್ಲೇ ಹೇಳುವಂತೆ ಇದೊಂದು ‘ಪಿಸ್ತೂಲ್’ ಸುತ್ತ ನಡೆಯುವ ಸಿನೆಮಾ. ‘ಪಿಸ್ತೂಲ್’ ನಲ್ಲಿ ಆರು ಬುಲೆಟ್‌ಗಳಿರುವಂತೆ, ಈ ಸಿನೆಮಾದ ಕಥೆಗೂ ಆರು ವಿಭಿನ್ನ ಆಯಾಮಗಳಿರುತ್ತದೆ. ಸಿನೆಮಾದ ಆರು ಪ್ರಮುಖ ಪಾತ್ರಗಳು ಆರು ಬುಲೆಟ್‌ಗಳನ್ನು ಪ್ರತಿನಿಧಿಸುತ್ತದೆ. ಉಳಿದಂತೆ ಸಿನೆಮಾದ ಕಥೆಯನ್ನು ನೀವು ತೆರೆಮೇಲೇ ನೋಡಬೇಕು. ಇದೊಂದು ಸಸ್ಪೆನ್ಸ್‌ ಕಂ ಕ್ರೈಂ-ಥ್ರಿಲ್ಲರ್‌ ಸಿನೆಮಾವಾಗಿದ್ದರಿಂದ, ಇದಕ್ಕಿಂತ ಹೆಚ್ಚಾಗಿ ಈ ಸಿನೆಮಾದ ಬಗ್ಗೆ ಈ ಹಂತದಲ್ಲೇ ಹೆಚ್ಚೇನೂ ಈಗಲೇ ಹೇಳಲಾಗದು’ ಎಂದು ಸಂಕ್ಷಿಪ್ತ ವಿವರಣೆ ಕೊಟ್ಟು ಸುಮ್ಮನಾಗಿದ್ದಾರೆ.

ಶೀಘ್ರದಲ್ಲಿಯೇ ಸೆಟ್ಟೇರಲಿರುವ ‘ಪಿಸ್ತೂಲ್’ 

ಸದ್ಯ ‘ಪಿಸ್ತೂಲ್’ ಸಿನೆಮಾದ ಬಹುತೇಕ ಸ್ಕ್ರಿಪ್ಟ್‌ ಮತ್ತು ಪ್ರೀ-ಪ್ರೊಡಕ್ಷನ್‌ ಕೆಲಸಗಳು ಮುಗಿದಿದ್ದು, ಚಿತ್ರದ ಇತರ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ಭರದಿಂದ ನಡೆಯುತ್ತಿದೆ. ಚಿತ್ರದ ಪಾತ್ರವೊಂದಕ್ಕೆ ದಕ್ಷಿಣ ಭಾರತ ಪ್ರಖ್ಯಾತ ನಟರೊಬ್ಬರನ್ನು ಕರೆತರುವ ಕಸರತ್ತನ್ನು ಚಿತ್ರತಂಡ ನಡೆಸುತ್ತಿದೆ. ಚಿತ್ರತಂಡ ಯೋಚನೆಯಂತೆ, ಈ ವರ್ಷಾಂತ್ಯಕ್ಕೆ ‘ಪಿಸ್ತೂಲ್’ ಸಿನೆಮಾದ ಚಿತ್ರೀಕರಣ ಆರಂಭವಾಗಲಿದ್ದು, ಮುಂದಿನ ವರ್ಷದ ಮಧ್ಯ ಭಾಗದಲ್ಲಿ ‘ಪಿಸ್ತೂಲ್’ ಸಿನೆಮಾವನ್ನು ತೆರೆಗೆ ತರುವ ಯೋಜನೆಯಿದೆ. ಉಳಿದಂತೆ, ‘ಪಿಸ್ತೂಲ್’ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ ಸಿನೆಮಾ ಸೆಟ್ಟೇರಿದ ಮೇಲಷ್ಟೇ ಗೊತ್ತಾಗಲಿದೆ.

ಸದ್ಯ ಬಿಡುಗಡೆಯಾಗಿರುವ ‘ಪಿಸ್ತೂಲ್’ ಸಿನೆಮಾದ ಟೈಟಲ್‌ ಪೋಸ್ಟರ್‌ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ  ಹರಿದಾಡುತ್ತಿದ್ದು, ಸಿನಿಪ್ರಿಯರು ಮತ್ತು ಪ್ರೇಕ್ಷಕರಿಂದ ‘ಪಿಸ್ತೂಲ್’ ಸಿನೆಮಾದ ಟೈಟಲ್‌ ಪೋಸ್ಟರ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Related Posts

error: Content is protected !!