‘ಪಪ್ಪಿ’ ಸಿನೆಮಾಗೆ 50 ದಿನದ ಸಂಭ್ರಮ
ಸದ್ದಿಲ್ಲದೆ ಅರ್ಧಶತಕ ಬಾರಿಸಿದ ‘ಪಪ್ಪಿ’ ಚಿತ್ರ
ಮೆಚ್ಚುಗೆ ಪಡೆದುಕೊಂಡು ಮುನ್ನುಗ್ಗಿದ ‘ಪಪ್ಪಿ’ ಸಿನೆಮಾ 50 ದಿನದ ಸಂಭ್ರಮ
‘ಪಪ್ಪಿ’ ಚಿತ್ರಕ್ಕೆ ಸಾಥ್ ನೀಡಿದ್ದ ಶಿವಣ್ಣ, ರಮ್ಯಾ, ಧ್ರುವ ಸರ್ಜಾ
ವಿಶೇಷ ಕಥಾಹಂದರ ಹೊಂದಿದ್ದ ‘ಪಪ್ಪಿ’ ಸಿನೆಮಾ ಬಿಡುಗಡೆಯಾಗಿ 50 ದಿನ ಪೂರೈಸಿದೆ. ಈ ಖುಷಿಯಲ್ಲಿ ಚಿತ್ರತಂಡ ಇತ್ತೀಚೆಗೆ ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ಹಮ್ಮಿಕೊಂಡಿತ್ತು. 50 ದಿನ ಸಂಭ್ರಮದ ಕಾರ್ಯಕ್ರಮಕ್ಕೆ ನಿರ್ಮಾಪಕರಾದ ಯೋಗಿ ಜಿ. ರಾಜ್, ನಾಯಕಿ ಸಂಜನಾ ಆನಂದ್ ಸಾಥ್ ಕೊಟ್ಟರು. ಇದೇ ವೇಳೆ ಇಡೀ ಚಿತ್ರತಂಡ ಕಾರ್ಯಕ್ರಮದಲ್ಲಿ ಹಾಜರಾಗಿತ್ತು. 
ಈ ವೇಳೆ ಮಾತನಾಡಿದ ‘ಕೆಆರ್‌ಜಿ ಸ್ಟುಡಿಯೋ’ದ ಯೋಗಿ ಜಿ. ರಾಜ್, ”ಪಪ್ಪಿ’ ಸಿನೆಮಾ ಒಂದೊಳ್ಳೆ ಜರ್ನಿ. ಚಿತ್ರದ ಟ್ರೇಲರ್ ನ್ನು ಸತ್ಯ ಹೆಗ್ಡೆ ಸರ್ ಕಳಿಸಿದ್ರು. ‘ನೋಡಿ ಚೆನ್ನಾಗಿದೆ…’ ಎಂದರು. ಟ್ರೇಲರ್ ಕಂಟೆಂಟ್ ಇಷ್ಟವಾಗಿ ಡೈರೆಕ್ಟರ್ ನಂಬರ್ ತೆಗೆದುಕೊಂಡು ಮಾತನಾಡಿದೆ. ಬಳಿಕ ಸಿನೆಮಾ ನೋಡಿದೆ. ಮಾಸ್ ಕಂಟೆಂಟ್ ಇಲ್ಲದೇ ಎಮೋಷನ್ ಇಟ್ಕೊಂಡು ಬರೆದ ಸಿನೆಮಾ. ಆ ಜಾನರ್ ಯಾರು ಟಚ್ ಮಾಡಿರಲಿಲ್ಲ. ಉತ್ತರ ಕರ್ನಾಟಕದ ಭಾಷೆ ಎಷ್ಟು ಸೊಗಸು ಅನ್ನೋದು ಸಿನೆಮಾದಲ್ಲಿದೆ. ನಿರ್ದೇಶಕರು ಯೋಚನೆ ಮಾಡಿ ಸಿನೆಮಾ ಮಾಡಿದ್ದಾರೆ. ಅದಕ್ಕೆ ನಿರ್ಮಾಪಕರು ಸಾಥ್ ಕೊಟ್ಟಿದ್ದಾರೆ. ಈ ಕಾಲಘಟ್ಟದಲ್ಲಿ ಐವತ್ತು ದಿನ ಸಿನೆಮಾ ಓಡುವುದು ಕಷ್ಟ. ‘ಪಪ್ಪಿ’ ಚಿತ್ರ 50 ದಿನ ಓಡಿದೆ. ನನ್ನ ‘ಕೆಆರ್‌ಜಿ’ ಕಡೆಯಿಂದ ರಿಲೀಸ್ ಆದ ಸಿನೆಮಾ ಅನ್ನೋ ಖುಷಿ ಇದೆ’ ಎಂದು ತಿಳಿಸಿದರು.
‘ಪಪ್ಪಿ’ 50 ದಿನ ಆಗುತ್ತದೆ ಎಂದು ಕನಸ್ಸಿನಲ್ಲಿಯೂ ಅಂದುಕೊಂಡಿರಲಿಲ್ಲ…
ನಿರ್ದೇಶಕರಾದ ಆಯುಷ್ ಮಲ್ಲಿ ಮಾತನಾಡಿ, ”ಪಪ್ಪಿ’ ಸಿನೆಮಾ ಐವತ್ತು ದಿನ ಆಗುತ್ತದೆ ಎಂದು ಕನಸ್ಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಜನ ಮೆಚ್ಚಿಕೊಂಡಿರುವುದು ಖುಷಿ ಕೊಟ್ಟಿದೆ. ‘ಕೆಆರ್‌ಜಿ ಸ್ಟುಡಿಯೋ’ ಸಂಸ್ಥೆ ನಮಗೆ ಬಹಳ ಬೆಂಬಲವಾಗಿ ನಿಂತರು. ಈ ಐವತ್ತು ದಿನ ನಡೆಯಲು ಅವರು ಕೂಡ ಕಾರಣ’ ಎಂದು ಸಂತಸ ಹಂಚಿಕೊಂಡರು. 
‘ಪಪ್ಪಿ’ಗೆ ಕನ್ನಡ ಚಿತ್ರರಂಗದ ಅನೇಕರ ಬೆಂಬಲ
ಈ ಹಿಂದೆ ‘ಫಸ್ಟ್ ಲವ್’ ಸಿನೆಮಾ ಮಾಡಿದ್ದ ಆಯುಷ್ ಮಲ್ಲಿ ‘ಪಪ್ಪಿ’ ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದಾರೆ. ಇಬ್ಬರು ಬಾಲಕರು ಹಾಗೂ ಶಾನ್ವದ ಸುತ್ತ ಸಾಗುವ ಚಿತ್ರವನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅರ್ಪಿಸುತ್ತಿದ್ದರು. ಮೇ 1ಕ್ಕೆ ಈ ಚಿತ್ರ ತೆರೆಗೆ ಬಂದಿದ್ದ ‘ಪಪ್ಪಿ’ಯನ್ನು ಶಿವಣ್ಣ, ರಮ್ಯಾ ಸೇರಿದಂತೆ ಚಿತ್ರರಂಗದ ಹಲವರು ನೋಡಿ ಮೆಚ್ಚಿಕೊಂಡಿದ್ದರು. ಉತ್ತರ ಕರ್ನಾಟಕ ಭಾಷೆಯಲ್ಲಿ ಸ್ಥಳೀಯ ಕಲಾವಿರಾದ ಜಗದೀಶ್ ಕೊಪ್ಪಳ, ಆದಿತ್ಯ ಸಿಂಧನೂರು, ಅದ್ರುಷ್ಟ ಸಂಕನೂರು, ಋತ್ವಿಕ್ ಬಳ್ಳಾರಿ, ದುರುಗಪ್ಪ ಕಾಂಬ್ಳಿ, ರೇಣುಕಾ, ಆರಾವ ಲೋಹಿತ್ ನಾಗರಾಜ್ ಚಿತ್ರದಲ್ಲಿ ನಟಿಸಿದ್ದಾರೆ. ಶ್ರೀಧರ್ ಕಶ್ಯಪ್, ರವಿ ಬಿಲ್ಲೂರ್ ಚಿತ್ರಕ್ಕೆ ಸಂಗೀತ ಒದಗಿಸಿದ್ದು, ಬಿ. ಸುರೇಶ್ ಬಾಬು ಕ್ಯಾಮೆರಾ ಹಿಡಿದಿದ್ದು, ವಿಶ್ವ ಎನ್. ಎಂ ಸಂಕಲನ ‘ಪಪ್ಪಿ’ ಚಿತ್ರಕ್ಕಿದೆ. ಹಾಸ್ಯದ ಜೊತೆಗೆ ಗಂಭೀರ ವಿಷಯದ ಮೇಲೆ ಬೆಳಕು ಚೆಲ್ಲುವ ‘ಪಪ್ಪಿ’ಗೆ ಅಂದಪ್ಪ ಸಂಕನೂರು ಬಂಡವಾಳ ಹೂಡಿದ್ದಾರೆ. ‘ಕೆಆರ್‌ಜಿ ಸ್ಟುಡಿಯೋ’ ‘ಪಪ್ಪಿ’ ಚಿತ್ರವನ್ನು ರಾಜ್ಯಾದ್ಯಂತ ವಿತರಣೆ ಮಾಡಿತ್ತು. ‘ಪಪ್ಪಿ’ಗೆ ಕನ್ನಡ ಚಿತ್ರರಂಗದ ಅನೇಕರು ಬೆಂಬಲ ನೀಡಿದ್ದರು. ರಮ್ಯಾ, ಧ್ರುವ ಸರ್ಜಾ, ವಿನಯ್ ರಾಜಕುಮಾರ್, ರಾಜ್ ಬಿ. ಶೆಟ್ಟಿ, ನವೀನ್ ಶಂಕರ್ ಮುಂತಾದವರು ಈ ಸಿನೆಮಾಗೆ ನೀಡಿದ ಬೆಂಬಲಕ್ಕೆ ಚಿತ್ರತಂಡದವರು ಧನ್ಯವಾದಗಳನ್ನು ಅರ್ಪಿಸಿದೆ.















