Telewalk

ಶೀಘ್ರದಲ್ಲಿಯೇ ‘ZEE 5′ ಓಟಿಟಿಯಲ್ಲಿ ’45’ ಸಿನೆಮಾ ಸ್ಟ್ರೀಮಿಂಗ್‌

ಇದೇ ಜ. 23ರಿಂದ ’45’ ಚಿತ್ರ ‘ZEE 5’ ಓಟಿಟಿಯಲ್ಲಿ ಪ್ರಸಾರ

ಬಹುತಾರಾಗಣದ ’45’ ಚಿತ್ರ ಶೀಘ್ರದಲ್ಲಿಯೇ ಓಟಿಟಿಯಲ್ಲಿ ಪ್ರದರ್ಶನ

ಥಿಯೇಟರಿನಿಂದ ಹೋಂ ಥಿಯೇಟರಿನತ್ತ ಬಹುಕೋಟಿ ವೆಚ್ಚದ ಚಿತ್ರ

ಕಳೆದ ಡಿಸೆಂಬರ್‌ ಕೊನೆಯಲ್ಲಿ ತೆರೆಗೆ ಬಂದಿದ್ದ ಕನ್ನಡದ ಬಹುಕೋಟಿ ವೆಚ್ಚದ ’45’ ಸಿನೆಮಾ, ಥಿಯೇಟರಿನಲ್ಲಿ ಬಿಡುಗಡೆಯಾದ ಕೇವಲ ಒಂದೇ ತಿಂಗಳಲ್ಲಿ ಓಟಿಟಿಯಲ್ಲೂ ಪ್ರಸಾರವಾಗಲಿದೆ. ಹೌದು, ’45’ ಸಿನೆಮಾ ಕಳೆದ ವರ್ಷ ಡಿಸೆಂಬರ್‌ 25ರಂದು ಅದ್ಧೂರಿಯಾಗಿ ತೆರೆಗೆ ಬಂದಿತ್ತು. ಆದರೆ ಚಿತ್ರಕ್ಕೆ ಥಿಯೇಟರಿನಲ್ಲಿ ನಿರೀಕ್ಷಿತ ಪ್ರತಿಕ್ರಿಯೆ ಸಿಗಲಿಲ್ಲ. ಬಹುಕೋಟಿ ವೆಚ್ಚದಲ್ಲಿ ತಯಾರಾದ ’45’ ಚಿತ್ರ ಥಿಯೇಟರ್‌ ಗಳಿಕೆಯಲ್ಲೂ ಅಂದುಕೊಂಡ ಮಟ್ಟಕ್ಕೆ ಯಶಸ್ವಿಯಾಗಲಿಲ್ಲ. ಈಗ ’45’ ಚಿತ್ರ ಅಧಿಕೃತವಾಗಿ ಓಟಿಟಿಗೆ ಎಂಟ್ರಿಯಾಗುತ್ತಿದ್ದು, ಇದೇ ಜನವರಿ 23ರಿಂದ ‘ZEE 5′ ಓಟಿಟಿಯಲ್ಲಿ ’45’ ಚಿತ್ರ ಅಧಿಕೃತವಾಗಿ ಪ್ರಸಾರವಾಗಲಿದೆ.

ಒಬ್ಬ ಸಾಮಾನ್ಯ ಮನುಷ್ಯನ ಜೀವನದಲ್ಲಿ ಒಂದಿಷ್ಟು ಸವಾಲುಗಳು ಎದುರಾದಾಗ, ತನ್ನಲ್ಲೇ ನಡೆಯುವ ನಂಬಿಕೆ ಮತ್ತು ಭಯದ ನಡುವಿನ ಘರ್ಷಣೆ, ಸತ್ಯ ಮತ್ತು ಮಿಥ್ಯ, ಒಳ್ಳೆಯದು ಮತ್ತು ಕೆಟ್ಟದರ ನಡುವಿನ ಯುದ್ಧವನ್ನು ’45’ ಚಿತ್ರವೂ ಸಾಂಕೇತಿಕವಾಗಿ ಹೇಳುತ್ತದೆ.

‘ZEE 5’ನಲ್ಲಿ ’45’ ಸ್ಟ್ರೀಮಿಂಗ್‌; ಶಿವಣ್ಣ ಖುಷಿ…

ಇನ್ನು ‘ZEE 5′ ಓಟಿಟಿಯಲ್ಲಿ ’45’ ಚಿತ್ರ ಅಧಿಕೃತವಾಗಿ ಸ್ಟ್ರೀಮಿಂಗ್‌ ಆಗುತ್ತಿರುವುದರ ಬಗ್ಗೆ ಮತ್ತು ಅದರ ಡಿಜಿಟಲ್ ಪ್ರಸಾರದ ಮಾತನಾಡಿರುವ ನಟ ಶಿವರಾಜಕುಮಾರ್, ”45′ ಒಂದು ವಿಭಿನ್ನವಾದ ಕಥೆಯಾಗಿದೆ. ಜೀವನದಲ್ಲಿ ನಾವು ಮಾಡುವ ಆಯ್ಕಗಳು, ನಿರ್ಧಾರಗಳು ಮತ್ತು ಅದರೊಂದಿಗೆ ಬರುವ‌ ಜವಾಬ್ದಾರಿಗಳನ್ನು, ಒಟ್ಟಾಗಿ ಹೇಳುವುದಾದರೆ ನಮ್ಮ ಜೀವನವನ್ನು ಬಿಂಬಿಸುವ ಕಥೆಯಾಗಿದೆ. ಜೀ5ನೊಂದಿಗೆ ನನ್ನ ಒಡನಾಟ ಬಹಳ ವಿಶೇಷವಾದದ್ದು. ಹೊಸ ಕಥೆಗಳಿಗೆ ಉತ್ತೇಜನ ನೀಡುವ ಜೀ5ನಂತಹ ಡಿಜಿಟಲ್ ವೇದಿಕೆಯಲ್ಲಿ ಈ ಚಿತ್ರವು ಪ್ರಸಾರಗೊಳ್ಳುವುದು ನನಗೆ ಇನ್ನಷ್ಟು ಸಂತೋಷ ತಂದಿದೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

’45’ ಚಿತ್ರದಲ್ಲಿ ನಟರಾದ ಶಿವರಾಜಕುಮಾರ್‌, ‘ರಿಯಲ್ ಸ್ಟಾರ್’ ಉಪೇಂದ್ರ ಹಾಗೂ ರಾಜ್ ಬಿ‌. ಶೆಟ್ಟಿ, ಕೌಸ್ತುಭಾ ಮಣಿ, ಜಿಶು ಸೇನ್ ಗುಪ್ತಾ ಮುಂತಾದ ಕಲಾವಿದರ ದೊಡ್ಡ ತಾರಾಗಣವಿದೆ. ’45’ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಆಕ್ಷನ್-ಕಟ್ ಹೇಳಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದೆ. ಎಂ. ರಮೇಶ್ ರೆಡ್ಡಿ ‘ಸೂರಜ್ ಪ್ರೊಡಕ್ಷನ್ಸ್’ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಒಟ್ಟಾರೆ ಥಿಯೇಟರಿನಲ್ಲಿ ’45’ ಚಿತ್ರವನ್ನು ನೋಡಬೇಕೆಂದು ಅಂದುಕೊಂಡು, ಕಾರಣಾಂತರಗಳಿಂದ ನೋಡದೆ, ಸಿನೆಮಾವನ್ನು ಥಿಯೇಟರಿನಲ್ಲಿ ಮಿಸ್‌ ಮಾಡಿಕೊಂಡಿದ್ದ ಪ್ರೇಕ್ಷಕರು, ಜನವರಿ 23ರಿಂದ ‘ZEE 5′ ಓಟಿಟಿಯಲ್ಲಿ ’45’ ಚಿತ್ರವನ್ನು ಆರಾಮಾಗಿ ಕೂತು ನೋಡಬಹುದಾಗಿದೆ.

Related Posts

error: Content is protected !!