Street Beat

‘ಸುಬ್ಬ ನಿಮ್ಮಲೊಬ್ಬ’ ನವೀನ್ ಸಜ್ಜು

ಲಾರಿ ಡ್ರೈವರ್ ಅವತಾರದಲ್ಲಿ ನವೀನ್ ಸಜ್ಜು;

‘ಸುಬ್ಬ ನಿಮ್ಮಲೊಬ್ಬ’ ಚಿತ್ರದ ಮೂಲಕ ಆಕ್ಷನ್ ಹೀರೋ ಆಗಲು ಸಜ್ಜು!

‘ಸುಬ್ಬ ನಿಮ್ಮಲೊಬ್ಬ’ ಚಿತ್ರದ ಚಿತ್ರೀಕರಣಕ್ಕೆ ಚಾಲನೆ

ಕನ್ನಡ ಚಿತ್ರರಂಗದಲ್ಲಿ ಮೊದಲು ಗಾಯಕನಾಗಿ ಆ ಬಳಿಕ  ಗಾಯಕನಿಂದ ನಾಯಕನಾಗಿ ಗುರುತಿಸಿಕೊಂಡಿರುವ ಯುವ ಪ್ರತಿಭೆ  ನವೀನ್ ಸಜ್ಜು ಇದೀಗ ಮತ್ತೊಂದು ವಿಭಿನ್ನ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಅಂದಹಾಗೆ, ನವೀನ್‌ ಸಜ್ಜು ನಾಯಕ ನಟನಾಗಿ ಅಭಿನಯಿಸುತ್ತಿರುವ ಹೊಸ ಸಿನೆಮಾಕ್ಕೆ ‘ಸುಬ್ಬ ನಿಮ್ಮಲೊಬ್ಬ’ ಎಂದು ಹೆಸರಿಡಲಾಗಿದೆ. ಇನ್ನು  ಸಾಮಾನ್ಯ ಮಧ್ಯಮ ವರ್ಗದ ಕನ್ನಡಿಗನ ಬದುಕು, ಕನಸು, ಸಂಘರ್ಷ ಹಾಗೂ ಹೋರಾಟದ ಕಥಾಹಂದರ ಹೊಂದಿರುವ ‘ಸುಬ್ಬ ನಿಮ್ಮಲೊಬ್ಬ’ ಚಿತ್ರದ ಮುಹೂರ್ತ ನೆರವೇರಿದ್ದು, ಚಿತ್ರೀಕರಣಕ್ಕೂ ಚಾಲನೆ ದೊರೆತಿದೆ.

‘ಯುನಿಕ್ ಪ್ರೊಡಕ್ಷನ್ಸ್ ಎಲ್‌ಎಲ್‌ಪಿ’ ಬ್ಯಾನರ್ ಅಡಿಯಲ್ಲಿ ಎಸ್. ಟಿ. ಉದಯ್ ಕುಮಾರ್ ಹಾಗೂ ಅರುಣ್ ಕುಮಾರ್ ಸಿ. ನಿರ್ಮಿಸುತ್ತಿರುವ ‘ಸುಬ್ಬ ನಿಮ್ಮಲೊಬ್ಬ’ ಚಿತ್ರಕ್ಕೆ ವಿನಯ್ ಕೃಷ್ಣ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ನವೀನ್ ಸಜ್ಜು ನಾಯಕನಾಗಿ ಅಭಿನಯಿಸುತ್ತಿದ್ದು, ಚಿಕ್ಕಮಗಳೂರು ಮೂಲದ ನಟಿ ಶ್ರುತಿ ಗೌಡ ನಾಯಕಿಯಾಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಉಳಿದಂತೆ ಕನ್ನಡದ ಅನೇಕ ಹಿರಿಯ ಕಲಾವಿದರು ಚಿತ್ರತ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ ಎಂದಿದೆ ಚಿತ್ರತಂಡ.

ಸಾಮಾನ್ಯ ಲಾರಿ ಚಾಲಕನ ಅಸಾಮಾನ್ಯ ಹೋರಾಟದ ಕಥೆ

ವಿನಯ್ ಗುರೂಜಿ ಅವರ ಅಮೃತಹಸ್ತದಿಂದ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದೆ. ಗುರೂಜಿಯವರ ಆಶೀರ್ವಾದ ಹಾಗೂ ಶುಭ ಹಾರೈಕೆಗಳೊಂದಿಗೆ ಚಿತ್ರತಂಡ ತನ್ನ ಹೊಸ ಸಿನಿಪಯಣ ಆರಂಭಿಸಿದೆ. ಮುಹೂರ್ತದ ಮರುದಿನದಿಂದಲೇ ಚಿತ್ರೀಕರಣ ಪ್ರಾರಂಭವಾಗಿದ್ದು, ಮೊದಲ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಚಾಲನೆ ನೀಡಿದೆ.

‘ಸುಬ್ಬ ನಿಮ್ಮಲೊಬ್ಬ’ ಚಿತ್ರವು ಸಾಮಾನ್ಯ ಮಧ್ಯಮ ವರ್ಗದ ಕನ್ನಡಿಗ ಲಾರಿ ಚಾಲಕನ ಬದುಕಿನ ಸುತ್ತ ಹೆಣೆಯಲಾದ ಕಥೆಯಾಗಿದೆ. ದಿನನಿತ್ಯದ ಬದುಕಿನ ಸವಾಲುಗಳು, ಜೀವನದಲ್ಲಿ ಎದುರಾಗುವ ಏರಿಳಿತಗಳು, ಕನಸುಗಳನ್ನು ನನಸಾಗಿಸಿಕೊಳ್ಳುವ ಹಂಬಲ ಹಾಗೂ ಬದುಕಿಗಾಗಿ ನಡೆಸುವ ಹೋರಾಟ ಚಿತ್ರದ ಕಥೆಯ ಪ್ರಮುಖ ಅಂಶಗಳಾಗಿವೆ. ಸಾಮಾನ್ಯ ಮನುಷ್ಯನ ಬದುಕಿನ ಅಸಾಮಾನ್ಯ ಹೋರಾಟವನ್ನು ಬೆಳ್ಳಿತೆರೆಯ ಮೇಲೆ ಕಟ್ಟಿಕೊಡುವ ಪ್ರಯತ್ನಕ್ಕೆ ಚಿತ್ರತಂಡ ಮುಂದಾಗಿದೆ. ಲಾರಿ ಚಾಲಕನ ಜೀವನವನ್ನು ಕೇಂದ್ರವಾಗಿಟ್ಟುಕೊಂಡಿರುವ ಈ ಚಿತ್ರದಲ್ಲಿ ನವೀನ್ ಸಜ್ಜು ಯಾವ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಮೂಡಿದೆ.

ಹಳ್ಳಿ ಹುಡುಗನಿಂದ ಆಕ್ಷನ್ ಹೀರೋ ಕಡೆಗೆ ನವೀನ್ ಸಜ್ಜು ಹೆಜ್ಜೆ!

ತಮ್ಮ ವಿಶಿಷ್ಟ ಗಾಯನ ಶೈಲಿಯ ಮೂಲಕ ಕನ್ನಡಿಗರ ಮನಗೆದ್ದಿರುವ ನವೀನ್ ಸಜ್ಜು, 2026ರ ಆರಂಭದಲ್ಲಿ ‘ಲೋ ನವೀನ’ ಚಿತ್ರದ ಮೂಲಕ ಗಾಯಕನಿಂದ ನಾಯಕನಾಗಿ ಚಿತ್ರರಂಗದಲ್ಲಿ ಹೊಸ ಹೆಜ್ಜೆ ಇಟ್ಟಿದ್ದರು. ಈ ಹಿಂದೆ ಹಳ್ಳಿ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನವೀನ್ ಸಜ್ಜು, ಇದೀಗ ‘ಸುಬ್ಬ ನಿಮ್ಮಲೊಬ್ಬ’ ಚಿತ್ರದ ಮೂಲಕ ತಮ್ಮ ಅಭಿನಯದ ಮತ್ತೊಂದು ಮುಖವನ್ನು ಪರಿಚಯಿಸಲು ಸಜ್ಜಾಗಿದ್ದಾರೆ. ಈ ಬಾರಿ ಆಕ್ಷನ್ ಹೀರೋ ಆಗಿ ಗುರುತಿಸಿಕೊಳ್ಳುವತ್ತ ಗಮನ ಹರಿಸಿರುವ ಅವರು, ಕಥೆಗೆ ತಕ್ಕಂತೆ ವಿಭಿನ್ನ ಪಾತ್ರವನ್ನು ನಿರ್ವಹಿಸಲಿದ್ದಾರೆ. ಗಾಯನದ ಮೂಲಕ ಜನಪ್ರಿಯತೆ ಗಳಿಸಿರುವ ನವೀನ್ ಸಜ್ಜು ಅವರಿಗೆ ಈ ಚಿತ್ರ ನಾಯಕನಟನಾಗಿ ಮತ್ತಷ್ಟು ಗುರುತಿಸಿಕೊಳ್ಳುವ ಅವಕಾಶವಾಗಲಿದೆ ಎಂಬ ನಿರೀಕ್ಷೆಯಿದೆ.

ಬೆಂಗಳೂರು, ಚೆನ್ನೈ, ಮೈಸೂರಿನಲ್ಲಿ ಚಿತ್ರೀಕರಣ

ಚಿತ್ರದ ಮುಹೂರ್ತದ ಬೆನ್ನಲ್ಲೇ ಚಿತ್ರೀಕರಣ ಆರಂಭಿಸಿರುವ ಚಿತ್ರತಂಡ, ಬೆಂಗಳೂರು, ಚೆನ್ನೈ ಹಾಗೂ ಮೈಸೂರು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ರೂಪಿಸಿದೆ. ಕಥೆಗೆ ಅಗತ್ಯವಿರುವ ವಿಭಿನ್ನ ಹಿನ್ನೆಲೆಗಳನ್ನು ಈ ಮೂರು ನಗರಗಳಲ್ಲಿ ಸೆರೆಹಿಡಿಯಲು ಚಿತ್ರತಂಡ ಸಿದ್ಧತೆ ನಡೆಸಿದೆ. ಚಿತ್ರೀಕರಣದ ಮುಂದಿನ ಹಂತಗಳು ಹಾಗೂ ಚಿತ್ರದ ಇತರ ಕಲಾವಿದರು ಮತ್ತು ತಂತ್ರಜ್ಞರ ಕುರಿತು ಹೆಚ್ಚಿನ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ.

ಹೊಸ ಕಥೆ, ಹೊಸ ಪಾತ್ರ, ಹೊಸ ನಿರೀಕ್ಷೆ!

ಕನ್ನಡ ಚಿತ್ರರಂಗದಲ್ಲಿ ಸಾಮಾನ್ಯ ಜನರ ಬದುಕನ್ನು ಆಧರಿಸಿದ ಕಥೆಗಳಿಗೆ ವಿಶೇಷ ಸ್ಥಾನವಿದೆ. ಅಂತಹ ಕಥಾಹಂದರದೊಂದಿಗೆ ಬರುತ್ತಿರುವ ‘ಸುಬ್ಬ ನಿಮ್ಮಲೊಬ್ಬ’ ಚಿತ್ರದಲ್ಲಿ ಮಧ್ಯಮ ವರ್ಗದ ಲಾರಿ ಚಾಲಕನ ಜೀವನದ ಮೂಲಕ ಬದುಕಿನ ಹೋರಾಟವನ್ನು ತೆರೆದಿಡಲು ನಿರ್ದೇಶಕ ವಿನಯ್ ಕೃಷ್ಣ ಮುಂದಾಗಿದ್ದಾರೆ. ಒಂದೆಡೆ ಗಾಯಕನಾಗಿ ಜನಮನ ಗೆದ್ದಿರುವ ನವೀನ್ ಸಜ್ಜು ಅವರ ಹೊಸ ಅವತಾರ, ಮತ್ತೊಂದೆಡೆ ಸಾಮಾನ್ಯ ಕನ್ನಡಿಗನ ಅಸಾಮಾನ್ಯ ಬದುಕಿನ ಕಥೆ—ಈ ಎರಡು ಅಂಶಗಳಿಂದ ‘ಸುಬ್ಬ ನಿಮ್ಮಲೊಬ್ಬ’ ಚಿತ್ರ ಗಮನ ಸೆಳೆಯುತ್ತಿದೆ. ಒಟ್ಟಿನಲ್ಲಿ, ಹಾಡಿನ ಮೂಲಕ ಕನ್ನಡಿಗರ ಹೃದಯ ಗೆದ್ದ ನವೀನ್ ಸಜ್ಜು, ಇದೀಗ ‘ಸುಬ್ಬ ನಿಮ್ಮಲೊಬ್ಬ’ ಚಿತ್ರದ ಮೂಲಕ ಅಭಿನಯ ಮತ್ತು ಆಕ್ಷನ್‌ನಲ್ಲೂ ಪ್ರೇಕ್ಷಕರ ಮನಗೆಲ್ಲುವ ವಿಶ್ವಾಸದಲ್ಲಿದ್ದಾರೆ.

Related Posts

error: Content is protected !!