Quick ಸುದ್ದಿಗೆ ಒಂದು click

‘ದೇವರಾಯ’ನಾಗಿ ಅಬ್ಬರಿಸಲು ‘ಕಿಚ್ಚ’ ಸುದೀಪ್ ರೆಡಿ!

‘ಕಿಚ್ಚ’ ಸುದೀಪ್ ಜನ್ಮದಿನಕ್ಕೆ ‘ದೇವರಾಯ’ ಸಿನೆಮಾ ಅನೌನ್ಸ್‌

ಸದ್ದಿಲ್ಲದೆ ಅಭಿಮಾನಿಗಳಿಗೆ ಸರ್ಪ್ರೈಸ್‌ ಸುದ್ದಿಕೊಟ್ಟರು ನಟ ‘ಕಿಚ್ಚ’ ಸುದೀಪ್

‘ಕಿಚ್ಚ’ ಸುದೀಪ್ ಜನ್ಮದಿನದಂದು ‘ದೇವರಾಯ’ ಟೈಟಲ್‌ ಟೀಸರ್‌ ರಿಲೀಸ್‌

ಸೆ. 02, ಬೆಂಗಳೂರು: ಕನ್ನಡ ಚಿತ್ರರಂಗದ ನಟ, ನಿರ್ದೇಶಕ ಅಭಿಮಾನಿಗಳ ಪಾಲಿನ ಅಭಿನಯ ಚಕ್ರವರ್ತಿ ‘ಕಿಚ್ಚ’ ಸುದೀಪ್ ಅವರಿಗೆ ಇಂದು (02 ಸೆ. 2026) ಜನ್ಮದಿನದ ಸಂಭ್ರಮ. ಒಂದೆಡೆ ‘ಕಿಚ್ಚ’ ಸುದೀಪ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಜನ್ಮದಿನವನ್ನು ಭರ್ಜರಿಯಾಗಿ ಆಚರಿಸಿ, ಸಂಭ್ರಮಿಸುತ್ತಿದ್ದರೆ, ಮತ್ತೊಂದೆಡೆ ನಟ ‘ಕಿಚ್ಚ’ ಸುದೀಪ್ ತಮ್ಮ ಜನ್ಮದಿನದ ಪ್ರಯುಕ್ತ ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್‌ ಎನಿಸುವಂತ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ಅದೇನೆಂದರೆ, ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿಯೇ ನಟ ಸುದೀಪ್‌ ತಮ್ಮ ಮುಂದಿನ ಸಿನೆಮಾದ ಕುರಿತಾದ ಸುದ್ದಿಯನ್ನು ಹೊರಬಿಟ್ಟಿದ್ದಾರೆ.

ಶ್ರೀಕೃಷ್ಣ ‘ದೇವರಾಯ’ನ ಅವತಾರದಲ್ಲಿ ಎಂಟ್ರಿಕೊಡುತ್ತಿರುವ ಕಿಚ್ಚ!

ಹೌದು, ನಟ ಕಿಚ್ಚ ಸುದೀಪ್ ಅಭಿನಯದ ಅವರ ಮುಂದಿನ ಬಹುನಿರೀಕ್ಷಿತ ಹಾಗೂ ಮಹತ್ವಾಕಾಂಕ್ಷೆಯ ಐತಿಹಾಸಿಕ ಪ್ರಾಜೆಕ್ಟ್ ಗೆ ಇದೀಗ ಟೈಟಲ್‌ ಫಿಕ್ಸ್‌ ಆಗಿದೆ. ಅಂದಹಾಗೆ, ನಟ ಕಿಚ್ಚ ಸುದೀಪ್‌ ಅಭಿನಯಿಸುತ್ತಿರುವ ಹೊಸ ಸಿನೆಮಾಕ್ಕೆ ‘ದೇವರಾಯ’ ಎಂದು ಹೆಸರಿಡಲಾಗಿದ್ದು, ಸುದೀಪ್‌ ಜನ್ಮದಿನದಂದೇ ಈ ಚಿತ್ರ ಅಧಿಕೃತವಾಗಿ ಘೋಷಣೆಯಾಗಿದೆ. ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಹಾಗೂ ಪ್ರಿಯಾ ಸುದೀಪ್ ಒಡೆತನದ ‘ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋಸ್’ ಜಂಟಿಯಾಗಿ ಈ ಬೃಹತ್ ಕ್ಯಾನ್ವಾಸ್‌ನ ‘ದೇವರಾಯ’ ಸಿನೆಮಾವನ್ನು ನಿರ್ಮಿಸಲು ಮುಂದಾಗಿವೆ.

‘ಕಿಚ್ಚ’ನ ಬರ್ತ್‌ಡೇಗೆ ಚಿತ್ರತಂಡದಿಂದ ‘ದೇವರಾಯ’ ಟೈಟಲ್‌ ಟೀಸರ್‌ ಗಿಫ್ಟ್‌

ಇನ್ನು ‘ದೇವರಾಯ’ ಚಿತ್ರದ ಹೆಸರೇ ಹೇಳುವಂತೆ ಇದು ವಿಜಯನಗರ ಮಹಾ  ಸಾಮ್ರಾಜ್ಯದ ಸಾಮ್ರಾಟ ಶ್ರೀಕೃಷ್ಣದೇವರಾಜ ಮತ್ತು ವಿಜಯನಗರ  ಸಾಮ್ರಾಜ್ಯದ ಸುವರ್ಣ ಯುಗದ ಕಥಾಹಂದರವನ್ನು ಹೊಂದಿರುವ ಸಿನೆಮಾ. ವಿಜಯನಗರ ಸಾಮ್ರಾಜ್ಯದ ಅಂದಿನ ವೈಭವ, ಮಹಾರಾಜ ಶ್ರೀಕೃಷ್ಣ ದೇವರಾಯನ ಸಾಹಸ, ಚಾಣಾಕ್ಷ ಆಡಳಿತ, ಕಲೆ-ಸಾಹಿತ್ಯಗಳ ಚಿತ್ರಣ ಈ ಚಿತ್ರದಲ್ಲಿದೆ ಎನ್ನಲಾಗುತ್ತಿದ್ದು, ‘ದೇವರಾಯ’ ಚಿತ್ರದಲ್ಲಿ ಶ್ರೀ ಕೃಷ್ಣ ದೇವರಾಯರ ಪಾತ್ರದಲ್ಲಿ ನಟ ಸುದೀಪ್ ಬಣ್ಣ ಹಚ್ಚಲಿದ್ದಾರೆ.

ಈ ಹಿಂದೆ ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್‌ಕುಮಾರ್ ಅವರು ಕೃಷ್ಣದೇವರಾಯರ ಪಾತ್ರವನ್ನು ಬೆಳ್ಳಿತೆರೆಯ ಮೇಲೆ ಅಜರಾಮರಗೊಳಿಸಿದ್ದರು. ಇದೀಗ ಸುಮಾರು ಆರು ದಶಕಗಳ ಬಳಿಕ, ಇಂದಿನ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಅದ್ದೂರಿ ಮೇಕಿಂಗ್‌ನೊಂದಿಗೆ ‘ದೇವರಾಯ’ ಚಿತ್ರ  ಮೂಡಿಬರಲಿದೆ. ನಟ ಸುದೀಪ್‌ ಜನ್ಮದಿನಂದೇ ‘ದೇವರಾಯ’ ಚಿತ್ರದ ಬಗ್ಗೆ ಸುದ್ದಿ ಹೊರಬಿದ್ದಿದ್ದು, ‘ದೇವರಾಯ’ ಚಿತ್ರವು ಸುದೀಪ್ ಅವರ ಸಿನಿಪಯಣದಲ್ಲೇ ಅತ್ಯಂತ ದೊಡ್ಡ ಮೈಲಿಗಲ್ಲಾಗುವ ಎಲ್ಲ ಲಕ್ಷಣಗಳನ್ನೂ ಹೊಂದಿದೆ ಎನ್ನುತ್ತಿದ್ದಾರೆ ಸುದೀಪ್‌ ಅಭಿಮಾನಿಗಳು. ಸದ್ಯ ‘ದೇವರಾಯ’ ಚಿತ್ರದ ಟೈಟಲ್‌ ಟೀಸರ್‌ ವಿಡಿಯೋ ಯು-ಟ್ಯೂಬ್‌ ನಲ್ಲಿ ಬಿಡುಗಡೆಯಾಗಿದ್ದು, ಟೈಟಲ್‌ ಟೀಸರ್‌ಗೆ ಸುದೀಪ್‌ ಅಭಿಮಾನಿಗಳು ಜೈ ಎನ್ನುತ್ತಿದ್ದಾರೆ.

‘ದೇವರಾಯ’ ಚಿತ್ರದ ಟೈಟಲ್‌ ಟೀಸರ್‌ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

ಬಹುಕೋಟಿ ವೆಚ್ಚದಲ್ಲಿ ತೆರೆಗೆ ಬರಲಿದ್ದಾನೆ ‘ದೇವರಾಯ’ 

ಪ್ರಿಯಾ ಸುದೀಪ್ ಅರ್ಪಿಸುತ್ತಿರುವ ಈ ಚಿತ್ರಕ್ಕೆ ಟಿ. ಜಿ. ವಿಶ್ವಪ್ರಸಾದ್‌ ಹಾಗೂ ಕೃತಿ ಪ್ರಸಾದ್‌ ಬಂಡವಾಳ ಹೂಡುತ್ತಿದ್ದಾರೆ. ತೆಲುಗಿನಲ್ಲಿ ‘ಕಾರ್ತಿಕೇಯ 2’, ‘ಧಮಾಕಾ’, ‘ಬ್ರೋ’ ಹಾಗೂ ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಅಂತಹ ಪ್ಯಾನ್-ಇಂಡಿಯಾ ಮತ್ತು ಬಿಗ್-ಬಜೆಟ್ ಚಿತ್ರಗಳನ್ನು ನಿರ್ಮಿಸಿ ಜನಪ್ರಿಯತೆ ಗಳಿಸಿರುವ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಸಂಸ್ಥೆ ‘ದೇವರಾಯ’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಈ ಚಿತ್ರದ ಮೂಲಕ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಕನ್ನಡದಲ್ಲೂ ಭದ್ರವಾಗಿ ನೆಲೆವೂರಲು ಸಜ್ಜಾಗುತ್ತಿದೆ.

2027ರ ಡಿಸೆಂಬರ್‌ನಲ್ಲಿ ‘ದೇವರಾಯ’ ತೆರೆಗೆ!

ಸದ್ಯಕ್ಕೆ ‘ದೇವರಾಯ’ ಚಿತ್ರದ ಶೀರ್ಷಿಕೆ ಮತ್ತು ಪೋಸ್ಟರ್ ಮೂಲಕ ಅಭಿಮಾನಿಗಳಲ್ಲಿ ರೋಮಾಂಚನ ಸೃಷ್ಟಿಸಿರುವ ‘ದೇವರಾಯ’ ಚಿತ್ರತಂಡ, ಈ ಬಿಗ್‌ ಬಜೆಟ್‌ನ ಐತಿಹಾಸಿಕ ಚಿತ್ರವನ್ನು ಯಾರು ನಿರ್ದೇಶನ ಮಾಡಲಿದ್ದಾರೆ ಎಂಬ ಮಾಹಿತಿಯನ್ನು  ಗೌಪ್ಯವಾಗಿಟ್ಟಿದೆ. ಅಲ್ಲದೆ ‘ದೇವರಾಯ’ ಚಿತ್ರದ ಇತರ ಕಲಾವಿದರು, ಪ್ರಮುಖ ತಂತ್ರಜ್ಞರ ಬಗ್ಗೆಯೂ ಚಿತ್ರತಂಡ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

ಸದ್ಯ ‘ದೇವರಾಯ’ ಚಿತ್ರದ ಸ್ಕ್ರಿಪ್ಟ್‌ ಕೆಲಸಗಳು ಪೂರ್ಣಗೊಂಡಿದ್ದು, ಚಿತ್ರದ ಪ್ರೀ-ಪ್ರೊಡಕ್ಷನ್ಸ್‌ ಕೆಲಸಗಳು ಅಂತಿಮ ಹಂತದಲ್ಲಿದೆ. ಚಿತ್ರತಂಡದ ಮೂಲಗಳ ಪ್ರಕಾರ, ‘ದೇವರಾಯ’ ಚಿತ್ರದ ಚಿತ್ರೀಕರಣ ಹಾಗೂ ತಾಂತ್ರಿಕ ಸಿದ್ಧತೆಗಳಿಗೆ ಹೆಚ್ಚಿನ ಸಮಯಾವಕಾಶ ಬೇಕಿರುವುದರಿಂದ, ‘ದೇವರಾಯ’ ಚಿತ್ರವನ್ನು 2027ರ ಡಿಸೆಂಬರ್‌ನಲ್ಲಿ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ. ಒಟ್ಟಾರೆ ಸದ್ಯದ ಮಟ್ಟಿಗೆ ‘ದೇವರಾಯ’ ಚಿತ್ರದ ಟೈಟಲ್‌ ಟೀಸರ್‌ ಬಿಡುಗಡೆ ಮಾಡಿ, ಸಿನಿಪ್ರಿಯರ ಗಮನ ಸೆಳೆಯುವ ಕಸರತ್ತು ಮಾಡುತ್ತಿರುವ ಚಿತ್ರತಂಡ, ಮುಂದಿನ ದಿನಗಳಲ್ಲಿ ‘ದೇವರಾಯ’ನ ಬಗ್ಗೆ ಇನ್ನಷ್ಟು ಮಾಹಿತಿ ನೀಡುವ ಸಾಧ್ಯತೆಯಿದೆ.

Related Posts

error: Content is protected !!