ಖ್ಯಾತ ಗಾಯಕಿ ‘ಗಾನಕೋಗಿಲೆ’ ಎಸ್. ಜಾನಕಿ ನಿಧನ
ಹಾಡು ನಿಲ್ಲಿಸಿದ ‘ಗಾನಕೋಗಿಲೆ’
ವಯೋಸಹಜ ಕಾಯಿಲೆಯಿಂದ ಮೈಸೂರಿನಲ್ಲಿ ಎಸ್. ಜಾನಕಿ ಕೊನೆಯುಸಿರು!
ಮಧುರ ಧ್ವನಿಯಲ್ಲಿ ನೆನಪಾಗಿ ಉಳಿದ ಎಸ್. ಜಾನಕಿ 
12 ಜು. 2026, ಮೈಸೂರು: ದಕ್ಷಿಣ ಭಾರತದ ಖ್ಯಾತ ಗಾಯಕಿ, ಕನ್ನಡ ಚಿತ್ರರಂಗದ ‘ಗಾನಕೋಗಿಲೆ’, ಹಿರಿಯ ಗಾಯಕಿ ಎಸ್. ಜಾನಕಿ (88) ಅವರು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಶನಿವಾರ (11 ಜುಲೈ 2026) ನಿಧನರಾದರು. ಕೆಲ ವರ್ಷಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಎಸ್. ಜಾನಕಿ ಮೈಸೂರಿನಲ್ಲೇ ವಾಸವಾಗಿ, ಆರೈಕೆ ಪಡೆದುಕೊಳ್ಳುತ್ತಿದ್ದರು. ಕಳೆದ ಕೆಲ ದಿನಗಳಿಂದ ಎಸ್. ಜಾನಕಿ ಅವರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಅವರನ್ನು ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತದಿಂದ ಶನಿವಾರ (11 ಜುಲೈ 2026) ರಾತ್ರಿ 8 ಗಂಟೆಗೆ ಸುಮಾರಿಗೆ ಎಸ್. ಜಾನಕಿ ನಿಧನರಾದರು ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ದಕ್ಷಿಣ ಭಾರತದಲ್ಲಿ ಮನೆಮಾತಾಗಿದ್ದ ಗಾಯಕಿ
ಮೂಲತಃ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಪಲ್ಲಪಟ್ಲ ಗ್ರಾಮದಲ್ಲಿ 1938ಎ ಏಪ್ರಿಲ್ 23ರಂದು ಜನಿಸಿದ ಎಸ್. ಜಾನಕಿ ಬಾಲ್ಯದಿಂದಲೇ ಸಂಗೀತದ ಕಡೆಗೆ ಆಸಕ್ತಿಯನ್ನು ಬೆಳೆಸಿಕೊಂಡವರು. ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಎಸ್. ಜಾನಕಿ ಅವರಿಗೆ ಮನೆಯಲ್ಲಿನ ವಾತಾವರಣವೇ ಸಂಗೀತದತ್ತ ಆಕರ್ಷಿತರಾಗುವಂತೆ ಮಾಡಿತ್ತು. ತನ್ನ 3ನೇ ವಯಸ್ಸಿನಲ್ಲೇ ಸಂಗೀತದತ್ತ ಆಕರ್ಷಿತರಾಗಿದ್ದ ಎಸ್. ಜಾನಕಿ, ಶಾಸ್ತ್ರೀಯ ಸಂಗೀತಗಾರ ಪೈಡಿ ಸ್ವಾಮಿಯವರಿಂದ ಸಂಗೀತದ ಪ್ರಾಥಮಿಕ ಪಾಠ ಕಲಿತರು. ಆರಂಭದಲ್ಲಿ ತೆಲುಗಿನಲ್ಲಿ ಭಕ್ತಿಗೀತೆ, ಶಾಸ್ತ್ರೀಯ ಗೀತೆಗಳಿಗೆ ಧ್ವನಿಯಾಗುತ್ತಿದ್ದ ಎಸ್. ಜಾನಕಿ ಆನಂತರ ಸಿನೆಮಾ ಹಾಡುಗಳಿಗೆ ಧ್ವನಿಯಾಗುವ ಮೂಲಕ ಬಹುದೊಡ್ಡ ಸಂಖ್ಯೆಯಲ್ಲಿ ಕೇಳುಗ ವರ್ಗವನ್ನು ಸಂಪಾದಿಸಿಕೊಂಡರು. 
ತಮಿಳು ಗೀತೆಯ ಮೂಲಕ ಚಿತ್ರರಂಗಕ್ಕೆ ಪ್ರವೇಶ…
1957ರಲ್ಲಿ ಸಿನೆಮಾ ಸಂಗೀತ ಪ್ರಪಂಚಕ್ಕೆ ಜಾನಕಿ ಪದಾರ್ಪಣೆ ಮಾಡಿದ ಎಸ್. ಜಾನಕಿ, ತಮಿಳಿನ ‘ವಿಧಿವಿಲಕ್ಕು’ ಚಿತ್ರದ ಮೂಲಕ ಹಿನ್ನೆಲೆ ಗಾಯಕಿಯಾಗಿ ಗಾನ ಯಾನ ಆರಂಭಿಸಿದರು. ಆ ಬಳಿಕ ಎಸ್. ಜಾನಕಿ ಮತ್ತೆಂದು ಹಿಂತಿರುಗಿ ನೋಡಿದ್ದೇ ಇಲ್ಲ. ತಮಿಳು, ತೆಲುಗು, ಕನ್ನಡ, ಮಲೆಯಾಳಂ, ಹಿಂದಿ, ಮರಾಠಿ ಹೀಗೆ 20ಕ್ಕೂ ಹೆಚ್ಚು ಭಾಷೆಗಳಲ್ಲಿ ಬರೋಬ್ಬರಿ 48 ಸಾವಿರಕ್ಕೂ ಹೆಚ್ಚು ಗೀತೆಗಳಿಗೆ ಎಸ್. ಜಾನಕಿ ಧ್ವನಿ ಆಗಿದ್ದರು. 1957ರಲ್ಲಿ ‘ರತಿ ಮನ್ಮಥ’ ಚಿತ್ರದ ‘ತುಂಬಿ ಬಂದಾಡ ಭ್ರಮರ…’ ಹಾಡಿನ ಮೂಲಕ ಎಸ್. ಜಾನಕಿ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಹುಟ್ಟಿನಿಂದ ತೆಲುಗಿನವರಾದರೂ, ಅವರಿಗೆ ಅತಿ ಹೆಚ್ಚು ಪ್ರೀತಿ, ಗೌರವ ಸಂಪಾದಿಸಿಕೊಟ್ಟಿದ್ದು ಕನ್ನಡ ನಾಡು. ಕನ್ನಡಿಗರು ಅವರನ್ನು ‘ಗಾನ ಕೋಗಿಲೆ’ ಎಂದೇ ಅಪ್ಪಿಕೊಂಡರು. 
ವರನಟ ಡಾ. ರಾಜ್‌ಕುಮಾರ್ ಮತ್ತು ಎಸ್. ಜಾನಕಿ ಅವರ ಕಾಂಬಿನೇಷನ್ ಕನ್ನಡ ಚಿತ್ರರಂಗದಲ್ಲಿ ಸುವರ್ಣ ಯುಗವನ್ನೇ ಸೃಷ್ಟಿಸಿತ್ತು. ಪಿ. ಬಿ. ಶ್ರೀನಿವಾಸ್ ಮತ್ತು ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರೊಂದಿಗೆ ಜಾನಕಿಯವರು ಹಾಡಿದ ಭಾವನಾತ್ಮಕ ಯುಗಳ ಗೀತೆಗಳು ಎಂದೆಂದಿಗೂ ಸದಾ ಹಸಿರು. ಮೂಲತಃ ತೆಲುಗಿನವರಾದರೂ ಎಸ್. ಜಾನಕಿ ಹೆಚ್ಚು ಪ್ರಸಿದ್ಧಿ ಪಡೆದು ಕನ್ನಡಿಗರ ಮನೆಮನಗಳಿಗೆ ಹತ್ತಿರವಾದದ್ದು ಕನ್ನಡ ಹಾಡುಗಳ ಮೂಲಕ. ಕನ್ನಡ ಭಾಷೆಯನ್ನು ಅತ್ಯಂತ ಸ್ಪಷ್ಟವಾಗಿ ಉಚ್ಚರಿಸುತ್ತಾ, ಇಲ್ಲಿನದ್ದೇ ಧ್ವನಿ ಎನ್ನುವಂತೆ ಅವರು ಸಾವಿರಾರು ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ. ತಮ್ಮ ವಿಶ್ರಾಂತ ಜೀವನಕ್ಕೆ ಕೂಡ ಕರ್ನಾಟಕವನ್ನೇ ಆಯ್ಕೆ ಮಾಡಿಕೊಂಡಿದ್ದ ಎಸ್. ಜಾನಕಿ ಕಳೆದ ಕೆಲ ವರ್ಷಗಳಿಂದ ಮೈಸೂರಿನಲ್ಲೇ ತಮ್ಮ ವಿಶ್ರಾಂತ ಜೀವನ ನಡೆಸುತ್ತಿದ್ದರು.
ಮ್ಯಾಜಿಕ್ ವಾಯ್ಸ್‌ನಲ್ಲಿ ಮೋಡಿ ಮಾಡಿದ್ದ ಜಾನಕಿಯಮ್ಮ… 
1970-80ರ ದಶಕದಲ್ಲಿ ಎಸ್. ಜಾನಕಿ ಅವರು ಸಾಕಷ್ಟು ಹಾಡುಗಳನ್ನು ಹಾಡಿದರು. ಅವರಷ್ಟು ಜನಪ್ರಿಯತೆ ಪಡೆದ ಮತ್ತೊಬ್ಬರು ಕನ್ನಡದಲ್ಲಿ ಇರಲಿಲ್ಲ. ವರನಟ ಡಾ. ರಾಜ್‌ಕುಮಾರ್ ಹಾಗೂ ಎಸ್. ಜಾನಕಿ ಅವರ ಕಾಂಬಿನೇಷನ್ ಕನ್ನಡ ಚಿತ್ರರಂಗದ ‘ಗೋಲ್ಡನ್ ಎರಾ’ ಎಂದೇ ಹೇಳಲಾಗುತ್ತದೆ. ‘ಎಲ್ಲೆಲ್ಲಿ ನೋಡಲಿ… ನಿನ್ನನ್ನೇ ಕಾಣುವೆ…’ ಮುಂತಾದ ನೂರಾರು ಸದಾಹಸಿರು ಯುಗಳ ಗೀತೆಗಳನ್ನು ಇವರು ನೀಡಿದ್ದಾರೆ. ಇನ್ನು ‘ಗಾನ ಗಂಧರ್ವ’ ಎಸ್. ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಧ್ವನಿಯಲ್ಲಿ ಮೂಡಿಬಂದ ರೋಮ್ಯಾಂಟಿಕ್ ಹಾಡುಗಳು ಇಂದಿಗೂ ಯುವಕರ ನೆಚ್ಚಿನ ಹಾಡುಗಳಾಗಿವೆ. ‘ಗಾನ ಕೋಗಿಲೆ’ ಎಸ್. ಜಾನಕಿ ಅವರಿಗೆ ಇರುವ ಅತಿ ದೊಡ್ಡ ವಿಶೇಷ ಶಕ್ತಿಯೆಂದರೆ ಅದು ಧ್ವನಿ ಬದಲಾವಣೆ . ಸಣ್ಣ ಮಗುವಿನ ಧ್ವನಿಯಿಂದ ಹಿಡಿದು ಪ್ರೌಢ ಮಹಿಳೆಯ ಧ್ವನಿಯವರೆಗೆ, ಕೇವಲ ಗಾಯನದ ಮೂಲಕವೇ ನಟನೆಯ ಭಾವನೆಗಳನ್ನು ತರುತ್ತಿದ್ದ ಅದ್ಭುತ ಗಾಯಕಿ ಇವರು. ಕನ್ನಡ ಚಿತ್ರರಂಗದಲ್ಲಿ ಅವರು ಹಾಡಿದ ಸದಾಹಸಿರು ಗೀತೆಗಳಿಗೆ ಕರ್ನಾಟಕ ಸರ್ಕಾರವು ಹಲವು ಬಾರಿ ‘ಅತ್ಯುತ್ತಮ ಹಿನ್ನೆಲೆ ಗಾಯಕಿ’ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ. ಇಷ್ಟೇ ಅಲ್ಲದೆ, ಎಸ್. ಜಾನಕಿ ಅವರಿಗೆ 4 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, 33 ವಿವಿಧ ರಾಜ್ಯ ಚಲನಚಿತ್ರ ಪ್ರಶಸ್ತಿ, ಗೌರವ ಡಾಕ್ಟರೇಟ್, ತಮಿಳುನಾಡು ರಾಜ್ಯ ಸರ್ಕಾರದಿಂದ ‘ಕಲೈಮಾಮಣಿ’ ಪ್ರಶಸ್ತಿ, ಕರ್ನಾಟಕ ಸರ್ಕಾರದಿಂದ ‘ರಾಜ್ಯೋತ್ಸವ ಪ್ರಶಸ್ತಿ’ ಹಾಗೂ 2013ರಲ್ಲಿ ‘ಪದ್ಮಭೂಷಣ’ ಪ್ರಶಸ್ತಿ ಸಿಕ್ಕಿದೆ.
ಎಸ್. ಜಾನಕಿ ನಿಧನಕ್ಕೆ ಗಣ್ಯರ ಸಂತಾಪ
ಹಿರಿಯ ಗಾಯಕಿ ಎಸ್. ಜಾನಕಿ ಅವರು ಅವರ ಸಾವು ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಸಾವಿಗೆ ಚಿತ್ರರಂಗ, ರಾಜಕೀಯ, ಕ್ರೀಡೆ, ಉದ್ಯಮ ಸೇರಿದಂತೆ ಅನೇಕ ಕ್ಷೇತ್ರದ ಗಣ್ಯರು ಕಂಬನಿ ಮಿಡಿದಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಖ್ಯಾತ ನಟರಾದ ಕಮಲ್ ಹಾಸನ್, ರಜನಿಕಾಂತ್, ಚಿರಂಜೀವಿ, ತಮಿಳುನಾಡು ಸಿ. ಎಂ. ದಳಪತಿ ವಿಜಯ್, ಕರ್ನಾಟಕದ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸೇರಿದಂತೆ ನೂರಾರು ಗಣ್ಯರು ಅಗಲಿದ ಎಸ್. ಜಾನಕಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. 
ಮೈಸೂರಿನಲ್ಲಿ ಎಸ್. ಜಾನಕಿ ಅವರ ಅಂತ್ಯ ಸಂಸ್ಕಾರ
ಭಾನುವಾರ (12 ಜುಲೈ 2026) ಮೈಸೂರಿನಲ್ಲಿ, ಸಕಲ ಸರ್ಕಾರಿ ಗೌರವಗಳೊಂದಿಗೆ ಎಸ್. ಜಾನಕಿ ಅವರ ಅಂತಿಮ ಸಂಸ್ಕಾರ ನೆರವೇರಿತು. ಮೊದಲು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಎಸ್. ಜಾನಕಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಈ ವೇಳೆ ಸಾವಿರಾರು ಜನ ಅಭಿಮಾನಿಗಳು ತಮ್ಮ ನೆಚ್ಚಿನ ಗಾಯಕಿಯ ಅಂತಿಮ ದರ್ಶನ ಪಡೆದುಕೊಂಡರು. ಬಳಿಕ ಎಸ್. ಜಾನಕಿ ಅವರ ಅಂತಿಮ ಸಂಸ್ಕಾರ ಮೈಸೂರು ಜಿಲ್ಲೆ ಎಚ್. ಡಿ ಕೋಟೆ ತಾಲ್ಲೂಕಿನ ಕಣಿಯನ ಹುಂಡಿಯಲ್ಲಿ ನಡೆಯಿತು. ಇಲ್ಲಿಯೇ ಮಣ್ಣಾಗಬೇಕು ಎಂಬುದು ಎಸ್. ಜಾನಕಿ ಅವರ ಆಸೆಯೂ ಆಗಿತ್ತು. ಅವರ ಆಸೆಯಂತೆ, ಸ್ಥಳೀಯ ಆಡಳಿತದ ಸಹಕಾರದಿಂದ ಅವರ ತೋಟದಲ್ಲೇ ಸ್ಥಳದಲ್ಲೇ ಜಾನಕಿ ಅವರ ಅಂತಿಮ ಸಂಸ್ಕಾರ ನಡೆಸಲಾಯಿತು.















