‘ಕಲ್ಯಾಣಿ’ ಚಿತ್ರದ ಶೀರ್ಷಿಕೆ ಅನಾವರಣ
ಹೊರಬಂತು ‘ಕಲ್ಯಾಣಿ’ ಮೋಶನ್ ಪೋಸ್ಟರ್
ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ನತ್ತ ‘ಕಲ್ಯಾಣಿ’ ಚಿತ್ರ
ಬಿ. ಎಂ. ಗಿರಿರಾಜ ಹೇಳುತ್ತಿರುವ ‘ಕಲ್ಯಾಣಿ’ ಕಥೆ
ಕನ್ನಡ ಚಿತ್ರರಂಗದಲ್ಲಿ ‘ಜಟ್ಟ’, ‘ಮೈತ್ರಿ’ ಮೊದಲಾದ ವಿಭಿನ್ನ ಕಥಾಹಂದರದ ಸಿನೆಮಾಗಳ ಮೂಲಕ ಸದಭಿರುಚಿ ಚಿತ್ರ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ನಿರ್ದೇಶಕ ಬಿ. ಎಂ. ಗಿರಿರಾಜ ಈ ಬಾರಿ ‘ಕಲ್ಯಾಣಿ’ ಎಂಬ ಮತ್ತೊಂದು ವಿಭಿನ್ನ ಕಥಾಹಂದರವನ್ನು ತೆರೆಮೇಲೆ ತರುವ ತಯಾರಿಯಲ್ಲಿದ್ದಾರೆ. ಹೌದು, ಲೇಖಕ ಬಸವ ರೆಡ್ಡಿ ಅವರ ಕಥೆಗೆ ಬಿ. ಎಂ. ಗಿರಿರಾಜ ಸಿನೆಮಾ ರೂಪ ಕೊಟ್ಟು ಅದನ್ನು ‘ಕಲ್ಯಾಣಿ’ ಎಂಬ ಹೆಸರಿನಲ್ಲಿ ತೆರೆಗೆ ತರುತ್ತಿದ್ದಾರೆ.
ಕೆಲ ತಿಂಗಳ ಹಿಂದೆಯೇ ಸದ್ದಿಲ್ಲದೆ ಶುರುವಾಗಿದ್ದ ಈ ‘ಕಲ್ಯಾಣಿ’ ಚಿತ್ರ, ಸದ್ಯ ತನ್ನ ಸಂಪೂರ್ಣ ಚಿತ್ರೀಕರಣವನ್ನು ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿದೆ. ಇದರ ನಡುವೆಯೇ ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, ಚಿತ್ರದ ಶೀರ್ಷಿಕೆ ಮತ್ತು ಮೋಶನ್ ಪೋಸ್ಟರ್ ಬಿಡುಗಡೆ ಮಾಡಿದೆ. ಇದೇ ವೇಳೆ ಮಾಧ್ಯಮಗಳ ಜೊತೆ ‘ಕಲ್ಯಾಣಿ’ ಚಿತ್ರದ ಕಥೆ, ಕಲಾವಿದರು, ತಂತ್ರಜ್ಞರು ಸೇರಿದಂತೆ ಚಿತ್ರದ ವಿಶೇಷತೆಗಳ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿತು.
‘ಆರ್. ಕೆ. ಸಿನೆಮಾಸ್’ ಬ್ಯಾನರಿನಲ್ಲಿ ‘ಕಲ್ಯಾಣಿ’ ನಿರ್ಮಾಣ
ಇನ್ನು, ಲೇಖಕ ಬಸವ ರೆಡ್ಡಿ ಕಥೆ ಬರೆದಿರುವ, ಬಿ. ಎಂ. ಗಿರಿರಾಜ ನಿರ್ದೇಶನದ ಹೊಸಚಿತ್ರಕ್ಕೆ ‘ಕಲ್ಯಾಣಿ’ ಎಂದು ಹೆಸರಿಡಲಾಗಿದೆ. ಇದನ್ನು ಕುಮಾರಸ್ವಾಮಿ ಆರ್. ನಿರ್ಮಾಣ ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸುಮಾರು ಮೂರು ದಶಕಗಳಿಂದ ಕಾರ್ಯಕಾರಿ ನಿರ್ಮಾಪಕರಾಗಿ ‘ತಾಯಿಗೆ ತಕ್ಕ ಮಗ’, ‘ಲವ್ 360’, ‘ಕೌಸಲ್ಯ ಸುಪ್ರಜಾ ರಾಮ’, ‘ಬ್ರ್ಯಾಟ್’ ಸೇರಿದಂತೆ
ಸುಮಾರು 45ಕ್ಕೂ ಹೆಚ್ಚು ಸಿನೆಮಾಗಳಿಗೆ ಕೆಲಸ ಮಾಡಿದ ಅನುಭವವಿರುವ ಕುಮಾರಸ್ವಾಮಿ ಆರ್. ‘ಆರ್. ಕೆ. ಸಿನೆಮಾಸ್’ ಬ್ಯಾನರಿನಲ್ಲಿ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ನಿರ್ಮಾಪಕರಾಗಿ ‘ಕಲ್ಯಾಣಿ’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ‘ಕಾರ್ಯಕಾರಿ ನಿರ್ಮಾಪಕನಾಗಿ ಇಷ್ಟು ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಪಡೆದುಕೊಂಡ ಅನುಭವ ಮತ್ತು ಚಿತ್ರದ ಕಥಾಹಂದರ ‘ಕಲ್ಯಾಣಿ’ ಸಿನೆಮಾವನ್ನು ನಿರ್ಮಿಸುವಂತೆ ಮಾಡಿತು. ನಾವು ಅಂದುಕೊಂಡಂತೆ ನಮ್ಮ ಸಿನೆಮಾ, ಅಚ್ಚುಕಟ್ಟಾಗಿ ತಯಾರಾಗುತ್ತಿದ್ದು, ಹೊಸಥರದ ಕಥಾಹಂರದ ಚಿತ್ರದಲ್ಲಿದೆ. ‘ಕಲ್ಯಾಣಿ’ ತೆರೆಮೇಲೆ ಪ್ರೇಕ್ಷಕರಿಗೂ ಇಷ್ಟವಾಗಲಿದೆ’ ಎಂಬುದು ‘ಕಲ್ಯಾಣಿ’ ಚಿತ್ರದ ನಿರ್ಮಾಪಕ ಕುಮಾರಸ್ವಾಮಿ ಆರ್. ಅವರ ಮಾತು.
‘ಕಲ್ಯಾಣಿ’ಯಲ್ಲಿ ಬಹು ಕಲಾವಿದರ ದಂಡು…
ಈಗಾಗಲೇ ರಂಗಭೂಮಿಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಯುವ ನಟ ಸಾಮ್ರಾಟ್ ಶೆಟ್ಟಿ ‘ಕಲ್ಯಾಣಿ’ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಉತ್ತರ ಭಾರತದ ನಟಿ ಸಿಮ್ರನ್, ರಾಹುಲ್ ಜೇಟ್ಲಿ, ಶಮಂತ್ ರಾವ್, ಪಿ. ಡಿ. ಸತೀಶ್ ಚಂದ್ರ, ಯಮುನಾ ಶ್ರೀನಿಧಿ, ವಿಜಯ್ ಚೆಂಡೂರು, ಶೈಲೇಂದ್ರ, ರಂಗು ಸಮರ್ಪಣ್ ಸೇರಿದಂತೆ ಅನೇಕ ರಂಗಭೂಮಿ ಕಲಾವಿದರು ‘ಕಲ್ಯಾಣಿ’ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಉತ್ತರ ಧ್ರುವದಿಂದ ದಕ್ಷಿಣ ಧ್ರುವಕೆ ‘ಕಲ್ಯಾಣಿ’ ಯಾನ
ಇನ್ನು ‘ಕಲ್ಯಾಣಿ’ ನಿರ್ದೇಶಕ ಬಿ. ಎಂ. ಗಿರಿರಾಜ ಅವರಿಗೆ ಹೊಸಥರದ ಚಿತ್ರವಂತೆ. ‘ಕಲ್ಯಾಣಿ’ ಚಿತ್ರದ ಬಗ್ಗೆ ಮಾತನಾಡಿರುವ ನಿರ್ದೇಶಕ ಬಿ. ಎಂ. ಗಿರಿರಾಜ್, ‘ನವಿರಾದ ಒಲವಿನ ಕಥೆ ಮುನ್ನಲೆಯಾಗಿಟ್ಟುಕೊಂಡು ಈ ಸಿನೆಮಾ ಮಾಡಲಾಗಿದೆ. ಇದರಲ್ಲಿ ನಂಬಿಕೆ, ಸ್ನೇಹ, ಐಡೆಂಟಿಟಿಯ ವಿಷಯಗಳು ಈ ಸಿನಿಮಾದಲ್ಲಿದೆ. ಬೇರೆ ಬೇರೆ ಸಂಸ್ಕೃತಿಗಳ ಮುಖಾಮುಖಿ ಈ ಸಿನೆಮಾ. ಉತ್ತರ ಭಾರತದಿಂದ ಬರುವ ಹುಡುಗಿ ದಕ್ಷಿಣ ಭಾರತದ ಹುಡುಗನ ಎರಡು ಪಾತ್ರಗಳನ್ನು ಪ್ರಧಾನವಾಗಿ ಇಟ್ಟುಕೊಂಡು ಎರಡು ಸಂಸ್ಕೃತಿಗಳ ಅನಾವರಣವನ್ನು ಈ ಚಿತ್ರದಲ್ಲಿ ಮಾಡುವ ಪ್ರಯತ್ನ ಮಾಡಿದ್ದೇವೆ. ನಾನು ಇಲ್ಲಿಯವರೆಗೆ ಮಾಡಿರುವ ಸಿನೆಮಾಗಳಿಗಿಂತ ಸಂಪೂರ್ಣ ವಿಭಿನ್ನವಾಗಿರುವಂತ ಸಿನೆಮಾ ಇದಾಗಿದೆ’ ಎಂದಿದ್ದಾರೆ. 
ಶೀಘ್ರದಲ್ಲಿಯೇ ತೆರೆಗೆ ಬರುವ ತವಕ…
ಇನ್ನು ‘ಕಲ್ಯಾಣಿ’ ಚಿತ್ರದ ಸುಮಧುರ ಹಾಡುಗಳಿಗೆ ಸಂಗೀತ ನಿರ್ದೇಶಕ ಬಿ. ಜೆ. ಭರತ್ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ ಪ್ರಶಾಂತ ಲಾಗರ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ ಕಾರ್ಯವಿದೆ. ಭಟ್ಕಳ, ಬೆಂಗಳೂರು ಸುತ್ತಮುತ್ತ ಚಿತ್ರದ ಬಹುತೇಕ ಚಿತ್ರೀಕರಣ ಮಾಡಲಾಗಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ, ಇದೇ ಸೆಪ್ಟೆಂಬರ್ ಅಥವಾ ಅಕ್ಟೋಬರ್ ವೇಳೆಗೆ ‘ಕಲ್ಯಾಣಿ’ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆಯಲ್ಲಿದೆ ಚಿತ್ರತಂಡ















