Pop Corner

ಪ್ರಣಮ್‌ ದೇವರಾಜ್ ‘ಶ್ರೀರಸ್ತು’ ಚಿತ್ರಕ್ಕೆ ಪ್ರಜ್ವಲ್‌ ದೇವರಾಜ್ ಎಂಟ್ರಿ!

‘ಶ್ರೀರಸ್ತು’ ಚಿತ್ರದಲ್ಲಿ ‘ಡೈನಾಮಿಕ್‌ ಸ್ಟಾರ್‌’ ಪುತ್ರರ ಜೊತೆಯಾಟ

ಪ್ರಣಮ್‌ ಅಭಿನಯದ ‘ಶ್ರೀರಸ್ತು’ ಚಿತ್ರದ ವಿಶೇಷ ಪಾತ್ರದಲ್ಲಿ ಪ್ರಜ್ವಲ್ ಮಿಂಚು

ಪ್ರಣಮ್‌ ದೇವರಾಜ್‌ ಜನ್ಮದಿನದ ಸಂದರ್ಭದಲ್ಲಿ ಹೊರಬಿದ್ದ ಸುದ್ದಿ

ಕನ್ನಡ ಚಿತ್ರರಂಗದ ಹಿರಿಯ ನಟ ‘ಡೈನಾಮಿಕ್‌ ಸ್ಟಾರ್‌’ ದೇವರಾಜ್‌ ಅವರ ಕಿರಿಯ ಪುತ್ರ ಪ್ರಣಮ್‌ ದೇವರಾಜ್‌, ಸದ್ಯ ‘ಶ್ರೀರಸ್ತು’ ಎಂಬ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಅನೇಕರಿಗೆ ಗೊತ್ತಿರಬಹುದು. ಕೆಲ ತಿಂಗಳ ಹಿಂದಷ್ಟೇ ಈ ಚಿತ್ರದ ಶೀರ್ಷಿಕೆ ಅನಾವರಣವಾಗಿ ಸುದ್ದಿಯಾಗಿತ್ತು. ಇದೀಗ ಈ ಚಿತ್ರದ ಕಡೆಯಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ. ಅದೇನೆಂದರೆ, ಪ್ರಣಮ್‌ ದೇವರಾಜ್‌ ನಾಯಕ ನಟನಾಗಿ ಅಭಿನಯಿಸುತ್ತಿರುವ ‘ಶ್ರೀರಸ್ತು’ ಚಿತ್ರದಲ್ಲಿ ಪ್ರಣಮ್‌ ದೇವರಾಜ್‌ ಅವರ ಹಿರಿಯ ಸೋದರ ಪ್ರಜ್ವಲ್‌ ದೇವರಾಜ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ!

ಹೌದು, ‘ಶ್ರೀರಸ್ತು’ ಚಿತ್ರದಲ್ಲಿ ನಾಯಕ ನಟನಾಗಿ ಪ್ರಣಮ್‌ ದೇವರಾಜ್‌ ಅಭಿನಯಿಸುತ್ತಿದ್ದು, ಈ ಚಿತ್ರದ ಮತ್ತೊಂದು ವಿಶೇಷ ಪ್ರಮುಖ ಪಾತ್ರದಲ್ಲಿ ಪ್ರಣಮ್‌ ದೇವರಾಜ್‌ ಅವರ ಹಿರಿಯ ಸೋದರ ಪ್ರಜ್ವಲ್‌ ದೇವರಾಜ್‌ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ 2026ರ ಜುಲೈ 3ರ ಶುಕ್ರವಾರ ಪ್ರಜ್ವಲ್‌ ದೇವರಾಜ್‌ ಜನ್ಮದಿನದ ಪ್ರಯುಕ್ತ ‘ಶ್ರೀರಸ್ತು’ ಚಿತ್ರತಂಡ ಶುಭ ಕೋರುವ ಪೋಸ್ಟರ್‌ ಮತ್ತು ವಿಡಿಯೋ ಬಿಡುಗಡೆಗೊಳಿಸಿದ್ದು, ವಿಶೇಷ ಏನೆಂದರೆ ಪ್ರಣಮ್‌ ಜತೆಗೆ ಬರ್ತ್‌ ಡೇ ಬಾಯ್ ಪ್ರಜ್ವಲ್‌ ಕೂಡ ಇದ್ದ ದೃಶ್ಯಗಳು ಹೊರಬಿದ್ದಿದ್ದು, ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಮೂಡುವಂತೆ ಮಾಡಿದೆ.

‘ಶ್ರೀರಸ್ತು’ ಚಿತ್ರದಲ್ಲಿ ತಮ್ಮನಿಗೆ ಅಣ್ಣನ ಸಾಥ್‌

ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಅನೇಕ ಸಹೋದರರು ಸಕ್ಸಸ್‌ ಹೀರೋಗಳಾಗಿರುವುದನ್ನು ನೋಡಿದ್ದೇವೆ. ಆ ಸಾಲಿನಲ್ಲಿ ನಟ ದೇವರಾಜ್‌ ಅವರ ಇಬ್ಬರು ಪುತ್ರರೂ ಸೇರುತ್ತಾರೆ. ಇಲ್ಲಿಯವರೆಗೆ ಅನೇಕ ಸೋದರ ನಟರು ಒಂದೇ ಚಿತ್ರದಲ್ಲಿ ಜೊತೆಯಾಗಿ ಅಭಿನಯಿಸಿದ ಹಲವು ನಿದರ್ಶನಗಳಿವೆ. ಆದರೆ ಇಲ್ಲಿಯವರೆಗೆ ಪ್ರಣಮ್‌ ದೇವರಾಜ್‌ ಮತ್ತು ಪ್ರಜ್ವಲ್ ದೇವರಾಜ್‌ ಒಂದೇ ಚಿತ್ರದಲ್ಲಿ ಜೊತೆಯಾಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇದೇ ಮೊದಲ ಬಾರಿಗೆ ದೇವರಾಜ್‌ ಪುತ್ರರು ‘ಶ್ರೀರಸ್ತು’ ಚಿತ್ರದಲ್ಲಿ ಒಟ್ಟಿಗೇ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದು, ಹೀಗಾಗಿ ಸಹಜವಾಗಿಯೇ ಚಿತ್ರದ ಮೇಲೆ ಒಂದಷ್ಟು ನಿರೀಕ್ಷೆ ಹೆಚ್ಚಾಗಿದೆ.

ಪ್ರೇಮಕಥೆಯ ‘ಶ್ರೀರಸ್ತು’ ಪಕ್ಕಾ ಕೌಟುಂಬಿಕ ಚಿತ್ರವಂತೆ!

ಆರಂಭದಲ್ಲಿ ‘ಶ್ರೀರಸ್ತು’ ಒಂದು ಲವ್‌ ಸ್ಟೋರಿ ಚಿತ್ರ ಎಂದಷ್ಟೇ ಸುದ್ದಿಯಾಗಿತ್ತು. ಚಿತ್ರದಲ್ಲಿ ಪ್ರಣಮ್‌ ದೇವರಾಜ್‌ಗೆ ನಟಿ ಸಂಜನಾ ಆನಂದ್‌ ನಾಯಕಿಯಾಗಿ ಜೋಡಿಯಾಗಿದ್ದಾರೆ. ಆದರೆ ಇದೀಗ ‘ಶ್ರೀರಸ್ತು’ ಚಿತ್ರಕ್ಕೆ  ಪ್ರಜ್ವಲ್‌ ದೇವರಾಜ್‌ ಕೂಡ ಸೇರಿಕೊಂಡಿದ್ದಾರೆ. ಹೀಗಾಗಿ ‘ಶ್ರೀರಸ್ತು’ ಚಿತ್ರಕ್ಕೂ ಒಂದು ಕೌಟುಂಬಿಕ ಕಳೆ ಬಂದಿದೆ. ಈ ಬಗ್ಗೆ ಮಾತನಾಡಿರುವ ‘ಶ್ರೀರಸ್ತು’ ಚಿತ್ರದ ನಿರ್ದೇಶಕ ಶಂಕರ್‌ ರೆಡ್ಡಿ, ‘ಈ ಚಿತ್ರ ಪ್ರೇಮದ ಜೊತೆಗೆ ಕೌಟುಂಬಿಕ ಪ್ರೀತಿಯನ್ನು ತೋರಿಸುವಂಥ ಒಂದು ವಿಭಿನ್ನ ಚಿತ್ರವಾಗಿ ಮೂಡಿ ಬರಲಿದೆ. ‘ಶ್ರೀರಸ್ತು’ ಚಿತ್ರದಲ್ಲಿ ಪ್ರಜ್ವಲ್‌ ದೇವರಾಜ್‌ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರೂ, ಚಿತ್ರದಲ್ಲಿ ಪ್ರಜ್ವಲ್‌ ತಮ್ಮನಿಗೆ ಸ್ಪರ್ಧಿಯಾಗಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ ಪ್ರಧಾನ ಪಾತ್ರವಾಗಿ ಗಮನ ಸೆಳೆಯಲಿದ್ದಾರೆ’ ಎಂದು ನಿರ್ದೇಶಕ ಶಂಕರ್‌ ರೆಡ್ಡಿ ಭರವಸೆ ನೀಡುತ್ತಾರೆ.

ಕನ್ನಡ ಮತ್ತು ತೆಲುಗಿನಲ್ಲಿ ತೆರೆಕಾಣಲಿರುವ ‘ಶ್ರೀರಸ್ತು’ 

ಅಂದಹಾಗೆ, ‘ಶ್ರೀರಸ್ತು’ ಚಿತ್ರ ಕನ್ನಡ ಮಾತ್ರವಲ್ಲದೆ ತೆಲುಗು ಭಾಷೆಯಲ್ಲಿ ಕೂಡ ತೆರೆ ಕಾಣಲಿದೆ. ಹೀಗಾಗಿ ದೊಡ್ಡ ಕ್ಯಾನ್ವಾಸ್ ನಲ್ಲಿಯೇ ಸಿದ್ಧವಾಗುತ್ತಿದೆ. ಚಿತ್ರದಲ್ಲಿ ಖ್ಯಾತ ಕಲಾವಿದರಾದ ಸುಮನ್‌, ಆಮನಿ, ಚೈತ್ರಾ ರೈ, ರವಿ ಶಿವತೇಜ, ಜೋಶ್‌ ರವಿ, ರವಿ ಪ್ರಕಾಶ್‌ ಹೀಗೆ ತೆಲುಗು ಚಿತ್ರರಂಗದಲ್ಲಿಯೂ ಹೆಸರು ಮಾಡಿರುವ ಅನೇಕ ಕಲಾವಿದರು ಇತರ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಹರ ಕ್ರಿಯೇಶನ್ಸ್‌’ ಬ್ಯಾನರ್‌ ನಲ್ಲಿ ಹರಗೌಡ ಚಿತ್ರವನ್ನು ದೊಡ್ಡ ಮಟ್ಟದಲ್ಲೇ ನಿರ್ಮಿಸುತ್ತಿದ್ದಾರೆ. ‘ಪುಷ್ಪ’ ಸೇರಿದಂತೆ ಹಲವಾರು ಜನಪ್ರಿಯ ಚಿತ್ರಗಳ ಸಹಾಯಕ ಛಾಯಾಗ್ರಾಹಕ ಬಾಲ ಸರಸ್ವತಿ ಈ ಚಿತ್ರದ ಕ್ಯಾಮರಾಮ್ಯಾನ್.‌ ಕೃಷ್ಣ ಮಾಯ ಕಲಾನಿರ್ದೇಶನವಿದ್ದು ಶ್ರೀ ವರ್ಕಲ ಸಂಕಲನ ನಿರ್ವಹಣೆ ಮಾಡುತ್ತಿದ್ದಾರೆ.

ಪ್ರಣಾಮ್‌ ಜತೆಗೆ ಪ್ರಜ್ವಲ್‌ ಇರುವುದು ಅಭಿಮಾನಿಗಳಿಗೆ ಎಷ್ಟು ಖುಷಿಯಾಗಿದೆಯೋ ಸಂಜನಾ ಆನಂದ್‌ ನಾಯಕಿಯಾಗಿರುವುದು ಕೌಟುಂಬಿಕ ಪ್ರೇಕ್ಷಕರನ್ನು ಸಂತೃಪ್ತಗೊಳಿಸಿದೆ. ಸಂಜನಾ ನಟನೆಯ ಈ ಹಿಂದಿನ ಚಿತ್ರದಲ್ಲಿ ‘ಬ್ಯಾಂಗಲ್‌ ಬಂಗಾರಿ…’ ಎನ್ನುವ ಹಾಡು ಜನಪ್ರಿಯತೆ ಪಟ್ಟ ಗಿಟ್ಟಿಸಿತ್ತು. ಮನೆಯ ಹಿರಿಯರಿಂದ ಹಿಡಿದು ಕಿರಿಯ ಮಕ್ಕಳ ತನಕ ಎಲ್ಲರೂ ಈ ಹಾಡಿಗೆ ಡಾನ್ಸ್‌ ಮಾಡಿದ್ದರು. ಇದೀಗ ಅದೇ ಸಂಜನಾ ಆನಂದ್‌ ಮರಳಿ ಬರುತ್ತಿದ್ದಾರೆ. ಈ ಬಾರಿ ಹಿಂದಿನ ದಾಖಲೆ ಮುರಿಯುವ ಹಾಡುಗಳಿರುತ್ತವೆ. ಈ ಮೂವರು ಸೇರಿ ಹೊಸ ಮೋಡಿ ಮಾಡುವ ನಿರೀಕ್ಷೆ ಎಲ್ಲರ ಮನದಲ್ಲೂ ಮನೆ ಮಾಡಿದೆ ಎಂಬುದು ‘ಶ್ರೀರಸ್ತು’ ಚಿತ್ರತಂಡದ ಭರವಸೆಯ ಮಾತು.

Related Posts

error: Content is protected !!