‘ಸರ್ಕಾರಿ ನ್ಯಾಯ ಬೆಲೆ ಅಂಗಡಿ’ ರಿಲೀಸ್ ಡೇಟ್ ಫಿಕ್ಸ್
ಇದೇ ಜು. 24ಕೆ ‘ಸರ್ಕಾರಿ ನ್ಯಾಯ ಬೆಲೆ ಅಂಗಡಿ’ ತೆರೆಗೆ
ಚಿತ್ರದ ಬಿಡುಗಡೆ ದಿನ ಘೋಷಿಸಿದ ಆಹಾರ, ನಾಗರಿಕ ಸರಬರಾಜು ಸಚಿವ ಕೆ. ಹೆಚ್. ಮುನಿಯಪ್ಪ
ತೆರೆಗೆ ಬರಲು ತಯಾರಾದ ‘ಸರ್ಕಾರಿ ನ್ಯಾಯ ಬೆಲೆ ಅಂಗಡಿ’
4 ಜು. 2026, ಬೆಂಗಳೂರು: ಈಗಾಗಲೇ ತನ್ನ ಶೀರ್ಷಿಕೆ ಮತ್ತು ಕಥಾಹಂದರದ ಮೂಲಕ ಒಂದಷ್ಟು ಸುದ್ದಿಯಾಗಿರುವ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರ ತೆರೆಗೆ ಬರೋದಕ್ಕೆ ದಿನಾಂಕ ನಿಗಧಿಯಾಗಿದೆ. ಇದೇ 2026ರ ಜುಲೈ 24ರಂದು ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರ ರಾಜ್ಯದಾದ್ಯಂತ ಏಕಕಾಲಕ್ಕೆ ಬಿಡುಗಡೆಯಾಗಿ ತೆರೆಗೆ ಬರುತ್ತಿದೆ.
ಮನುಷ್ಯನ ಬದುಕಿಗೆ ಜಲದಷ್ಟೇ ಆಹಾರವು ಮುಖ್ಯ ಎಂಬ ವಿಷಯವನ್ನು ಇಟ್ಟುಕೊಂಡು, ‘ಸರ್ಕಾರದ ನ್ಯಾಯಬೆಲೆ ಅಂಗಡಿ’ಗಳ ಮಹತ್ವವನ್ನು ಸಾರುವ ದೇಶದ ಮೊದಲ ಚಲನಚಿತ್ರ ‘ಸರ್ಕಾರಿ ನ್ಯಾಯ ಬೆಲೆ ಅಂಗಡಿ’ ಎಂದು ಹೇಳಲಾಗುತ್ತಿದೆ.
‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರಕ್ಕೆ ಸಚಿವ ಮುನಿಯಪ್ಪ ಹಾರೈಕೆ
ಇತ್ತೀಚೆಗೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಬಿಡುಗಡೆ ದಿನಾಂಕವನ್ನು ‘ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ’ರಾದ ಕೆ. ಹೆಚ್. ಮುನಿಯಪ್ಪ ಅನಾವರಣಗೊಳಿಸಿ ಚಿತ್ರಕ್ಕೆ ಶುಭ ಕೋರಿದರು. ಈ ಚಿತ್ರದ ವಿಶೇಷ ಪಾತ್ರದಲ್ಲಿ ‘ಸರ್ಕಾರಿ ನ್ಯಾಯ ಬೆಲೆ ಅಂಗಡಿಗಳ ಮಾಲೀಕರ ಸಂಘ’ದ ಅಧ್ಯಕ್ಷರಾದ ಕೆ. ಕೃಷ್ಣಪ್ಪ ಕೂಡ ಅಭಿನಯಿಸಿದ್ದು ಅವರಿಗೆ ಹಾಗೂ ಚಿತ್ರಕ್ಕೆ ಕೆಲಸ ಮಾಡಿರುವ ಕಲಾವಿದರು ತಂತ್ರಜ್ಞರಿಗೆ ಶುಭವಾಗಲಿ, ‘ಸರ್ಕಾರಿ ನ್ಯಾಯ ಬೆಲೆ ಅಂಗಡಿ’ ಚಿತ್ರ ಯಶಸ್ವಿಯಾಗಲಿ’ ಎಂದು ಸಚಿವ ಕೆ. ಹೆಚ್. ಮುನಿಯಪ್ಪ ಹಾರೈಸಿದರು.
ಬಹುತಾರಾಗಣದಲ್ಲಿ ಅರಳಿದ ಚಿತ್ರ
‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರವನ್ನು ‘ಜಯಶಂಕರ್ ಟಾಕೀಸ್’ ನಲ್ಲಿ ನಿರ್ಮಾಪಕರಾದ ತೇಜು ಚೆಲುವಮೂರ್ತಿ ಮತ್ತು ಪದ್ಮಾವತಿ ಚಂದ್ರಶೇಖರ್ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಕುಮಾರ ಬಂಗಾರಪ್ಪ ಮತ್ತು ರಾಗಿಣಿ ದ್ವಿವೇದಿ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಹಿರಿಯ ನಟ ದೊಡ್ಡಣ್ಣ, ದೊಡ್ಡಣ್ಣ ಮೊದಲಾದ ಕಲಾವಿದರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. 
ಈ ಚಿತ್ರಕ್ಕೆ ‘ಕರ್ನಾಟಕ ಚಲನಚಿತ್ರ ಮಂಡಳಿ’ಯ ಮಾಜಿ ಅಧ್ಯಕ್ಷರಾದ ಬಾ. ಮ. ಹರೀಶ್ ಹಾಗೂ ‘ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘ’ದ ಕಾರ್ಯದರ್ಶಿ ಬಾ. ಮ. ಗಿರೀಶ್ ಈ ಚಿತ್ರಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಹಿರಿಯ ನಿರ್ದೇಶಕ ಬಿ. ರಾಮಮೂರ್ತಿ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದು ಸಾತ್ವಿಕ್ ಪವನ್ ನಿರ್ದೇಶನ ಹಾಗೂ ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದಾರೆ. ಈ ಚಿತ್ರಕ್ಕೆ ಅನಂತ್ ಆರ್ಯನ್ ಮತ್ತು ಪ್ರವೀಣ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಚಿತ್ರಕ್ಕೆ ನವೀನ್ ಸಜ್ಜು , ಅನುರಾಧ ಭಟ್, ಶಮಿತಾ ಮಲ್ನಾಡ್ ಅವರು ಹಾಡುಗಳನ್ನು ಹಾಡಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ ಸರ್ಕಾರಿ ನ್ಯಾಯಬೆಲೆ ಅಂಗಡಿ ಟೈಟಲ್ ಟ್ರ್ಯಾಕ್ ಎಲ್ಲೆಡೆ ಪ್ರಶಂಸೆಯನ್ನು ಗಳಿಸಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ‘ಶ್ರೀಧರ್ ಕೃಪ ಕಂಬೈನ್ಸ್’ ನ ಶ್ರೀಧರ್ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರವನ್ನು ರಾಜ್ಯಾದ್ಯಂತ ವಿತರಣೆ ಮಾಡಿ ಬಿಡುಗಡೆ ಮಾಡುತ್ತಿದ್ದಾರೆ















