ಹೊರಬಂತು ‘ಕರಾವಳಿ’ ಟ್ರೇಲರ್
ಕಂಬಳದ ಕಥಾಹಂದರದ ಕರಾವಳಿ ಟ್ರೇಲರ್ ರಿಲೀಸ್
ಪ್ರಜ್ವಲ್ ದೇವರಾಜ್ ವಾಯ್ಸ್ ಇಲ್ಲದೆಯೇ ಹೊರಬಂತು ‘ಕರಾವಳಿ’ ಟ್ರೇಲರ್..!
ಕಡಲತಡಿಯ ಸೊಗಡಿನ ಮತ್ತೊಂದು ಚಿತ್ರ
ಸೆಟ್ಟೇರಿದಾಗಿನಿಂದಲೂ ತನ್ನ ಟೈಟಲ್ ಮತ್ತು ಕಥಾಹಂದರದ ಮೂಲಕ ಒಂದಷ್ಟು ಮಂದಿಯ ಗಮನ ಸೆಳೆದಿದ್ದ, ನಟ ಪ್ರಜ್ವಲ್ ದೇವರಾಜ್ ನಟನೆಯ ‘ಕರಾವಳಿ’ ಚಿತ್ರ ತೆರೆಗೆ ಬರಲು ಮುಹೂರ್ತ ಫಿಕ್ಸ್ ಆಗಿದೆ. ಇದೇ 2026ರ ಜುಲೈ 24 ರಂದು ಕರಾವಳಿ ಚಿತ್ರ ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಇದೇ ವೇಳೆ ಕರಾವಳಿ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೀಗ ಕರಾವಳಿ ಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ.
ಹೇಗಿದೆ ಕರಾವಳಿ ಟ್ರೇಲರ್..?
‘ಕರಾವಳಿ’ ಸಿನೆಮಾದ ಹೆಸರೇ ಹೇಳುವಂತೆ, ಇದೊಂದು ಕರ್ನಾಟಕದ ಕರಾವಳಿ ಸೊಗಡಿನ, ಸೊಬಗಿನ, ಸಂಸ್ಕೃತಿಯ ಚಿತ್ರ. ಆರಂಭದಲ್ಲಿಯೇ ಚಿತ್ರತಂಡ ಹೇಳಿಕೊಂಡು ಬಂದಿರುವಂತೆ, ‘ಕರಾವಳಿ’ ಭಾಗದಲ್ಲಿ ನಡೆಯುವ ಸಾಂಪ್ರದಾಯಿಕ ಕಂಬಳ ಮತ್ತು ಅದರ ಹಿಂದಿನ ಜಿದ್ದಾಜಿದ್ದಿ ವಿಷಯಗಳನ್ನು ಇಟ್ಟುಕೊಂಡು ‘ಕರಾವಳಿ’ ಸಿನೆಮಾವನ್ನು ತೆರೆಗೆ ತರಲಾಗುತ್ತಿದೆ. ಇನ್ನು ಬಿಡುಗಡೆಯಾಗಿರುವ ‘ಕರಾವಳಿ’ ಸಿನೆಮಾದ ಟ್ರೇಲರ್‌ನಲ್ಲಿ ಚಿತ್ರದ ನಾಯಕ ನಟ ಎಂದು ಹೇಳಲಾಗುತ್ತಿರುವ ನಟ ಪ್ರಜ್ವಲ್ ದೇವರಾಜ್ ಅವರ ಧ್ವನಿಯೇ ಇಲ್ಲವಾಗಿದೆ! ಹೌದು, ಸದ್ಯ ಬಿಡುಗಡೆಯಾಗಿರುವ ‘ಕರಾವಳಿ’ ಸಿನೆಮಾದ ಟ್ರೇಲರಿನಲ್ಲಿ ನಾಯಕ ನಟನಾಗಿ ಪ್ರಜ್ವಲ್ ದೇವರಾಜ್ ತೆರೆಮೇಲೆ ಕಾಣಿಸಿಕೊಂಡಿದ್ದರೂ, ಅವರ ಪಾತ್ರಕ್ಕೆ ಅವರದ್ದೇ ಆದ ಧ್ವನಿಯಿಲ್ಲ. ಕಾರಣಾಂತರಗಳಿಂದ ‘ಕರಾವಳಿ’ ಚಿತ್ರದ ಟ್ರೇಲರ್ಗೆ ನಟ ಪ್ರಜ್ವಲ್ ದೇವರಾಜ್ ಡಬ್ಬಿಂಗ್ ಮಾಡಿಲ್ಲವಾಗಿದ್ದರಿಂದ, ಅವರ ಪಾತ್ರಕ್ಕೆ ಚಿತ್ರತಂಡ ಬೇರೋಬ್ಬರಿಂದ ಡಬ್ಬಿಂಗ್ ಮಾಡಿಸಿದೆ.
‘ಕರಾವಳಿ’ ಸಿನೆಮಾದ ಟ್ರೇಲರ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
ಇನ್ನು ‘ಕರಾವಳಿ’ ಸಿನೆಮಾದ ಟ್ರೇಲರಿನಲ್ಲಿ ಹೀರೋ ಪ್ರಜ್ವಲ್ ದೇವರಾಜ್ ಅವರೊಂದಿಗೆ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟ ರಾಜ್ ಬಿ. ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಸಂಪದಾ, ರಮೇಶ್ ಇಂದಿರಾ, ಮಿತ್ರ, ಸುಷ್ಮಿತಾ, ಶ್ರೀಧರ್ ಹೀಗೆ ದೊಡ್ಡ ಕಲಾವಿದರ ತಾರಾಬಳಗವೇ ‘ಕರಾವಳಿ’ ಸಿನೆಮಾದ ಟ್ರೇಲರಿನಲ್ಲಿ ಕಾಣಿಸಿಕೊಂಡಿದೆ. ಟ್ರೇಲರ್‌ನಲ್ಲಿ ‘ಕರಾವಳಿ’ ಸಂಸ್ಕೃತಿ ಜೊತೆಗೆ ಕಂಬಳವೇ ಹೈಲೈಟ್ ಆಗಿದೆ. ‘ಕರಾವಳಿ’ ಭಾಗದ ಹೆಮ್ಮೆಯ ಕ್ರೀಡೆ ಕಂಬಳವನ್ನು ಸುಂದರವಾಗಿ ಈ ಸಿನೆಮಾದ ಟ್ರೇಲರಿನಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಗುರುದತ್ ಗಾಣಿಗ. ಒಟ್ಟಾರೆ ‘ಕರಾವಳಿ’ ಟ್ರೇಲರ್ ಅದ್ಧೂರಿಯಾಗಿ ಮೂಡಿಬಂದಿದ್ದು, ಚಿತ್ರ ತೆರೆಮೇಲೆ ಹೇಗಿರಲಿದೆ ಎಂಬುದು ಇದೇ ಜುಲೈ ಅಂತ್ಯಕ್ಕೆ ಗೊತ್ತಾಗಲಿದೆ.
ಇದೇ ಜು. 24ಕ್ಕೆ ತೆರೆಮೇಲೆ ‘ಕರಾವಳಿ’ ಕಂಬಳ!
‘ಕರಾವಳಿ’ ಚಿತ್ರದ ಹಾಡುಗಳಿಗೆ ಸಂಗೀತ ನಿರ್ದೇಶಕ ಸಚಿನ್ ಬಸ್ರೂರ್ ಸಂಗೀತ ಸಂಯೋಜಿಸಿದ್ದು, ಅಭಿಮನ್ಯು ಸದಾನಂದನ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ಗುರುದತ್ ಗಾಣಿಗ ‘ಕರಾವಳಿ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ‘ವಿಕೆ ಫಿಲ್ಮ್’ ಮತ್ತು ‘ಗಾಣಿಗ ಫಿಲ್ಮ್ಸ್’ ಸಹಯೋಗದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ‘ಕೆವಿಎನ್ ಪ್ರೊಡಕ್ಷನ್ಸ್’ ಈ ಸಿನಿಮಾವನ್ನು ವಿತರಣೆ ಮಾಡಲು ಮುಂದಾಗಿದೆ. ಸದ್ಯ ಯೂ-ಟ್ಯೂಬ್ನಲ್ಲಿ ‘ಕರಾವಳಿ’ ಟ್ರೇಲರ್ ಬಿಡುಗಡೆಯಾಗಿದ್ದು, ಚಿತ್ರ ಇದೇ 2026ರ ಜುಲೈ 24ಕ್ಕೆ ತೆರೆಗೆ ಬರುತ್ತಿದೆ.















