Video

‘ಮಾರ್ಕ್’ ಚಿತ್ರದ ‘ಕಾಳಿ’ ಹಾಡಿನಲ್ಲಿ ಕಿಚ್ಚನ ರೌದ್ರಾವತಾರ!

‘ಮಾರ್ಕ್’ ಚಿತ್ರದ ಮತ್ತೊಂದು ಹಾಡು ಬಿಡುಗಡೆ

‘ಕಾಳಿ…’ ಹಾಡಿನಲ್ಲಿ ತ್ರಿಶೂಲ ಹಿಡಿದು ರೌದ್ರಾವತಾರದಲ್ಲಿ ಕಿಚ್ಚನ ಎಂಟ್ರಿ

‘ಮಾರ್ಕ್‌’ ರಿಲೀಸ್‌ಗೂ ಮುನ್ನ ಹೊರಬಂತು ಮಾಸ್‌ ಸಾಂಗ್‌

ಕನ್ನಡ ಚಿತ್ರರಂಗದ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ ‘ಮಾರ್ಕ್‌’, ಇದೇ 2025ರ ಡಿಸೆಂಬರ್‌ 25ರಂದು ತೆರೆಗೆ ಬರುತ್ತಿದೆ. ಸದ್ಯ ಕಿಚ್ಚ ಸುದೀಪ್ ಅಭಿನಯದ ‘ಮಾರ್ಕ್’ ಚಿತ್ರದ ಪ್ರಚಾರ ಕಾರ್ಯಗಳು ಭರದಿಂದ ನಡೆಯುತ್ತಿದ್ದು, ಚಿತ್ರ ಕಿಚ್ಚ ಸುದೀಪ್‌ ಅಭಿಮಾನಿಗಳ ನಿರೀಕ್ಷೆಯನ್ನು ದುಪ್ಪಟ್ಟು ಮಾಡಲು ಯಶಸ್ವಿಯಾಗಿದೆ. ಈಗಾಗಲೇ ‘ಮಾರ್ಕ್‌’ ಚಿತ್ರದ ಟ್ರೇಲರ್‌ ಮತ್ತು ಹಾಡು ಬಿಡುಗಡೆಯಾಗಿದ್ದು, ‘ಮಾರ್ಕ್‌’ ಒಂದಷ್ಟು ಹೈಪ್ ಕ್ರಿಯೇಟ್ ಮಾಡುವಲ್ಲಿ ಯಶಸ್ವಿಯಾಗಿದೆ. ಇದೀಗ ‘ಮಾರ್ಕ್‌’ ಚಿತ್ರದ ಬಿಡುಗಡೆಗೂ ಎರಡು ದಿನ ಬಾಕಿಯಿರುವಾಗಲೇ, ಚಿತ್ರದ ಮತ್ತೊಂದು ಹೈ ವೋಲ್ಟೇಜ್‌ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಕೈಯಲ್ಲಿ ತ್ರಿಶೂಲ ಹಿಡಿದು ಕಿಚ್ಚನ ‘ಹೂಂ.. ಕಾರ…’

‘ಓಂಕಾರ… ನಿನ್ನ ಹೂಂ.. ಕಾರ…’ ಎಂಬ ಸಾಲುಗಳಿಂದ ಆರಂಭವಾಗುವ ಈ ಹಾಡಿನಲ್ಲಿ ಶಕ್ತಿರೂಪಿಣಿ ಕಾಳಿದೇವಿಯನ್ನು ವರ್ಣಿಸಲಾಗಿದ್ದು, ಗಾಯಕ ಅನಿರುದ್ಧ ಶಾಸ್ತ್ರಿ ಈ ಹಾಡಿಗೆ ಸಾಹಿತ್ಯ ಬರೆದು ಧ್ವನಿಯಾಗಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆಯಲ್ಲಿ ಈ ಗೀತೆ ಮೂಡಿಬಂದಿದೆ. ಇನ್ನು ಬಿಡುಗಡೆಯಾಗಿರುವ ‘ಓಂಕಾರ… ನಿನ್ನ ಹೂಂ.. ಕಾರ…’ ಹಾಡಿನಲ್ಲಿ ನಾಯಕ ನಟ ಕಿಚ್ಚ ಸುದೀಪ್‌, ರುದ್ರಾವತಾರ ತಾಳಿದ್ದಾರೆ. ಕೈಯಲ್ಲಿ ತ್ರಿಶೂಲ ಹಿಡಿದು ದುಷ್ಟರ ಸಂಹಾರ ಮಾಡಲು ಹೊಸ ಅವತಾರ ಎತ್ತಿರುವಂತೆ ಕಾಣಿಸಿಕೊಂಡಿದ್ದಾರೆ. ಆರಂಭದಲ್ಲಿಯೇ ‘ಮಾರ್ಕ್‌’ ಸಿನೆಮಾದ ಟ್ರೇಲರಿನಲ್ಲಿ ತೋರಿಸಿರುವಂತೆ, ನಾಯಕ ನಟ ಕಿಚ್ಚ ಸುದೀಪ್‌ ‘ಮಾರ್ಕ್‌’ ಸಿನೆಮಾದಲ್ಲಿ ಪೊಲೀಸ್‌ ಅಧಿಕಾರಿಯ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಚಿತ್ರದಲ್ಲಿ ಸುದೀಪ್‌ ಅವರ ಕ್ಯಾರೆಕ್ಟರ್‌ ಮತ್ತು ಮ್ಯಾನರಿಸಂ ಹೇಗಿರುತ್ತದೆ ಎಂಬುದನ್ನು ಈ ಹಾಡಿನಲ್ಲಿ ತೋರಿಸಲಾಗಿದೆ. ಒಟ್ಟಾರೆ ನಾಯಕ ನಟ ಕಿಚ್ಚ ಸುದೀಪ್‌ ಅವರ ಮಾಸ್‌ ಫ್ಯಾನ್ಸ್‌ಗೆ ಕಾಳಿ ಹಾಡಿನಲ್ಲಿ ಸುದೀಪ್‌ ಅವರ ಗೆಟಪ್‌ ಇಷ್ಟವಾಗುವಂತಿದೆ.

‘ಮಾರ್ಕ್‌’ ಸಿನೆಮಾದ ‘ಕಾಳಿ’ ಹಾಡಿನ ಲಿರಿಕಲ್‌ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

‘ಮಾರ್ಕ್‌’ ಕಣ್ತುಂಬಿಕೊಳ್ಳಲು ಫ್ಯಾನ್ಸ್‌ ರೆಡಿ…

ಇನ್ನು ಇದೇ ಕ್ರಿಸ್‌ಮಸ್‌ ಹಬ್ಬ (ಡಿ. 25, 2025)ದ ಸಂದರ್ಭದಲ್ಲಿ ‘ಮಾರ್ಕ್’ ಸಿನೆಮಾ ಬಿಡುಗಡೆಯಾಗಿ ತೆರೆಗೆ ಬರುತ್ತಿದೆ. ಈ ಹಿಂದೆ ಸುದೀಪ್‌ ಅಭಿನಯದ ‘ಮ್ಯಾಕ್ಸ್‌’ ಸಿನೆಮಾವನ್ನು ನಿರ್ದೇಶನ ಮಾಡಿದ್ದ ವಿಜಯ್ ಕಾರ್ತಿಕೇಯ ‘ಮಾರ್ಕ್‌’ ಸಿನೆಮಾವನ್ನು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಸುದೀಪ್ ಜೊತೆಗೆ ಶೈನ್ ಟಾಮ್ ಚಾಕೊ, ಯೋಗಿ ಬಾಬು ಹೀಗೆ ದೊಡ್ಡ ಕಲಾವಿದರ ದಂಡೇ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದೆ. ಔಟ್‌ ಅಂಡ್‌ ಔಟ್‌ ಆಕ್ಷನ್‌ ಕಂ ಕ್ರೈಂ-ಥ್ರಿಲ್ಲರ್‌ ಶೈಲಿಯಲ್ಲಿ ‘ಮಾರ್ಕ್‌’ ಸಿನೆಮಾ ಮೂಡಿಬಂದಿದೆ.

ನಾಯಕ ನಟ ಕಿಚ್ಚ ಸುದೀಪ್‌ ಒಡೆತನದ ‘ಕಿಚ್ಚ ಕ್ರಿಯೇಷನ್’ ಮತ್ತು ತಮಿಳಿನ ‘ಸತ್ಯಜ್ಯೋತಿ ಫಿಲಮ್ಸ್’ ಜಂಟಿಯಾಗಿ ಬಂಡವಾಳ ಹೂಡಿ ‘ಮಾರ್ಕ್‌’ ಚಿತ್ರವನ್ನು ನಿರ್ಮಾಣ ಮಾಡಿವೆ. ಕನ್ನಡ ಮತ್ತು ತಮಿಳಿನಲ್ಲಿ ‘ಮಾರ್ಕ್‌’ ಸಿನೆಮಾ ತೆರೆಗೆ ಬರುತ್ತಿದೆ. ಇನ್ನು ಇದೇ ಮೊದಲ ಬಾರಿಗೆ ‘ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ’ ಮೂಲಕ ಪ್ರಿಯಾ ಸುದೀಪ್ ‘ಮಾರ್ಕ್’ ಸಿನೆಮಾವನ್ನು ವಿತರಣೆ ಮಾಡುತ್ತಿದ್ದಾರೆ. ಈಗಾಗಲೇ ಆನ್‌ಲೈನ್‌ನಲ್ಲಿ ‘ಮಾರ್ಕ್‌’ ಸಿನೆಮಾದ ಮುಂಗಡ ಬುಕ್ಕಿಂಗ್‌ ಆರಂಭವಾಗಿದ್ದು, ಬುಕ್ಕಿಂಗ್‌ಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಇನ್ನುಳಿದಂತೆ, ‘ಮಾರ್ಕ್‌’ ಸಿನೆಮಾ ಬಿಡುಗಡೆಯಾಗುತ್ತಿರುವ ಪ್ರಮುಖ ಚಿತ್ರಮಂದಿರಗಳಲ್ಲಿ ನಾಯಕ ನಟ ಸುದೀಪ್‌ ಅವರ ಬೃಹತ್‌ ಕಟೌಟ್‌ಗಳು ತಲೆಯೆತ್ತಿದ್ದು, ಬಿಗ್‌ ಸ್ಕ್ರೀನ್‌ನಲ್ಲಿ ‘ಮಾರ್ಕ್‌’ ಎಂಟ್ರಿಯನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್‌ ಕೂಡ ಕಾತುರರಾಗಿದ್ದಾರೆ. ಒಟ್ಟಾರೆ, ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ‘ಮಾರ್ಕ್‌’ ಅಬ್ಬರ ಥಿಯೇಟರಿನಲ್ಲಿ ಹೇಗಿರಲಿದೆ? ಎಂಬುದು, ಇದೇ ವಾರಾಂತ್ಯಕ್ಕೆ ಗೊತ್ತಾಗಲಿದೆ.

Related Posts

error: Content is protected !!