Eye Plex

ಸುಪ್ತ ಮನದ ‘ಬಯಕೆಗಳು’ ತೆರೆಯಲ್ಲಿ ‘ಚಿತ್ರ’ವಾದಾಗ…

ಕಾದಂಬರಿ ಆಧರಿತ ‘ಬಯಕೆಗಳು ಬೇರೂರಿದಾಗ’ ತೆರೆಗೆ

ಸಾಮಾಜಿಕ ಕಥಾಹಂದರದೊಳಗೆ ಫ್ಯಾಮಿಲಿ ಡ್ರಾಮಾ…!

ಬಿಝಿಯಿದ್ದವರು, ಫ್ರೀ ಮಾಡಿಕೊಂಡು ನೋಡಬಹುದಾದ ಚಿತ್ರ

ಚಿತ್ರ: ‘ಬಯಕೆಗಳು ಬೇರೂರಿದಾಗ’
ನಿರ್ದೇಶನ: ಎನ್. ಜ್ಯೋತಿ ಲಕ್ಷ್ಮೀ,
ನಿರ್ಮಾಣ: ‘ಉನ್ನತಿ ಸ್ಟುಡಿಯೋಸ್’
ತಾರಾಗಣ: ಆಕರ್ಷ್ ಆದಿತ್ಯ, ಶರಣ್ಯಾ, ಶೈಲಜಾ ಜೋಶಿ, ಅಜಯ್ ಸತ್ಯನಾರಾಯಣ್, ಕಾರ್ತಿಕ ಸುಂದರಂ, ಮಾನಸ ಜೋಶಿ ಮತ್ತಿತರರು
ಬಿಡುಗಡೆ: 06 ಫೆಬ್ರವರಿ 2026,
ರೇಟಿಂಗ್: 3/5

ಇತ್ತೀಚಿನ ದಿನಗಳಲ್ಲಿ ನಮ್ಮ ಸಮಾಜದಲ್ಲಿ ವಿವಾಹೇತರ ಸಂಬಂಧಗಳು ಹೆಚ್ಚುತ್ತಿರುವುದು, ಎಲ್ಲರಿಗೂ ಗೊತ್ತಿರುವ ವಿಷಯ. ಸಾಮಾಜಿಕ, ಆರ್ಥಿಕ, ಭಾವನಾತ್ಮಕ ಮತ್ತು ಕೌಟುಂಬಿಕ ಸಮಸ್ಯೆಗಳ ಹಿನ್ನೆಲೆಗಳ ಪ್ರಭಾವ ಇಂಥ ಸಂಬಂಧಗಳಿಗೆ ಕಾರಣವಾಗುತ್ತದೆ ಎಂಬುದು ಎಲ್ಲರೂ ಒಪ್ಪುವಂಥ ಮಾತು. ಈಗ ಇದೇ ವಿಷಯವನ್ನು ಇಟ್ಟುಕೊಂಡು ಕನ್ನಡದಲ್ಲಿ ‘ಬಯಕೆಗಳು ಬೇರೂರಿದಾಗ’ ಎಂಬ ಹೆಸರಿನ ಚಿತ್ರವೊಂದು ಬಿಡುಗಡೆಯಾಗಿ ತೆರೆಗೆ ಬಂದಿದೆ.

ಏನಿದು ‘ಬಯಕೆಗಳು ಬೇರೂರಿದಾಗ’ ಚಿತ್ರದ ಕಥಾನಕ..?

ಚಿತ್ರದ ಶೀರ್ಷಿಕೆಯೇ ಹೇಳುವಂತೆ, ಇದೊಂದು ಮನಸ್ಸಿನ ಬಯಕೆಗಳ ಕುರಿತಾದ ಚಿತ್ರ. ವಿವಾಹಿತ ಮಹಿಳೆಯೊಬ್ಬಳ ಮನಸ್ಸಿನಲ್ಲಿ ಮೂಡುವ ಬಯಕೆಗಳಿಗೆ ಕುಟುಂಬದೊಳಗೆ ಸೂಕ್ತ ಸ್ಪಂದನೆಗಳು ಸಿಗದಿದ್ದಾಗ, ಅದು ಬೇರೆ ಯಾವ ರೂಪದಲ್ಲಿ ಪ್ರಕಟವಾಗುತ್ತದೆ ಎಂಬುದೇ ‘ಬಯಕೆಗಳು ಬೇರೋರಿದಾಗ’ ಚಿತ್ರದ ಕಥೆಯ ಒಂದು ಎಳೆ.

ರಾಧಾ ಮತ್ತು ಸತ್ಯ ಇಬ್ಬರೂ ಪ್ರೀತಿಸಿ, ಮನೆಯವರ ಸಮ್ಮತಿ ಪಡೆದುಕೊಂಡು ವೈವಾಹಿಕ ಜೀವನಕ್ಕೆ ಅಡಿಯಿಟ್ಟ ದಂಪತಿ. ಮದುವೆಯಾಗಿ ನಾಲ್ಕನೇ ವಾರ್ಷಿಕೋತ್ಸವದ ಹೊತ್ತಿಗೆ, ಈ ದಂಪತಿಯ ಮಡಿಲಲ್ಲಿ ಒಂದು ಮುದ್ದಾದ ಮಗುವಿನ ನಗು ಕೂಡ ಸೇರಿಕೊಂಡಿರುತ್ತದೆ. ಸತ್ಯನಿಗೆ ಕೈತುಂಬ ಕೆಲಸ ನಿಭಾಯಿಸುವುದೇ ದೊಡ್ಡ ಸವಾಲಾದರೆ, ರಾಧಾಗೆ ಮನೆಯ ಜವಾಬ್ದಾರಿ ನಿಭಾಯಿಸುವುದರಲ್ಲೇ ದಿನಗಳು ಕಳೆಯುತ್ತಿರುತ್ತವೆ. ಇಂಥ ದಂಪತಿಯ ಕೌಟುಂಬಿಕ ಜೀವನದಲ್ಲಿ ದಿನಗಳೆದಂತೆ, ಯಾವುದೂ ಮೊದಲಿನಂತಿರುವುದಿಲ್ಲ. ಪ್ರೀತಿ, ಪ್ರೇಮ, ಸ್ನೇಹ, ವಿಶ್ವಾಸ, ಮಾತು-ಕಥೆ ಎಲ್ಲವೂ ಕಡಿಮೆಯಾಗುತ್ತದೆ ಎಂಬ ಭಾವ ರಾಧಾಳನ್ನು ಕಾಡಲು ಶುರುವಾಗುತ್ತದೆ. ತನ್ನ ಜೀವನದಲ್ಲಿ ಕಳೆದು ಹೋದ ಆ ಮೊದಲಿನ ಪ್ರೀತಿ, ಪ್ರೇಮ, ಸ್ನೇಹ, ವಿಶ್ವಾಸ ಎಲ್ಲವನ್ನೂ ಮರಳಿ ಪಡೆಯಲು ರಾಧಾಳ ಮನಸ್ಸು ಹಪಹಪಿಸುತ್ತಿರುತ್ತದೆ. ಹೀಗಿರುವಾಗ, ರಾಧಾಳ ಮನೋ ಬಯಕೆಗಳನ್ನು ಸತ್ಯ ಅರ್ಥ ಮಾಡಿಕೊಂಡು ಈಡೇರಿಸುತ್ತಾನಾ..? ಅಥವಾ ರಾಧಾ ತನ್ನ ಮನೋ ಬಯಕೆಗಳನ್ನು ಈಡೇರಿಸಿಕೊಳ್ಳಲು ಬೇರೆ ಯಾವುದಾದರೂ ಮಾರ್ಗ ಹುಡುಕಿಕೊಳ್ಳುತ್ತಾಳಾ? ಎಂಬುದೇ ‘ಬಯಕೆಗಳು ಬೇರೋರಿದಾಗ’ ಚಿತ್ರದ ಕಥಾಹಂದರ. ಅದು ಹೇಗಿದೆ ಎಂಬುದನ್ನು ನೀವು ತೆರೆಮೇಲೆ ನೋಡಿ ಕಣ್ತುಂಬಿಕೊಳ್ಳುವುದು ಹೆಚ್ಚು ಸೂಕ್ತ.

ಚಿತ್ರದಲ್ಲೊಂದು ಕೌಟುಂಬಿಕ ಸಂದೇಶ

ಆರಂಭದಲ್ಲಿಯೇ ಹೇಳಿದಂತೆ, ‘ಬಯಕೆಗಳು ಬೇರೂರಿದಾಗ’ ಒಂದು ಸಾಮಾಜಿಕ ಕಥಾಹಂದರದ ಸಿನೆಮಾ. ಇಂದಿನ ತಲೆಮಾರಿನ ಜನರ ಕೆಲಸದ ಒತ್ತಡ, ಕೌಟುಂಬಿಕ ಸಂವಹನ ಕೊರತೆ, ಭಾವನಾತ್ಮಕ ಅಂತರ ಹೆಚ್ಚಾಗುವುದರ ಪರಿಣಾಮ ಹೀಗೆ ಹಲವು ವಿಷಯಗಳನ್ನು ‘ಬಯಕೆಗಳು ಬೇರೂರಿದಾಗ’ ಚಿತ್ರದಲ್ಲೆ ತೆರೆಮೇಲೆ ಹೇಳುವ ಪ್ರಯತ್ನ ಮಾಡಿದೆ ಚಿತ್ರತಂಡ. ಒಂದು ಆರೋಗ್ಯಕರ ಸಂಬಂಧಕ್ಕೆ ಪ್ರೇಮ, ನಂಬಿಕೆ, ಜವಾಬ್ದಾರಿ, ಸಂವಾದ ಮತ್ತು ಶಿಸ್ತು ಅಗತ್ಯ ಎಂಬ ಕೌಟುಂಬಿಕ ಸಂದೇಶವನ್ನು ಚಿತ್ರದಲ್ಲಿ ಹೇಳಲಾಗಿದೆ.

ಕೊನೆಯ ಮಾತು…

ನಟ ಕಂ ಬರಹಗಾರ ಆಕರ್ಷ್ ಆದಿತ್ಯ ಅವರ ‘ಬಯಕೆಗಳು ಬೇರೂರಿದಾಗ’ ಕಾದಂಬರಿಯನ್ನು ಮತ್ತು ಎನ್. ಜ್ಯೋತಿಲಕ್ಷ್ಮಿ ಅವರ ನಿರ್ದೇಶನದಲ್ಲಿ ಅದೇ ಹೆಸರಿನಲ್ಲಿ ತೆರೆಮೇಲೆ ತರಲಾಗಿದೆ. ‘ಬಯಕೆಗಳು ಬೇರೂರಿದಾಗ’ ಇಡೀ ಚಿತ್ರ ರಾಧಾ, ಸತ್ಯ ಮತ್ತು ಮಾಧವ ಎಂಬ ಮೂರು ಪಾತ್ರಗಳ ಸುತ್ತ ನಡೆಯುತ್ತದೆ. ರಾಧಾ ಪಾತ್ರದಲ್ಲಿ ನಟಿ ಶರಣ್ಯಾ ತಮ್ಮ ಅಭಿನಯಕ್ಕೆ ಫುಲ್‌ ಮಾರ್ಕ್ಸ್‌ ಪಡೆದುಕೊಳ್ಳುತ್ತಾರೆ. ಸತ್ಯ ಪಾತ್ರದಲ್ಲಿ ನಟ ಆಕರ್ಷ್‌ ಆದಿತ್ಯ ಕೂಡ ಚೆನ್ನಾಗಿ ಅಭಿನಯಿಸಿದ್ದಾರೆ. ಮಾಧವನಾಗಿ ನಟ ಅಜಯ್‌ ಸತ್ಯನಾರಾಯಣ್‌ ಚೆನ್ನಾಗಿ ಅಭಿನಯಿಸಿದ್ದಾರೆ. ಉಳಿದಂತೆ ಕಾರ್ತಿಕ್ ಸುಂದರಂ, ಶೈಲಜಾ ಜೋಶಿ ಅವರದ್ದು ಅಚ್ಚುಕಟ್ಟಾದ ಅಭಿನಯ. ಇನ್ನು ಮೊದಲೇ ಹೇಳಿದಂತೆ, ಇದೊಂದು ಕೌಟುಂಬಿಕ ಕಥಾಹಂದರದ ಚಿತ್ರವಾಗಿದ್ದರಿಂದ, ಇಲ್ಲಿ ಕಮರ್ಷಿಯಲ್‌ ಚಿತ್ರಗಳ ವೇಗವನ್ನು, ಮಾಮೂಲಿ ಸಿದ್ಧ ಸೂತ್ರಗಳ ಮನರಂಜನಾತ್ಮಕ ಅಂಶಗಳನ್ನು ನಿರೀಕ್ಷಿಸುವಂತಿಲ್ಲ. ಅದೆಲ್ಲವನ್ನೂ ಬದಿಗಿಟ್ಟು ಯಾವುದೇ ಅಬ್ಬರ, ಆಡಂಭರವಿಲ್ಲದೆ ತಣ್ಣಗೆ ಕೂತು ನೋಡುವ ಚಿತ್ರ ಇದಾಗಿದೆ.

  • ಜಿ. ಎಸ್‌. ಕಾರ್ತಿಕ ಸುಧನ್‌

G S Karthik Sudhan

Karthik Sudhan is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Karthik Sudhan has worked in reputed online publications of Kannada.

Related Posts

error: Content is protected !!