Eye Plex

ತಂತ್ರಜ್ಞಾನದ ‘ಮಾಯೆ’ಯೊಳಗೊಬ್ಬ ‘ಮಾಯಾವಿ’

ಸಸ್ಪೆನ್ಸ್-ಥ್ರಿಲ್ಲರ್ ಹಾದಿಯೊಳಗೆ ‘ಮಾಯಾವಿ’ ನಡಿಗೆ

ನಿಗೂಢ ಜಾಡು ಹಿಡಿದು ಹೊರಟ ‘ಮಾಯಾವಿ’

ಚಿತ್ರ: ‘ಮಾಯಾವಿ’ 

ನಿರ್ಮಾಣ: ಡಾ. ಹೆಚ್. ಮಹಂತೇಶ್,

ನಿರ್ದೇಶನ: ಶಂಕರ್ ಜಿ.

ತಾರಾಗಣ: ರಘುರಾಮ್, ನಿಶ್ಚಿತಾ ಶೆಟ್ಟಿ, ಎಂ. ಕೆ. ಮಠ, ಸುರೇಶ ಬಾಬು, ಸೂರ್ಯ ಪ್ರವೀಣ್, ಅನುರಾಧಾ, ಶಿಲ್ಪಾ, ಖುಷಿ ಗೌಡ ಮತ್ತಿತರರು.

ಬಿಡುಗಡೆ: 12. ಸೆಪ್ಟೆಂಬರ್‌ 2025

ರೇಟಿಂಗ್: 3.5/5

—————————

ಇಂದು ಮೊಬೈಲ್‌ ಪೋನ್‌ ಮತ್ತು ಇಂಟರ್‌ ನೆಟ್‌ ತಂತ್ರಜ್ಞಾನ ಜಗತ್ತಿನ ಎಲ್ಲಾ ರಂಗಗಳಲ್ಲೂ ಆವರಿಸಿಕೊಂಡಿದೆ. ಮೊಬೈಲ್‌ ಪೋನ್‌ ಬಳಕೆಯಿಲ್ಲದೆ ದೈನಂದಿನ ಜೀವನ ನಿರ್ವಹಣೆ ಸಾಧ್ಯವೇ ಇಲ್ಲವೇನೋ..? ಎನ್ನುವಷ್ಟರ ಮಟ್ಟಿಗೆ ಮೊಬೈಲ್‌ ಪೋನ್‌ ತಂತ್ರಜ್ಞಾನಕ್ಕೆ ಬಹುತೇಕ ಜನ-ಜೀವನ ಒಗ್ಗಿ ಹೋಗಿದೆ. ಮೊಬೈಲ್‌ ಪೋನ್‌ ಮತ್ತು ತಂತ್ರಜ್ಞಾನದ ಬಳಕೆ ಎಷ್ಟು ಅನುಕೂಲವೋ, ಅಷ್ಟೇ ಅನಾನುಕೂಲ ಕೂಡ ಎಂಬುದನ್ನು ಮಾತ್ರ ಕೆಲವೇ ಕೆಲವರು ಬಲ್ಲರು. ಇದೇ ವಿಷಯವನ್ನು ಇಟ್ಟುಕೊಂಡು ಈ ವಾರ ತೆರೆಗೆ ಬಂದಿರುವ ಚಿತ್ರ ‘ಮಾಯಾವಿ’

ಏನಿದು ‘ಮಾಯಾವಿ’ ಕಥಾನಕ..?

ಆತ ಗ್ರಾಮೀಣ ಪ್ರದೇಶದ ವಿದ್ಯಾವಂತ ಯುವಕ ರಘು. ಚೆನ್ನಾಗಿ ಓದಿ, ಬಳಿಕ ಹೊಟ್ಟೆಪಾಡಿಗಾಗಿ ಊರು, ಹೆತ್ತವರು, ಒಡ ಹುಟ್ಟಿದವಳನ್ನು ಬಿಟ್ಟು ಬೆಂಗಳೂರಿಗೆ ಬಂದು ಉದ್ಯೋಗ ಗಿಟ್ಟಿಸಿಕೊಂಡ ಹುಡುಗ. ಇಂಜಿನಿಯರಿಂಗ್ ಮುಗಿಸಿ, ತಂತ್ರಜ್ಞಾನದ ಕೌಶಲ್ಯ ಹೊಂದಿರುವ ರಘುವಿಗೆ ಏನಾದರೂ ಹೊಸ ತಂತ್ರಜ್ಞಾನ ಆವಿಷ್ಕಾರದ ಮೂಲಕ ಸಮಾಜಕ್ಕೆ ಏನಾದರೂ ಕೊಡಬೇಕೆಂಬ ಹಂಬಲ.

ಇದೇ ವೇಳೆ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಹತ್ತಿರದಿಂದ ನೋಡುವ ರಘು, ಮಹಿಳೆಯರ ಮೇಲಿನ ಇಂಥ ದೌರ್ಜನ್ಯ ತಡೆಗೆ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಆತ್ಮರಕ್ಷಣೆಗೆ ನೆರವಾಗಬಲ್ಲ ಮೊಬೈಲ್ ಆ್ಯಪ್ ಒಂದನ್ನು ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಮುಂದಾಗುತ್ತಾನೆ. ಇನ್ನೇನು ಮಹಿಳೆಯರ ರಕ್ಷಣೆಗಾಗಿ ರಘು ರೂಪಿಸಿದ ಮೊಬೈಲ್ ಆ್ಯಪ್ ಎಲ್ಲಾ ಮಹಿಳೆಯರ ಮೊಬೈಲ್ ಪೋನ್ ಗಳಲ್ಲಿ ಇನ್ಸ್ಟಾಲ್ ಆಗಿ ಕಾರ್ಯ ನಿರ್ವಹಿಸುವ ಹೊತ್ತಿಗೆ, ಮೆಡಿಕಲ್ ಓದುತ್ತಿರುವ ರಘುವಿನ ತಂಗಿ ಮಾಯಾ ನಿಗೂಢವಾಗಿ ಸಾವಿಗೀಡಾಗುತ್ತಾಳೆ.

ತನ್ನ ತಂಗಿ ಮಾಯಾಳ ನಿಗೂಢ ಸಾವಿನ ರಹಸ್ಯವನ್ನು ಬೇಧಿಸಲು ಮುಂದಾಗುವ ರಘುವಿಗೆ, ತಾನು ರೂಪಿಸಿದ ಮೊಬೈಲ್ ಆ್ಯಪ್ ಮೂಲಕ ಮಾಯಾಳ ಸಾವಿನ ಕುರಿತಂತೆ ಒಂದಷ್ಟು ವಿಷಯಗಳು ಗೊತ್ತಾಗುತ್ತ ಹೋಗುತ್ತದೆ. ಅಂತಿಮವಾಗಿ ಮಾಯಾಳ ಸಾವಿನ ಹಿಂದಿನ ರಹಸ್ಯವನ್ನು ‘ಮಾಯಾವಿ’ ರಘು ಹೇಗೆ ಬಯಲು ಮಾಡುತ್ತಾನೆ ಎಂಬುದೇ ‘ಮಾಯಾವಿ’ ಚಿತ್ರದ ಕಥಾಹಂದರ. ತಂತ್ರಜ್ಞಾನದ ಬಲೆಯೊಳಗೆ ನಡೆಯುವ ‘ಮಾಯಾವಿ’ ನಿಗೂಢ ಆಟ ಹೇಗಿರುತ್ತದೆ ಎಂಬುದನ್ನು ನೀವು ಅನುಭವಕ್ಕೆ ತಂದುಕೊಳ್ಳುವುದಾದರೆ, ನೀವು ಒಮ್ಮೆ ಥಿಯೇಟರಿನಲ್ಲಿ ‘ಮಾಯಾವಿ’ ಮುಂದೆ ಮುಖಾಮುಖಿಯಾಗಬಹುದು.

ಸಸ್ಪೆನ್ಸ್ ಕಂ ಕ್ರೈಂ – ಥ್ರಿಲ್ಲರ್ ಶೈಲಿಯ ‘ಮಾಯಾವಿ’

ಇನ್ನು ‘ಮಾಯಾವಿ’ ಔಟ್ ಆ್ಯಂಡ್ ಔಟ್ ಸಸ್ಪೆನ್ಸ್ ಕಂ ಕ್ರೈಂ – ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದಿರುವ ಸಿನಿಮಾ. ಮಹಿಳೆಯರ ಮೇಲಿನ ದೌರ್ಜನ್ಯ, ಮೊಬೈಲ್ ತಂತ್ರಜ್ಞಾನದ ಮೂಲಕ ಅದನ್ನು ತಡೆಯುವ ಪ್ರಯತ್ನ, ಅದೆಲ್ಲವನ್ನು ಒಂದು ನಿಗೂಢ ಕೊಲೆಯ ಸುತ್ತ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಶಂಕರ್ ಜಿ. ಚಿತ್ರದ ಕಥೆಯ ಎಳೆ ಇಂದಿನ ಪ್ರೇಕ್ಷಕರಿಗೆ ಕನೆಕ್ಟ್ ಆಗುವಂತಿದ್ದರೂ, ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಪ್ರೇಕ್ಷಕರ ಮುಂದಿಡುವ ಸಾಧ್ಯತೆಯನ್ನು ಚಿತ್ರದಲ್ಲಿ ನಿರ್ದೇಶಕರು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡಿಲ್ಲ. ಬಿಗಿಯಾದ ನಿರೂಪಣೆ, ಚಿತ್ರಕಥೆಗೆ ಕೊಂಚ ವೇಗ, ಚುರುಕು ಸಂಭಾಷಣೆಯಿದ್ದಿದ್ದರೆ, ‘ಮಾಯಾವಿ’ ಇನ್ನಷ್ಟು ಪರಿಣಾಮಕಾರಿಯಾಗಿ ಪ್ರೇಕ್ಷಕರನ್ನು ಮುಟ್ಟುವ ಸಾಧ್ಯತೆಗಳಿದ್ದವು.

ಕಲಾವಿದರ ಅಭಿನಯ ಹೇಗಿದೆ…?

ಇನ್ನು ಚಿತ್ರದ ಕಲಾವಿದರ ಅಭಿನಯದ ಬಗ್ಗೆ ಹೇಳುವುದಾದರೆ, ಯುವನಟ ರಘುರಾಮ್ ‘ಮಾಯಾವಿ’ಯಲ್ಲಿ ನಾಯಕನಾಗಿ ಮಧ್ಯಮ ವರ್ಗದ ಹುಡುಗನ ಪಾತ್ರದಲ್ಲಿ ಉತ್ತಮ ಅಭಿನಯ ನೀಡಿದ್ದಾರೆ. ನಿಶ್ಚಿತಾ ಶೆಟ್ಟಿ ನಾಯಕಿಯ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ತಮ್ಮ ಮಾತು ಮತ್ತು ಅಭಿನಯದ ಮೂಲಕ ನಿಶ್ಚಿತಾ ಶೆಟ್ಟಿ ತೆರೆಮೇಲೆ ಇದ್ದಷ್ಟು ಹೊತ್ತು ನೋಡುಗರಿಗೆ ಇಷ್ಟವಾಗುತ್ತಾರೆ. ಉಳಿದಂತೆ ಎಂ. ಕೆ. ಮಠ, ಸುರೇಶ ಬಾಬು, ಸೂರ್ಯ ಪ್ರವೀಣ್, ಅನುರಾಧಾ, ಶಿಲ್ಪಾ, ಖುಷಿ ಗೌಡ ಮತ್ತಿತರ ಕಲಾವಿದರು ತಮ್ಮ ಪಾತ್ರಕ್ಕೆ ಅಚ್ಚುಕಟ್ಟಾದ ಅಭಿನಯ ನೀಡಿದ್ದಾರೆ ಎನ್ನಬಹುದು.

ಕೊನೆಯ ಮಾತು…

ಚಿತ್ರದಲ್ಲಿ ಬರುವ ಗಾಯಕ ವಿಜಯ ಪ್ರಕಾಶ್ ಧ್ವನಿಯಾಗಿರುವ ‘ಆವರಿಸು…’ ಗೀತೆ ಥಿಯೇಟರಿನಲ್ಲಿ ಕೆಲ ನಿಮಿಷ ಗುನುಗುಡುವಂತಿದೆ. ಚಿತ್ರದುರ್ಗ ಸುತ್ತಮುತ್ತಲಿನ ಒಂದಷ್ಟು ಸುಂದರ ತಾಣಗಳನ್ನು ಚಿತ್ರತಂಡ ತೆರೆಮೇಲೆ ತೋರಿಸಿದೆ. ತಾಂತ್ರಿಕವಾಗಿ ಚಿತ್ರದ ಛಾಯಾಗ್ರಹಣ, ಸಂಕಲನ, ಕಲರಿಂಗ್ ಕಡೆಗೆ ಚಿತ್ರತಂಡ ಇನ್ನಷ್ಟು ಗಮನ ಕೊಡಬಹುದಿತ್ತು. ಒಟ್ಟಾರೆ ಒಂದಷ್ಟು ಸಣ್ಣ-ಪುಟ್ಟ ಲೋಪ-ದೋಷಗಳನ್ನು ಬದಿದಿಟ್ಟು ಹೇಳುವುದಾದರೆ, ‘ಮಾಯಾವಿ’ ಒಂದೊಳ್ಳೆ ಪ್ರಯತ್ನ ಎನ್ನಲು ಅಡ್ಡಿಯಿಲ್ಲ. ವಾರಾಂತ್ಯದಲ್ಲಿ ಒಮ್ಮೆ ಹೊಸ ಸಿನಿಮಾ ನೋಡಬೇಕು ಎನ್ನುವವರು, ಹೊಬರ ಪ್ರಯತ್ನವನ್ನು ಬೆಂಬಲಿಸಬೇಕು ಎನ್ನುವವರು ಒಮ್ಮೆ ‘ಮಾಯಾವಿ’ಯನ್ನು ತೆರೆಮೇಲೆ ನೋಡಿ ಬರಬಹುದು.

Related Posts

error: Content is protected !!