‘ರಕ್ಷಕ’ನೊಳಗೊಬ್ಬ ‘ರಾಕ್ಷಸ’… ಅವನೇ ‘ದಿ ಡೆವಿಲ್’…!
ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳಿಗೆ ಮಸ್ತ್ ಮನರಂಜನೆ
ರಾಜಕೀಯ ಬಲೆಯೊಳಗೆ ‘ದಿ ಡೆವಿಲ್’ ಆಡಿದ ‘ಡಬಲ್ ಗೇಮ್’ ಚದುರಂಗದಾಟ…
‘ದಿ ಡೆವಿಲ್’ ಎಂಬ ಔಟ್ ಅಂಡ್ ಔಟ್ ಮಾಸ್ ಆಕ್ಷನ್ ಎಂಟರ್ಟೈನರ್
ಚಿತ್ರ: ದಿ ಡೆವಿಲ್ ನಿರ್ಮಾಣ: ‘ಶ್ರೀ ಜೈಮಾತಾ ಕಂಬೈನ್ಸ್’ ಮತ್ತು ‘ಸಾರೆಗಮ’ ನಿರ್ದೇಶನ: ಪ್ರಕಾಶ್ ವೀರ್ ತಾರಾಗಣ: ದರ್ಶನ್, ರಚನಾ ರೈ, ಅಚ್ಯುತ್ ಕುಮಾರ್, ಮಹೇಶ್ ಮಂಜ್ರೇಕರ್, ಶರ್ಮಿಳಾ ಮಾಂಡ್ರೆ, ಶೋಭರಾಜ್, ವಿನಯ್ ಗೌಡ, ಗಿಲ್ಲಿ ನಟ ಮುಂತಾದವರು. ಬಿಡುಗಡೆ: 11 ಡಿಸೆಂಬರ್ 2025 ರೇಟಿಂಗ್: 3.5/5
———————–
ಅವನ ಹೆಸರು ಕೃಷ್ಣ. ಸಣ್ಣ ಹೋಟೆಲ್ ನಡೆಸುತ್ತಿರುವ ಕೃಷ್ಣ ಹೆಸರಿಗೆ ತಕ್ಕಂತೆ ಸಭ್ಯವಂತ ಹುಡುಗ. ಬಣ್ಣದ ಲೋಕದಲ್ಲಿ ಒಬ್ಬ ದೊಡ್ಡ ನಟನಾಗಬೇಕೆಂಬವುದು ಕೃಷ್ಣ ಆಸೆ. ಹೋಟೆಲ್ ನಡೆಸುತ್ತಲೇ, ದಿನಕ್ಕೊಂದು ವೇಷ ಹಾಕಿ, ವೇಷಕ್ಕೆ ತಕ್ಕಂತೆ ಬಣ್ಣ ಹಾಕಿ, ಹೋಟೆಲ್ ಗೆ ಬಂದ ಜನರನ್ನುರಂಜಿಸುವ ಕೃಷ್ಣ, ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್ ರಂತೆ ನಟಿಸಿ ತನ್ನ ಪ್ರತಿಭೆಯನ್ನು ಪ್ರದರ್ಶಿಸುತ್ತಿರುತ್ತಾನೆ.
ಹೀರೋ ಆಗಬೇಕು ಎಂದು ಕನಸು ಕಂಡ ಕೃಷ್ಣನಿಗೆ ಹೀರೋ ಆಗೋಕೆ ಅವಕಾಶ ಸಿಕ್ಕಾಗ, ಇದ್ದಬದ್ದ ಕೆಲಸವನ್ನೆಲ್ಲಾ ಬಿಟ್ಟು, ಹಿಂದು-ಮುಂದೆ ನೋಡದೆ, ಅವಕಾಶ ಕೊಟ್ಟವರ ಹಿಂದೆ ಹೋಗುತ್ತಾನೆ. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಆದರೆ, ಕ್ರಮೇಣ ತಾನು ಕೆಲಸ ಮಾಡುತ್ತಿರುವುದು ‘ದಿ ಡೆವಿಲ್’ಗಾಗಿ ಎಂದು ಗೊತ್ತಾಗುವುದರೊಳಗೆ ಮತ್ತೆ ತಾನು ಹಿಂದಿರುಗಿ ಹೋಗದಷ್ಟು ದೂರಕ್ಕೆ ಹೋಗಿರುತ್ತಾನೆ.ಕೃಷ್ಣನ ಬಣ್ಣ ಹಚ್ಚುವ ಕನಸು ಹಲವು ತಿರುವುಗಳೊಂದಿಗೆ ಸಿಲುಕಿ ರಾಜಕೀಯದ ಚದುರಂಗದಾಟಕ್ಕೆ ದಾಳವಾಗುತ್ತದೆ. ಹೀಗೆ ಸಣ್ಣ ಹೋಟೆಲ್‌ನಿಂದ ‘ದಿ ಡೆವಿಲ್’ ಬಲೆಯೊಳಗೆ ಬಂದ ಕೃಷ್ಣ ಅಲ್ಲಿಂದ ಪಾರಾಗುತ್ತಾನಾ? ಎಂಬುದೇ ‘ದಿ ಡೆವಿಲ್’ ಚಿತ್ರದ ಕಥೆಯ ಒಂದು ಎಳೆ.
‘ಡಬಲ್ ರೋಲ್’ನಲ್ಲಿ ‘ದಿ ಡೆವಿಲ್’ ಜುಗಲ್‌ಬಂಧಿ!
‘ದಿ ಡೆವಿಲ್’ ಸಿನೆಮಾದಲ್ಲಿ ನಾಯಕ ನಟ ದರ್ಶನ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಧನುಶ್ ಎಂಬ ಹೆಸರಿನ ಮುಖ್ಯಮಂತ್ರಿಯ ಮಗನಾಗಿ ಮತ್ತು ಕೃಷ್ಣ ಎಂಬ ಸಣ್ಣ ಹೋಟೆಲ್ ನಡೆಸುವವನಾಗಿ ದರ್ಶನ್ ‘ದಿ ಡೆವಿಲ್’ ಸಿನೆಮಾದಲ್ಲಿ ಎರಡು ಪಾತ್ರಗಳನ್ನು ನಿಭಾಯಿಸಿದ್ದಾರೆ.
ಒಂದೇ ಸಿನೆಮಾದಲ್ಲಿ ನಾಯಕ ನಟ ದರ್ಶನ್ ಪಾಸಿಟಿವ್ ಮತ್ತು ನೆಗೆಟಿವ್ ಶೇಡ್‌ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಈ ಎರಡೂ ಪಾತ್ರಗಳು ಮುಖಾಮುಖಿಯಾದಾಗಲೇ ‘ದಿ ಡೆವಿಡ್’ ಸಿನೆಮಾದ ಅಸಲಿ ಕಥೆ ಶುರುವಾಗುತ್ತದೆ.
ದರ್ಶನ್ ಸಿನಿಕೆರಿಯರ್‌ನಲ್ಲಿ ಇಲ್ಲಿಯವರೆಗೆ ಹಲವು ಸಿನೆಮಾಗಳಲ್ಲಿ ಅಭಿನಯಿಸಿದ್ದರೂ, ವಿಲನ್ ಆಗಿ ಕಾಣಿಸಿಕೊಂಡಿದ್ದು ಕಡಿಮೆಯೇ. ಅದೇ ರೀತಿ, ಅವರ ಹಲವು ಸಿನೆಮಾಗಳಲ್ಲಿ ರಾಜಕೀಯ ಬಂದು ಹೋಗಿದ್ದರೂ, ಪೂರ್ಣ ಪ್ರಮಾಣದ ರಾಜಕೀಯ ಸಿನೆಮಾಗಳಲ್ಲಿ ದರ್ಶನ್ ಇಲ್ಲಿಯವರೆಗೂ ಕಾಣಿಸಿಕೊಂಡಿರಲಿಲ್ಲ. ‘ದಿ ಡೆವಿಲ್’ನಲ್ಲಿ ದರ್ಶನ್ ಬರೀ ಹೀರೋ ಅಷ್ಟೇ ಅಲ್ಲ, ವಿಲನ್ ಆಗಿಯೂ ಕಾಣಿಸಿಕೊಂಡಿದ್ದು, ಎರಡು ವಿರುದ್ದ ದಿಕ್ಕಿನ ಪಾತ್ರಗಳನ್ನು ಸಮನಾಗಿ ಸರಿದೂಗಿಸಿ ಚಿತ್ರದಲ್ಲಿ ಹೆಗಲ ಮೇಲೆ ಹೊತ್ತು ಸಾಗಿದ್ದಾರೆ. ಕೃಷ್ಣ ಮತ್ತು ಧನುಶ್ ಎಂಬ ಎರಡು ಪಾತ್ರಗಳ ನಡುವಿನ ಸಂಘರ್ಷವೇ ‘ದಿ ಡೆವಿಲ್’ ಸಿನೆಮಾ ಹೈಲೈಟ್!
‘ದಿ ಡೆವಿಲ್’ ದರ್ಶನ್ ಫ್ಯಾನ್ಸ್‌ಗೆ ಹೇಳಿ ಮಾಡಿಸಿದಂತಿದೆ!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸಿನೆಮಾದಲ್ಲಿ ಏನು ನಿರೀಕ್ಷೆ ಮಾಡುತ್ತಾರೋ, ಅದೆಲ್ಲವನ್ನು ‘ದಿ ಡೆವಿಲ್’ ಸಿನೆಮಾದಲ್ಲಿ ತೆರೆಮೇಲೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಪ್ರಕಾಶ್ ವೀರ್. ಒಬ್ಬ ಪರಮ ಪುರುಷ, ಮತ್ತೊಬ್ಬ ಪರಮ ಪಾಪಿಯ ನಡುವೆ ಸಂಘರ್ಷವಾದರೆ, ಏನೆಲ್ಲಾ ಆಗುತ್ತದೆ ಎಂಬುದನ್ನು ನಿರ್ದೇಶಕ ಪ್ರಕಾಶ್ ವೀರ್ ‘ದಿ ಡೆವಿಲ್’ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ.
ಒಂದೇ ಚಿತ್ರದಲ್ಲಿ ಎರಡು ಶೇಡ್ ಗಳ ಕಥೆಯನ್ನು ಹೆಣೆದು ಬೇಸರದಲ್ಲಿದ್ದ ದರ್ಶನ್ ಅಭಿಮಾನಿಗಳ ಮುಖದಲ್ಲಿ ಸಂತಸ ತಂದಿದ್ದಾರೆ. ಒಟ್ಟಿನಲ್ಲಿ ‘ದಿ ಡೆವಿಲ್’ ಪಕ್ಕಾ ದರ್ಶನ್ ಅಭಿಮಾನಿಗಳಿಗೆ ಹೇಳಿ ಮಾಡಿಸಿದಂತಿರುವ ಪೊಲಿಟಿಕಲ್ ಡ್ರಾಮ ಎನ್ನಬಹುದು.
‘ದಿ ಡೆವಿಲ್’ ಚಿತ್ರಕಥೆ, ನಿರೂಪಣೆ ಹೇಗಿದೆ..?
ಈ ಹಿಂದೆ ‘ಮಿಲನ’, ‘ವಂಶಿ’, ‘ರಿಷಿ’ ಮೊದಲಾದ ಕೌಟುಂಬಿಕ ಕಥಾಹಂದರದ ಸಿನೆಮಾಗಳನ್ನು ಮಾಡಿ ಗೆದ್ದಿದ್ದ ನಿರ್ದೇಶಕ ಪ್ರಕಾಶ್ ಅವರಿಗೆ ಇದು ಬೇರೆ ತರಹದ ಸಿನೆಮಾ. ಇದೊಂದು ಪ್ರಯತ್ನ ಮತ್ತು ಪ್ರಯೋಗವಾಗಿ ಅವರಿಗೆ ವಿಭಿನ್ನವಾದರೂ, ಈ ತರಹದ ಚಿತ್ರಗಳಿಗೆ ಇನ್ನಷ್ಟು ಗಟ್ಟಿಯಾದ ಕಥೆ, ಚಿತ್ರಕಥೆ, ನಿರೂಪಣೆ ಬೇಕಾಗುತ್ತದೆ. ಈ ವಿಷಯದಲ್ಲಿ ನಿರ್ದೇಶಕರು ಕೊಂಚ ಎಡವಿದಂತಿದೆ. ಕಥೆ, ಚಿತ್ರಕಥೆ, ಸಂಭಾಷಣೆಯಲ್ಲಿ ಇನ್ನು ಸ್ವಲ್ಪ ಹಿಡಿತ ಇನ್ನಷ್ಟು ತಯಾರಿ ಬೇಕಿತ್ತು. ಆರಂಭದ ಕೆಲವು ನಿಮಿಷಗಳು ಪ್ರೇಕ್ಷಕರನ್ನು ಹಿಡಿದು ಕೂರಿಸಿ ವೇಗವಾಗಿ ಸಾಗುವ ಚಿತ್ರ ಆನಂತರ ವೇಗ ಕಳೆದುಕೊಳ್ಳುತ್ತದೆ. ಸಾಮಾನ್ಯವಾಗಿ ಇಂಥ ಸಿನೆಮಾಗಳಲ್ಲಿ ಲಾಜಿಕ್ ಹುಡುಕುವಂತಿಲ್ಲ. ಆದರೆ ಲಾಜಿಕ್ ಬಿಟ್ಟು ನೋಡಿದರೂ ‘ದಿ ಡೆವಿಲ್’ ಅನ್ನು ಸಂಪೂರ್ಣವಾಗಿ ಅರಗಿಸಿಕೊಳ್ಳುವುದು ಕಷ್ಟ ಎನ್ನಬಹುದು.
‘ದಿ ಡೆವಿಲ್’ ಆಗಿ ಆವರಿಸಿಕೊಳ್ಳುವ ದರ್ಶನ್!
ಇಡೀ ‘ದಿ ಡೆವಿಲ್’ ಚಿತ್ರದಲ್ಲಿ ನಾಯಕ ನಟ ದರ್ಶನ್ ಸಂಪೂರ್ಣ ಆವರಿಸಿಕೊಂಡಿದ್ದಾರೆ ಎಂದರೆ ಖಂಡಿತಾ ತಪ್ಪಾಗಲಾರದು. ದರ್ಶನ್ ಹೀರೋ ಮತ್ತು ವಿಲನ್ ಆಗಿ ಎರಡೂ ಪಾತ್ರಗಳಲ್ಲೂ ಗಮನಸೆಳೆಯುತ್ತಾರೆ. ಈ ಎರಡೂ ಪಾತ್ರಗಳು ಅವರ ಅಭಿಮಾನಿಗಳಿಗೆ ಇಷ್ಟವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ದರ್ಶನ್ ಬಿಟ್ಟರೆ ತೆರೆಯ ಮೇಲೆ ಅತೀ ಹೆಚ್ಚು ಕಾಣಿಸಿಕೊಳ್ಳುವುದು ಅಚ್ಯುತ್ ಕುಮಾರ್ ಮತ್ತು ಅವರು ತಮಗೆ ಸಿಕ್ಕ ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಮಹೇಶ್ ಮಂಜ್ರೇಕರ್, ರಚನಾ ರೈ ತೆರೆಮೇಲೆ ಕಷ್ಟಪಟ್ಟು ಅಭಿನಯಿಸಿದ್ದಾರೆ! ಉಳಿದಂತೆ ಶೋಭರಾಜ್, ಶರ್ಮಿಳಾ ಮಾಂಡ್ರೆ, ವಿನಯ್ ಗೌಡ, ಹುಲಿ ಕಾರ್ತಿಕ್, ತುಳಸಿ ಮುಂತಾದವರು ತಮ್ಮ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಚಿತ್ರದಲ್ಲಿ ಕಿರುತೆರೆಯ ಮತ್ತು ಯೂ-ಟ್ಯೂಬ್‍ನ ಹಲವು ಜನಪ್ರಿಯ ಕಲಾವಿದರು ಹಾಗೆ ಬಂದು, ಹೀಗೆ ಹೋಗುವುದರಿಂದ ಅವರ ಪಾತ್ರಗಳ ಬಗ್ಗೆ ಹೆಚ್ಚೇನೂ ಹೇಳುವಂತಿಲ್ಲ. ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕೆ ಮೆರಗು ತಂದಿದ್ದು, ಹಿನ್ನೆಲೆ ಸಂಗೀತ ಚಿತ್ರದ ಜೀವಾಳ ಎನ್ನಬಹುದು. ಸುಧಾಕರ್ ರಾಜ್ ಛಾಯಾಗ್ರಹಣ ‘ದಿ ಡೆವಿಲ್’ ಕಥೆಗೆ ಸುಂದರವಾದ ಚೌಕಟ್ಟನ್ನು ಕಟ್ಟಿಕೊಟ್ಟಿದೆ.
‘ದಿ ಡೆವಿಲ್’ ಬಗ್ಗೆ ಅಂತಿಮ ಮಾತು…
‘ದಿ ಡೆವಿಲ್’ ಒಂದು ಅಪ್ಪಟ ಮಾಸ್ ಎಂಟರ್ಟೈನ್ಮೆಂಟ್ ಸಿನೆಮಾ. ಪೊಲಿಟಿಕಲ್ ಆಕ್ಷನ್-ಥ್ರಿಲ್ಲರ್ ಕಥೆಯನ್ನು ದರ್ಶನ್ ಅಭಿಮಾನಿಗಳಿಗಾಗಿಯೇ ಮಾಡಿದಂತಿದೆ. ‘ಕಾಟೇರ’ ನಂತರ ಅದನ್ನು ಮೀರಿಸುವ ಅಥವಾ ಸರಿದೂಗಿಸುವ ಚಿತ್ರಕ್ಕಾಗಿ ದರ್ಶನ್ ಅಭಿಮಾನಿಗಳು ಕಾಯುತ್ತಿದ್ದರು. ‘ದಿ ಡೆವಿಲ್’ ಒಂದು ಬೇರೆ ತರಹದ ಪ್ರಯೋಗವಾದರೂ, ಆ ಕಾಯುವಿಕೆಗೆ ಪೂರಕವಾದ ಚಿತ್ರವಲ್ಲ. ತಮ್ಮ ಹೀರೋಗಾಗಿ ಕಾದಿದ್ದ ಫ್ಯಾನ್ಸ್ ಗಳಿಗೆ ಡಬ್ಬಲ್ ಧಮಾಕ ಎನ್ನಬಹುದು. ಒಂದೇ ಚಿತ್ರದಲ್ಲಿ ಮಾನವ, ದಾನವರನ್ನು ಕಾಣಬಹುದು. ದರ್ಶನ್ ಅಭಿಮಾನಿಗಳಿಗೆ ಇದು ಪಕ್ಕಾ ಪೈಸಾ ವಸೂಲ್ ಚಿತ್ರ ಎನ್ನಬಹುದು. ದರ್ಶನ್ ಎರಡು ಪಾತ್ರಗಳನ್ನು ಹೇಗೆ ನಿಭಾಯಿಸಿದ್ದಾರೆ, ಸಿನೆಮಾ ಸೇರಲು ಬಂದ ಕೃಷ್ಣ ಏನಾಗುತ್ತಾನೆ, ‘ಡೆವಿಲ್’ ಧನುಷ್ ಯಾಕಾಗಿ, ಯಾರಿಗಾಗಿ ‘ಡೆವಿಲ್’ ಆದ ಕಥೆ ತಿಳಿಯಲು ಪ್ರೇಕ್ಷಕರು ಚಿತ್ರಮಂದಿರದಲ್ಲಿ ಸಿನೆಮಾ ನೋಡಿಯೇ ತಿಳಿಯುವುದು ಒಳ್ಳೆಯದು.
- ಜಿ. ಎಸ್. ಕಾರ್ತಿಕ ಸುಧನ್,















