ಅಲ್ಲು ಅರ್ಜುನ್ ಹೊಸಚಿತ್ರಕ್ಕೆ ಲೋಕೇಶ್ ಕನಕರಾಜ್ ಆಕ್ಷನ್-ಕಟ್!
ಸ್ಟೈಲಿಶ್ ಸ್ಟಾರ್‌ಗೆ ಲೋಕೇಶ್ ಕನಕರಾಜ್ ಡೈರೆಕ್ಷನ್
‘ಮೈತ್ರಿ ಮೂವೀಸ್’ ಬ್ಯಾನರ್ ಮತ್ತೊಂದು ಬಿಗ್ ಬಜೆಟ್ ಚಿತ್ರದ ನಿರ್ಮಾಣ
ಸದ್ದಿಲ್ಲದೆ ಶುರುವಾಯಿತು ಹೊಸಚಿತ್ರದ ಕೆಲಸ
ಟಾಲಿವುಡ್‌ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ಕಾಲಿವುಡ್ ನ ಸೂಪರ್ ಸ್ಟಾರ್ ಡೈರೆಕ್ಟರ್ ಲೋಕೇಶ್ ಕನಕರಾಜ್ ಕಾಂಬಿನೇಶನ್‌ನಲ್ಲಿ ಹೊಸ ಚಿತ್ರವೊಂದನ್ನು ತೆರೆಮೇಲೆ ತರಲು ಭರದ ತಯಾರಿ ನಡೆದಿದೆ.
ಹೌದು, ತಮಿಳಿನ ‘ಕೂಲಿ’ ಸಿನೆಮಾದ ಸೂಪರ್ ಹಿಟ್ ಸಕ್ಸಸ್ ಬಳಿಕ ಮತ್ತೊಂದು ಮೆಗಾ ಬಿಗ್ ಬಜೆಟ್ ಸಿನೆಮಾದ ನಿರ್ದೇಶನಕ್ಕೆ ನಿರ್ದೇಶಕ ಲೋಕೇಶ್ ಕನಕರಾಜ್ ಸಜ್ಜಾಗಿದ್ದಾರೆ.
ಈ ಬಾರಿ ಈ ಸಿನೆಮಾದಲ್ಲಿ ಸೌಥ್ ಸಿನಿ ದುನಿಯಾದ ಮತ್ತೊಬ್ಬ ಸೂಪರ್ ಸ್ಟಾರ್ ನಟ ಅಲ್ಲುಅರ್ಜುನ್ ನಾಯಕನಾಗಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ. ಕಳೆದ ವರ್ಷ ಲೋಕೇಶ್ ಕನಕರಾಜ್ ರಜಿನಿಕಾಂತ್ ಅವರ ಜತೆ ‘ಕೂಲಿ’ ಸಿನೆಮಾವನ್ನು ನಿರ್ದೇಶನ ಮಾಡಿದ್ದರು. ಮಲ್ಟಿ ಸ್ಟಾರ್ಸ್ ‘ಕೂಲಿ’ ದೊಡ್ಡಮಟ್ಟದ ಸಕ್ಸಸ್ ಕಾಣದಿದ್ರೂ, ಬಾಕ್ಸಾಫೀಸ್‌ನಲ್ಲಿ ಒಂದೊಳ್ಳೆ ಗಳಿಕೆ ಕಂಡು 2025ರ ಸೂಪರ್ ಹಿಟ್ ಸಿನೆಮಾಗಳ ಸಾಲಿನಲ್ಲಿ ಸ್ಥಾನ ಪಡೆದುಕೊಂಡಿತ್ತು.
‘ಕೂಲಿ’ ಬಳಿಕ ಮತ್ತೊಂದು ಬ್ಲಾಕ್ ಬಸ್ಟರ್ ಚಿತ್ರಕ್ಕೆ ತಯಾರಿ!
‘ಕೂಲಿ’ ಸಿನೆಮಾದ ಬಳಿಕ ನಿರ್ದೇಶಕ ಲೋಕೇಶ್ ಕನಕರಾಜ್, ಅಲ್ಲು ಅರ್ಜುನ್ ಅವರ ಜತೆ ಹೊಸ ಸಿನೆಮಾ ಮಾಡಲು ಸಜ್ಜಾಗಿದ್ದಾರೆ. ಕಳೆದ ಕೆಲ ಸಮಯದ ಹಿಂದಷ್ಟೇ ಲೋಕೇಶ್ – ಅಲ್ಲು ಅರ್ಜುನ್ ಪ್ರಾಜೆಕ್ಟ್ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ವರದಿಯಾಗಿತ್ತು.
ಇದೀಗ ಈ ಹೊಸ ಸಿನೆಮಾದ ಸ್ಕ್ರಿಪ್ಟ್ ಬಹುತೇಕ ಅಂತಿಮವಾಗಿದ್ದು, ಶೀಘ್ರದಲ್ಲಿಯೇ ಈ ಹೊಸ ಚಿತ್ರ ಸೆಟ್ಟೇರಲಿದೆ ಎಂದು ವರದಿಯಾಗಿದೆ. ಟಾಲಿವುಡ್ ಚಿತ್ರರಂಗದ ಮೂಲಗಳ ಪ್ರಕಾರ, ಅಲ್ಲು ಅರ್ಜುನ್ ಮತ್ತು ಲೋಕೇಶ್ ಕನಕರಾಜ್ ಕಾಂಬಿನೇಶನ್‌ನಲ್ಲಿ ಮೂಡಿಬರುತ್ತಿರುವ ಈ ಹೊಸಚಿತ್ರದ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ಭರದಿಂದ ನಡೆಯುತ್ತಿದ್ದು, ಎಲ್ಲ ಅಂದುಕೊಂಡಂತೆ ನಡೆದರೆ, ಇದೇ ಯುಗಾದಿ ಹಬ್ಬದ ವೇಳೆಗೆ ಈ ಹೊಸಚಿತ್ರ ಅಧಿಕೃತವಾಗಿ ಘೋಷಣೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಬಹುಕೋಟಿ ವೆಚ್ಚದಲ್ಲಿ ಅಲ್ಲು-ಕನಕರಾಜ್ ಚಿತ್ರ
ಈ ಹಿಂದೆ ತೆಲುಗಿನಲ್ಲಿ ನಟ ಅಲ್ಲು ಅರ್ಜುನ್ ಅಭಿನಯದ ಸುಕುಮಾರ್ ನಿರ್ದೇಶನದ ಬ್ಲಾಕ್ ಬಸ್ಟರ್ ಸಿನೆಮಾ ‘ಪುಷ್ಪ’ವನ್ನು ಅದ್ಧೂರಿಯಾಗಿ ನಿರ್ಮಿಸಿ, ತೆರೆಗೆ ತಂದಿದ್ದ, ತೆಲುಗಿನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ‘ಮೈತ್ರಿ ಮೂವಿ ಮೇಕರ್ಸ್’ ಈ ಹೊಸ ಚಿತ್ರಕ್ಕೆ ಬಂಡವಾಳ ಹಾಕಲಿದೆ ಎನ್ನಲಾಗಿದೆ.
ಇದೊಂದು ಆಕ್ಷನ್-ಥ್ರಿಲ್ಲರ್ ಕಥಾಹಂದರದ ಚಿತ್ರವಾಗಿದ್ದು, ಬಿಗ್ ಬಜೆಟ್ ನಲ್ಲಿ ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಏಕಕಾಲದಲ್ಲಿ ನಿರ್ಮಾಣವಾಗಲಿದೆ ಎನ್ನಲಾಗುತ್ತಿದೆ. ಇನ್ನು ಈ ಹೊಸ ಸಿನೆಮಾದ ನಿರ್ದೇಶನಕ್ಕಾಗಿ ನಿರ್ದೇಶಕ ಲೋಕೇಶ್ ಕನಕರಾಜ್ ಅವರಿಗೆ ನಿರ್ಮಾಣ ಸಂಸ್ಥೆ ದೊಡ್ಡ ಮೊತ್ತದ ಸಂಭಾವನೆಯನ್ನೂ ನೀಡುತ್ತಿದೆಯಂತೆ.
ಚೆನ್ನೈ, ಹೈದರಾಬಾದ್ ಮತ್ತು ವಿದೇಶಗಳಲ್ಲೂ ಈ ಚಿತ್ರವನ್ನು ಚಿತ್ರೀಕರಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದ್ದು, ಬಾಲಿವುಡ್‌ನ ಖ್ಯಾತ ನಟಿಯೊಬ್ಬರು ಈ ಚಿತ್ರದಲ್ಲಿ ನಾಯಕ ನಟ ಅಲ್ಲು ಅರ್ಜುನ್ ಅವರಿಗೆ ನಾಯಕಿಯಾಗಿ ತೆರೆಮೇಲೆ ಜೋಡಿಯಾಗಲಿದ್ದಾರೆ ಎಂಬ ಮಾತುಗಳು ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ. ಅಲ್ಲು ಅರ್ಜುನ್ ವೃತ್ತಿ ಜೀವನದ 23ನೇ ಸಿನೆಮಾ ಇದಾಗಲಿದ್ದು, ಸದ್ಯ ಈ ಹೊಸ ಸಿನೆಮಾದ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳು ಅಲ್ಲು ಅರ್ಜುನ್ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ, ಕುತೂಹಲಕ್ಕೆ ಕಾರಣವಾಗಿರುವುದಂತೂ ಸುಳ್ಳಲ್ಲ.















