‘ಸ್ಪಾರ್ಕ್’ಗಾಗಿ ಕರಿಕೋಟು ತೊಟ್ಟ ಭಾವನಾ
‘ಸ್ಪಾರ್ಕ್’ ಚಿತ್ರದಲ್ಲಿ ಲಾಯರ್ ಪಾತ್ರದಲ್ಲಿ ‘ಜಾಕಿ’ ಭಾವನಾ
‘ಜಾಕಿ’ ಭಾವನಾ ಅವರ ವಿಶೇಷ ಪಾತ್ರ ಪರಿಚಯಿಸಿದ ‘ಸ್ಪಾರ್ಕ್’ ಚಿತ್ರತಂಡ
‘ಸ್ಪಾರ್ಕ್’ ಚಿತ್ರದ ಮೇಲೆ ಭಾವನಾ ನಿರೀಕ್ಷೆ
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಜಾಕಿ’ ಚಿತ್ರದ ಮೂಲಕ ನಾಯಕ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ಚೆಲುವೆ ಭಾವನಾ ಮೆನನ್ ಉರೂಫ್ ‘ಜಾಕಿ’ ಭಾವನಾ. ‘ಜಾಕಿ’ ಚಿತ್ರದ ಬಳಿಕ ‘ರೋಮಿಯೋ’, ‘ಯಾರೇ ಕೂಗಾಡಲಿ’, ‘ಬಚ್ಚನ್’, ‘ಟಗರು’, ‘ಭಜರಂಗಿ-2’, ‘ಇನ್ಸ್ಪೆಕ್ಟರ್ ವಿಕ್ರಂ’, ‘ಕೇಸ್ ಆಫ್ ಕೊಂಡಾಣ’
ಹೀಗೆ ಒಂದಷ್ಟು ಸೂಪರ್ ಹಿಟ್ ಸಿನೆಮಾಗಳಲ್ಲಿ ನಾಯಕಿಯಾಗಿ ವಿವಿಧ ಪಾತ್ರಗಳಲ್ಲಿ ಮಿಂಚಿದ್ದ ನಟಿ ‘ಜಾಕಿ’ ಭಾವನಾ, ಇದೀಗ ನಟ ನಿರಂಜನ್ ಸುಧೀಂದ್ರ ಅಭಿನಯದ ‘ಸ್ಪಾರ್ಕ್’ ಚಿತ್ರದ ಮೂಲಕ ಹೊಸ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರಲು ತಯಾರಾಗಿದ್ದಾರೆ.
ನ್ಯಾಯವಾದಿಯಾದ ಭಾವನಾ..!
ಅಂದಹಾಗೆ, ನಿರಂಜನ್ ಸುಧೀಂದ್ರ ಅಭಿನಯದ ‘ಸ್ಪಾರ್ಕ್’ ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಇದೇ 2026ರ ಸೆಪ್ಟೆಂಬರ್‌ನಲ್ಲಿ ಚಿತ್ರ ಅದ್ಧೂರಿಯಾಗಿ ತೆರೆಗೆ ಬರಲಿದೆ. ಇದೇ ವೇಳೆ ‘ಸ್ಪಾರ್ಕ್’ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೀಗ ‘ಸ್ಪಾರ್ಕ್’ ಚಿತ್ರದಲ್ಲಿ ನಟಿ ಭಾವನಾ ಮೆನನ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ವಿಷಯವನ್ನು ಹೊರಬಿಟ್ಟಿದೆ.
ಇನ್ನು ‘ಸ್ಪಾರ್ಕ್’ ಚಿತ್ರದಲ್ಲಿ ನಟಿ ‘ಜಾಕಿ’ ಭಾವನಾ ನ್ಯಾಯವಾದಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ‘ಸ್ಪಾರ್ಕ್’ ಚಿತ್ರದಲ್ಲಿ ನಟಿ ಭಾವನಾ ಅವರ ಪಾತ್ರವನ್ನು ಪರಿಚಯಿಸುವ ವಿಡಿಯೋವನ್ನು ಬಿಡುಗಡೆ ಮಾಡಿರುವ ಚಿತ್ರತಂಡ, ಭಾವನಾ ಅವರ ಪಾತ್ರದ ಸಣ್ಣ ಝಲಕ್ ಅನ್ನು ಪ್ರೇಕ್ಷಕರ ಮುಂದೆ ಬಿಡುಗಡೆ ಮಾಡಿದೆ.
ಸದ್ಯ ಬಿಡುಗಡೆಯಾಗಿರುವ ‘ಸ್ಪಾರ್ಕ್’ ಸಿನೆಮಾದಲ್ಲಿ ನಟಿ ಭಾವನಾ ಅವರ ಪಾತ್ರವನ್ನು ಪರಿಚಯಿಸುವ ವಿಡಿಯೋ ಒಂದಷ್ಟು ಮಂದಿ ಸಿನಿಪ್ರಿಯರ ಗಮನ ಸೆಳೆಯುತ್ತಿದ್ದು, ಚಿತ್ರತಂಡ ಕೂಡ ನಟಿ ಭಾವನಾ ಅವರ ಹೊಸಥರದ ಪಾತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದೆ. ಕರಿಕೋಟು ತೊಟ್ಟಿರುವ ಭಾವನಾ ಅವರ ಪಾತ್ರ ತಣ್ಣಗೆ ಒಂದಷ್ಟು ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿದ್ದು, ತಮ್ಮ ಹೊಸ ಅವತಾರದ ಬಗ್ಗೆ ನಟಿ ಭಾವನಾ ಮೆನನ್ ಕೂಡ ಸಾಕಷ್ಟು ನಿರೀಕ್ಷೆಯ ಮಾತುಗಳನ್ನಾಡಿದ್ದಾರೆ. 
‘ಸ್ಪಾರ್ಕ್’ ಪಾತ್ರದ ಬಗ್ಗೆ ಭಾವನಾ ಮೆನನ್ ಏನಂತಾರೆ..?
ಇನ್ನು ‘ಸ್ಪಾರ್ಕ್’ ಚಿತ್ರದಲ್ಲಿ ತಮ್ಮ ಪಾತ್ರವನ್ನು ಪರಿಚಯಿಸುವ ವಿಡಿಯೋ ಬಿಡುಗಡೆಯಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿರುವ ನಟಿ ಭಾವನಾ ಮೆನನ್, ‘ಸ್ಪಾರ್ಕ್’ ಚಿತ್ರದ ಬಗ್ಗೆ ಮತ್ತು ತಮ್ಮ ಪಾತ್ರದ ಬಗ್ಗೆ ಸಾಕಷ್ಟು ಭರವಸೆಯ ಮಾತುಗಳನ್ನಾಡಿದ್ದಾರೆ.
‘ಈ ಸಿನೆಮಾದ ಟೈಟಲ್‌ನಲ್ಲೇ ಒಂದು ‘ಸ್ಪಾರ್ಕ್’ ಇದೆ. ಅದೇ ಥರ ಸಿನೆಮಾದ ಕಥೆಯಲ್ಲೂ ಕೂಡ ‘ಸ್ಪಾರ್ಕ್’ ಇದೆ. ಅಷ್ಟೇ ಅಲ್ಲದೆ ಸಿನೆಮಾದಲ್ಲಿ ಬರುವ ಎಲ್ಲ ಪಾತ್ರಗಳಲ್ಲಿಯೂ ಆ ‘ಸ್ಪಾರ್ಕ್’ ಇದೆ. ಅದೇ ಕಾರಣದಿಂದ ನಾನು ಈ ಸಿನೆಮಾ ಒಪ್ಪಿಕೊಂಡೆ. ಸಾಮಾನ್ಯವಾಗಿ ನಾನು ಚಾಲೆಂಜಿಂಗ್ ಅನಿಸುವ ಚಿತ್ರಕಥೆ ಇದ್ದಾಗಲೇ ಸಿನೆಮಾ ಒಪ್ಪಿಕೊಳ್ಳುತ್ತೇನೆ. ನಿರ್ದೇಶಕರು ಈ ಪಾತ್ರದ ಬಗ್ಗೆ ಹೇಳಿದಾಗ ನಾನಂತೂ ಇಂಥ ಪಾತ್ರ ಈ ಹಿಂದೆ ಮಾಡಿಲ್ಲ ಎನ್ನುವುದು ಗೊತ್ತಾಯಿತು. ಹಾಗಾಗಿ ಈ ಪಾತ್ರ ಒಪ್ಪಿಕೊಂಡೆ. ಬಹಳ ಸಮಯದ ಬಳಿಕ ನಟಿಯಾಗಿ ನನ್ನ ಪ್ರತಿಭೆಯನ್ನು ಹೊರಗೆಳೆಯಬಲ್ಲಂಥ ಪಾತ್ರವೇ ದೊರಕಿದೆ’ ಎಂದಿದ್ದಾರೆ ಭಾವನಾ.
ನಿರಂಜನ್ ಅಭಿನಯಕ್ಕೆ ಭಾವನಾ ಮೆಚ್ಚುಗೆ…
ಇನ್ನು ‘ಸ್ಪಾರ್ಕ್’ ಚಿತ್ರದ ನಾಯಕ ನಿರಂಜನ್ ಸುಧೀಂದ್ರ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುವ ನಟಿ ಭಾವನಾ, ‘ನಿರಂಜನ್ ನೋಡಲು ಚಿಕ್ಕವನಾಗಿದ್ದರೂ, ಚೆನ್ನಾಗಿ ನಟಿಸುವ, ಡ್ಯಾನ್ಸ್ ಮಾಡುವ, ಫೈಟ್ ಮಾಡುವ ಅಪರೂಪದ ಬಹುಮುಖ ಪ್ರತಿಭೆ. ನಿರಂಜನ್ ಕನ್ನಡ ಚಿತ್ರರಂಗದ ಭರವಸೆಯ ನಾಯಕ’ ಎಂದು ಪ್ರಶಂಸಿಸಿದ್ದಾರೆ.
ಒಟ್ಟಾರೆ ‘ಸ್ಪಾರ್ಕ್’ ಚಿತ್ರದ ಬಗ್ಗೆ ಮತ್ತು ಅದರಲ್ಲಿ ತಮ್ಮ ಪಾತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಮತ್ತು ಭರವಸೆ ಇಟ್ಟುಕೊಂಡಿರುವ ಭಾವನಾ ಮೆನನ್, ‘ಸ್ಪಾರ್ಕ್’ ಕನ್ನಡದ ಮಟ್ಟಿಗೆ ಒಂದು ವಿಭಿನ್ನ ಸಿನೆಮಾವಾಗಿ ನಿಲ್ಲಲಿದೆ ಎಂಬ ವಿಶ್ವಾಸದಲ್ಲಿದ್ದಾರೆ. ಒಟ್ಟಾರೆ ‘ಸ್ಪಾರ್ಕ್’ ಚಿತ್ರ ಮತ್ತು ಭಾವನಾ ಪಾತ್ರ ಕನ್ನಡ ಚಿತ್ರಪ್ರೇಮಿಗಳಿಗೆ ಎಷ್ಟರ ಮಟ್ಟಿಗೆ ಇಷ್ಟವಾಗಲಿದೆ ಎಂಬುದು ‘ಸ್ಪಾರ್ಕ್’ ಚಿತ್ರ ಬಿಡುಗಡೆ ಆದ ಮೇಲಷ್ಟೇ ಗೊತ್ತಾಗಲಿದೆ.














