Street Beat

‘ಪ್ರಣಯರಾಜ’ನ ಕೈಯಲ್ಲಿ ‘ತಾಯವ್ವ’ನ ಟ್ರೇಲರ್‌

‘ತಾಯವ್ವ’ ಚಿತ್ರದ ಟ್ರೇಲರ್‌ ಬಿಡುಗಡೆಗೊಳಿಸಿದ ಹಿರಿಯನಟ ಶ್ರೀನಾಥ್‌

ಗೀತಪ್ರಿಯಾ ಅಭಿನಯದ ‘ತಾಯವ್ವ’ ಚಿತ್ರಕ್ಕೆ ಗಣ್ಯರ ಸಾಥ್‌…

ಸೂಲಗಿತ್ತಿ ಬದುಕಿನ ಕಥಾನಕ ಶೀಘ್ರದಲ್ಲಿಯೇ ತೆರೆಗೆ

‘ತಾಯವ್ವ’ ಎಂಬ ಹೆಸರಿನಲ್ಲಿ ಸುಮಾರು ಎರಡೂವರೆ ದಶಕಗಳ ಹಿಂದೆ ಸಿನೆಮಾವೊಂದು ತೆರೆಗೆ ಬಂದಿದ್ದು, ಹಲವರಿಗೆ ನೆನಪಿರಬಹುದು. ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌ ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸಿದ್ದ ಚಿತ್ರವದು. ಕಿಚ್ಚ ಸುದೀಪ್‌ ಜೊತೆಗೆ ಆ ಸಿನೆಮಾದಲ್ಲಿ ಹಿರಿಯ ನಟಿ ಉಮಾಶ್ರೀ ಕೂಡ ಪ್ರಮುಖ ಪಾತ್ರದಲ್ಲಿ ‘ತಾಯವ್ವ’ನಾಗಿ ಕಾಣಿಸಿಕೊಂಡಿದ್ದರು. ಈಗ ಅದೇ ‘ತಾಯವ್ವ’ ಎಂಬ ಹೆಸರಿನಲ್ಲಿ ಮತ್ತೊಂದು ಸಿನೆಮಾ ತೆರೆಗೆ ಬರಲು ತಯಾರಾಗುತ್ತಿದೆ. ಅಂದಹಾಗೆ, ಈ ಸಿನೆಮಾದ ಹೆಸರು ಕೂಡ ‘ತಾಯವ್ವ’ ಅಂತಿದ್ದರೂ, ಎರಡೂವರೆ ದಶಕದ ಹಿಂದೆ ಬಂದಿದ್ದ ‘ತಾಯವ್ವ’ ಸಿನೆಮಾಕ್ಕೂ, ಈ ಸಿನೆಮಾಕ್ಕೂ ಯಾವುದೇ ಸಂಬಂಧವಿಲ್ಲ. ಚಿತ್ರದ ಕಥೆಗೆ ಹೊಂದಾಣಿಕೆಯಾಗುತ್ತದೆ ಎಂಬ ಕಾರಣಕ್ಕೆ ಈ ಚಿತ್ರತಂಡ ಕೂಡ ತಮ್ಮ ಸಿನೆಮಾಕ್ಕೆ ‘ತಾಯವ್ವ’ ಎಂದು ಹೆಸರಿಟ್ಟುಕೊಂಡಿದೆ.

ಬೆಳ್ಳಿತೆರೆಗೆ ‘ತಾಯವ್ವ’ನಾಗಿ ಗೀತಪ್ರಿಯಾ ಪ್ರವೇಶ

ಇನ್ನು ಹೊಸದಾಗಿ ಬರುತ್ತಿರುವ ‘ತಾಯವ್ವ’ ಚಿತ್ರದ ಮೂಲಕ, ನವ ನಟಿ ಗೀತಪ್ರಿಯಾ ‘ತಾಯವ್ವ’ನ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಕಳೆದ ಮೂರು ದಶಕಗಳಿಂದ ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ, ಬೆಂಗಳೂರಿನ ಪ್ರತಿಷ್ಟಿತ ‘ಕೃಪಾನಿಧಿ ಗ್ರೂಫ್‌ ಆಫ್‌ ಇನ್ಸ್ಟಿಟ್ಯೂಶನ್ಸ್‌’ನ ಸಹ-ಸಂಸ್ಥಾಪಕಿ ಗೀತಪ್ರಿಯಾ ‘ತಾಯವ್ವ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ‘ತಾಯವ್ವ’ ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಇದೀಗ ಚಿತ್ರದ ಟ್ರೇಲರ್‌ ಅನ್ನು ಚಿತ್ರತಂಡ ಅಧಿಕೃತವಾಗಿ ಬಿಡುಗಡೆ ಮಾಡಿದೆ.

‘ತಾಯವ್ವ’ನ ಟ್ರೇಲರಿಗೆ ಗಣ್ಯರ ಮೆಚ್ಚುಗೆ

ಇನ್ನು ‘ತಾಯವ್ವ’ ಚಿತ್ರದ ಟ್ರೇಲರ್‌ ಬಿಡುಗಡೆ ಸಮಾರಂಭದಲ್ಲಿ ಗಣ್ಯರ ದಂಡೇ ನೆರೆದಿತ್ತು. ಹಿರಿಯ ನಟ ‘ಪ್ರಯಣರಾಜ’ ಖ್ಯಾತಿಯ ಶ್ರೀನಾಥ್‌, ‘ಪದ್ಮಶ್ರೀ’ ಪುರಸ್ಕೃತ ಪ್ರಸೂತಿ ತಜ್ಞೆ ಡಾ. ಕಾಮಿನಿ ರಾವ್‌, ‘ಲಹರಿ’ ಸಂಸ್ಥೆಯ ವೇಲು, ‘ಕರ್ನಾಟಕ ಹೌಸಿಂಗ್‌ ಬೋರ್ಡ್‌’ನ ಮಾಜಿ ಅಧ್ಯಕ್ಷ ಲಕ್ಷ್ಮೀ ನಾರಾಯಣ, ಹಿರಿಯ ನಿರ್ಮಾಪಕರಾದ ಭಾ. ಮ. ಹರೀಶ್‌, ಎಸ್‌. ಪದ್ಮಾವತಿ ಸೇರಿದಂತೆ ಅನೇಕ ಗಣ್ಯರು ‘ತಾಯವ್ವ’ ಚಿತ್ರದ ಟ್ರೇಲರ್‌ ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದು, ಚಿತ್ರದ ಟ್ರೇಲರ್‌ಗೆ ಮೆಚ್ಚುಗೆ ಸೂಚಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಗೀತಪ್ರಿಯಾ ಚಿತ್ರಕ್ಕೆ ಶುಭಕೋರಿದ ಶ್ರೀನಾಥ್‌

‘ತಾಯವ್ವ’ ಚಿತ್ರದ ಟ್ರೇಲರ್‌ ಬಿಡುಗಡೆಗೊಳಿಸಿ ಮಾತನಾಡಿದ ಹಿರಿಯ ನಟ, ‘ಪ್ರಣಯರಾಜ’ ಖ್ಯಾತಿಯ ಶ್ರೀನಾಥ್‌, ಚಿತ್ರದ ಬಗ್ಗೆ ಸಾಕಷ್ಟು ಮೆಚ್ಚುಗೆಯ ಮಾತುಗಳನ್ನಾಡಿದರು. ‘ಗೀತಪ್ರಿಯಾ ಎಂಬ ಹೆಸರು ನನಗೆ ತುಂಬ ಪ್ರಿಯವಾದ ಹೆಸರು. ಹಿರಿಯ ನಿರ್ದೇಶಕ ಗೀತಪ್ರಿಯಾ ಮತ್ತು ನನ್ನ ಹೆಂಡತಿಯ ಹೆಸರು ಕೂಡ ಅದೇ ಆಗಿದೆ. ಇಷ್ಟು ವರ್ಷಗಳ ಕಾಲ ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡಿದ ಗೀತಪ್ರಿಯಾ ‘ತಾಯವ್ವ’ ಸಿನೆಮಾದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸುತ್ತಿರುವುದು ನಿಜಕ್ಕೂ ಖುಷಿಯ ವಿಷಯ. ಚಿತ್ರರಂಗದಲ್ಲಿ ಗೀತಪ್ರಿಯಾ ಅವರಿಗೆ ದೊಡ್ಡ ಯಶಸ್ಸು ಸಿಗಲಿ. ಇನ್ನು ‘ತಾಯವ್ವ’ ಎಂಬ ಹೆಸರೇ ಎಲ್ಲರಿಗೂ ಮನಮುಟ್ಟುವಂಥ ಹೆಸರು. ಈ ಸಿನೆಮಾದ ಮೂಲಕ ಗೀತಪ್ರಿಯಾ ಸೂಲಗಿತ್ತಿಯ ಕಾರ್ಯವನ್ನು ಜಗತ್ತಿಗೇ ತೋರಿಸಲು ಹೊರಟಿದ್ದಾರೆ. ಅವರಿಗೆ ಶುಭವಾಗಲಿ. ‘ತಾಯವ್ವ’ ಸಿನೆಮಾದ ಟ್ರೇಲರ್‌ ತುಂಬ ಚೆನ್ನಾಗಿದ್ದು, ಸಿನೆಮಾ ಕೂಡ ಅಷ್ಟೇ ಚೆನ್ನಾಗಿರಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

Related Posts

error: Content is protected !!