ಗುದ್ದಾಟ, ಮುದ್ದಾಟ, ಒದ್ದಾಟ ಎಲ್ಲವನ್ನೂ ಅಡಗಿಸಿಟ್ಟುಕೊಂಡ ‘ಜವಾನ್’

ಆ್ಯಕ್ಷನ್ ಪ್ರಧಾನ, ಮಿಕ್ಕೆಲ್ಲವೂ ನಿಧಾನ…
ಚಿತ್ರ: ಜವಾನ್
ರೇಟಿಂಗ್: ***
ನಿರ್ದೇಶನ: ಅಟ್ಲಿ
ನಿರ್ಮಾಣ: ರೆಡ್ ಚಿಲ್ಲೀಸ್ ಎಂಟರ್‌ಟೈನ್ಮೆೆಂಟ್ಸ್
ತಾರಾಗಣ: ಶಾರುಖ್ ಖಾನ್, ನಯನಾತಾರ, ದೀಪಿಕಾ ಪಡುಕೋಣೆ, ವಿಜಯ್ ಸೇತುಪತಿ, ಸಂಜಯ್ ದತ್, ಪ್ರಿಯಾಮಣಿ, ಸನ್ಯಾ ಮಲೊತ್ರಾ, ಲೆಹರ್ ಖಾನ್, ಸಂಗೀತಾ ಭಟ್ಟಾಚಾರ್ಯ ಮತ್ತಿತರರು.
ಬಾಲಿವುಡ್‌ನ ಕಿಂಗ್ ಖಾನ್ ಖ್ಯಾತಿಯ ನಟ ಶಾರುಖ್ ಖಾನ್ ಅಭಿನಯದ ಬಹುನಿರೀಕ್ಷಿತ ‘ಜವಾನ್’ ಸಿನಿಮಾ ಸೆಪ್ಟಂಬರ್ (ಸೆ. 7, 2023) ಬಿಡುಗಡೆಯಾಗಿದೆ. ಕಳೆದ ಕೆಲ ವರ್ಷಗಳಿಂದ ಬಾಲಿವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಂದ ಸೋಲುಂಡಿದ್ದ ನಟ ಶಾರುಖ್ ಖಾನ್, ಈ ವರ್ಷದ ಆರಂಭದಲ್ಲಿ ‘ಪಠಾಣ್’ ಸಿನಿಮಾದ ಮೂಲಕ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರು. ಅದಾದ ಸುಮಾರು 8 ತಿಂಗಳ ನಂತರ ಶಾರುಖ್ ಖಾನ್ ಅಭಿನಯದ ಮತ್ತೊಂದು ಸಿನಿಮಾ ‘ಜವಾನ್’ ಬಿಡುಗಡೆಯಾಗಿದೆ.
ಏನಿದು ‘ಜವಾನ್’ ಕಥೆ?
ಒಂದೇ ಸಾಲಿನಲ್ಲಿ ಹೇಳುವುದಾದರೆ, ‘ಜವಾನ್’ ಶತ್ರುಗಳ ವಿರುದ್ಧ ಹೋರಾಡುವ ತಂದೆ-ಮಗನ ನಡುವಿನ ಕಥೆಯನ್ನು ಹೊಂದಿರುವ ಸಿನಿಮಾ. ಶತ್ರುಗಳ ವಿರುದ್ದ ಹೋರಾಡುವ ವಿಕ್ರಮ್ ರಾಥೋಡ್ ಮತ್ತು ಆತನ ಮಗ ಆಜಾದ್ ಎಂಬ ಅಪ್ಪ- ಮಗನ ಕಥೆಯೇ ಸಿನಿಮಾ ಹೈಲೈಟ್. ಸಿನಿಮಾದಲ್ಲಿ ಅಪ್ಪ-ಮಗನ ಎರಡೂ ಪಾತ್ರಗಳನ್ನು ನಿರ್ವಹಿಸಿರುವ ಶಾರುಖ್ ಖಾನ್ ಡಬಲ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ವ್ಯವಸ್ಥೆಯಿಂದ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿರುವ ಆಜಾದ್ ಒಬ್ಬ ಜೈಲರ್. ಸಿಂಗಲ್ ಪೇರೆಂಟ್ ಆಗಿರುವ ಪೊಲೀಸ್ ಅಧಿಕಾರಿ ನಯನತಾರಾ ಆಜಾದ್ ನನ್ನು ಮದುವೆಯಾಗುತ್ತಾಳೆ. ಮತ್ತೊೊಂದೆಡೆ ವೆಪನ್ ಸಪ್ಲೈ ಮಾಡುವ ದೊಡ್ಡ ವ್ಯಾಾಪಾರಿಯಾಗಿ ವಿಜಯ್ ಸೇತುಪತಿ ಅಬ್ಬರಿಸುತ್ತಿರುತ್ತಾರೆ. ಇನ್ನೊಂದೆಡೆ ಪ್ರಿಯಾಮಣಿ, ಸನ್ಯಾ ಮಲೊತ್ರ, ಲೆಹರ್ ಖಾನ್, ಸಂಗೀತಾ ಭಟ್ಟಾಚಾರ್ಯ ಮತ್ತು ಇತರರು ಆಜಾದ್ ಆರ್ಮಿಯಲ್ಲಿ ಗುರುತಿಸಿಕೊಂಡು ಖೈದಿಗಳಾಗಿರುತ್ತಾರೆ. ಇವರೆಲ್ಲ ಜೈಲಿನಲ್ಲಿರಲು ಕಾರಣವೇನು? ಖಳನಾಯಕನಿಗೂ ಯೋಧ ವಿಕ್ರಮ್ ರಾಥೋಡ್‌ಗೂ ಇರುವ ಸಂಬಂಧವೇನು? ಆಜಾದ್ ಅನ್ಯಾಯದ ವಿರುದ್ಧ ಏಕೆ ಹೋರಾಡುತ್ತಾನೆ? ಎಂಬುದೇ ‘ಜವಾನ್’ ಸಿನಿಮಾದ ಒಟ್ಟು ಕಥಾಹಂದರ.
ಕಲಾವಿದರ ಅಭಿನಯ ಹೇಗಿದೆ?
ಮೊದಲೇ ಹೇಳಿರುವಂತೆ, ‘ಜವಾನ್’ ಸಿನಿಮಾದಲ್ಲಿ ನಾಯಕ ನಟ ಶಾರುಖ್ ಡಬಲ್ ರೋಲ್ನಲ್ಲಿ ಕಾಣಿಸಿಕೊಂಡಿದ್ದಾಾರೆ. ತಂದೆ ಮತ್ತು ಮಗನಾಗಿ ಎರಡೂ ಪಾತ್ರಗಳನ್ನೂ ಅಚ್ಚುಕಟ್ಟಾಗಿ ನಿಭಾಯಿಸಿದ್ದಾಾರೆ. ಆ್ಯಕ್ಷನ್ ಮತ್ತು ಎಮೋಷನ್ ಎರಡರಲ್ಲೂ ಶಾರುಖ್ ಗಮನ ಸೆಳೆಯುತ್ತಾರೆ. ಮೊದಲ ಬಾರಿಗೆ ನಟಿ ನಯನಾತಾರಾ ಪೊಲೀಸ್ ಆಫೀಸರ್ ಆಗಿ ಲೇಡಿ ಬಾಂಡ್ ಥರದ ಪಾತ್ರದಲ್ಲಿ ಮಿಂಚಿದ್ದಾಾರೆ. ವಿಕ್ರಮ್ ರಾಥೋಡ್ ಹೆಂಡತಿಯಾಗಿ, ಆಜಾದ್ ತಾಯಿಯಾಗಿ ಐಶ್ವರ್ಯಾ ಪಾತ್ರದಲ್ಲಿ ದೀಪಿಕಾ ಪಡುಕೋಣೆ ಕಾಡುವಂಥ ಅಭಿನಯ ನೀಡಿದ್ದಾಾರೆ. ಖಳನಟನಾಗಿ ಮೊದಲಾರ್ಧದಲ್ಲಿ ಕಡಿಮೆ ಕಾಣಿಸಿಕೊಳ್ಳುವ ವಿಜಯ್ ಸೇತುಪತಿ, ದ್ವಿತಿಯಾರ್ಧದಲ್ಲಿ ಇಡೀ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ಕೆಲವೇ ನಿಮಿಷಗಳು ಸಿನಿಮಾದಲ್ಲಿ ಬರುವ ಸಂಜಯ್ ದತ್ ಪಾತ್ರಕ್ಕೆೆ ಅಂತಹ ತೂಕವಿಲ್ಲ. ಒಟ್ಟಾರೆ ಬಹುತೇಕ ಕಲಾವಿದರು ತಮ್ಮ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ ಎನ್ನಬಹುದು.
‘ಜವಾನ್’ ಸಿನಿಮಾದ ಪ್ಲಸ್ ಏನು?
ಬೃಹತ್ ಸ್ಟಾರ್ಸ್ ಕಲಾವಿದರು ಇರುವುದೇ ಸಿನಿಮಾದ ಮೊದಲ ಪ್ಲಸ್ ಪಾಯಿಂಟ್. ಭರ್ಜರಿ ಆ್ಯಕ್ಷನ್ ಸೀನ್‌ಗಳು, ಅದ್ಧೂರಿ ಮೇಕಿಂಗ್, ಗುನುಗುಡುವಂತಿರುವ ಎರಡು-ಮೂರು ಹಾಡುಗಳು, ಎಮೋಶನ್ ಸೀನ್‌ಗಳು ಸಿನಿಮಾದ ದೊಡ್ಡ ಪ್ಲಸ್ ಪಾಯಿಂಟ್. ಆ್ಯಕ್ಷನ್ ಜೊತೆಗೆ ಪ್ರೇಕ್ಷಕರ ಕಣ್ಣಲ್ಲಿ ನೀರು ತರಿಸುವ ದೃಶ್ಯಗಳಿಗೂ ಅಲ್ಲಲ್ಲಿ ಸ್ಥಾನ ಸಿಕ್ಕಿದೆ. ಮ್ಯೂಸಿಕ್, ಆ್ಯಕ್ಷನ್ ಮತ್ತು ಎಮೋಷನಲ್ ಸೀನ್‌ಗಳನ್ನು ಹದವಾಗಿ ಸಿನಿಮಾದಲ್ಲಿ ಬಳಸಲಾಗಿದೆ. ಹೀಗಾಗಿಯೇ ಸುಮಾರು ಮೂರು ಗಂಟೆಯ ಸಿನಿಮಾವಾದರೂ ಎಲ್ಲೂ ಕೂಡ ತುಂಬ ಬೋರ್ ಎನಿಸುವುದಿಲ್ಲ.
‘ಜವಾನ್’ ಸಿನಿಮಾದ ಮೈನಸ್‌ಗಳೇನು?
ಈಗಾಗಲೇ ಹತ್ತಾಾರು ರೂಪದಲ್ಲಿ ಭಾರತದ ಬೇರೆ ಬೇರೆ ಭಾಷೆಗಳಲ್ಲಿ ತೆರೆಗೆ ಬಂದಿರುವ ರಿವೇಂಜ್ ಕಥೆಯನ್ನೇ ಆಯ್ಕೆ ಮಾಡಿಕೊಂಡಿರುವುದು ಸಿನಿಮಾದ ಮೊದಲ ಮೈನಸ್. ಇಡೀ ಸಿನಿಮಾದ ಆರಂಭದಿಂದ ಅಂತ್ಯದವರೆಗೂ ಸಿನಿಮಾದ ಕಥೆ ಹೊಸತು ಎನಿಸುವುದಿಲ್ಲ. ಕಥೆಯ ನಿರೂಪಣೆಯಲ್ಲಿ ನಿರ್ದೇಶಕರು ಅನೇಕ ಕಡೆ ಲಾಜಿಕ್ ಮಿಸ್ ಮಾಡಿರುವುದು ಕಾಣುತ್ತದೆ. ಹೀರೋ ಮತ್ತವನ ತಂಡ ತಾವು ಹೋರಾಡುತ್ತಿರುವುದು ಜನರ ಸಮಸ್ಯೆೆಗಳ ವಿರುದ್ಧವೋ ಅಥವಾ ಒಬ್ಬ ವ್ಯಕ್ತಿಯ ವಿರುದ್ಧವೋ ಎಂಬುದು ಕೊನೆವರೆಗೂ ಪ್ರೇಕ್ಷಕರಿಗೆ ಅರ್ಥವಾಗುವುದಿಲ್ಲ. ಇದರ ಜೊತೆ ತಮಿಳು, ತೆಲುಗಿನ ಹಲವು ಸಿನಿಮಾಗಳ ಛಾಯೆ ಅನೇಕ ದೃಶ್ಯಗಳಲ್ಲಿ ಅಲ್ಲಲ್ಲಿ ಕಾಣುತ್ತದೆ. ಜನರ ಸಮಸ್ಯೆೆ ಪರಿಹಾರಕ್ಕೆೆ ಇವಿಎಂ ಕಳ್ಳತನ ಮಾಡುವ ದೃಶ್ಯಗಳು ಅತ್ಯಂತ ಬಾಲಿಶ ಎನಿಸುತ್ತದೆ.
ಕೊನೆಯಲ್ಲಿ ಏನು ಹೇಳಬಹುದು…?
ತೀರಾ ಲಾಜಿಕ್‌ಗಳನ್ನು ಹುಡುಕದೆ ‘ಜವಾನ್’ ನೋಡಲು ಹೋದರೆ ಒಂದಷ್ಟು ಮನರಂಜನೆ ಖಚಿತ. ಅದನ್ನು ಹೊರತುಪಡಿಸಿದರೆ, ಸಿನಿಮಾದ ಪ್ರತಿಯೊಂದು ಸನ್ನಿವೇಶಗಳನ್ನೂ ಸೂಕ್ಷ್ಮವಾಗಿ ಗಮನಿಸಿದರೆ ನಿಮಗೆ ಚಿತ್ರಕಥೆ, ನಿರೂಪಣೆ ಅನೇಕ ಕಡೆ ಹಳಿ ತಪ್ಪದಂತೆ ಕಾಣುತ್ತದೆ. ಅನೇಕ ದೃಶ್ಯಗಳು, ಹಿನ್ನೆೆಲೆ, ಪಾತ್ರಗಳನ್ನು ಕಟ್ಟಿಕೊಟ್ಟಿರುವ ರೀತಿ ಎಲ್ಲವೂ ಪ್ರೇಕ್ಷಕರಿಗೆ ಸುಲಭವಾಗಿ ಅರ್ಥವಾಗುವಂತಿಲ್ಲ ಎಂಬುದು ಬಹುಬೇಗನೇ ಅರ್ಥವಾಗಿ ಬಿಡುತ್ತದೆ. ಶಾರುಖ್ ಖಾನ್ ಸಿನಿಮಾಗಳನ್ನು ಎದೆಗೆ ಅಪ್ಪಿಕೊಂಡು ನೋಡುವ ಕಟ್ಟರ್ ಅಭಿಮಾನಿಗಳಿಗೆ, ಆ್ಯಕ್ಷನ್ ಪ್ರಿಯರಿಗೆ ‘ಜವಾನ್’ ನೋಡಬಹುದಾದ ಸಿನಿಮಾ ಎನ್ನಬಹುದು. ಅದನ್ನು ಬಿಟ್ಟು ಮೂರುಗಂಟೆ ಸಮಯ ಮೀಸಲಿಟ್ಟು ನೋಡಲೇಬೇಕಾದ ಸಿನಿಮಾ ಇದು ಅಂತೇನೂ ಪ್ರತ್ಯೇಕವಾಗಿ ಹೇಳುವಂತಿಲ್ಲ!
– ತೀರ್ಥಂಕರ