‘ಸೀಟ್ ಎಡ್ಜ್’ನಲ್ಲಿ ಹಾರರ್-ಥ್ರಿಲ್ಲಿಂಗ್ ಅನುಭವ!
ಹಾರರ್-ಥ್ರಿಲ್ಲರ್ ಕಥಾಹಂದರದ ‘ಸೀಟ್ ಎಡ್ಜ್’
ಘೋಸ್ಟ್ ಸಿಟಿಯೊಳಗೆ ವ್ಲಾಗರ್ ಹುಡುಗನ ನಿಗೂಢ ಹಂಟಿಂಗ್!
ನಗಿಸಿ, ಹೆದರಿಸಿ ‘ಸೀಟ್ ಎಡ್ಜ್’ನಲ್ಲಿ ಕೂರಿಸುವ ಪ್ರಯತ್ನ
ಚಿತ್ರ: ಸೀಟ್ ಎಡ್ಜ್
ನಿರ್ದೇಶನ: ಚೇತನ್ ಶೆಟ್ಟಿ
ನಿರ್ಮಾಣ: ಗಿರಿಧರ ಟಿ. ವಸಂತಪುರ
ತಾರಾಗಣ: ಸಿದ್ಧು ಮೂಲಿಮನಿ, ರವೀಕ್ಷಾ ಶೆಟ್ಟಿ, ರಾಘು ರಾಮನಕೊಪ್ಪ, ಗಿರೀಶ್ ಶಿವಣ್ಣ, ಮಿಮಿಕ್ರಿ ಗೋಪಿ, ಲಕ್ಷ್ಮೀ ಸಿದ್ದಯ್ಯ ಮತ್ತಿತರರು
ರೇಟಿಂಗ್: 4/5 
ಸ್ಮಾರ್ಟ್ ಪೋನ್‌ಗಳು ಬಂದ ಮೇಲಂತೂ, ಎಲ್ಲಿ ನೋಡಿದರೂ, ಸೋಶಿಯಲ್ ಮೀಡಿಯಾಗಳದ್ದೇ ಕಾರುಬಾರು. ಪ್ರತಿಯೊಬ್ಬ ಸೋಶಿಯಲ್ ಮೀಡಿಯಾ ಬಳಕೆದಾರರದ್ದೂ, ಹತ್ತಾರು ಸೋಶಿಯಲ್ ಮೀಡಿಯಾ ಅಕೌಂಟ್‌ಗಳು, ದಿನಕ್ಕೆ ಹತ್ತಾರು ಪೋಸ್ಟ್‌ಗಳು, ನೋಡುಗರನ್ನು ಸೆಳೆಯಲು ನೂರಾರು ಕಸರತ್ತುಗಳು… ಅಬ್ಬಬ್ಬಾ..! ಒಂದೆರಡಲ್ಲ. ಸೋಶಿಯಲ್ ಮೀಡಿಯಾ ಖಾತೆಗಳ ಬಗ್ಗೆ, ವ್ಲಾಗರ್ ಗಳ ಬಗ್ಗೆ ಹೇಳುತ್ತ ಹೋದರೆ, ತಕ್ಷಣಕ್ಕೆ ಮುಗಿಯುವುದಿಲ್ಲ. ಇಂಥದ್ದೇ ಸೋಶಿಯಲ್ ಮೀಡಿಯಾ ಜನರ ಕುರಿತಾಗಿಯೇ ತೆರೆಗೆ ಬಂದಿರುವ ಚಿತ್ರ ‘ಸೀಟ್ ಎಡ್ಜ್’. ಇಂದಿನ ಸೋಶಿಯಲ್ ಮೀಡಿಯಾಗಳ ಚಟುವಟಿಕೆಗಳು ಹೇಗಿರುತ್ತದೆ. ವ್ಲಾಗರ್ಸ್ ತಮ್ಮ ಖಾತೆಯನ್ನು ಜನಪ್ರಿಯವಾಗಿಸಲು ಏನೆಲ್ಲಾ ಮಾಡುತ್ತಾರೆ ಎಂಬುದರ ಸುತ್ತವೇ ಈ ಚಿತ್ರ ಸಾಗುತ್ತದೆ.
ಏನಿದು ‘ಸೀಟ್ ಎಡ್ಜ್’ ಕಥಾನಕ..?
ಆತ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯನಾಗಬೇಕೆಂದು ಕನಸನ್ನು ಇಟ್ಟುಕೊಂಡಿರುವ ಹುಡುಗ ಸಿದ್ದು. ಎಲ್ಲರೂ ಓದಿ ಕೆಲಸ ಮಾಡುತ್ತಿದ್ದರೆ, ಈ ಹುಡುಗ ಮಾತ್ರ ಮೊಬೈಲ್ ಪೋನ್, ಗ್ಯಾಡ್ಜೆಟ್ ಇಟ್ಟುಕೊಂಡು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ವ್ಲಾಗರ್ ಆಗಲು ಹಂಬಲಿಸುತ್ತಿರುತ್ತಾನೆ. ಆದರೆ ಸಿದ್ದು ಮಾಡುವ ವಿಡಿಯೋಗಳೆಲ್ಲವೂ, ಅವನಿಗೆ ಜನಪ್ರಿಯತೆ ತಂದುಕೊಡುವ ಬದಲು ಟ್ರೋಲ್ ಗೆ ಆಹಾರವಾಗುತ್ತಿರುತ್ತದೆ. ಹೀಗಿರುವಾಗಲೇ, ತನ್ನನ್ನು ಆಡಿರೊಳ್ಳುತ್ತಿರುವವರ ಮುಂದೆ, ತಾನು ಏನು? ಎಂದು ಜಗತ್ತಿಗೆ ತೋರಿಸಲು ಹೊರಡುವ ಸಿದ್ದು ಘೋಸ್ಟ್ ಹಂಟಿಂಗ್ ಎಂಬ ಕಾರ್ಯಾಚರಣೆಗೆ ಕೈ ಹಾಕುತ್ತಾನೆ. ಇಲ್ಲಿಯವರೆಗೆ ಹೋದವರು ಯಾರೂ, ವಾಪಾಸು ಬಾರದ ಘೋಸ್ಟ್ ಸಿಟಿ ಗೆ ಹೊರಡುವ ಸಿದ್ದು, ಅಲ್ಲಿಂದ ಮರಳು ಬರುತ್ತಾನಾ..? ಇಲ್ಲವಾ ..? ಎಂಬುದೇ ‘ಸೀಟ್ ಎಡ್ಜ್’ ಚಿತ್ರದ ಕಥಾಹಂದರ. 
ಆರಂಭದಲ್ಲಿಯೇ ‘ಸೀಟ್ ಎಡ್ಜ್’ ಚಿತ್ರದ ಪೋಸ್ಟರ್, ಟೀಸರ್, ಟ್ರೇಲರ್ ನಲ್ಲಿ ತೋರಿಸಿರುವಂತೆ, ಇದೊಂದು ಹಾರರ್-ಥ್ರಿಲ್ಲರ್ ಕಥಾಹಂದರದ ಚಿತ್ರ. ಇಂದಿನ ಸೋಶಿಯಲ್ ಮೀಡಿಯಾ ಜಮಾನದ ಹುಡುಗರ ಮನಸ್ಥಿತಿ, ಬಹುಬೇಗ ಜನಪ್ರಿಯತೆ ಪಡೆದುಕೊಳ್ಳಬೇಕೆಂಬ ಹಪಾಹಪಿ, ಪ್ರಸಿದ್ಧಿ ಪಡೆದುಕೊಳ್ಳಲು ತಂದುಕೊಳ್ಳುತ್ತಿರುವ ಅಪಾಯಗಳು, ಇದೆಲ್ಲವನ್ನೂ ‘ಸೀಟ್ ಎಡ್ಜ್’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ತಂದಿದ್ದಾರೆ ಯುವ ನಿರ್ದೇಶಕ ಚೇತನ್ ಶೆಟ್ಟಿ.
ಇನ್ನು ಹಾರರ್-ಥ್ರಿಲ್ಲರ್ ಅಂಶಗಳು ‘ಸೀಟ್ ಎಡ್ಜ್’ ಚಿತ್ರದ ಪ್ರದಾನ ಅಂಶಗಳಾದರೂ, ಅದರೊಂದಿಗೆ ಒಂದು ಲವ್ ಸ್ಟೋರಿ, ಅಲ್ಲಲ್ಲಿ ಕಚಗುಳಿಯಿಡುವ ಕಾಮಿಡಿ, ಮೇಲೋಡಿ ಸಾಂಗ್… ಹೀಗೆ ಒಂದಷ್ಟು ಮನರಂಜನಾತ್ಮಕ ಅಂಶಗಳನ್ನು ಸೇರಿಸಿ, ಮಾಸ್ ಶೈಲಿಯಲ್ಲಿ ‘ಸೀಟ್ ಎಡ್ಜ್’ ಚಿತ್ರವನ್ನು ತೆರೆಮೇಲೆ ತರುವ ಪ್ರಯತ್ನ ಮಾಡಿದೆ ಚಿತ್ರತಂಡ. ಮೊದಲಾರ್ಧ ಕಾಮಿಡಿಯಾಗಿ ಸಾಗುವ ಚಿತ್ರ, ದ್ವಿತೀಯಾರ್ಧದಲ್ಲಿ ತಣ್ಣಗೆ ಕೂತವರನ್ನು ಬೆಚ್ಚಿ ಬೀಳಿಸುತ್ತದೆ. 
ಕಲಾವಿದರ ಅಚ್ಚುಕಟ್ಟು ಅಭಿನಯ…
ಇನ್ನು ‘ಸೀಟ್ ಎಡ್ಜ್’ ಚಿತ್ರದಲ್ಲಿ ನಾಯಕ ನಟ ಸಿದ್ದು ಮೂಲಿಮನಿ ವ್ಲಾಗರ್ ಹುಡುಗನಾಗಿ, ನಟಿ ರವೀಕ್ಷಾ ಶೆಟ್ಟಿ ಯೋಗ ಟ್ರೈನಿಯಾಗಿ ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರ ಕೆಮಿಸ್ಟ್ರಿ ತೆರೆಮೇಲೆ ವರ್ಕೌಟ್ ಆಗಿದೆ. ಉಳಿದಂತೆ ರಾಘು ರಾಮನಕೊಪ್ಪ ನಾಯಕನ ಸ್ನೇಹಿತನಾಗಿ, ಗಿರೀಶ್ ಶಿವಣ್ಣ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಬಹುತೇಕ ಎಲ್ಲಾ ಕಲಾವಿದರು ತಮಗೆ ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ಬಳಸಿಕೊಂಡಿದ್ದಾರೆ.
ತಾಂತ್ರಿಕವಾಗಿ ‘ಸೀಟ್ ಎಡ್ಜ್’ ಗುಣಮಟ್ಟದಿಂದ ಕೂಡಿದೆ. ಚಿತ್ರದ ಛಾಯಾಗ್ರಹಣ ‘ಸೀಟ್ ಎಡ್ಜ್’ ದೃಶ್ಯಗಳನ್ನು ಕಣ್ಣಿಗೆ ಕಟ್ಟುವಂತೆ ಮಾಡುತ್ತದೆ. ಚಿತ್ರದ ಸಂಕಲನ ಕಾರ್ಯ ಕೊಂಚ ಮೊನಚಾಗಿದ್ದರೆ, ‘ಸೀಟ್ ಎಡ್ಜ್’ ಓಟಕ್ಕೆ ಇನ್ನಷ್ಟು ವೇಗ ಸಿಕ್ಕಿರುತ್ತಿತ್ತು. ಉಳಿದಂತೆ ಚಿತ್ರದ ಒಂದೆರಡು ಹಾಡುಗಳು ಗುನುಗುಡುವಂತಿದ್ದು, ಹಿನ್ನೆಲೆ ಸಂಗೀತ ಕೂಡ ಚಿತ್ರಕ್ಕೆ ಪೂರಕವಾಗಿದೆ. ಆಕಾಶ್ ಪರ್ವ ಸಂಗೀತ ಸಂಯೋಜನೆಯ ಒಂದೆರಡು ಹಾಡುಗಳು ಗುನುಗುವಂತಿದೆ.
ಒಟ್ಟಾರೆ, ಇಂದಿನ ಸಮಾಜದಲ್ಲಿ ವ್ಲಾಗಿಂಗ್ ಹೆಸರಿನಲ್ಲಿ ನಡೆಯುತ್ತಿರುವ ಸಾಹಸ, ಹುಚ್ಚಾಟಗಳ ಸುತ್ತವೇ ‘ಸೀಟ್ ಎಡ್ಜ್’ ಚಿತ್ರದ ಇಡೀ ಕಥೆ ಸಾಗುವುದರಿಂದ, ಚಿತ್ರ ಇಂದಿನ ತಲೆಮಾರಿನ ಪ್ರೇಕ್ಷಕರಿಗೆ ಕನೆಕ್ಟ್ ಆಗುವಂತಿದೆ. ಇನ್ನು ವಾರಾಂತ್ಯದಲ್ಲಿ ಹಾರರ್-ಥ್ರಿಲ್ಲರ್ ಸಿನಿಮಾಗಳನ್ನು ಇಷ್ಟಪಡುವ ಪ್ರೇಕ್ಷಕರಿಗೆ ‘ಸೀಟ್ ಎಡ್ಜ್’ನಲ್ಲಿ ಒಂದಷ್ಟು ಮನರಂಜನೆ ಸಿಗಬಹುದು ಎನ್ನಲು ಅಡ್ಡಿಯಿಲ್ಲ. ಹೊಸಬರ ಸಿನಿಮಾಗಳನ್ನು ನೋಡಿ ಬೆನ್ನುತಟ್ಟಬೇಕು ಎನ್ನುವವರು ಒಮ್ಮೆ ಥಿಯೇಟರಿನಲ್ಲಿ ‘ಸೀಟ್ ಎಡ್ಜ್’ನಲ್ಲಿ ಕೂತು ಬರಬಹುದು.
- ದೀಪಾ ಕೆ. ಸುಧನ್















