Eye Plex

ಕಚುಗುಳಿಯಿಡುತ್ತ ಆವರಿಸುವ ‘ಅರಸಯ್ಯನ ಪ್ರೇಮ ಪ್ರಸಂಗ’

ಪ್ರೀತಿ-ಪ್ರೇಮದ ನಡುವೆ ‘ಅರಸಯ್ಯನ’ ಸಂಕಟ

‘ಅರಸಯ್ಯನ ಪ್ರೇಮ ಪ್ರಸಂಗ’ ಎಂಬ ಗ್ರಾಮೀಣ ಸೊಗಡಿನ ನವಿರಾದ ಪ್ರೇಮ್‌ ಕಹಾನಿ

‘ಅರಸಯ್ಯ’ ಪ್ರೇಮ-ಪುರಾಣ ಲವ್‌ ಕಂ ಕಾಮಿಡಿ ಹೂರಣ 

ಚಿತ್ರ: ‘ಅರಸಯ್ಯನ ಪ್ರೇಮ ಪ್ರಸಂಗ’ ನಿರ್ಮಾಣ: ಮೇಘಶ್ರೀ ರಾಜೇಶ್‍          ನಿರ್ದೇಶನ: ಜೆ.ವಿ.ಆರ್. ದೀಪು,     ತಾರಾಗಣ: ಮಹಾಂತೇಶ್‍ ಹಿರೇಮಠ್‍, ರಶ್ಮಿತಾ ಗೌಡ, ವಿಜಯ್ ಚೆಂಡೂರ್, ರಘು ರಾಮನಕೊಪ್ಪ, ಪಿ. ಡಿ. ಸತೀಶ್‌, ಹನುಮಕ್ಕ ಮತ್ತಿತರರು…                                ಬಿಡುಗಡೆ: 19. ಸೆಪ್ಟೆಂಬರ್‌ 2025,    ರೇಟಿಂಗ್‌: 3.5/5                                            

ಹಳ್ಳಿಯಲ್ಲಿರಲಿ ಅಥವಾ ಮಹಾನಗರದಲ್ಲಿರಲಿ, ಎಲ್ಲಿಯೇ ಇದ್ದರೂ ಮದುವೆಯಾಗಲು ತನಗೊಬ್ಬಳು ಸುಂದರ ಹುಡುಗಿ ಸಿಗಬೇಕು ಎಂದು ಬಯಸುವುದು ಬಹುತೇಕ ಹುಡುಗರ ವಯೋಸಹಜ, ಸ್ವಾಭಾವಿಕ ‘ಹಂಬಲ’ ಈ ‘ಹಂಬಲ’ವನ್ನೆ ಒಂದು ಹಾಸ್ಯಭರಿತ ಕಥೆಯ ಬೆಂಬಲದೊಂದಿಗೆ ತೆರೆಗೆ ತಂದಿರುವ ಚಿತ್ರ ‘ಅರಸಯ್ಯನ ಪ್ರೇಮ ಪ್ರಸಂಗ’. ಆರಂಭದಿಂದಲೇ ತನ್ನ ಟೈಟಲ್‌, ಪೋಸ್ಟರ್‌, ಹಾಡುಗಳು ಮತ್ತು ಟ್ರೇಲರ್‌ ಮೂಲಕ ಒಂದಷ್ಟು ಸಿನಿಪ್ರಿಯರ ಗಮನ ಸೆಳೆದಿದ್ದ ‘ಅರಸಯ್ಯನ ಪ್ರೇಮ ಪ್ರಸಂಗ’ ಚಿತ್ರ ಈ ವಾರ (19 ಶುಕ್ರವಾರ. ಸೆ 2025) ತೆರೆಗೆ ಬಂದಿದೆ.

ಏನಿದು ‘ಅರಸಯ್ಯನ ಪ್ರೇಮ ಪ್ರಸಂಗ’..? 

ಸಿನೆಮಾದ ಹೆಸರೇ ಹೇಳುವಂತೆ, ‘ಅರಸಯ್ಯನ ಪ್ರೇಮ ಪ್ರಸಂಗ’ ಒಂದು ಅಪ್ಪಟ ಹಾಸ್ಯಭರಿತ ಪ್ರೇಮಕಥಾ ಹಂದರದ ಸಿನೆಮಾ. ಚಿತ್ರದ ಮುಖ್ಯ ಪಾತ್ರಧಾರಿ ‘ಅರಸಯ್ಯ’ನ ಮದುವೆಗಾಗಿ ಹುಡುಗಿಯ ಹುಡುಕಾಟ ಹೇಗಿರುತ್ತದೆ..? ಕೊನೆಗೂ ‘ಅರಸಯ್ಯ’ನ ಮನಮೆಚ್ಚುವ ‘ಅರಸಿ’ ಸಿಗುತ್ತಾಳಾ..? ಇಲ್ಲವಾ..? ಎಂಬುದೇ ‘ಅರಸಯ್ಯನ ಪ್ರೇಮ ಪ್ರಸಂಗ’ ಚಿತ್ರದ ಕಥೆಯ ಒಂದು ಎಳೆ.

ಚಿತ್ರದ ನಾಯಕ ‘ಅರಸಯ್ಯ’ನಿಗೆ ತಾನು ಲಗ್ನವಾಗುವ ಹುಡುಗಿ ತೆಳ್ಳಗೆ, ಬೆಳ್ಳಗೆ ಇರಬೇಕು ಎಂಬ ಬಯಕೆ. ಅಂತಹ ಹುಡುಗಿಗಾಗಿ ಹುಡುಕುತ್ತಲೇ ಇರುವ ‘ಅರಸಯ್ಯ’ನ ಜೀವನಕ್ಕೆ ಅಂಥದ್ದೇ ತೆಳ್ಳಗೆ-ಬೆಳ್ಳಗಿನ ಹುಡುಗಿಯೊಬ್ಬಳು ಪ್ರವೇಶ ಪಡೆಯುತ್ತಾಳೆ. ಅಲ್ಲಿಂದ ಶುರುವಾಗುವ ‘ಅರಸಯ್ಯನ ಪ್ರೇಮ ಪ್ರಸಂಗ’ ಹೇಗೆಲ್ಲ ತಿರುವುಗಳನ್ನು ಪಡೆದುಕೊಂಡು ಮುಂದೆ ಸಾಗುತ್ತದೆ ಎಂಬುದು ‘ಅರಸಯ್ಯನ ಪ್ರೇಮ ಪ್ರಸಂಗ’ದ ಸಂಪೂರ್ಣ ಕಥಾನಕ. ಮೊದಲ  ನೋಟದಲ್ಲೇ ಮನಗೆದ್ದ ಸುಕುಮಾರಿಯನ್ನು ಒಲಿಸಿಕೊಳ್ಳಲು ‘ಅರಸಯ್ಯ’ ಎಷ್ಟೆಲ್ಲಾ ಪರದಾಡುತ್ತಾನೆ ಎನ್ನುವುದನ್ನು ನೀವು ತೆರೆಮೇಲೇ ನೋಡಬೇಕು.

ಹಾಸ್ಯದ ಜೊತೆಗೊಂದು ಪ್ರೇಮಕಥೆ

ಆರಂಭದಲ್ಲಿಯೇ ಹೇಳಿದಂತೆ ‘ಅರಸಯ್ಯನ ಪ್ರೇಮ ಪ್ರಸಂಗ’ ಒಂದು ಅಪ್ಪಟ ಹಳ್ಳಿ ಸೊಗಡಿನ ಲವ್‌ ಕಂ ಕಾಮಿಡಿ ಶೈಲಿಯ ಚಿತ್ರ. ಅರಸಯ್ಯ ಎಂಬ ಕಿವುಡ ಮತ್ತು ಅಂಚೆ ಇಲಾಖೆಯಲ್ಲಿ ಕೆಲಸ ಮಾಡುವ ಯುವತಿಯ ಸುತ್ತ ಚಿತ್ರ ಸಾಗುತ್ತದೆ. ಗ್ರಾಮೀಣ ಭಾಗದಲ್ಲಿ ನಡೆಯುವ ಒಂದಷ್ಟು ಘಟನೆಗಳನ್ನು ಮನರಂಜನಾತ್ಮಕವಾಗಿ ಹೇಳುವ ಪ್ರಯತ್ನ ಚಿತ್ರದಲ್ಲಾಗಿದೆ. ಗ್ರಾಮೀಣ ಬದುಕಿನ ಜೊತೆಗೆ ಪ್ರೀತಿ, ಸ್ನೇಹ, ಸಂಬಂಧ, ನಂಬಿಕೆಯ ಜೊತೆಗೆ ಗೊಂದಲ ಮತ್ತು ತಪ್ಪುತಿಳವಳಿಯಿಂದ ‘ಅರಸಯ್ಯ’ನ ಜೀವನದಲ್ಲಿ ಏನೆಲ್ಲಾ ಆಗುತ್ತದೆ ಎಂಬುದನ್ನು ಹಾಸ್ಯಭರಿತವಾಗಿ ಚಿತ್ರದಲ್ಲಿ ತೆರೆಮೇಲೆ ಕಟ್ಟಿಕೊಡಲಾಗಿದೆ.

ಕನ್ನಡ ಚಿತ್ರರಂಗದಲ್ಲಿ ಈ ಥರದ ಕಥಾಹಂದರ ತೀರಾ ಹೊಸದೇನಲ್ಲದಿದ್ದರೂ, ನಿರ್ದೇಶಕ ದೀಪು ಒಂದು ಸರಳ ಕಥೆಯನ್ನು ಹಾಸ್ಯಭರಿತವಾಗಿ, ವಿಭಿನ್ನವಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಕಥೆಯನ್ನು ಎಲ್ಲಿಯೂ ಅತಿಯಾಗಿ ಎಳೆಯದೆ, ಎರಡು ಗಂಟೆಗಳಲ್ಲಿ ಕಚಗುಳಿಯಿಡುವ ನಿರೂಪಣೆಯ ಜೊತೆ ಹೇಳಿ ಮುಗಿಸಿ ಸೈ ಎನಿಸಿಕೊಂಡಿದ್ದಾರೆ. ಸಾವಿನೊಂದಿಗೆ ಶುರುವಾಗಿ, ಸಾವಿನೊಂದಿಗೆ ಮುಕ್ತಾಯವಾಗುವ ಚಿತ್ರದ ಕಥೆಯಲ್ಲಿ ಒಂದಷ್ಟು ತಿರುವುಗಳು, ವಿಭಿನ್ನ ಪಾತ್ರಗಳು, ಹಾಸ್ಯಮಯ ಸನ್ನಿವೇಶಗಳು ನೋಡುಗರ ಮುಖದಲ್ಲಿ ನಗು ಮೂಡಿಸುತ್ತ ಕ್ಲೈಮ್ಯಾಕ್ಸ್‌ವರೆಗೂ ಕರೆದುಕೊಂಡು ಹೋಗುತ್ತದೆ.

ಕೊನೆಯ ಮಾತು…

ಇನ್ನು ‘ಅರಸಯ್ಯ’ ಪಾತ್ರದ ಸುತ್ತವೇ ಇಡೀ ಚಿತ್ರದ ಕಥೆ ಸುತ್ತುತ್ತದೆ. ಚಿತ್ರದಲ್ಲಿ ‘ಅರಸಯ್ಯ’ನ ಪಾತ್ರ ಮಾಡಿರುವ ಮಹಾಂತೇಶ್‍ ಇಡೀ ಸಿನೆಮಾವನ್ನು ಆವರಿಸಿಕೊಂಡಿದ್ದಾರೆ. ‘ಅರಸಯ್ಯ’ನಾಗಿ ಮಹಾಂತೇಶ್‌ ಅವರ ಮಾತಿನ ಶೈಲಿ, ಹಾವ-ಭಾವ ಎಲ್ಲವೂ ಪಾತ್ರಕ್ಕೆ ಹೇಳಿ ಮಾಡಿಸಿದಂತಿದೆ. ನಾಯಕಿ ರಶ್ಮಿತಾ ಗೌಡ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಉಳಿದಂತೆ ರಘು ರಾಮನಕೊಪ್ಪ, ಪಿ. ಡಿ. ಸತೀಶ್‍, ಹನುಮಕ್ಕ, ಜಹಾಂಗೀರ್, ಚಿಲ್ಲರ್ ಮಂಜು ಸೇರಿದಂತೆ ಬಹುತೇಕ ಕಲಾವಿದರು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಪ್ರವೀಣ್‍ ಮತ್ತು ಪ್ರದೀಪ್‍ ಸಂಗೀತ ಚಿತ್ರಕ್ಕೆ ಪೂರಕವಾಗಿದ್ದು, ಗುರುಪ್ರಸಾದ್‍ ನಾರ್ನಾಡ್‍ ಛಾಯಾಗ್ರಹಣದಲ್ಲಿ ಹಳ್ಳಿಯ ಸೊಗಡು ಅಂದವಾಗಿ ಕಾಣುತ್ತದೆ. ವಾರಾಂತ್ಯದಲ್ಲಿ ಒಂದೊಳ್ಳೆ ಲವ್‌ ಕಂ ಕಾಮಿಡಿ ಸಿನೆಮಾ ನೋಡಬೇಕೆನ್ನುವವರು ಖಂಡಿತವಾಗಿಯೂ ಒಮ್ಮೆ ‘ಅರಸಯ್ಯನ ಪ್ರೇಮ ಪ್ರಸಂಗ’ವನ್ನು ನೋಡಿ ಬರಬಹುದು. ಒಟ್ಟಾರೆ ಅತಿಯಾದ ನಿರೀಕ್ಷೆಗಳನ್ನು ಇಟ್ಟುಕೊಳ್ಳದೆ ಹೋದರೆ, ‘ಅರಸಯ್ಯನ ಪ್ರೇಮ ಪ್ರಸಂಗ’ ಒಂದಷ್ಟು ಮನರಂಜನೆ ಕೋಡೋದು ಗ್ಯಾರೆಂಟಿ ಎನ್ನಬಹುದು.

  • ಜಿ. ಎಸ್‌. ಕಾರ್ತಿಕ ಸುಧನ್‌,

G S Karthik Sudhan

Karthik Sudhan is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Karthik Sudhan has worked in reputed online publications of Kannada.

Related Posts

error: Content is protected !!