Street Beat

ತೆರೆಮೇಲೆ ‘ಕುಂಟೆಬಿಲ್ಲೆ’ ಆಟಕ್ಕೆ ತಯಾರಿ…

ಹೊಸಬರ ‘ಕುಂಟೆಬಿಲ್ಲೆ’ ತೆರೆಗೆ ಬರಲು ರೆಡಿ

‘ತರ್ಲೆ ವಿಲೇಜ್‌’ ನಿರ್ದೇಶಕ ಜಿಬಿಎಸ್‌ ಸಿದ್ದೇಗೌಡ ನಿರ್ದೇಶನದ ‘ಕುಂಟೆಬಿಲ್ಲೆ’

ಇದೇ 2025ರ ಸೆಪ್ಟೆಂಬರ್ 26ಕ್ಕೆ ‘ಕುಂಟೆಬಿಲ್ಲೆ’ ಬಿಡುಗಡೆ

ಮತ್ತೊಂದು ಗ್ರಾಮೀಣ ಸೊಗಡಿನ ಕಥೆಯೊಂದನ್ನು ತೆರೆಮೇಲೆ ತರಲು ‘ದಕ್ಷಯಜ್ಞ’, ‘ತರ್ಲೆ ವಿಲೇಜ್‌’ ಖ್ಯಾತಿಯ ನಿರ್ದೇಶಕ ಜಿಬಿಎಸ್‌ ಸಿದ್ದೇಗೌಡ ಮುಂದಾಗಿದ್ದಾರೆ. ಸಿದ್ದೇಗೌಡ ಜಿಬಿ‌ಎಸ್ ನಿರ್ದೇಶನದ ‘ಕುಂಟೆಬಿಲ್ಲೆ’ ಸಿನೆಮಾದ ಮೂಲಕ ಯುವನಟ ಯದು ಮೊದಲ ಬಾರಿಗೆ ನಾಯಕರಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ‌. ಕನ್ನಡ, ತೆಲುಗು, ಭೋಜಪುರಿ ಸೇರಿದಂತೆ ಹಲವು ಭಾಷೆಗಳಲ್ಲಿ ಹತ್ತಕ್ಕೂ ಹೆಚ್ಚು ಚಿತ್ರ ಮಾಡಿರುವ ಮೇಘ ಶ್ರೀ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಸುಚೇಂದ್ರ ಪ್ರಸಾದ್, ಭವಾನಿ ಪ್ರಕಾಶ್, ಸುಧಾ ಬೆಳವಾಡಿ, ಕಾವ್ಯ ಮೊದಲಾದವರು ‘ಕುಂಟೆಬಿಲ್ಲೆ’ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಸದ್ಯ ‘ಕುಂಟೆಬಿಲ್ಲೆ’ ಚಿತ್ರದ ಪ್ರಚಾರ ಕಾರ್ಯಗಳನ್ನು ನಡೆಸುತ್ತಿರುವ ಚಿತ್ರತಂಡ, ಇತ್ತೀಚೆಗೆ  ಮಾದ್ಯಮಗೋಷ್ಟಿ ನಡೆಸಿ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ಹಂಚಿಕೊಂಡಿತು.

ಮೊದಲಿಗೆ ಈ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಸಿದ್ಧೇಗೌಡ ಜಿಬಿಆರ್‌, ‘ನಾವೆಲ್ಲಾ ಚಿಕ್ಕ ವಯಸ್ಸಿನಲ್ಲಿ ಆಡುತ್ತಿದ್ದ ಆಟ ‘ಕುಂಟೆಬಿಲ್ಲೆ’. ಅದೇ ‘ಕುಂಟೆಬಿಲ್ಲೆ’ ಟೈಟಲ್ ಇಟ್ಟುಕೊಂಡು ಪ್ರೀತಿ, ನೋವು, ಕಾಮ ಎಲ್ಲವನ್ನೂ ಈ ಸಿನೆಮಾದಲ್ಲಿ ಕಟ್ಟಿಕೊಡಲಿದ್ದೇವೆ. ಇದೊಂದು ಹಳ್ಳಿಯ ಸೊಗಡಿನ ಕಥೆ. ಲವ್​, ಸಸ್ಪೆನ್ಸ್​ ಅಂಶಗಳಿರುವ ಚಿತ್ರ. ನಮ್ಮ ಕೈಯಾರೆ ನಾವೇ ನಮ್ಮ ಪ್ರೀತಿಯನ್ನು ಹೇಗೆ ಹಾಳು ಮಾಡಿಕೊಳ್ಳುತ್ತೇವೆ ಎಂಬುದರ ಸುತ್ತ ಕಥೆ ಸಾಗುತ್ತದೆ. ಚಿತ್ರ ಇದೇ ಸೆಪ್ಟೆಂಬರ್‌ ತಿಂಗಳ 26ರಂದು ‘ಕುಂಟೆಬಿಲ್ಲೆ’ ಚಿತ್ರ ತೆರೆಗೆ ಬರುತ್ತಿದ್ದು ನಿಮ್ಮೆಲ್ಲರ ಸಹಕಾರ ಇರಲಿ. ಅಲ್ಲದೆ ‘ನಮಗೆ ನಮ್ಮ ಚಿತ್ರದ ಬಗ್ಗೆ ಭರವಸೆ ಇದೆ. ನಮ್ಮ ಚಿತ್ರ ತೆರೆಗೆ ಬಂದ ಒಂದು ವಾರದಲ್ಲಿಯೇ ‘ಕಾಂತಾರ’ ಬರುತ್ತಿದೆ. ಆದರೆ ಅದರಿಂದ ನಮಗೇನೂ ಭಯವಿಲ್ಲ. ಪ್ರೇಕ್ಷಕರು ನಮ್ಮ ಚಿತ್ರ ಇಷ್ಟ ಪಟ್ಟು ನೋಡುತ್ತಾರೆ ಎನ್ನುವುದರಲ್ಲಿ ಯಾವ ಅನುಮಾನ ಇಲ್ಲ’ಎಂದರು.

ತಂದೆಯ ಕನಸು ಮಗನಿಂದ ನನಸು…

ಚಿತ್ರ ನಿರ್ಮಾಪಕರೂ ಆದ ನಾಯಕ ನಟನ ತಂದೆ ಕುಮಾರ್ ಗೌಡ ಅವರು ಮಾತನಾಡಿ, ‘ನಾವು ಹಲವು ತಿಂಗಳಿನಿಂದ ಕಷ್ಟಪಟ್ಟು ಈ ಚಿತ್ರ ಮಾಡಿದ್ದೇವೆ. ನನ್ನ ಮಗನೊಬ್ಬ ಉತ್ತಮ ನಟನಾಗಬೇಕೆನ್ನುವುದು ನನ್ನ ಬಯಕೆ. 30 ವರ್ಷದ ಹಿಂದೆ ನಾನೊಬ್ಬ ಕಲಾವಿದ ಆಗಬೇಕು ಎಂದು ಬೆಂಗಳೂರಿಗೆ ಬಂದಿದ್ದೆ ಆದರೆ ಅದು ಸಾಧ್ಯವಾಗಿರಲಿಲ್ಲ‌. ಈಗ ಅದನ್ನು ನನ್ನ ಮಗನ ಮೂಲಕ ಈಡೇರಿಸಿಕೊಳ್ಳುತ್ತಿದ್ದೇನೆ. ನಾನು ಇದಕ್ಕಾಗಿ ಈ ಚಿತ್ರದ ಕುರಿತು ನಿಮ್ಮ ಸಹಕಾರ ಬೆಂಬಲ ಕೇಳುತ್ತೇನೆ’ ಎಂದರು.

ಪ್ರೀತಿಗಾಗಿ ಹುಡುಗನ ಹೋರಾಟ…

ನಾಯಕ ಯದು ಮಾತನಾಡಿ, ‘ನನ್ನ ತಂದೆಯವರ ಆಸೆ ಈಡೇರಿಸುವ ಸಲುವಾಗಿ ನಾನಿಂದು ಈ ಕ್ಷೇತ್ರಕ್ಕೆ ಬಂದಿದ್ದು ನಾನು ಕ್ರಿಕೆಟ್ ಆಟಗಾರನಾಗಬೇಕೆನ್ನುವ ಆಸೆ ಹೊಂದಿದ್ದೆ. ಅದಕ್ಕಾಗಿ ತರಬೇತಿ ಸಹ ಪಡೆಯುತ್ತಿದ್ದೆ. ಆದರೆ ತಂದೆಯವರ ಆಸೆ ಈಡೇರಿಸುವುದಕ್ಕಾಗಿ ಅದನ್ನು ಅರ್ಧಕ್ಕೇ ಬಿಟ್ಟುಬಂದೆ. ನಾನು ರಂಗಭೂಮಿಯ ತರಬೇತಿ ಪಡೆದಿದ್ದು ಈಗ ವಿದ್ಯಾಭ್ಯಾಸ ಮುಗಿಸಿ ನಟನೆಯತ್ತ ಬಂದಿದ್ದೇನೆ. ಈ ಚಿತ್ರದಲ್ಲಿ ಒಬ್ಬ ಕೋಳಿ ಫಾರಂನಲ್ಲಿ ಕೆಲಸ ಮಾಡುವ ಯುವಕನಾಗಿ ಕಾಣಿಸಿಕೊಳ್ಳುತ್ತಿದ್ದು ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಅವನೇನು ಮಾಡುತ್ತಾನೆ ಎನ್ನುವುದು ಚಿತ್ರದ ಕಥಾ ಸಾರಾಂಶ’ ಎಂದರು.

ಕುಂಟೆಬಿಲ್ಲೆ’ ಮೇಲೆ ಕಲಾವಿದರಿಗೆ ಭರವಸೆ…

ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ ಸುಧಾ ಬೆಳವಾಡಿ, ‘ನಾವೀಗ ಕನ್ನಡ ಚಿತ್ರರಂಗ ಸ್ವಲ್ಪ ಕಷ್ಟದಲ್ಲಿದೆ ಹಾಗಾಗಿ ಮಾಧ್ಯಮದವರು ಈ ಚಿತ್ರಕ್ಕೆ ಬೆಂಬಲ ಕೊಡಬೇಕು. ಯಾವುದೇ ದೊಡ್ದ ಸ್ಟಾರ್ ನಟರಾದರೂ ತಾವು ಅಭಿನಯಿಸಿದ ಚಿತ್ರಗಳ ಪ್ರಮೋಷನ್ ಗೆ ಬರಬೇಕು, ಬೆಂಬಲಿಸಬೇಕು’ ಎಂದು ಹೇಳಿದರು. ನಾಯಕ ನಟಿ ಮೇಘಶ್ರೀ ಮಾತನಾಡಿ, ‘ನನ್ನ ಪಾತ್ರ ಬಹಳ ಬೋಲ್ಡ್ ಆಗಿದೆ. ಇಂತಹಾ ಪಾತ್ರ ಮಾಡುವುದು ಸುಲಭವಲ್ಲ. ಇದು ವಿಶೇಷ ಕಥೆ ಹಾಗೂ ಪಾತ್ರವಾಗಿರುವುದರಿಂದಲೇ ನಾನು ಈ ಚಿತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡೆ. ಯಾಕೆಂದರೆ ಇಡೀ ಕಥೆಯೇ ನನ್ನ ಮೇಲೆ ನಡೆಯುತ್ತದೆ. ನನ್ನ ಪಾತ್ರಕ್ಕೆ ವಿಶೇಷ ಮಹತ್ವವಿದೆ. ಅದೊಂದು ವಿಶೇಷ ದೃಶ್ಯವಿದೆ, ಅದನ್ನು ನೋಡಿದರೆ ನೀವೆಲ್ಲಾ ಬೆಚ್ಚಿ ಬೀಳುತ್ತೀರಿ. ಅಂತಹಾ ವಿಶೇಷ ಕಥೆ ಇರುವ ಸಿನೆಮಾ ಇದು. ನಾನು ಈ ಚಿತ್ರದಲ್ಲಿ ಕುಂಟೆಬಿಲ್ಲೆ, ವಾಲಿಬಾಲ್ ಸೇರಿ ವಿವಿಧ ಆಟಗಳನ್ನು ಆಡಿದ್ದೇನೆ’ ಎಂದು ಹೇಳಿದರು.

‘ಜೀವಿತಾ ಕ್ರಿಯೇಷನ್’ ಹಾಗೂ ‘​​ಜಿಬಿಎಸ್’ ನಿರ್ಮಾಣದಲ್ಲಿ ಎಸ್. ಬಿ. ಶಿವ, ಕುಮಾರ ಗೌಡ ಜಿ. ನಿರ್ಮಾಣ ಮಾಡಿದ್ದು ಚಿತ್ರಕ್ಕೆ ಬಿ. ಎ. ಮಧು ಸಂಭಾಷಣೆಯಿದೆ. ಹರಿಕಾವ್ಯ ಸಂಗೀತದಲ್ಲಿ ಮೂರು ಹಾಡಿದ್ದು ಮುಂಜಾನೆ ಮಂಜು ಛಾಯಾಗ್ರಹಣವಿದೆ. ಯದು, ಮೇಘಶ್ರೀ ಪ್ರಮುಖ ಪಾತ್ರದಲ್ಲಿರುವ ‘ಕುಂಟೆಬಿಲ್ಲೆ’ ಚಿತ್ರದಲ್ಲಿ ಸುಚೇಂದ್ರ ಪ್ರಸಾದ್, ಸುಧಾ ಬೆಳವಾಡಿ, ಶಂಕರ ಅಶ್ವಥ್, ಬಲರಾಜವಾಡಿ, ಭವಾನಿ ಪ್ರಕಾಶ್, ಕಾವ್ಯ ಮೊದಲಾದವರು ಅಭಿನಯಿಸಿದ್ದಾರೆ. ‘ಕುಂಟೆಬಿಲ್ಲೆ’ ಚಿತ್ರ ಇದೇ ಸೆಪ್ಟೆಂಬರ್ 26ಕ್ಕೆ ತೆರೆಗೆ ಬರುತ್ತಿದೆ.

G S Karthik Sudhan

Karthik Sudhan is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Karthik Sudhan has worked in reputed online publications of Kannada.

Related Posts

error: Content is protected !!