ಮನರಂಜನೆಯ ಜೊತೆಗೆ ಸಾಗುವ ‘ವಿಕಲ್ಪ’ ಎಂಬ ಮನೋವ್ಯಾಧಿಯ ಕಥೆ!
‘ವಿಕಲ್ಪ’ದಲ್ಲಿ ಮನಸ್ಸಿನ ತಲ್ಲಣಗಳ ‘ಚಿತ್ರ’ಣ
ಬಹುಕಾಲದ ನಂತರ ಕನ್ನಡದಲ್ಲಿ ತೆರೆಗೆ ಬಂದ ಸೈಕಾಲಜಿಕಲ್-ಥ್ರಿಲ್ಲರ್ ಚಿತ್ರ
ಮನೋವ್ಯಾಧಿ ಕಥೆಯಲ್ಲಿ ಮನರಂಜನೆಗೂ ಜಾಗ ಉಂಟು!
ಚಿತ್ರ: ‘ವಿಕಲ್ಪ’
ನಿರ್ಮಾಣ: ‘ಸುರೂಸ್ ಟಾಕೀಸ್’
ನಿರ್ಮಾಪಕರು: ಶ್ರೀಮತಿ ಇಂದಿರಾ ಶಿವಸ್ವಾಮಿ
ಕಥೆ, ಚಿತ್ರಕಥೆ, ನಿರ್ದೇಶನ: ಪೃಥ್ವಿರಾಜ್ ಪಾಟೀಲ್
ತಾರಾಗಣ: ಪೃಥ್ವಿರಾಜ್ ಪಾಟೀಲ್, ನಾಗಶ್ರೀ ಹೆಬ್ಬಾರ್, ಹರಿಣಿ ಶ್ರೀಕಾಂತ್, ಸಂಧ್ಯಾ ವಿನಾಯಕ್, ಗಣಪತಿ ವಡ್ಡಿನಗದ್ದೆ, ಸ್ವರೂಪ್ ಬಚ್ಚ್, ಪೂಜಾ ಬಚ್ಚ್, ಜಯಂತ್ ಡೇವಿಡ್, ಡಾ. ಪ್ರಕೃತಿ, ಮಾಸ್ಟರ್ ಆಯುಷ್ ಸಂತೋಷ್, ಗಿರೀಶ್ ಹೆಗಡೆ ಮುಂತಾದವರು
ಬಿಡುಗಡೆ: 30 ಜನವರಿ 2026
ರೇಟಿಂಗ್: 4/5
ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಸೈಕಾಲಜಿಕಲ್-ಥ್ರಿಲ್ಲರ್ ಚಿತ್ರಗಳ ಸಂಖ್ಯೆ ತುಂಬ ವಿರಳ ಎಂದೇ ಹೇಳಬಹುದು. ಇಂಥ ವಿರಳ ಚಿತ್ರಗಳ ವರ್ಗಕ್ಕೆ ಸೇರುವಂಥ ಚಿತ್ರವೊಂದು ಇದೇ ಜ. 30ಕ್ಕೆ ತೆರೆಗೆ ಬಂದಿದೆ. ಆ ಚಿತ್ರದ ಹೆಸರೇ ‘ವಿಕಲ್ಪ’. ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ ‘ವಿಕಲ್ಪ’ ಒಂದು ಸೈಕಾಲಜಿಕಲ್-ಥ್ರಿಲ್ಲರ್ ಕಥಾಹಂದರದ ಚಿತ್ರ. ‘ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್’ (ಪಿಟಿಎಸ್‌ಡಿ) ಎಂಬ ಮಾನಸಿಕ ವ್ಯಾಧಿ ಎಳೆ ಆಧಾರಿಸಿ ಈ ಚಿತ್ರವನ್ನು ತೆರೆಗೆ ತಂದಿದೆ ಚಿತ್ರತಂಡ.
‘ವಿಕಲ್ಪ’ ಚಿತ್ರದ ಕಥೆಯೇನು..?
‘ವಿಕಲ್ಪ’ ಚಿತ್ರದ ಕಥಾಹಂದರದ ಬಗ್ಗೆ ಹೇಳುವುದಾದರೆ, ಮಲೆನಾಡಿನ ಸುಂದರ ಹಳ್ಳಿಯ ಹಸಿರು ಪರಿಸರದಲ್ಲಿ ಚಿತ್ರದ ಕಥೆ ತೆರೆದುಕೊಳ್ಳುತ್ತದೆ. ಪೃಥ್ವಿ ಎಂಬ ಎಳೆ ವಯಸ್ಸಿನ ಬಾಲಕ ಆಟವಾಡುತ್ತಾ, ಊರ ಹೊರಗಿನ ಬೆಟ್ಟದ ಮೇಲಿರುವ ಬೃಹತ್ ಒಂಟಿ ಮರದ ಬಳಿ ಬರುತ್ತಾನೆ. ಹೀಗೆ ಬಂದ ಹುಡುಗ ಅಲ್ಲಿ ಭಯಾನಕವಾದ ದೃಶ್ಯವೊಂದನ್ನು ನೋಡಿ ಬೆಚ್ಚಿ ಬೀಳುತ್ತಾನೆ. ಚಿಕ್ಕ ವಯಸ್ಸಿನಲ್ಲಿ ತಾನು ಕಂಡ ಆ ದೃಶ್ಯ, ತನಗಾದ ಅನುಭವ ದೊಡ್ಡವನಾದ ಮೇಲೂ ಪೃಥ್ವಿಯನ್ನು ಬೆನ್ನ ಹಿಂದಿನ ನೆರಳಿನಂತೆ, ಕಾಡುತ್ತಲೇ ಬರುತ್ತದೆ.
ಪೃಥ್ವಿ ಎಂಬ ಬಾಲಕನ ಬಾಲ್ಯದಲ್ಲಿ ಎದುರಾಗುವ ಭಯಾನಕ ಮತ್ತು ನಿಗೂಢ ಘಟನೆಯೊಂದು, ಆತನ ಭವಿಷ್ಯದಲ್ಲಿ ನೆರಳಿನಂತೆ ಹಿಂಬಾಲಿಸಿಕೊಂಡು ಬರುತ್ತದೆ. ಹಾಗಾದರೆ, ಪೃಥ್ವಿಯನ್ನು ಬಾಲ್ಯದಿಂದಲೂ ಬಾಧಿಸಿಕೊಂಡು ಬಂದಿರುವ ಆ ಘಟನೆ ಯಾವುದು..? ಅದಕ್ಕೆ ಕಾರಣವೇನು..? ಇದರಿಂದ ಪೃಥ್ವಿ ಪಾರಾಗುತ್ತಾನಾ..? ಅಧವಾ ಅದೇ ಭಯಕ್ಕೆ ಬಲಿಯಾಗುತ್ತಾನಾ..? ಎಂಬುದೇ ‘ವಿಕಲ್ಪ’ದ ಕಥೆಯ ಒಂದು ಎಳೆ.
‘ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್’ (ಪಿಟಿಎಸ್‌ಡಿ) ಎಂಬ ಮಾನಸಿಕ ವ್ಯಾಧಿಯನ್ನು ಆಧಾರಿಸಿ, ಅದಕ್ಕೆ ಇಂಥದ್ದೊಂದು ಕಥೆಯ ಎಳೆಯನ್ನು ಜೋಡಿಸಿ ‘ವಿಕಲ್ಪ’ವನ್ನು ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯಲ್ಲಿ ಪ್ರೇಕ್ಷಕರ ಮುಂದೆ ತಂದಿದ್ದಾರೆ ಯುವ ನಟ ಕಂ ನಿರ್ದೇಶಕ ಪೃಥ್ವಿರಾಜ್ ಪಾಟೀಲ್. ಇನ್ನು, ವಾಸ್ತವ ಮತ್ತು ಕಲ್ಪನೆಗಳ ನಡುವಿನ ಒಂದು ಸ್ಥಿತಿಯನ್ನು ‘ವಿಕಲ್ಪ’ ಎಂದು ಹೇಳಲಾಗುತ್ತದೆ. ಚಿತ್ರದ ಶೀರ್ಷಿಕೆಗೆ ತಕ್ಕಂತೆ, ವಾಸ್ತವ ಮತ್ತು ಭ್ರಮೆಯ ನಡುವೆ ಸಿಕ್ಕು ಒದ್ದಾಡುವ ವ್ಯಕ್ತಿಯ ಬದುಕಿನ ಚಿತ್ರಣವೇ ‘ವಿಕಲ್ಪ’ ಚಿತ್ರದಲ್ಲಿದೆ. 
ಹೇಗಿದೆ ತೆರೆಮೇಲೆ ‘ವಿಕಲ್ಪ’ದ ‘ಚಿತ್ರ’ಣ..?
‘ವಿಕಲ್ಪ’ ಒಂದು ಮಾನಸಿಕ ವ್ಯಾಧಿಯ ಕಥೆಯನ್ನು ಒಳಗೊಂಡ, ಮನೋವೈಜ್ಞಾನಿಕ ಚಿತ್ರವಾದರೂ, ಚಿತ್ರದಲ್ಲಿ ಮನರಂಜನೆಗೇನೂ ಕೊರತೆಯಿಲ್ಲ. ಮೇಲ್ನೋಟಕ್ಕೆ ಇದೊಂದು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಕಥೆ ಎಂದೆನಿಸಿದರೂ, ಇದನ್ನು ಸೈಕಾಲಜಿಕಲ್-ಥ್ರಿಲ್ಲರ್, ಸಸ್ಪೆನ್ಸ್, ಕಾಮಿಡಿ, ಲವ್ ಮೊದಲಾದ ಮನರಂಜನಾತ್ಮಕ ಅಂಶಗಳ ಜೊತೆಗೆ ತೆರೆಮೇಲೆ ಹೇಳಲಾಗಿದೆ. ಚಿತ್ರದ ಬಹುಭಾಗ ಕಥಾನಕ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಸಾಗುವುದರಿಂದ, ಅಲ್ಲಿನ ಪರಿಸರ, ಭಾಷೆ, ಸಂಸ್ಕೃತಿ, ಕಲೆ ಎಲ್ಲವನ್ನೂ ಚಿತ್ರದಲ್ಲಿ ನವಿರಾಗಿ ತೋರಿಸುವ ಪ್ರಯತ್ನ ಮಾಡಿದೆ ಚಿತ್ರತಂಡ. ಮನೋವೈಜ್ಞಾನಿಕ ಕಥೆಯ ಜೊತೆಗೆ ಮನರಂಜನೆಯ ಸೂತ್ರವನ್ನು ಬೆಸೆದು ‘ವಿಕಲ್ಪ’ವನ್ನು ಪ್ರೇಕ್ಷಕರ ಮುಂದಿಡುವ ಚಿತ್ರತಂಡದ ಪ್ರಯತ್ನ ಬಹುತೇಕ ಯಶಸ್ವಿಯಾಗಿದೆ. ಕಥೆ, ಚಿತ್ರಕಥೆ, ಸಂಭಾಷಣೆ, ನಿರೂಪಣೆ ಎಲ್ಲವೂ ಆರಂಭದಿಂದ ಅಂತ್ಯದವರೆಗೂ ಹದವಾಗಿ ಸಾಗುತ್ತದೆ.
‘ವಿಕಲ್ಪ’ ಕಲಾವಿದರ ಅಭಿನಯ ಹೇಗಿದೆ..?
ಆರಂಭದಲ್ಲಿಯೇ ಹೇಳಿರುವಂತೆ, ‘ವಿಕಲ್ಪ’ ಬಹುತೇಕ ಹೊಸಬರ ಸಿನಿಮಾ. ಹಿರಿಯ ನಟಿ ಹರಿಣಿ ಶ್ರೀಕಾಂತ್ ಅವರನ್ನು ಹೊರತುಪಡಿಸಿದರೆ, ‘ವಿಕಲ್ಪ’ ಚಿತ್ರದಲ್ಲಿ ತೆರೆಮೇಲೆ ಕಾಣುವ ಎಲ್ಲಾ ಕಲಾವಿದರ ಹೊಸಬರು.
ನಾಯಕ ನಟ ಪೃಥ್ವಿರಾಜ್ ಪಾಟೀಲ್, ನಟಿ ನಾಗಶ್ರೀ ಹೆಬ್ಬಾರ್, ಸಂಧ್ಯಾ ವಿನಾಯಕ್, ಗಣಪತಿ ವಡ್ಡಿನಗದ್ದೆ, ಸ್ವರೂಪ್ ಬಚ್ಚ್, ಪೂಜಾ ಬಚ್ಚ್, ಜಯಂತ್ ಡೇವಿಡ್, ಡಾ. ಪ್ರಕೃತಿ, ಮಾಸ್ಟರ್ ಆಯುಷ್ ಸಂತೋಷ್, ಗಿರೀಶ್ ಸೇರಿದಂತೆ ಬಹುತೇಕ ಕಲಾವಿದರು ಹೊಸಬರಾದರೂ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಇಡೀ ಸಿನಿಮಾದ ಪಾತ್ರ ನಾಯಕ ನಟ ಪೃಥ್ವಿರಾಜ್ ಪಾಟೀಲ್ (ಪೃಥ್ವಿ) ಅವರ ಪಾತ್ರದ ಸುತ್ತವೇ ನಡೆಯುತ್ತದೆ. ಮೊದಲನೇ ಪ್ರಯತ್ನದಲ್ಲೇ ನಟ ಕಂ ನಿರ್ದೇಶಕನಾಗಿ ಎರಡೂ ಜವಾಬ್ದಾರಿಯನ್ನು ಪೃಥ್ವಿರಾಜ್ ಪಾಟೀಲ್ ಸಮರ್ಥವಾಗಿ ನಿರ್ವಹಿಸಿದ್ದಾರೆ. ನವನಟಿ ನಾಗಶ್ರೀ ಹೆಬ್ಬಾರ್ ಸಹಜ ಅಭಿನಯದಲ್ಲಿ ಇಷ್ಟವಾದರೆ, ಗಣಪತಿ ಹೆಗಡೆ ಉತ್ತರ ಕನ್ನಡದ ಹಾಸ್ಯಪಾತ್ರದಲ್ಲಿ ಇಷ್ಟವಾಗುತ್ತಾರೆ.
ಗಮನ ಸೆಳೆಯುವ ತಾಂತ್ರಿಕ ಕಾರ್ಯ
ಇನ್ನು ತಾಂತ್ರಿಕವಾಗಿ ‘ವಿಕಲ್ಪ’ ಚಿತ್ರದ ಛಾಯಾಗ್ರಹಣ, ಸಂಕಲನ ಮತ್ತು ಸಂಗೀತ ಚಿತ್ರದ ಹೈಲೈಟ್ ಅಂಶಗಳು ಎನ್ನಬಹುದು. ಛಾಯಾಗ್ರಹಕ ಅಭಿರಾಮ್ ಗೌಡ ತಮ್ಮ ಛಾಯಾಗ್ರಹಣದಲ್ಲಿ ಕರಾವಳಿ ಮತ್ತು ಮಲೆನಾಡಿನ ಅಂದವನ್ನು ತೆರೆಮೇಲೆ ಸೊಗಸಾಗಿ ತೋರಿಸಿದ್ದಾರೆ.
ಸಂಕಲನಕಾರ ಸುರೇಶ್ ಆರ್ಮುಗಂ ಸಂಕಲನ ಕಾರ್ಯ ಮೊನಚಾಗಿದೆ. ಯುವ ಪ್ರತಿಭೆ ಸಂವತ್ಸರ ಸಂಗೀತ ಸಂಯೋಜನೆಯ ಹೊಸಥರದ ಹಾಡುಗಳು ಥಿಯೇಟರಿನ ಹೊರಗೂ ಗುನುಗುಡುವಂತಿದೆ. ಕಲರಿಂಗ್, ಹಿನ್ನೆಲೆ ಸಂಗೀತ ಎಲ್ಲವೂ ಗುಣಮಟ್ಟದಿಂದ ಕೂಡಿದ್ದು, ತಾಂತ್ರಿಕವಾಗಿ ಚಿತ್ರ ಉತ್ತಮ ರೀತಿಯಲ್ಲಿ ಮೂಡಿಬಂದಿದೆ.
ಕೊನೆಯ ಮಾತು…
ಅಂತಿಮವಾಗಿ, ಕನ್ನಡ ಚಿತ್ರರಂಗದಲ್ಲಿ ಪ್ರತಿವರ್ಷ ನೂರಾರು ಸಿನಿಮಾಗಳು ಬಿಡುಗಡೆಯಾಗಿ ತೆರೆಗೆ ಬರುತ್ತಿವೆ. ಆದರೆ ಇಷ್ಟೊಂದು ಸಿನಿಮಾಗಳ ಪೈಕಿ ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾಗಳ ಸಂಖ್ಯೆ ಮಾತ್ರ ಕೇವಲ ಬೆರಳೆಣಿಕೆಯಷ್ಟು ಮಾತ್ರ ಎಂದೇ ಹೇಳಬಹುದು. ಅಂಥ ಬೆರಳೆಣಿಕೆಯ ವಿರಳ ಸಿನಿಮಾಗಳ ಸಾಲಿಗೆ ‘ವಿಕಲ್ಪ’ ಕೂಡ ಸೇರುವಂಥ ಚಿತ್ರ ಎನ್ನಲು ಅಡ್ಡಿಯಿಲ್ಲ. ಹೊಸಥರದ ಸಿನಿಮಾಗಳನ್ನು ಬಯಸುವ ಪ್ರೇಕ್ಷಕರು ಒಮ್ಮೆ ‘ವಿಕಲ್ಪ’ ಎಂಬ ಹೊಸಬರ ಪ್ರಯತ್ನವನ್ನು ನೋಡಿಬರಬಹುದು. ಅದರಲ್ಲೂ ಸೈಕಾಲಜಿಕಲ್-ಥ್ರಿಲ್ಲರ್ ಸಿನಿಮಾಗಳನ್ನು ಇಷ್ಟಪಡುವವರಿಗೆ ‘ವಿಕಲ್ಪ’ ಖಂಡಿತವಾಗಿಯೂ ಹೊಸ ಅನುಭವ ಕೊಡುವುದಂತೂ ಸುಳ್ಳಲ್ಲ!
- ದೀಪಾ ಕೆ. ಸುಧನ್















