Street Beat

‘ಪಿಸ್ತೂಲ್’ ಹಿಡಿದ ನಿರ್ದೇಶಕ ಪ್ರಬಿಕ್ ಮೊಗವೀರ್ !

‘ಗಡಿಯಾರ’ ಚಿತ್ರದ ಬಳಿಕ ‘ಪಿಸ್ತೂಲ್’ ಚಿತ್ರಕ್ಕೆ ಪ್ರಬಿಕ್ ನಿರ್ದೇಶನ

8 ವರ್ಷಗಳ ನಂತರ ಮತ್ತೆ ಆಕ್ಷನ್‌-ಕಟ್‌ ಹೇಳುತ್ತಿರುವ ನಿರ್ದೇಶಕ ಪ್ರಬೀಕ್‌ ಮೊಗವೀರ್‌ !

ಬಹು ತಾರಾಗಣದಲ್ಲಿ ತೆರೆಗೆ ಬರುತ್ತಿದೆ ‘ಪಿಸ್ತೂಲ್’ !

ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ನಿರ್ದೇಶಕನಾಗಿ, ನಿರ್ಮಾಪಕನಾಗಿ ಮತ್ತು ನಟನಾಗಿ ಗುರುತಿಸಿಕೊಂಡಿರುವ ಬಹುಮುಖ ಪ್ರತಿಭೆ ಪ್ರಬಿಕ್‌ ಮೊಗವೀರ್‌. ದಶಕದ ಹಿಂದೆ ನಿರ್ದೇಶಕನಾಗಬೇಕು ಎಂಬ ಕನಸನ್ನು ಹೊತ್ತುಕೊಂಡು ಚಂದನವನಕ್ಕೆ ಕಾಲಿಟ್ಟ ಕುಂದಾಪುರ ಮೂಲದ ಪ್ರತಿಭೆ ಪ್ರಬಿಕ್‌ ಮೊಗವೀರ್‌, ಆ ಬಳಿಕ ತಮ್ಮ ನಿರ್ದೇಶನದ ಪ್ರಯಾಣದ ಜೊತೆಜೊತೆಯಲ್ಲೇ ನಿರ್ಮಾಪಕ ಮತ್ತು ನಟನಾಗಿಯೂ ಗುರುತಿಸಿಕೊಳ್ಳುವಂತಾಯಿತು.

‘ಗಡಿಯಾರ‘ದ ಬಳಿಕ ನಟನೆಯಲ್ಲೇ ಪ್ರಬಿಕ್‌ ಮೊಗವೀರ್ ಬಿಝಿ!

ಅಂದಹಾಗೆ, ಸುಮಾರು ಎಂಟು ವರ್ಷದ ಹಿಂದೆ ನಿರ್ದೇಶಕ ಪ್ರಬಿಕ್‌ ಮೊಗವೀರ್‌ ‘ಗಡಿಯಾರ’ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿ ತೆರೆಗೆ ತಂದಿದ್ದರು. ಬಹುತಾರಾಗಣದಲ್ಲಿ ಮೂಡಿಬಂದಿದ್ದ ‘ಗಡಿಯಾರ’ ಚಿತ್ರಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಕನ್ನಡದಲ್ಲಿ ನಿರ್ಮಾಣವಾಗಿದ್ದ ‘ಗಡಿಯಾರ’ ಚಿತ್ರ  ಬಳಿಕ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಕೂಡ ಬಿಡುಗಡೆಯಾಗಿ ಮೆಚ್ಚುಗೆ ಗಳಿಸಿತ್ತು. ‘ಗಡಿಯಾರ’ ಚಿತ್ರದ ಬಳಿಕ ನಿರ್ಮಾಣದ ಜೊತೆಗೆ ನಟನೆಯತ್ತ ಹೆಚ್ಚು ಗಮನ ಹರಿಸಿದ ಪ್ರಬಿಕ್‌ ಮೊಗವೀರ್‌ ‘ತನಿಖೆ’, ‘ಶಾಂತಿಯನ್ನು ಕಳೆದುಕೊಳ್ಳಬೇಡಿ’, ‘ನಾಯಿ ಇದೆ ಎಚ್ಚರಿಕೆ!!’, ‘ಅಸುರನ ಕೈಯಲ್ಲಿ ಪಾರಿಜಾತ’, ‘ರಾವೆನ್’ ಹೀಗೆ ಒಂದರ ಹಿಂದೊಂದು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ತೆರೆಮೇಲೆ ಕಾಣಿಸಿಕೊಂಡಿದ್ದರು.

‘ಪಿಸ್ತೂಲ್’ ಹಿಡಿದ ಪ್ರಬಿಕ್‌! ಈ ಬಾರಿ ನಿರ್ದೇಶನದ ಜೊತೆಗೆ ನಟನೆ…

ಇದೀಗ ಸುಮಾರು ಎಂಟು ವರ್ಷಗಳ ಬಳಿಕ ಮತ್ತೆ ನಿರ್ದೇಶನದತ್ತ ಮುಖ ಮಾಡಿರುವ ನಿರ್ದೇಶಕ ಪ್ರಬಿಕ್ ಮೊಗವೀರ್ ‘ಪಿಸ್ತೂಲ್’ ಎಂಬ ಹೆಸರಿನ ಸಿನೆಮಾಕ್ಕೆ ಆಕ್ಷನ್‌-ಕಟ್‌ ಹೇಳುವ ತಯಾರಿಯಲ್ಲಿದ್ದಾರೆ. ಅಂದಹಾಗೆ,  ‘ಪಿಸ್ತೂಲ್‌’ ಒಂದು ಸಸ್ಪೆನ್ಸ್‌ ಕಂ ಕ್ರೈಂ-ಥ್ರಿಲ್ಲರ್‌ ಕಥಾಹಂದರದ ಸಿನೆಮಾವಾಗಿದ್ದು, ಈ ಸಿನೆಮಾದಲ್ಲಿ ನಿರ್ದೇಶಕ ಪ್ರಬಿಕ್‌ ಮಲೆಯಾಳಂ ಶೈಲಿಯಲ್ಲಿ ಸಸ್ಪೆನ್ಸ್‌ ಕಂ ಕ್ರೈಂ-ಥ್ರಿಲ್ಲರ್‌ ಕಥೆಯನ್ನು ಪ್ರೇಕ್ಷಕರ ಮುಂದೆ ಹೇಳಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈಗಾಗಲೇ ‘ಪಿಸ್ತೂಲ್’ ಚಿತ್ರದ ಬಹುತೇಕ ಪ್ರೀ-ಪ್ರೊಡಕ್ಷನ್ಸ್‌ ಕೆಲಸಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಚಿತ್ರೀಕರಣ ಆರಂಭಿಸುವ ಯೋಜನೆ ಹಾಕಿಕೊಂಡಿದ್ದಾರೆ ಪ್ರಬಿಕ್‌ ಮೊಗವೀರ್‌.

ಇನ್ನು ಬಹುತಾರಾಗಣದಲ್ಲಿ ಮೂಡಿಬರುತ್ತಿರುವ ‘ಪಿಸ್ತೂಲ್’ ಸಿನೆಮಾಕ್ಕೆ ಸ್ವತಃ ನಿರ್ದೇಶಕ ಪ್ರಬಿಕ್‌ ಮೊಗವೀರ್‌ ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ತಮ್ಮ ‘ಪಿಸ್ತೂಲ್‌’ ಚಿತ್ರದ ಬಗ್ಗೆ ಮಾತನಾಡಿರುವ ನಿರ್ದೇಶಕ ಪ್ರಬಿಕ್‌ ಮೊಗವೀರ್‌, ”ಒಳ್ಳೆಯ ಸಸ್ಪೆನ್ಸ್ ಥ್ರಿಲ್ಲರ್ ಸಿನೆಮಾ ನೋಡಬೇಕೆಂದರೆ ಮಲಯಾಳಂ ಚಿತ್ರವನ್ನೇ ನೋಡಬೇಕು’ ಎಂಬ ಅಭಿಪ್ರಾಯವನ್ನು ಬದಲಾಯಿಸುವ ದೃಢ ನಂಬಿಕೆಯೊಂದಿಗೆ ಕನ್ನಡದಲ್ಲಿ ವಿಭಿನ್ನ ಕಥೆಯನ್ನು ಇಟ್ಟುಕೊಂಡು ‘ಪಿಸ್ತೂಲ್‌’ ಸಿನೆಮಾವನ್ನು ಪ್ರೇಕ್ಷಕರ ಮುಂದೆ ತರುವ ಉದ್ದೇಶ ಇಟ್ಟುಕೊಂಡಿದ್ದೇವೆ. ಗಟ್ಟಿಯಾದ ಕಥೆ, ಹೊಸತನದ ನಿರೂಪಣೆ ಈ ಸಿನೆಮಾದಲ್ಲಿದೆ. ಚಿತ್ರದ ಶೀರ್ಷಿಕೆಯಷ್ಟೇ ಅದರ ಕಥಾವಸ್ತುವೂ ವಿಭಿನ್ನವಾಗಿದೆ’ ಎಂದಿದ್ದಾರೆ.

ಏನಿದೆ ‘ಪಿಸ್ತೂಲ್‌’ ಹಿಂದಿನ ಕಹಾನಿ…?

ಚಿತ್ರದ ಕಥೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸದ ನಿರ್ದೇಶಕ ಪ್ರಬಿಕ್‌ ಮೊಗವೀರ್‌, ‘ಇದು ಒಂದು ಗನ್ ಮತ್ತು ಆರು ಬುಲೆಟ್‌ಗಳ ಸುತ್ತ ಹೆಣೆಯಲಾದ ಸಸ್ಪೆನ್ಸ್-ಥ್ರಿಲ್ಲರ್ ಕಥೆ. ನಮ್ಮ ನಡುವೆಯೇ ನಡೆಯಬಹುದಾದ ಅನೇಕ ವಿಷಯಗಳನ್ನು ಈ ಸಿನೆಮಾದಲ್ಲಿ ಪ್ರೇಕ್ಷಕರ ಮುಂದೆ ತೆರೆದಿಡುತ್ತಿದ್ದೇವೆ. ಇದೊಂದು ಸಸ್ಪೆನ್ಸ್‌ ಕಂ ಕ್ರೈಂ-ಥ್ರಿಲ್ಲರ್‌ ಸಿನೆಮಾವಾಗಿರುವುದರಿಂದ, ಇದಕ್ಕಿಂತ ಹೆಚ್ಚಿನ ಮಾಹಿತಿ ಈ ಹಂತದಲ್ಲೇ ತಿಳಿಸುವುದು ಕಷ್ಟ’ ಎಂದು ಹೇಳುವ ಮೂಲಕ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ.

ಆದಷ್ಟು ಬೇಗ ‘ಪಿಸ್ತೂಲ್’ ಸೌಂಡ್‌ ಮಾಡಲಿದೆ…

ಇತ್ತೀಚೆಗಷ್ಟೇ ವಿಭಿನ್ನ ಶೀರ್ಷಿಕೆಯ ಮೂಲಕ ಗಮನ ಸೆಳೆದಿರುವ ‘ಪಿಸ್ತೂಲ್’ ಚಿತ್ರದ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ. ಚಿತ್ರದ ಶೀರ್ಷಿಕೆಯಷ್ಟೇ ಅದರ ಕಥಾವಸ್ತುವೂ ವಿಭಿನ್ನವಾಗಿದೆ ಎಂದು ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಪ್ರಬಿಕ್ ಮೊಗವೀರ್ ತಿಳಿಸಿದ್ದಾರೆ. ಈಗ ಮತ್ತೆ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ಅವರು, ‘ಪಿಸ್ತೂಲ್’ ಚಿತ್ರದ ಮೂಲಕ ನಿರ್ದೇಶಕ ಹಾಗೂ ನಟನಾಗಿ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಚಿತ್ರದ ವಿಭಿನ್ನ ಪೋಸ್ಟರ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದ್ದು, ಚಿತ್ರದ ಕಥೆ ಮತ್ತು ಚಿತ್ರಕಥೆಯ ಮೇಲಿನ ಅಪಾರ ವಿಶ್ವಾಸದೊಂದಿಗೆ ಚಿತ್ರತಂಡ ಚಿತ್ರೀಕರಣಕ್ಕೆ ಸಿದ್ಧತೆ ನಡೆಸುತ್ತಿದೆ. ಅನುಭವಿ ಕಲಾವಿದರೊಂದಿಗೆ ಹೊಸ ಪ್ರತಿಭೆಗಳಿಗೂ ಅವಕಾಶ ನೀಡಲಾಗಿದ್ದು, ಉತ್ತಮ ತಾಂತ್ರಿಕ ವರ್ಗ ಚಿತ್ರದ ಮತ್ತೊಂದು ವಿಶೇಷವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಈ ಹಿಂದೆ ನಿರ್ಮಾಪಕ, ನಿರ್ದೇಶಕ ಹಾಗೂ ನಟನಾಗಿ ಗುರುತಿಸಿಕೊಂಡಿರುವ ಪ್ರಬಿಕ್ ಮೊಗವೀರ್, ಈ ಚಿತ್ರದಲ್ಲಿ ನಿರ್ಮಾಣದ ಜೊತೆಗೆ ಪ್ರಮುಖ ಪಾತ್ರದಲ್ಲೂ ಅಭಿನಯಿಸುತ್ತಿದ್ದಾರೆ.

Related Posts

error: Content is protected !!