Street Beat

‘ಪೊಲೀಸ್ ಕಂಪ್ಲೈಂಟ್’ ಚಿತ್ರದ ಟೀಸರ್, ಹಾಡು ಬಿಡುಗಡೆ

ಹೊರಬಂತು ‘ಪೊಲೀಸ್ ಕಂಪ್ಲೈಂಟ್’ ಟೀಸರ್ ಮತ್ತು ಹಾಡು

‘ಪೊಲೀಸ್ ಕಂಪ್ಲೈಂಟ್’ನಲ್ಲಿ ವರಲಕ್ಷ್ಮೀ-ರಾಗಿಣಿ ಆ್ಯಕ್ಷನ್ ಕಹಾನಿ

‘ಪೊಲೀಸ್ ಕಂಪ್ಲೈಂಟ್’ಗೆ ಪ್ರೇಮಾ ವಿಟ್ನೆಸ್!

ಕನ್ನಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಪ್ರಧಾನ ಆ್ಯಕ್ಷನ್ ಚಿತ್ರಗಳ ಸಂಖ್ಯೆ ತೀರಾ ವಿರಳ ಎಂದೇ ಹೇಳಬಹುದು. ಇಂಥ ವಿರಳ ಸಿನೆಮಾಗಳ ಸಾಲಿಗೆ ಈಗೊಂದು ಹೊಸ ಸಿನೆಮಾ ಸೇರ್ಪಡೆಯಾಗುತ್ತಿದೆ. ಆ ಸಿನೆಮಾದ ಹೆಸರೇ ‘ಪೊಲೀಸ್ ಕಂಪ್ಲೈಂಟ್’. ಇತ್ತೀಚೆಗಷ್ಟೇ ‘ಮಾರ್ಕ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ವರಲಕ್ಷ್ಮೀ ಶರತಕುಮಾರ್ ಹಾಗೂ ರಾಗಿಣಿ ದ್ವಿವೇದಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ‘ಪೊಲೀಸ್ ಕಂಪ್ಲೈಂಟ್’ ಚಿತ್ರದಲ್ಲಿ ನವೀನ್ ಚಂದ್ರ, ಕೃಷ್ಣ ಸಾಯಿ ನಾಯಕ ನಟರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರವಿಶಂಕರ್, ಶರತ್ ಲೋಹಿತಾಶ್ವ, ಅನಿಲ್ ರಾಜ್, ಸಪ್ತಗಿರಿ, ಪೃಥ್ವಿರಾಜ್, ಜೆಮಿನಿ ಸುರೇಶ್ ಹೀಗೆ ದೊಡ್ಡ ಕಲಾವಿದರ ತಾರಾಗಣವೇ ಚಿತ್ರದಲ್ಲಿದೆ.

ಆ್ಯಕ್ಷನ್ ಜೊತೆಗೊಂದು ಹಾರರ್ ಥ್ರಿಲ್ಲರ್ ಸ್ಟೋರಿ

ಕನ್ನಡದಲ್ಲಿ ಈ ಹಿಂದೆ ಪೂಜಾಗಾಂಧಿ ಅಭಿನಯದ ‘ಅನು’, ‘ದಂಡು’, ‘ಆಪ್ತ’ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿದ್ದ ಸಂಜೀವ ಮೆಗೋಟಿ ‘ಪೊಲೀಸ್ ಕಂಪ್ಲೈಂಟ್’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ‘ಎಂ.ಎಸ್.ಕೆ ಪ್ರಮೀದಾಶ್ರೀ ಫಿಲಂಸ್’ ಬ್ಯಾನರಿನಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಈಗಾಗಲೇ ‘ಪೊಲೀಸ್ ಕಂಪ್ಲೈಂಟ್’ ಚಿತ್ರದ ಬಹುತೇಕ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇತ್ತೇಚೆಗೆ ‘ಪೊಲೀಸ್ ಕಂಪ್ಲೈಂಟ್’ ಚಿತ್ರದ ಮೊದಲ ಟೀಸರ್ ಮತ್ತು ಹಾಡೊಂದನ್ನು ಬಿಡುಗಡೆ ಮಾಡಿದೆ.

‘ಪೊಲೀಸ್ ಕಂಪ್ಲೈಂಟ್’ ಟೀಸರಿಗೆ ಪ್ರೇಮಾ ಸಾಥ್

‘ಪೊಲೀಸ್ ಕಂಪ್ಲೈಂಟ್’ ಚಿತ್ರದ ಟೀಸರ್ ಅನ್ನು ನಟಿ ಪ್ರೇಮಾ ಮತ್ತು ಮೊದಲ ಹಾಡನ್ನು ‘ಕನ್ನಡ ಚಲನಚಿತ್ರ ನಿರ್ದೇಶಕರ ಸಂಘ’ದ ಅಧ್ಯಕ್ಷ ಎನ್.ಆರ್.ಕೆ ವಿಶ್ವನಾಥ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಇದೇ ವೇಳೆ ಮಾತನಾಡಿದ ಚಿತ್ರದ ನಿರ್ದೇಶಕ ಸಂಜೀವ್ ಮೆಗೋಟಿ, ‘ಸುಮಾರು ಹತ್ತು ವರ್ಷದ ನಂತರ ‘ಪೊಲೀಸ್ ಕಂಪ್ಲೈಂಟ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೆ ಬರುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಇದೊಂದು ಆ್ಯಕ್ಷನ್ ಕಂ ಹಾರರ್-ಥ್ರಿಲ್ಲರ್ ಕಥಾಹಂದರದ ಸಿನೆಮಾ. ನಾನು ಮಾಡಿದ ಕರ್ಮ ಹೇಗೆ ನಮ್ಮನ್ನು ಕಾಡುತ್ತದೆ ಎಂಬ ಒಂದು ಎಳೆಯನ್ನು ಇಟ್ಟುಕೊಂಡು ಈ ಸಿನೆಮಾ ಮಾಡಿದ್ದೇವೆ. ಕನ್ನಡ ಮತ್ತು ತೆಲುಗಿನ ಸುಮಾರು 50ಕ್ಕೂ ಹೆಚ್ಚಿನ ಕಲಾವಿದರು ಈ ಸಿನೆಮಾದ ವಿವಿಧ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಈ ಸಿನೆಮಾ ನಿರ್ಮಾಣವಾಗಿದ್ದು, ಏಕಕಾಲಕ್ಕೆ ಎರಡೂ ಭಾಷೆಗಳಲ್ಲೂ ಈ ಸಿನೆಮಾವನ್ನು ತೆರೆಗೆ ತರುವ ಯೋಜನೆಯಿದೆ’ ಎಂದರು.

ಕನ್ನಡ ಮತ್ತು ತೆಲುಗಿನಲ್ಲಿ ತೆರೆಕಾಣಲಿದೆ ‘ಪೊಲೀಸ್ ಕಂಪ್ಲೈಂಟ್’

‘ಪೊಲೀಸ್ ಕಂಪ್ಲೈಂಟ್’ ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ನಟಿ ರಾಗಿಣಿ ದ್ವಿವೇದಿ, ‘ನನ್ನ ಸಿನೆಮಾ ಕೆರಿಯರ್ ನಲ್ಲಿ ಇದೊಂದು ವಿಭಿನ್ನ ಸಿನೆಮಾ. ಇದರಲ್ಲಿ ತಾಯಿ ಮತ್ತು ಮಗುವಿನ ಸಂಬಂಧದ ಸುತ್ತ ನನ್ನ ಪಾತ್ರ ಸಾಗುತ್ತದೆ. ಆ್ಯಕ್ಷನ್, ಹಾರರ್ ಜೊತೆಗೆ ಎಮೋಶನ್ಸ್ ಕೂಡ ಸಿನೆಮಾದಲ್ಲಿದೆ. ಎಲ್ಲಾ ಥರದ ಆಡಿಯನ್ಸ್ ಗೂ ಈ ಸಿನೆಮಾ ಇಷ್ಟವಾಗಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವರ್ಷದ ಮಧ್ಯ ಭಾಗದಲ್ಲಿ ‘ಪೊಲೀಸ್ ಕಂಪ್ಲೈಂಟ್’ ತೆರೆಗೆ

ಚಿತ್ರದ ಬಗ್ಗೆ ಮಾತನಾಡಿದ ನಾಯಕ ನಟರಲ್ಲಿ ಒಬ್ಬರಾದ ಕೃಷ್ಣಸಾಯಿ, ‘ಇಲ್ಲಿಯವರೆಗೆ ತೆಲುಗಿನಲ್ಲಿ ಕೆಲವು ಸಿನೆಮಾಗಳಲ್ಲಿ ಅಭಿನಯಿಸಿದ್ದೇನೆ. ಕನ್ನಡದಲ್ಲಿ ನಾಯಕ ನಟನಾಗಿ ಇದು ನನಗೆ ಮೊದಲ ಸಿನೆಮಾ. ಸಿನೆಮಾದ ಕಥೆ ಮತ್ತು ಪಾತ್ರ ತುಂಬಾ ಚೆನ್ನಾಗಿದೆ’ ಎಂದರು. ಇನ್ನು ಬಿಡುಗಡೆಯಾಗಿರುವ ‘ಪೊಲೀಸ್ ಕಂಪ್ಲೈಂಟ್’ ಚಿತ್ರದ ಮೊದಲ ಗೀತೆಗೆ ಆರೋಹಣ ಸುಧೀಂದ್ರ ಸಂಗೀತ ಸಂಯೋಜಿಸಿದ್ದು, ಬಿ. ಆರ್. ಛಾಯಾ ಈ ಗೀತೆಗೆ ಧ್ವನಿಯಾಗಿದ್ದಾರೆ. ‘ಪೊಲೀಸ್ ಕಂಪ್ಲೈಂಟ್’ ಚಿತ್ರಕ್ಕೆ ಹರೀಶ್ ಸೊಂಡೇಕೊಪ್ಪ ಛಾಯಾಗ್ರಹಣವಿದೆ. ‘ಪೊಲೀಸ್ ಕಂಪ್ಲೈಂಟ್’ ಚಿತ್ರದ ಟೀಸರ್ ಮತ್ತು ಹಾಡು ಬಿಡುಗಡೆ ವೇಳೆ ಹಾಜರಿದ್ದ ಚಿತ್ರದ ಇತರ ಪ್ರಮುಖ ಕಲಾವಿದರು, ತಂತ್ರಜ್ಞರು ಚಿತ್ರದ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಅಂದಹಾಗೆ, ಸದ್ಯ ‘ಪೊಲೀಸ್ ಕಂಪ್ಲೆಂಟ್’ ಚಿತ್ರದ ಆಡಿಯೋ ಹಾಗೂ ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿರುವ ಚಿತ್ರತಂಡ, ಇದೇ ವರ್ಷದ ಮಧ್ಯ ಭಾಗದಲ್ಲಿ ಈ ಚಿತ್ರವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ.

Related Posts

error: Content is protected !!