Street Beat

ಹೊಸಬರ ‘ಸೆಲೆಬ್ರಿಟಿ’ ಚಿತ್ರಕ್ಕೆ ಕಿಚ್ಚ ಸುದೀಪ್ ಬೆಂಬಲ

‘ಸೆಲೆಬ್ರಿಟಿ’ ಸಿನೆಮಾಗೆ ಕಿಚ್ಚ ಸುದೀಪ್ ಸಾಥ್…

ಚಿತ್ರರಂಗಕ್ಕೆ ನಾಯಕ ನಟನಾಗಿ ಎಂಟ್ರಿಯಾಗುತ್ತಿರುವ ಯುವ ಪ್ರತಿಭೆ ಅಶ್ವಿನ್

ಹಿರಿಯ ರಾಜಕಾರಣಿ ಸಾರಾ ಮಹೇಶ್‌ ನಿರ್ಮಿಸುತ್ತಿರುವ ಚಿತ್ರ

ಕೆಲ ದಿನಗಳ ಹಿಂದಷ್ಟೇ ಕರ್ನಾಟಕ ರಾಜ್ಯದ ಹಿರಿಯ ರಾಜಕಾರಣಿ, ಜೆಡಿಎಸ್‌ ನಾಯಕ ಸಾರಾ ಮಹೇಶ್‌ ‘ಗೌರಿ ಆರ್ಟ್ಸ್ ಪ್ರೊಡಕ್ಷನ್’ ಎಂಬ ಹೆಸರಿನಲ್ಲಿ ಚಿತ್ರ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದು, ಕೆಲವರಿಗೆ ಗೊತ್ತಿರಬಹುದು. ಇದೀಗ ಈ ಸಂಸ್ಥೆಯ ಅಡಿಯಲ್ಲಿ ‘ಸೆಲೆಬ್ರಿಟಿ’ ಎಂಬ ಹೆಸರಿನಲ್ಲಿ ಚೊಚ್ಚಲ ಸಿನೆಮಾ ನಿರ್ಮಾಣವಾಗುತ್ತಿದ್ದು, ಇತ್ತೀಚೆಗೆ ಈ ಸಿನೆಮಾದ ಟೈಟಲ್‌ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಅಂದಹಾಗೆ, ‘ಗೌರಿ ಆರ್ಟ್ಸ್ ಪ್ರೊಡಕ್ಷನ್ಸ್‌’ ಸಂಸ್ಥೆಯ ನಿರ್ಮಾಣದ ಈ ಚೊಚ್ಚಲ ಚಿತ್ರದ ಟೈಟಲ್ ಲಾಂಚ್ ಇವೆಂಟ್, ಇತ್ತೀಚೆಗೆ ತುಮಕೂರು ಜಿಲ್ಲೆಯ ಚಿಕ್ಕ ನಾಯಕನಹಳ್ಳಿಯಲ್ಲಿ ವರ್ಣರಂಜಿತವಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಸುದೀಪ್, ‘ಸೆಲೆಬ್ರಿಟಿ’ ಚಿತ್ರದ ಟೈಟಲ್ ಬಿಡುಗಡೆ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು.

‘ಸೆಲೆಬ್ರಿಟಿ’ ಟೈಟಲ್‌ ಟೀಸರ್‌ ಮೆಚ್ಚಿದ ಕಿಚ್ಚ…

‘ಸೆಲೆಬ್ರಿಟಿ’ ಚಿತ್ರದ ಟೈಟಲ್ ಲಾಂಚ್ ಮಾಡಿದ ಬಳಿಕ ಮಾತನಾಡಿದ ನಟ ಕಿಚ್ಚ ಸುದೀಪ್, ‘ನನಗೆ ಈ ಸಿನೆಮಾದ ಟೀಸರ್ ತುಂಬಾ ಇಷ್ಟವಾಯ್ತು. ಟೆಕ್ನಿಕಲ್ ಆಗಿ ಬ್ಯೂಟಿಫುಲ್ ಆಗಿದೆ. ವಿಜಯ್ ಮ್ಯೂಸಿಕ್ ಚೆನ್ನಾಗಿದೆ. ಇವ್ರು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಶಿಷ್ಯ. ‘ಅಂಬಿ ನಿಂಗೆ ವಯಸ್ಸಾಯ್ತು’ ಚಿತ್ರದ ‘ಮಾತಾಡೋ ತಾರೆಯ ಕಂಡ ಹಾಗೇ…’ ಹಾಡು ಹಾಡಿರುವುದು ಇವರೇ. ಇವ್ರ ವಾಯ್ಸ್ ಬ್ಯೂಟಿಫುಲ್‌ ಆಗಿದೆ. ಟೀಸರ್ ಚೆನ್ನಾಗಿ ತೆಗೆದಿದ್ದಾರೆ. ಹೀರೋ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾರೆ. ನೀವು ಮಾಡಿರುವ ಡ್ಯಾನ್ಸ್ ನಮಗೆ ಮಾಡಲು ಹೇಳಿದರೆ ನಾವು ಭಯಪಡುತ್ತೇವೆ. ನಮಗೆ ಅಷ್ಟೆಲ್ಲಾ ಬರಲ್ಲ. ನಿಮಗೆ ಒಳ್ಳೆ ಕಲೆ ಇದೆ. ನಾನು ಇಲ್ಲಿಗೆ ಬರಲು ಮೂಲ ಕಾರಣ ಸಾರಾ ಮಹೇಶ್. ಅವರ ಬಹಳ ವರ್ಷಗಳ ಪರಿಚಯ ನನ್ನನ್ನು ಈ ಕಾರ್ಯಕ್ರಮಕ್ಕೆ ಬರುವಂತೆ ಮಾಡಿತು. ವೈಯಕ್ತಿಕವಾಗಿ ನನಗೆ ಬಹಳ ಬೇಕಾದ ವ್ಯಕ್ತಿ. ‘ಸೆಲೆಬ್ರೆಟಿ’ ಸಿನೆಮಾ ಇವತ್ತು ಇಲ್ಲಿ ಲಾಂಚ್ ಆಗಿದೆ. ಒಂದು ಸಿನೆಮಾ ಮಾಡುವುದು ಸುಲಭದ ಕೆಲಸ. ಆದರೆ ಅದು ಬೆಳೆಯಬೇಕು ಎಂದರೆ ಅದಕ್ಕೆ ನಿಮ್ಮ ಸಹಕಾರ ಬೇಕು. ಟೆಕ್ನಿಕಲ್ ಚಿತ್ರ ಎಕ್ಸಿಲೆಂಟ್ ಆಗಿದೆ. ಸಿನೆಮಾದಲ್ಲಿ ಇರುವ ಪ್ರತಿಯೊಬ್ಬರಿಗೂ ಒಳ್ಳೆದಾಗಲಿ’ ಎಂದರು.

ಅಶ್ವಿನ್‌ ಸಿನೆಮಾ ಕನಸು…

‘ಸೆಲೆಬ್ರೆಟಿ’ ಸಿನೆಮಾದ ನಾಯಕ ನಟ ಅಶ್ವಿನ್ ಮಾತನಾಡಿ, ‘ನಾನು ಇದೇ ಮೊದಲ ಬಾರಿಗೆ ಸುದೀಪ್ ಸರ್ ಎದುರು ಮಾತಾಡ್ತಿದ್ದೇನೆ. ಏನ್ ಮಾತಾಡ್ಬೇಕು ಗೊತ್ತಾಗುತ್ತಿಲ್ಲ. ಅವರಿಗೆ ಧನ್ಯವಾದ. ಚಿಕ್ಕ ವಯಸ್ಸಿನಿಂದ ಕನಸು ಇಟ್ಕೊಂಡು ಬಂದಿದ್ದೇನೆ. ನಿಮ್ಮೆಲ್ಲರ ಹಾರೈಕೆ ನನ್ನ ಮೇಲೆ ಇರಲಿ. ಪ್ರೇಕ್ಷಕರು ಮೆಚ್ಚುವಂಥ ಒಳ್ಳೆಯ ಸಿನೆಮಾವನ್ನು ಆದಷ್ಟು ಬೇಗ ನಿಮ್ಮ ಮುಂದಿಡಲಿದ್ದೇವೆ’ ಎಂದರು.

‘ಸೆಲೆಬ್ರೆಟಿ’ ಮೂಲಕ ಸಂಗೀತ ಕಂ ಬ್ಯಾಕ್‌!

ಇನ್ನು ‘ಸೆಲೆಬ್ರೆಟಿ’ ಸಿನೆಮಾದ ಮೂಲಕ ‘ಯಾರೇ ನೀನು ಚೆಲುವೆ…’ ಖ್ಯಾತಿಯ ಹಿರಿಯ ನಟಿ ಸಂಗೀತಾ ಬಹುಕಾಲದ ನಂತರ ಮತ್ತೆ ಕನ್ನಡ ಚಿತ್ರರಂಗಕ್ಕೆ ಕಂ ಬ್ಯಾಕ್‌ ಆಗುತ್ತಿದ್ದಾರೆ. ಕನ್ನಡದಲ್ಲಿಯೇ ಮಾತು ಶುರು ಮಾಡಿದ ಹಿರಿಯ ನಟಿ ಸಂಗೀತಾ, ‘ನನಗೆ ತುಂಬಾ ಸಂತೋಷವಾಗುತ್ತಿದೆ.‌ ನಾನು ಇಷ್ಟು ವರ್ಷವಾದ ಮೇಲೆ ‘ಸೆಲೆಬ್ರೆಟಿ’ ಸಿನೆಮಾ ಮೂಲಕ ಕಂಬ್ಯಾಕ್ ಆಗುತ್ತಿದ್ದೇನೆ. ನಿರ್ದೇಶಕ ಕಿರಣ್ ಅವರು, ನಿರ್ಮಾಪಕ ಸಾರಾ ಮಹೇಶ್ ಹಾಗೂ ಇಡೀ ತಂಡಕ್ಕೆ ಧನ್ಯವಾದಗಳು. ಸುದೀಪ್ ಅವರ ಅಭಿಮಾನಿ ನಾನು. ಹೀರೋ ತುಂಬಾ ಹಾರ್ಡ್ ವರ್ಕ್ ಮಾಡ್ತಾರೆ.‌ ಈ ತಂಡದ ಜೊತೆ ಕೆಲಸ ಮಾಡುತ್ತಿರುವುದು ಖುಷಿ ಕೊಟ್ಟಿದೆ’ ಎಂದರು.

ಸೆಲೆಬ್ರಿಟಿ ಸಿನೆಮಾವನ್ನು ‘ಗೌರಿ ಆರ್ಟ್ಸ್’ ಬ್ಯಾನರ್ ನಡಿ ಜೆಡಿಎಸ್ ನಾಯಕ ಸಾರಾ ಮಹೇಶ್ ಹಾಗೂ ಸುಷ್ಮಾ ಅಶ್ವಿನ್ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದ ಮೂಲಕ ಯುವ ನಟ ಅಶ್ವಿನ್ ನಾಯಕನಾಗಿ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. ಕಿರಣ್ ವಿಶ್ವನಾಥ್ ‘ಸೆಲೆಬ್ರಿಟಿ’ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ನಾಯಕಿಯಾಗಿ ನಟಿ ಪ್ರಿಯಾಂಕಾ ಆಚಾರ್ ಅಭಿನಯಿಸುತ್ತಿದ್ದಾರೆ. ಈ ಚಿತ್ರವನ್ನು ಸುರೇಶ್ ಬಾಬು ಸಿಬಿ ಪ್ರೆಸೆಂಟ್ ಮಾಡುತ್ತಿದ್ದಾರೆ. ಚಿತ್ರಕ್ಕೆ ಗುಮ್ಮಿನೇನಿ ವಿಜಯ್ ಸಂಗೀತ ನಿರ್ದೇಶನ ಮಾಡುತ್ತಿದ್ದು, ರವಿ ವರ್ಮಾ ಸಾಹಸ ನಿರ್ದೇಶನ, ಗುಣ ಕಲಾ ನಿರ್ದೇಶನ ಚಿತ್ರಕ್ಕಿದೆ. ಅನಿರುದ್ಧ್ ಶಾಸ್ತ್ರೀ ಸಾಹಿತ್ಯ ಹಾಡುಗಳಿಗಿದೆ. ಜಾನಿ ಮಾಸ್ಟರ್ ನೃತ್ಯ ಸಂಯೋಜನೆ ಈ ಚಿತ್ರಕ್ಕಿದೆ. ಇದೇ ವರ್ಷದ ಕೊನೆಗೆ ‘ಸೆಲೆಬ್ರೆಟಿ’ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆಯಲ್ಲಿದೆ ಚಿತ್ರತಂಡ.

Related Posts

error: Content is protected !!