‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ನಲ್ಲಿ ಶೂಟಿಂಗ್ ಕಂಪ್ಲೀಟ್!
‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಚಿತ್ರೀಕರಣ ಅಂತ್ಯ
‘ಬಾರ್’ನಲ್ಲಿ ಶುರುವಾದ ಚಿತ್ರೀಕರಣ ‘ದೇವರ ತಾಣ’ದಲ್ಲಿ ಮುಕ್ತಾಯ!
ಪೋಸ್ಟ್ ಪ್ರೊಡಕ್ಷನ್ ಕೆಲಸದತ್ತ ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’
ಸ್ಯಾಂಡಲ್‌ವುಡ್‌ನ ಸೆನ್ಸೇಶನಲ್ ಸ್ಟಾರ್ ಕೋಮಲ್ ಕುಮಾರ್ ನಾಯಕ ನಟನಾಗಿ ಅಭಿನಯಿಸುತ್ತಿರುವ ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಚಿತ್ರ ಕಳೆದ ವರ್ಷ ಮಾನ್ಸೂನ್ ಸಮಯದಲ್ಲಿ ಸೆಟ್ಟೇರಿದ್ದು, ಅನೇಕರಿಗೆ ಗೊತ್ತಿರಬಹುದು. ಇದೀಗ ಈ ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ಪೂರ್ಣಗೊಂಡಿದೆ.
ಹೌದು, ಸುಮಾರು ಎರಡು ಹಂತಗಳಲ್ಲಿ 75 ದಿನಗಳ ಕಾಲ ‘ಸಂಗೀತಾ ಬಾರ್ ಅಂಡ್ ರೆಸ್ಟೋರೆಂಟ್’ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಕುಂದಾಪುರ, ಶಿವಮೊಗ್ಗ, ತೀರ್ಥಹಳ್ಳಿ ಸೇರಿದಂತೆ ಕರಾವಳಿ ಮಲೆನಾಡು ಭಾಗದಲ್ಲಿ ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಚಿತ್ರದ ಬಹುತೇಕ ಚಿತ್ರೀಕರಣ ನಡೆಸಿರುವ ಚಿತ್ರತಂಡ, ಇತ್ತೀಚೆಗೆ ಕುಂಬಳಕಾಯಿ ಒಡೆದು ಚಿತ್ರೀಕರಣ ಮುಕ್ತಾಯಗೊಳಿಸಿದೆ.
ಏಳು ಸೆಟ್‌ಗಳಲ್ಲಿ ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಚಿತ್ರೀಕರಣ
ಇನ್ನು ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಚಿತ್ರದ ಚಿತ್ರೀಕರಣಕ್ಕಾಗಿ ಕುಂದಾಪುರದ ಅಂಪಾರಿನ ವಾಲ್ತೂರು ಗ್ರಾಮದಲ್ಲಿ ಏಳು ವಿಭಿನ್ನ ವಿನ್ಯಾಸದ ಬೃಹತ್ ಸೆಟ್‌ಗಳನ್ನು ನಿರ್ಮಿಸಿ, ಅದರಲ್ಲಿ ಚಿತ್ರದ ಬಹುಭಾಗದ ಚಿತ್ರೀಕರಣವನ್ನು ನಡೆಸಲಾಗಿರುವುದು ವಿಶೇಷ. ಕಥೆಯ ಬೇಡಿಕೆಗೆ ತಕ್ಕಂತೆ, ಸುಮಾರು ಎರಡು ಎಕರೆ ವಿಸ್ತೀರ್ಣದ ವಿಶಾಲವಾದ ಜಾಗದಲ್ಲಿ ಏಳು ವೈವಿಧ್ಯಮಯ ಸೆಟ್‌ಗಳನ್ನು ಹಾಕಿ, ಆ ಸೆಟ್‌ನಲ್ಲಿಯೇ ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಚಿತ್ರದ ಶೇಕಡಾ 90ರಷ್ಟು ಚಿತ್ರೀಕರಣವನ್ನು ಈ ಸೆಟ್‌ಗಳಲ್ಲಿಯೇ ಚಿತ್ರೀಕರಿಸಲಾಗಿದೆ ಎಂಬುದು ಚಿತ್ರತಂಡದ ಮಾಹಿತಿ. 
ಬೃಹತ್ ಕಲಾವಿದರ ತಾರಾಗಣದಲ್ಲಿ ಮೂಡಿರುವ ಚಿತ್ರ…
‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಚಿತ್ರದಲ್ಲಿ ಕಲಾವಿದರ ಬೃಹತ್ ದಂಡೇ ತೆರೆಮೇಲೆ ಕಾಣಿಸಿಕೊಳ್ಳುತ್ತಿದೆ. ಇದೇ ಮೊದಲ ಬಾರಿಗೆ ನಾಯಕ ನಟ ಕೋಮಲ್, ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಸಿನಿಮಾದಲ್ಲಿ ಒಂದು ಹಿಂದಿನ ಚಾರಿತ್ರಿಕತೆ ಮತ್ತೊಂದು ಇಂದಿನ ಆಧುನಿಕತೆ ಭಾಗವಾಗಿರುವ ಎರಡು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂದರಲ್ಲಿ ಆಸ್ಥಾನವೊಂದರ ವರ್ಣಚಿತ್ರ ಕಲಾವಿದನಾಗಿ ಕಾಣಿಸಿಕೊಂಡರೆ, ಮತ್ತೊಂದರಲ್ಲಿ ಸಿನಿಮಾ ನಿರ್ದೇಶಕನ ಪಾತ್ರದಲ್ಲಿ ಕೋಮಲ್ ‘ಡಬಲ್’ ರೋಲ್ ಪ್ಲೇ ಮಾಡುತ್ತಿದ್ದಾರೆ. ಇನ್ನು ಮೇಘನಾ ರಾಜ್ ‘ದೇವರ ತಾಣ’ದಲ್ಲಿ ರಾಣಿಯಾಗಿ ಕಾಣಿಸಿಕೊಂಡರೆ, ‘ಸಂಗೀತ’ ಬಾರ್ ನಲ್ಲಿ ನಾಯಕಿಯಾಗಿ ಜೊತೆಯಾಗುತ್ತಾರೆ.
ಉಳಿದಂತೆ ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡ್, ವಜ್ರಧೀರ್ ಜೈನ್, ಉತ್ಸವ್, ಕಾರ್ತಿಕ್ ರಾವ್, ರಾಘು ರಾಮನಕೊಪ್ಪ, ಸಿರಿಜಾ, ವರ್ಧನ್, ಕರಣ್ , ರಾಧಿಕ ರಾವ್ ದಿವ್ಯಶ್ರೀ, ಅಕ್ಷತಾ, ಅರಸು, ಮಹೇಶ್, ನಾಗರಾಜ್ , ಚಿತ್ರಕಲಾ, ಉಮೇಶ್ ಕಿನ್ನಾಳ್, ಮನೀಶ್ ಶೆಟ್ಟಿ, ರಾಧಾಕೃಷ್ಣ, ಮಹಾಬಲೇಶ್ವರ ಭಟ್ ಹೀಗೆ ದೊಡ್ಡ ಕಲಾವಿದರ ಬೃಹತ್ ತಾರಾಗಣವೇ ಚಿತ್ರದಲ್ಲಿದೆ. ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಕೂಡ ಚಿತ್ರದ ಪಾತ್ರವೊಂದಕ್ಕೆ ತೆರೆಮೇಲೆ ಬಣ್ಣ ಹಚ್ಚಿದ್ದಾರೆ.
ಈ ಹಿಂದೆ ‘ಕತ್ತಲೆಕೋಣೆ’, ‘ಇನಾಮ್ದಾರ್’, ‘ಗುಂಮ್ಟಿ’ ಮೊದಲಾದ ಚಿತ್ರಗಳಿಗೆ ಆಕ್ಷನ್-ಕಟ್ ಹೇಳಿರುವ ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ವಿಕಾಸ್ ಎಸ್. ಶೆಟ್ಟಿ ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಾಣ ಮಾಡುತ್ತಿದ್ದಾರೆ. 
ಒಂದೇ ಸಿನಿಮಾಕ್ಕೆ ಎರಡು ಟೈಟಲ್‌ಗಳಂತೆ!
ಅಂದಹಾಗೆ, ಈ ಸಿನಿಮಾದ ಹೆಸರು ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಅಂತಿದ್ದರೂ, ಈ ಒಂದೇ ಸಿನಿಮಾದಲ್ಲಿ ಎರಡು ಟೈಟಲ್‌ಗಳಿವೆ! ಎನ್ನುತ್ತಾರೆ ಚಿತ್ರದ ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ. ಅದಕ್ಕೆ ಕಾರಣ ಈ ಚಿತ್ರದ ಕಥಾಹಂದರ.
ಚಿತ್ರದ ಮೊದಲಾರ್ಧ ಬಾರ್‌ನಲ್ಲಿ ಶುರುವಾಗಿ, ಬಾರ್ ಸುತ್ತ ಸಾಗಿದರೆ, ದ್ವಿತೀಯಾರ್ಧ ದೇವರ ತಾಣದಲ್ಲಿ ಶುರುವಾಗಿ ಅಲ್ಲೇ ಮುಗಿಯುತ್ತದೆ. ಹಾಗಾಗಿ ‘ಚಿತ್ರದ ಮೊದಲಾರ್ಧ ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಆಗಿದ್ದರೆ, ದ್ವಿತೀಯಾರ್ಧ ‘ದೇವರ ತಾಣ’ ಅಂತಿದೆ. ಈ ಎರಡೂ ಹೆಸರುಗಳು ಕೂಡ ನಮ್ಮ ಸಿನಿಮಾದ ಟೈಟಲ್ಗಳು! ಆದರೆ ಸೆನ್ಸಾರ್ ನಿಯಮದಂತೆ, ಒಂದು ಸಿನಿಮಾಕ್ಕೆ ಒಂದೇ ಹೆಸರು ಇಡಬೇಕಾಗಿರುವುದರಿಂದ, ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಹೆಸರಿನಲ್ಲಿ ಸಿನಿಮಾ ಥಿಯೇಟರಿಗೆ ತರುತ್ತಿದ್ದೇವೆ’ ಎನ್ನುವುದು ಚಿತ್ರದ ಟೈಟಲ್ ಬಗ್ಗೆ ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ನೀಡುವ ವಿವರಣೆ. ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಚಿತ್ರದಲ್ಲಿ ನಾಲ್ಕು ವಿಭಿನ್ನ ಹಾಡುಗಳು, ಫೈಟ್ಸ್, ಕಾಮಿಡಿ, ಎಮೋಶನ್, ಜೊತೆಗೊಂದು ಸ್ಪಿರೀಚುಯಲ್ ಸ್ಟೋರಿ… ಹೀಗೆ ಒಂದು ಕಂಪ್ಲೀಟ್ ಎಂಟರ್‌ಟೈನ್ಮೆಂಟ್ ಸಿನಿಮಾಕ್ಕೆ ಏನೇನೂ ಇರಬೇಕೋ, ಅದೆಲ್ಲವೂ ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ನಲ್ಲಿ ಸಿಗುತ್ತದೆ ಎಂಬುದು ಚಿತ್ರತಂಡದ ಭರವಸೆಯ ಮಾತು.














