ಮೊದಲ ಹಂತದ ಚಿತ್ರೀಕರಣ ಮುಗಿಸಿದ ‘ಹುಬ್ಬಳ್ಳಿ ಹಂಟರ್ಸ್’
‘ಹುಬ್ಬಳ್ಳಿ ಹಂಟರ್ಸ್’ ಫಸ್ಟ್ ಶೆಡ್ಯೂಲ್ ಶೂಟಿಂಗ್ ಕಂಪ್ಲೀಟ್
ಉತ್ತರ ಕರ್ನಾಟಕದ ಸೊಗಡಿನ ಕಥೆ ಹೊಂದಿರುವ ‘ಹುಬ್ಬಳ್ಳಿ ಹಂಟರ್ಸ್’ ಚಿತ್ರ
‘ಹುಬ್ಬಳ್ಳಿ ಹಂಟರ್ಸ್’ನಲ್ಲಿ ಕಂಟೆಂಟ್ ಕ್ರಿಯೇಟರ್ಸ್‌ಗಳ ದರ್ಬಾರ್
ಕನ್ನಡ ಚಿತ್ರರಂಗದಲ್ಲಿ ಕೆಲ ವರ್ಷಗಳ ಹಿಂದೆ ರಿಷಭ್ ಶೆಟ್ಟಿ ನಾಯಕ ನಟನಾಗಿ ಮತ್ತು ಜಯತೀರ್ಥ ನಿರ್ದೇಶನದಲ್ಲಿ ಮೂಡಿಬಂದಿದ್ದ ‘ಬೆಲ್ ಬಾಟಮ್’ ಎಂಬ ಹಿಟ್ ಸಿನೆಮಾವನ್ನು ನಿರ್ಮಾಣ ಮಾಡಿದ್ದ ನಿರ್ಮಾಪಕ ಸಂತೋಷ್ ಕುಮಾರ್ ಕೆ. ಸಿ ಈಗ ಮತ್ತೊಂದು ಹೊಸ ಸಿನೆಮಾವನ್ನು ಪ್ರೇಕ್ಷಕರ ಮುಂದೆ ತರುವ ತಯಾರಿ ಮಾಡಿಕೊಂಡಿದ್ದಾರೆ. ಈ ಸಿನೆಮಾಕ್ಕೆ ‘ಹುಬ್ಬಳ್ಳಿ ಹಂಟರ್ಸ್’ ಎಂದು ಹೆಸರಿಡಲಾಗಿದ್ದು, ತಮ್ಮದೇ ‘ಗೋಲ್ಡನ್ ಹಾರ್ಸ್ ಸಿನೆಮಾ’ ಬ್ಯಾನರ್‌ನಡಿ ‘ಹುಬ್ಬಳ್ಳಿ ಹಂಟರ್ಸ್’ ಚಿತ್ರಕ್ಕೆ ಸಂತೋಷ್ ಕುಮಾರ್ ಕೆ. ಸಿ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ. ಈ ಹಿಂದೆ ದಿಗಂತ್ ಅಭಿನಯದ ‘ಎಡಗೈ ಅಪಘಾತಕ್ಕೆ ಕಾರಣ’ ಚಿತ್ರವನ್ನು ನಿರ್ದೇಶಿಸಿದ್ದ ಸಮರ್ಥ್ ಬಿ. ಕಡ್ಕೋಲ್ ‘ಹುಬ್ಬಳ್ಳಿ ಹಂಟರ್ಸ್’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.
ಕೆಲ ತಿಂಗಳ ಹಿಂದೆ ಹುಬ್ಬಳ್ಳಿಯಲ್ಲಿ ‘ಹುಬ್ಬಳ್ಳಿ ಹಂಟರ್ಸ್’ ಚಿತ್ರದ ಮುಹೂರ್ತ ನೆರವೇರೆಸಿದ್ದ ಚಿತ್ರತಂಡ, ಇದೀಗ ಸದ್ದಿಲ್ಲದೆ ಚಿತ್ರದ ಮೊದಲ ಹಂತದ ಶೂಟಿಂಗ್ ಮುಗಿಸಿದೆ. ಹುಬ್ಬಳ್ಳಿ ನಗರದಲ್ಲಿ ಸುಮಾರು 14 ದಿನ ಶೂಟಿಂಗ್ ಚಿತ್ರೀಕರಣ ನಡೆಸಿದ ಚಿತ್ರತಂಡ, ಇದೀಗ ಮೊದಲ ಹಂತದ ಚಿತ್ರೀಕರಣ ಮುಗಿಸಿದ್ದು, ಮಾರ್ಚ್ ತಿಂಗಳಲ್ಲಿ ಎರಡನೇ ಹಂತದ ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಂಡಿದೆ.
ನಟ ಪ್ರಮೋದ್ ಶೆಟ್ಟಿ, ‘ಮಹಾನಟಿ’ ಖ್ಯಾತಿಯ ಧನ್ಯಶ್ರೀ ಸುಜಿತ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ. ಭಾರತದಾದ್ಯಂತ ಇರುವ ಖ್ಯಾತ ಕಂಟೆಂಟ್ ಕ್ರಿಯೇಟರ್ಸ್ ಈ ಚಿತ್ರದಲ್ಲಿ ನಟಿಸುತ್ತಿರುವುದು ಮತ್ತೊಂದು ವಿಶೇಷ. ಇನ್ನು ಸಿನೆಮಾದ ಟೈಟಲ್ಲೇ ಹೇಳುವಂತೆ, ಇದು ಉತ್ತರ ಕರ್ನಾಟಕ ಸೊಗಡಿನ ಕಥಾಹಂದರ ಹೊಂದಿರುವ ಚಿತ್ರ. ಸಮರ್ಥ್ ಬಿ. ಕಡ್ಕೋಲ್ ಕಥೆ ಬರೆದಿರುವ ಈ ಚಿತ್ರಕ್ಕೆ ರಾಹುಲ್ ವಿ. ಪಾರ್ವತಿಕರ್, ಅಮಿತ್ ಕಾರ್ವ್ಕರ್ ಮತ್ತು ಚೇತನ್ ಮರಂಬೀದ್ ಸಂಭಾಷಣೆ ಬರೆದಿದ್ದಾರೆ. ‘ಹುಬ್ಬಳ್ಳಿ ಹಂಟರ್ಸ್’ ಚಿತ್ರಕ್ಕೆ ಅಭಿಮನ್ಯು ಸದಾನಂದನ್ ಛಾಯಾಗ್ರಹಣ, ಪ್ರಸನ್ನ ಕೇಶವ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.















