‘ದಿ ರೈಸ್ ಆಫ್ ಅಶೋಕ’ನಿಗೆ ಚಂದನವನದ ತಾರೆಯರ ಸಾಥ್!
‘ದಿ ರೈಸ್ ಆಫ್ ಅಶೋಕ’ ಸಿನೆಮಾಕ್ಕೆ ಸ್ಟಾರ್ಸ್ ಸಪೋರ್ಟ್
ಸತೀಶ್ ನೀನಾಸಂ ಹೊಸಚಿತ್ರದ ಟ್ರೇಲರ್ ಬಿಡುಗಡೆಗೆ ತಾರೆಯರ ದಂಡು…
ಇದೇ ಫೆ. 27ಕ್ಕೆ ‘ದಿ ರೈಸ್ ಆಫ್ ಅಶೋಕ’ ತೆರೆಗೆ
ನಟ ಸತೀಶ್ ನೀನಾಸಂ ಅಭಿನಯ ಬಹು ನಿರೀಕ್ಷಿತ ‘ದಿ ರೈಸ್ ಆಫ್ ಅಶೋಕ’ ಚಿತ್ರ ಇದೀಗ ಬಿಡುಗಡೆಯ ಹೊಸ್ತಿಲಿನಲ್ಲಿ ಬಂದು ನಿಂತಿದೆ. ಈಗಾಗಲೇ ‘ದಿ ರೈಸ್ ಆಫ್ ಅಶೋಕ’ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೇ 2026ರ ಫೆಬ್ರವರಿ 27ರಂದು ‘ದಿ ರೈಸ್ ಆಫ್ ಅಶೋಕ’ನನ್ನು ಥಿಯೇಟರಿಗೆ ತರುವ ಯೋಜನೆ ಹಾಕಿಕೊಂಡಿದೆ.
ಸದ್ಯ ‘ದಿ ರೈಸ್ ಆಫ್ ಅಶೋಕ’ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೀಗ ‘ದಿ ರೈಸ್ ಆಫ್ ಅಶೋಕ’ ಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ.
ಇತ್ತೀಚೆಗೆ ಬೆಂಗಳೂರಿನ ಜಿ. ಟಿ. ಮಾಲ್‌ನಲ್ಲಿ ನಡೆದ ‘ದಿ ರೈಸ್ ಆಫ್ ಅಶೋಕ’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ನಟರಾದ ಕ್ರೇಜಿಸ್ಟಾರ್ ರವಿಚಂದ್ರನ್, ದುನಿಯಾ ವಿಜಯ್, ವಸಿಷ್ಠ ಸಿಂಹ, ಲೂಸ್ ಮಾದ ಯೋಗಿ, ದಿಗಂತ್, ನಾಗಭೂಷಣ್ ಮತ್ತು ಶಿವರಾಜ್ ಕೆ. ಆರ್. ಪೇಟೆ ಸೇರಿದಂತೆ ಅನೇಕ ತಾರೆಯರು ಅತಿಥಿಗಳಾಗಿ ಆಗಮಿಸಿ ‘ದಿ ರೈಸ್ ಆಫ್ ಅಶೋಕ’ ಚಿತ್ರಕ್ಕೆ ಶುಭ ಹಾರೈಸಿದರು. ಮೊದಲಾದವರು ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
‘ದಿ ರೈಸ್ ಆಫ್ ಅಶೋಕ’ನ ಬೆನ್ನು ತಟ್ಟಿದ ಕ್ರೇಜಿಸ್ಟಾರ್!
‘ದಿ ರೈಸ್ ಆಫ್ ಅಶೋಕ’ ಚಿತ್ರದ ಟ್ರೇಲರ್ ಬಿಡುಗಡೆ ಬಳಿಕ ಮಾತನಾಡಿದ ನಟ ಕಂ ನಿರ್ದೇಶಕ ಕ್ರೇಜಿಸ್ಟಾರ್ ರವಿಚಂದ್ರನ್, ‘ಸತೀಶ್ ಚಿತ್ರದ ಟ್ರೇಲರ್, ಹಾಡು ಯಾವುದು ಕಾಣಿಸಲಿಲ್ಲ. ನಿನ್ನ ಕಣ್ಣಲ್ಲಿ ನೀರು ಕಾಣಿಸಿತು. ಅದು ಹೊರಗಡೆ ಬರಲಿಲ್ಲ. ನೀನು ಅಲ್ಲೇ ಅರ್ಧ ಗೆದ್ದಾಯ್ತು.
ಗಂಡ್ಸು ಕಣ್ಣೀರು ಹಾಕಬಾರದು. ಒಳಗೆ ಇಟ್ಟುಕೊಳ್ಳಬೇಕು. ಸಿನೆಮಾ ಮೇಲೆ ಪ್ರೀತಿ, ಆಸೆ, ಕನಸು ಇದೆ ಅನ್ನೋದು ನಿನ್ನ ಮಾತು, ನಿನ್ನ ಸ್ನೇಹಿತರು ಹೇಳ್ತಾರೆ. ನಿನ್ನ ಕನಸು, ಆಸೆ ನಿಜ ಆಗಲಿ. ಹೆಣ್ಮಕ್ಕಳಿಗೆ ಡೆಲಿವರಿ ನೋವು ಗೊತ್ತು. ಆದರೆ ಪ್ರತಿ ಸಿನೆಮಾ ಮಾಡುವಾಗ ಆಗುವುದು ಡೆಲಿವರಿ ನೋವೇ. ಆ ಆಪರೇಷನ್ ಮಾಡುವುದು ಪ್ರೇಕ್ಷಕರು. ಸಿಸರಿನ್ ಮಾಡುವುದು ನೀವೇ. ಮೊದಲು ಆಪರೇಷನ್ ಮಾಡಿ. ಮೊದಲು ಬದುಕಿಸಲು ಪ್ರಯತ್ನಿಸಿ. ಮೊದಲು ಸಿನೆಮಾ ನೋಡಿ. ಪ್ರೇಕ್ಷಕರ ಆಗಿ ಸಿನೆಮಾಗೆ ಹೋಗಿ. ವಿಮರ್ಶೆ ಮಾಡಲು ಹೋಗಬೇಡಿ. ಸಿನೆಮಾದವರು ಲೈಕ್ ಗೆ ಸಾಯುವುದನ್ನು ಬಿಡಿ. ಪ್ರೇಕ್ಷಕರನ್ನು ಸಿನೆಮಾ ಥಿಯೇಟರ್ ನಲ್ಲಿ ಸಿನೆಮಾ ನೋಡಲು ಬಿಡಿ. ಎರಡೂವರೆ ಗಂಟೆ ಅವರನ್ನು ಮೈಮರೆಸಲು ಬಿಡಿ. ಚೆನ್ನಾಗಿ ಆಗಲಿ ಎಂದು ಬಯಸುತ್ತೇವೆ. ಚೆನ್ನಾಗಿ ಮಾಡುವುದು ಸಿನೆಮಾದವರ ಕೆಲಸ. ಒಬ್ಬನಿಗೆ ನೂರು ರೂಪಾಯಿ ಕೊಟ್ಟು ಸಿನೆಮಾ ನೋಡಿ. ಒಂದಷ್ಟು ಸಿನೆಮಾ ಗೆಲ್ಸಿ’ ಎಂದು ಪ್ರೇಕ್ಷಕರಿಗೆ ಕಿವಿ ಮಾತು ಹೇಳಿದರು.
‘ದಿ ರೈಸ್ ಆಫ್ ಅಶೋಕ’ನ ಮೇಲೆ ಸತೀಶ್‌ಗೆ ಭರಪೂರ ನಿರೀಕ್ಷೆ…
ನಟ ನೀನಾಸಂ ಸತೀಶ್ ಮಾತನಾಡಿ, ‘ರವಿಚಂದ್ರನ್ ನಮಗೆ ತಂದೆ ಸಮನ. ವಿಜಿ ಸರ್ ಒಂದು ಕಾಲ್ ಗೆ ಬಂದ್ರು. ಯೋಗಿ ನನ್ನ ಗೆಳೆಯ. ವಸಿಷ್ಠ ಹಾರ್ಟ್ಲಿ ಮಾತನಾಡುವ ಗೆಳೆಯ. ನಾಗಭೂಷಣ್, ದಿಗ್ಗಿ, ಕೆ. ಆರ್. ಪೇಟೆ ಎಲ್ಲರೂ ನನಗೆ ಸಪೋರ್ಟ್ ಮಾಡಲು ಬಂದಿರುವುದಕ್ಕೆ ಧನ್ಯವಾದ. ನಮ್ಮ ‘ದಿ ರೈಸ್ ಆಫ್ ಅಶೋಕ’ ಸಿನೆಮಾವನ್ನು ಇದೇ ತಿಂಗಳ 27 ರಂದು ಪ್ರೇಕ್ಷಕರ ಮುಂದೆ ಇಡುತ್ತಿದ್ದೇವೆ.
ನೀವು ಸಾಂಗ್ ನೋಡಿದ್ದೀರಾ? ನನ್ನ ಸ್ನೇಹಿತರು ಎಲ್ಲರೂ ಟ್ರೇಲರ್ ಲಾಂಚ್ ಗೆ ಬಂದಿದ್ದಾರೆ. ಸಪ್ತಮಿ ನನ್ನ ರೀತಿ ಚಿತ್ರದ ಹೀರೋ. ತೆಲುಗು, ತಮಿಳು ಮಾಡ್ತೀನಿ ಎಂದು ಹೇಳಿಕೊಂಡು ಬರ್ತಿದ್ದೆ. ಎಲ್ಲರೂ ಇವನಿಗೆ ‘ಕೆಜಿಎಫ್’, ‘ಕಾಂತಾರ’ ಹುಚ್ಚು ಹಿಡಿದಿದೆ ಎಂದು ಮಾತನಾಡಿಕೊಂಡರು. ನನಗೆ ‘ಕೆಜಿಎಫ್’, ‘ಕಾಂತಾರ’ ಹುಚ್ಚು ಹಿಡಿದಿಲ್ಲ. ನನ್ನ ಸಿನೆಮಾದ ಹುಚ್ಚು ಅದು. ನಮ್ಮ ಸಿನೆಮಾವನ್ನು ಅವರು ನೋಡಲಿ. ಮೊದಲ ಚಿತ್ರ ತೋರಿಸಿದೆ. ಸಿನೆಮಾ ಸಖತ್ ಆಗಿ ಇದೆ ಎಂದು ತೆಲುಗು, ತಮಿಳಿನಲ್ಲಿ 200 ಥಿಯೇಟರ್ ನಲ್ಲಿ ರಿಲೀಸ್ ಮಾಡುತ್ತಿದ್ದಾರೆ. ಸಿನೆಮಾ ಬಗ್ಗೆ ಜಾಸ್ತಿ ಮಾತಾನಾಡಲ್ಲ. ಇದೇ ತಿಂಗಳ 27ಕ್ಕೆ ‘ದಿ ರೈಸ್ ಆಫ್ ಅಶೋಕ’ ತೆರೆಗೆ ಬರ್ತಿದೆ. ಎರಡೂವರೆ ಕಾಲ ನನ್ನ ಕಷ್ಟ ಕಾಲದಲ್ಲಿ ನಿಂತ ಎಲ್ಲರಿಗೂ ಧನ್ಯವಾದ’ ಎಂದರು.
‘ದಿ ರೈಸ್ ಆಫ್ ಅಶೋಕ’ ಚಿತ್ರ ಇದೇ ತಿಂಗಳು ರಿಲೀಸ್ ಆಗುತ್ತಿದೆ. ದೊಡ್ಡಮಟ್ಟದಲ್ಲಿಯೇ ಈ ಸಿನೆಮಾ ತೆರೆಗೆ ಬರ್ತಿದೆ. ಕನ್ನಡ ಅಷ್ಟೆ ಅಲ್ಲ, ಇತರ ಭಾಷೆಯಲ್ಲೂ ಈ ಸಿನೆಮಾ ಬಿಡುಗಡೆಯಾಗುತ್ತಿದೆ. ಈ ಚಿತ್ರ ‘ವೃದ್ಧಿ ಕ್ರಿಯೇಷನ್’ ಹಾಗೂ ‘ಸತೀಶ್ ಪಿಕ್ಚರ್ಸ್ ಹೌಸ್ ಪ್ರೊಡಕ್ಷನ್’ ನಡಿ ಮೂಡಿಬರ್ತಿದೆ. ವರ್ಧನ್ ನರಹರಿ, ಜೈಷ್ಣವಿ ಜೊತೆ ಸೇರಿ ಸತೀಶ್ ನೀನಾಸಂ ಕೂಡಾ ಸಿನೆಮಾಗೆ ಹಣ ಹಾಕಿದ್ದಾರೆ.















