Pop Corner

‘ಅಪರಾಧಿ ನಾನಲ್ಲ’ ಎನ್ನುತ್ತಿರುವ ಹೊಸಬರು!

ಹೊಸ ಪ್ರತಿಭೆಗಳ ‘ಅಪರಾಧಿ ನಾನಲ್ಲ’ ಚಿತ್ರ ತೆರೆಗೆ ಸಿದ್ಧ

ಹೊರಬಂತು ಸಸ್ಪೆನ್ಸ್-ಕ್ರೈಂ-ಥ್ರಿಲ್ಲರ್‌ ಶೈಲಿಯ ‘ಅಪರಾಧಿ ನಾನಲ್ಲ’ ಟ್ರೇಲರ್‌ 

2026ರ ಜುಲೈ 3ಕ್ಕೆ ‘ಅಪರಾಧಿ ನಾನಲ್ಲ’ ಚಿತ್ರ ರಿಲೀಸ್

ಕನ್ನಡ ಚಿತ್ರರಂಗದಲ್ಲಿ ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ಹೊಸ ಚಿತ್ರವೊಂದು ತೆರೆಗೆ ಬರಲು ಸಿದ್ಧವಾಗುತ್ತಿದೆ. ಆ ಚಿತ್ರದ ಹೆಸರು ‘ಅಪರಾಧಿ ನಾನಲ್ಲ’. ಈಗಾಗಲೇ ‘ಅಪರಾಧಿ ನಾನಲ್ಲ’ ಚಿತ್ರದ ಬಹುತೇಕ ಪೋಸ್ಟ್‌ ಪ್ರೊಡಕ್ಷನ್ಸ್‌ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ತಯಾರಿ ಮಾಡಿಕೊಂಡಿದೆ. ಸದ್ಯ ಇದೇ 2026ರ ಜುಲೈ 3ಕ್ಕೆ ‘ಅಪರಾಧಿ ನಾನಲ್ಲ’ ಚಿತ್ರವನ್ನು ತೆರೆಗೆ ಬರಲಿದ್ದು, ಇದೇ ವೇಳೆ ಚಿತ್ರತಂಡ ‘ಅಪರಾಧಿ ನಾನಲ್ಲ’ ಚಿತ್ರದ ಟ್ರೇಲರ್‌ ಅನ್ನು ಬಿಡುಗಡೆ ಮಾಡಿ, ಚಿತ್ರದ ಬಗ್ಗೆ ಮಾಧ್ಯಮಗಳಿಗೆ ಒಂದಷ್ಟು ಮಾಹಿತಿಯನ್ನು ನೀಡಿದೆ.

‘ಅಪರಾಧಿ ನಾನಲ್ಲ’ ಅಂತಿರೋದು ಯಾರು?

ಅಂದಹಾಗೆ, ‘ಅಪರಾಧಿ ನಾನಲ್ಲ’ ಬಹುತೇಕ ಹೊಸಬರೇ ಸೇರಿ ನಿರ್ಮಿಸಿರುವ ಚಿತ್ರ. ಅದರಲ್ಲೂ ದಕ್ಷಿಣ ಕನ್ನಡ ಮೂಲದ ಪ್ರತಿಭೆಗಳೇ ಈ ಚಿತ್ರದ ಹಿಂದಿರುವ ಶಕ್ತಿ ಎಂಬುದು ಮತ್ತೊಂದು ವಿಶೇಷ.

ಅರ್ಜುನ್ ದೇವ್‌, ಅಮೃತಾ, ಪ್ರಮೋದ್ ಶೆಟ್ಟಿ, ನವಿಲ್ ಪಡೀಲ್‌, ಅಶೋಕ್ ಹೆಗ್ಡೆ, ನೀತೂ ಶೆಟ್ಟಿ ಸೇರಿದಂತೆ ಅನೇಕ ಕಲಾವಿದರು ಹಲವರು ‘ಅಪರಾಧಿ ನಾನಲ್ಲ’ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ತಮ್ಮದಲ್ಲದ ತಪ್ಪಿಗೆ ಮೂವರು ಕೈದಿಗಳು ಜೈಲಿಗೆ ಸೇರಿರುತ್ತಾರೆ. ಕೊನೆಗೆ ಅವರು ಹೇಗೆ ಜೈಲಿನಿಂದ ಹೊರಗೆ ಬರ್ತಾರೆ. ಜೈಲಿನಲ್ಲಿ ಸಿಲುಕಿರುವ ಅವರ ಹೋರಾಟ ಹೇಗಿರುತ್ತದೆ? ಅನ್ನೋದೆ ‘ಅಪರಾಧಿ ನಾನಲ್ಲ’ ಚಿತ್ರದ ಕಥೆಯ ಒಂದು ಎಳೆ. ಸದ್ಯ  ‘ಅಪರಾಧಿ ನಾನಲ್ಲ’ ಸಿನೆಮಾದ ಟ್ರೇಲರ್ ರಿಲೀಸ್ ಆಗಿದ್ದು, ಒಂದು ಕೊಲೆ ಅದರ ಸುತ್ತ ನಡೆಯುವ ಒಂದಷ್ಟು ರೋಚಕ ವಿಚಾರಗಳ ಸುತ್ತ ಚಿತ್ರ ಸಾಗುತ್ತವೆ. ಸಸ್ಪೆನ್ಸ್‌ ಕಂ ಥ್ರಿಲ್ಲರ್‌ ಶೈಲಿಯಲ್ಲಿ ‘ಅಪರಾಧಿ ನಾನಲ್ಲ’ ಚಿತ್ರ ತೆರೆಮೇಲೆ ಮೂಡಿಬರುತ್ತಿದೆ.

‘ಅಪರಾಧಿ ನಾನಲ್ಲ’ ಚಿತ್ರದ ಮೇಲೆ ತಂಡದ ವಿಶ್ವಾಸ… 

‘ಎಸ್‌.ಎಲ್‌.ವಿ ಕಲರ್ಸ್ ಅನುಗ್ರಹ ಫಿಲಂಸ್‌’ ಬ್ಯಾನರ್ ನಲ್ಲಿ ಅಜಿತ್ ಚೌಟಾ ದೇವಸ್ಯ ನಿರ್ಮಾಣದಲ್ಲಿ ಮೂಡಿಬಂದಿರುವ ‘ಅಪರಾಧಿ ನಾನಲ್ಲ’ ಚಿತ್ರಕ್ಕೆ ಯಶಂತ್ ಕಲ್ಲಡ್ಕ ನಿರ್ದೇಶನ ಮಾಡಿದ್ದಾರೆ. ವಿಕ್ರಂ ದೇವಾಡಿಗ ಮತ್ತು ಸಂದೀಪ್ ಶೆಟ್ಟಿ ‘ಅಪರಾಧಿ ನಾನಲ್ಲ’ ಚಿತ್ರದಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ.

ಇನ್ನು ‘ಅಪರಾಧಿ ನಾನಲ್ಲ’ ಚಿತ್ರದ ಬಗ್ಗೆ ಮಾತನಾಡಿರುವ ನಿರ್ದೇಶಕ ಯಶಂತ್ ಕಲ್ಲಡ್ಕ, ‘ನಮ್ಮ ಸಿನೆಮಾವನ್ನು ನಾವು ಅಂದುಕೊಂಡ ರೀತಿಯಲ್ಲೇ ಮಾಡಿದ್ದೀವಿ. ‘ಅಪರಾಧಿ ನಾನಲ್ಲ’ ಅನ್ನೋ ಟೈಟಲ್ ಯಾಕೆ ಅಂದ್ರೆ ಜೈಲಿನಲ್ಲಿ ಎಷ್ಟೋ ಜನ ಇರ್ತಾರೆ. ಆದರೆ ಅದೆಷ್ಟೋ ಜನ ಅಪರಾಧಿಗಳೇ ಆಗಿರೋದಿಲ್ಲ. ಒಂದು ಸತ್ಯ ಘಟನೆ ಇಟ್ಟುಕೊಂಡು, ಒಂದಷ್ಟು ಮಸಾಲ ಸೇರಿಸಿ ಈ ಚಿತ್ರದ ಕಥೆಯನ್ನು ಹೆಣೆದಿದ್ದೇವೆ. 20 ವರ್ಷದಿಂದ ಚಿತ್ರರಂಗದಲ್ಲೇ ಇದ್ದೇನೆ. ಈ ಚಿತ್ರದ ಮೂಲಕ ಮೊದಲ ಬಾರಿಗೆ ಪೂರ್ಣ ಪ್ರಮಾಣನದಲ್ಲಿ ನಿರ್ದೇಶಕನಾಗುತ್ತಿದ್ದೇನೆ. ಎಲ್ಲ ಥರದ ಪ್ರೇಕ್ಷಕರಿಗೂ ಇಷ್ಟವಾಗುವಂತೆ ‘ಅಪರಾಧಿ ನಾನಲ್ಲ’ ಚಿತ್ರ ಮಾಡಿದ್ದೇವೆ’ ಎಂದಿದ್ದಾರೆ.

ಇದೇ 2026ರ ಜುಲೈನಲ್ಲಿ ‘ಅಪರಾಧಿ ನಾನಲ್ಲ’ ರಿಸಲ್ಟ್‌!

‘ಅಪರಾಧಿ ನಾನಲ್ಲ’ ಚಿತ್ರದ ಬಗ್ಗೆ ಮಾತನಾಡಿರುವ ನಟ ಅರ್ಜುನ್ ದೇವ್, ‘ನಾನು ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ‘ಅಪರಾಧಿ ನಾನಲ್ಲ’ ಒಂದು ಸಸ್ಪೆನ್ಸ್‌-ಕ್ರೈಂ ಥ್ರಿಲ್ಲರ್‌ ಶೈಲಿಯ ಚಿತ್ರ. ಹಾಗಾಗಿ ಸಿನೆಮಾದ ಒಳ ವಿಷಯಗಳನ್ನು ನೀವು ತೆರೆಮೇಲೆ ನೋಡುವುದೇ ಒಳಿತು. ಕನ್ನಡದ ಮಟ್ಟಿಗೆ ಇದೊಂದು ಹೊಸತರದ ಚಿತ್ರವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಅಪರಾಧಿ ನಾನಲ್ಲ’ ಚಿತ್ರದ ಬಗ್ಗೆ ಮಾತನಾಡಿದ ನಾಯಕಿ ಅಮೃತಾ ಮೂರ್ತಿ, ‘ಇದು ನನಗೊಂದು ಹೊಸ ಅನುಭವ ಕೊಟ್ಟ ಸಿನೆಮಾ. ‘ಅಪರಾಧಿ ನಾನಲ್ಲ’ ಸಿನೆಮಾದಲ್ಲಿ ನಾನು ಡಾಕ್ಟರ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಹೊಸಬರು ಈ ಥರದ ಸಿನೆಮಾ ಮಾಡಿರೋದು ಖುಷಿ ವಿಚಾರ. ‘ಅಪರಾಧಿ ನಾನಲ್ಲ’ ಸಿನೆಮಾವನ್ನು ತೆರೆಮೇಲೆ ನೋಡಿದರೆ ಇನ್ನಷ್ಟು ವಿಚಾರ ತಿಳಿಯುತ್ತೆ’ ಎಂದಿದ್ದಾರೆ.

ಒಟ್ಟಾರೆ ‘ಅಪರಾಧಿ ನಾನಲ್ಲ’ ಚಿತ್ರದ ಮೇಲೆ ಚಿತ್ರತಂಡ ಸಾಕಷ್ಟು ನಿರೀಕ್ಷೆ ಮತ್ತು ಭರವಸೆಯನ್ನು ಇಟ್ಟುಕೊಂಡಿದ್ದು, ಚಿತ್ರ ತೆರೆಮೇಲೆ ಹೇಗಿರಲಿದೆ? ಎಂಬ ಕುತೂಹಲಕ್ಕೆ ಇದೇ 2026ರ ಜುಲೈ ಮೊದಲ ವಾರದಲ್ಲಿ ತೆರೆ ಬೀಳಲಿದೆ.

Related Posts

error: Content is protected !!