‘ಟಾಕ್ಸಿಕ್’ ಚಿತ್ರದ ‘ತಬಾಹಿ…’ ವಿಡಿಯೋ ಸಾಂಗ್ ಔಟ್
‘ಟಾಕ್ಸಿಕ್’ನ ಮೊದಲ ವಿಡಿಯೋ ಸಾಂಗ್ ‘ತಬಾಹಿ…’ ರಿಲೀಸ್
ರಾಕಿಂಗ್ ಸ್ಟಾರ್ ಯಶ್ ಹಾಗೂ ಕಿಯಾರಾ ಹಾಟೆಸ್ಟ್ ಅವತಾರ ಅನಾವರಣ..!
ರಾಯ-ರುಮಿ ರೊಮ್ಯಾನ್ಸ್‌ಗೆ ಫ್ಯಾನ್ಸ್ ಫಿದಾ
ನಟ ‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಬಿಡುಗಡೆಗೆ ಭರ್ಜರಿ ತಯಾರಿ ನಡೆದಿದೆ. ಇದರ ನಡುವೆಯೇ ‘ಟಾಕ್ಸಿಕ್’ ಚಿತ್ರದ ಪ್ರಚಾರ ಕಾರ್ಯಗಳು ಕೂಡ ಆರಂಭವಾಗಿದೆ. ಇದೀಗ ನಟ ‘ರಾಕಿಂಗ್ ಸ್ಟಾರ್’ ಯಶ್ ಹಾಗೂ ಕಿಯಾರಾ ಅಡ್ವಾಣಿ ಜೋಡಿಯಾಗಿ ಅಭಿನಯಿಸಿರುವ ‘ಟಾಕ್ಸಿಕ್’ ಚಿತ್ರದ ಮೊದಲ ವಿಡಿಯೋ ಸಾಂಗ್ ‘ತಬಾಹಿ…’ ಬಿಡುಗಡೆಯಾಗಿದೆ.
ಈ ಹಾಡಿನಲ್ಲಿ ರಾಯ ಪಾತ್ರದಲ್ಲಿ ನಟ ಯಶ್ ಮತ್ತು ರುಮಿ ಪಾತ್ರದಲ್ಲಿ ನಟಿ ಕಿಯಾರಾ ಅಡ್ವಾಣಿ ಕಾಣಿಸಿಕೊಂಡಿದ್ದು, ರೊಮ್ಯಾನ್ಸ್ ಹಾಗೂ ಬೋಲ್ಡ್ ದೃಶ್ಯಗಳ ಮೂಲಕ ಈ ಹಾಡು ಇದೀಗ ಗಮನ ಸೆಳೆಯುತ್ತಿದೆ.
ಹಾಡಿನುದ್ದಕ್ಕೂ ರೊಮ್ಯಾನ್ಸ್…!
ಅಂದಹಾಗೆ, ‘ಟಾಕ್ಸಿಕ್’ ಸಿನೆಮಾ ಇದೇ 2026ರ ಆಗಸ್ಟ್ 26ರಂದು ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. ಅದರ ಭಾಗವಾಗಿ ಚಿತ್ರದ ಪ್ರಚಾರ ಕಾರ್ಯ ಆರಂಭಿಸಿರುವ ಚಿತ್ರತಂಡ ಈ ಮೊದಲು, ‘ಟಾಕ್ಸಿಕ್’ ಚಿತ್ರದ ಟೀಸರ್ ಬಿಡುಗಡೆ ಮಾಡುವ ಮೂಲಕ ಗಮನ ಸೆಳೆದಿತ್ತು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಚಿತ್ರತಂಡ, ‘ಟಾಕ್ಸಿಕ್’ ಚಿತ್ರದ ‘ತಬಾಹಿ…’ ಎಂಬ ವಿಡಿಯೋ ಹಾಡನ್ನು ಅನಾವರಣ ಮಾಡಿದೆ. ಇನ್ನು ‘ತಬಾಹಿ..’ ಹಾಡಿನ ಉದ್ದಕ್ಕೂ ಯಶ್ ಹಾಗೂ ಕಿಯಾರಾ ರೊಮ್ಯಾನ್ಸ್ ಮಾಡುತ್ತಾರೆ. ಯಶ್ ಅವರು ರಾಯ ಪಾತ್ರದಲ್ಲಿ ಕಾಣಿಸಿಕೊಂಡರೆ, ಕಿಯಾರಾ ಅವರು ರುಮಿ ಪಾತ್ರದಲ್ಲಿ ನಟಿಸಿದ್ದಾರೆ. ಒಂದು ದೃಶ್ಯದಲ್ಲಿ ನಯನತಾರಾ ಕೂಡ ಕಾಣಿಸುತ್ತಾರೆ. 
ಯೋಗರಾಜ್ ಭಟ್ ಸಾಹಿತ್ಯದ ಮೂಡಿ ಬಂದ ಹಾಡು
‘ಟಾಕ್ಸಿಕ್’ ಸಿನೆಮಾದ ಮೊದಲ ವಿಡಿಯೋ ಸಾಂಗ್ ‘ತಬಾಹಿ…’ ಹಾಡಿನಲ್ಲಿ ನಟ ಯಶ್ ಮತ್ತು ನಟಿ ಕಿಯಾರಾ ಇಬ್ಬರ ಭರ್ಜರಿ ಕೆಮಿಸ್ಟ್ರಿ ಮೂಡಿಬಂದಿದ್ದು, ಸದ್ಯ ಇಂಟರ್ನೆಟ್‌ನಲ್ಲಿ ಸುದ್ದಿ ಆಗುತ್ತಿದೆ. ಇಬ್ಬರ ಬೋಲ್ಡ್ ಅವತಾರ ಕಂಡು ಅಭಿಮಾನಿಗಳು ಕಣ್ಣರಳಿಸುತ್ತಿದ್ದಾರೆ. ಹಾಡಿನ ಉದ್ದಕ್ಕೂ ಯಶ್ ಮತ್ತು ಕಿಯಾರಾ ಅವರ ಮಿತಿಮೀರಿದ ರೊಮ್ಯಾನ್ಸ್ ಹೈಲೈಟ್ ಆಗಿದೆ. ಮಳೆಯ ಹಿನ್ನೆಲೆಯಲ್ಲಿ ಹಾಗೂ ಸುಂದರ ಕಡಲತೀರದಲ್ಲಿ ಚಿತ್ರೀಕರಿಸಲಾದ ದೃಶ್ಯಗಳು ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತವೆ. ಕಿಯಾರಾ ಅವರ ಗ್ಲಾಮರ್ ಮತ್ತು ಯಶ್ ಅವರ ಕಟ್ಟುಮಸ್ತಾದ ದೇಹ ಹಾಡಿನ ಹೈಲೈಟ್ ಆಗಿದೆ.
‘ತಬಾಹಿ…’ ಗೀತೆಗೆ ಕನ್ನಡದ ಖ್ಯಾತ ನಿರ್ದೇಶಕ ಹಾಗೂ ಸಾಹಿತಿ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಈ ಹಾಡಿನ ಲಿರಿಕಲ್ ವಿಡಿಯೋಗೆ ಭಾರಿ ರೆಸ್ಪಾನ್ಸ್ ಸಿಕ್ಕಿತ್ತು. ಈಗ ಹೊರಬಂದಿರುವ ಸಂಪೂರ್ಣ ವಿಡಿಯೋ ಸಾಂಗ್, ದೃಶ್ಯ ವೈಭವ ಹಾಗೂ ಮೇಕಿಂಗ್ ವಿಚಾರದಲ್ಲಿ ಸಿನಿಪ್ರೇಕ್ಷಕರಿಗೆ ಹೊಸ ಅನುಭವ ನೀಡುತ್ತಿದೆ ಎಂದು ಹೇಳಲಾಗುತ್ತಿದೆ. ಈ ಹಾಡಿನ ಮೂಲಕ ‘ಟಾಕ್ಸಿಕ್’ ಮೇಲಿನ ಭರವಸೆ ಇನ್ನಷ್ಟು ಹೆಚ್ಚಿದೆ ಎನ್ನಬಹುದು.
‘ಟಾಕ್ಸಿಕ್’ ಚಿತ್ರದ ‘ತಬಾಹಿ…’ ಹಾಡಿನ ಲಿರಿಕಲ್ ವಿಡಿಯೋ ಹಾಡನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
ದಾಖಲೆಯ ವೀಕ್ಷಣೆ ಪಡೆದುಕೊಂಡ ‘ತಬಾಹಿ…’ ಸಾಂಗ್
ಮಲೆಯಾಳಂನ ಖ್ಯಾತ ನಿರ್ದೇಶಕಿ ಗೀತು ಮೋಹನ್ ದಾಸ್ ಈ ಬಿಗ್ ಬಜೆಟ್ ಆ್ಯಕ್ಷನ್- ಥ್ರಿಲ್ಲರ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ‘ಟಾಕ್ಸಿಕ್’ ಚಿತ್ರದ ಪ್ರಚಾರದ ಭಾಗವಾಗಿ ಬಿಡುಗಡೆಯಾದ ಈ ವಿಡಿಯೋ ಹಾಡು ಯೂ-ಟ್ಯೂಬ್‌ನಲ್ಲಿ ದಾಖಲೆ ವೀಕ್ಷಣೆ ಪಡೆಯುತ್ತ ಮುನ್ನುಗ್ಗುತ್ತಿದೆ.
‘ಟಾಕ್ಸಿಕ್’ ಚಿತ್ರವನ್ನು ‘ಕೆವಿಎನ್ ಪ್ರೊಡಕ್ಷನ್ಸ್’ ಮತ್ತು ‘ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್’ ಸಂಸ್ಥೆಗಳು ಜಂಟಿಯಾಗಿ ನಿರ್ಮಾಣ ಮಾಡಿವೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಣಗೊಂಡಿರುವ ಈ ಚಿತ್ರವು, ಇಡೀ ಭಾರತೀಯ ಚಿತ್ರರಂಗದಲ್ಲೇ ಸದ್ಯದ ಮಟ್ಟಿಗೆ ಅತ್ಯಂತ ಭಾರಿ ಕುತೂಹಲ ಮೂಡಿಸಿರುವ ಚಿತ್ರವಾಗಿದೆ. ಬಹುನಿರೀಕ್ಷಿತ ‘ಟಾಕ್ಸಿಕ್’ ಪ್ಯಾನ್ ವರ್ಲ್ಡ್ ಸಿನೆಮಾ ಇದೇ ಆಗಸ್ಟ್ 26ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ತೆರೆಗೆ ಬರಲು ಸಜ್ಜಾಗುತ್ತಿದೆ. ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಿಗೂ ಡಬ್ ಆಗಿ ರಿಲೀಸ್ ಆಗಲಿದೆ.















