ನಿವಿನ್ ಪೌಲಿ 50ನೇ ಸಿನೆಮಾ ‘ವಿಜಯಂ’
ನಿವಿನ್ ಪೌಲಿ ಹೊಸಚಿತ್ರಕ್ಕೆ ‘ವಿಜಯಂ’ ಟೈಟಲ್ ಫಿಕ್ಸ್
‘ವಿಜಯಂ’ ಸಿನೆಮಾ ಮೂಲಕ ಮತ್ತೆ ಒಂದಾದ ‘ಪ್ರೇಮಂ’ ಹೀರೋ-ಡೈರೆಕ್ಟರ್
ಮತ್ತೆ ಒಂದಾದ ‘ಪ್ರೇಮಂ’ ಜೋಡಿ…
ಮಲೆಯಾಳಂ ಚಿತ್ರರಂಗದ ಸೂಪರ್ ಹಿಟ್ ಸಿನೆಮಾಗಳಾದ ‘ನೇರಂ’ ಮತ್ತು ‘ಪ್ರೇಮಂ’ ಬಗ್ಗೆ ಬಹುತೇಕರು ಕೇಳಿರಬಹುದು. ಮಲೆಯಾಳಂ ಚಿತ್ರರಂಗದಲ್ಲಿ ಇಂದಿಗೂ ಅದೇ ಜನಪ್ರಿಯತೆ ಉಳಿಸಿಕೊಂಡಿರುವ ‘ನೇರಂ’ ಮತ್ತು ‘ಪ್ರೇಮಂ’ ಚಿತ್ರದ ನಿರ್ದೇಶಕ ಮತ್ತು ಅವುಗಳ ನಾಯಕ ನಟನ ಕಾಂಬಿನೇಶನ್‌ನಲ್ಲಿ ಮತ್ತೊಂದು ಮಲೆಯಾಳಂ ಚಿತ್ರ ತೆರೆಗೆ ಬರೋದಕ್ಕೆ ತಯಾರಾಗುತ್ತಿದೆ. 
ಹೌದು, ಮಲೆಯಾಳಂ ಸಿನೆಮಾ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದ ಬಹುನಿರೀಕ್ಷಿತ ಘೋಷಣೆ ಕೊನೆಗೂ ಹೊರ ಬಿದ್ದಿದೆ. 12 ವರ್ಷಗಳ ನಂತರ, ಬ್ಲಾಕ್ಬಸ್ಟರ್ ಜೋಡಿ ಎನಿಸಿಕೊಂಡಿರುವ ನಟ ನಿವಿನ್ ಪೌಲಿ ಮತ್ತು ನಿರ್ದೇಶಕ ಆಲ್ಫೋನ್ಸ್ ಪುತ್ರೇನ್ ಜೋಡಿ ‘ವಿಜಯಂ’ ಎಂಬ ಹೊಸ ಚಿತ್ರಕ್ಕಾಗಿ ಮತ್ತೆ ಒಂದಾಗಿದ್ದಾರೆ. ‘ನೇರಂ’ ಮತ್ತು ‘ಪ್ರೇಮಂ’ ಚಿತ್ರದ ಅದ್ಭುತ ಯಶಸ್ಸಿನ ನಂತರ, ಈ ಜೋಡಿ ಮತ್ತೊಮ್ಮೆ ರೋಮಾಂಚಕಾರಿ ಪ್ರಾಜೆಕ್ಟ್ ಗೆ ಕೈಜೋಡಿಸಿರುವುದು ಮಲೆಯಾಳಂ ಚಿತ್ರರಂಗದ ನಿರೀಕ್ಷೆ ಮತ್ತು ಕುತೂಹಲವನ್ನು ಇಮ್ಮಡಿಗೊಳಿಸಿದೆ.
‘ವಿಜಯಂ’ ಟೈಟಲ್ ಅನೌನ್ಸ್…
‘ವಿಜಯಂ’, ನಿವಿನ್ ಪೌಲಿ ಅವರ 50 ನೇ ಸಿನೆಮಾ. ಕೇರಳದ ಎರ್ನಾಕುಲಂನ ಪದ್ಮಾ ಥಿಯೇಟರ್‌ನಲ್ಲಿ ಅಭಿಮಾನಿಗಳು ಮತ್ತು ಸಿನಿಪ್ರಿಯರ ಸಮ್ಮುಖದಲ್ಲಿ ಇತ್ತೀಚೆಗೆ ‘ವಿಜಯಂ’ ಚಿತ್ರದ ಶೀರ್ಷಿಕೆ ವೀಡಿಯೊವನ್ನು ಅನಾವರಣಗೊಳಿಸಲಾಯಿತು. ರೇಸಿಂಗ್ ಪ್ರಪಂಚದ ಹಿನ್ನೆಲೆಯಲ್ಲಿ ಸಾಗುವ ಈ ಚಿತ್ರವನ್ನು ಆಲ್ಫೋನ್ಸ್ ಪುತ್ರೇನ್ ಬರೆದು, ನಿರ್ದೇಶಿಸುವುದರ ಜೊತೆಗೆ ಸಂಕಲನ ಮಾಡುತ್ತಿದ್ದಾರೆ. ಈ ಚಿತ್ರವನ್ನು ಪೌಲಿ ‘ಜೂನಿಯರ್ ಪಿಕ್ಚರ್ಸ್’ ಜೊತೆಗೆ ‘ಸಿನೆ ಹೋಲಿಕ್ಸ್’ ಬ್ಯಾನರ್ ಅಡಿಯಲ್ಲಿ ಟನ್ಸನ್ ಟೋನಿ ಮತ್ತು ಸುನಿಲ್ ರಾಮದಿ ನಿರ್ಮಾಣ ಮಾಡುತ್ತಿದ್ದಾರೆ.
‘ವಿಜಯಂ’ ಚಿತ್ರದ ಹಿನ್ನೆಲೆ ಸಂಗೀತವನ್ನು ಕೇರಳ ಮೂಲದ ಸ್ಟೀವ್ ಕೊಟ್ಟೂರ್ ಸಂಯೋಜಿಸಿದ್ದಾರೆ, ಅವರು ಈ ಹಿಂದೆ ಬ್ಲಾಕ್‌ಬಸ್ಟರ್ ಚಿತ್ರಗಳಾದ ‘ದುರಂಧರ್’ ಮತ್ತು ‘ದುರಂಧರ್ 2’ ಗಾಗಿ ಸಂಗೀತ ನಿರ್ಮಾಣದಲ್ಲಿ ಕೆಲಸ ಮಾಡಿದ್ದರು. ಜೊತೆಗೆ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ನಿರ್ದೇಶಿಸಿದ ವೆಬ್ ಸರಣಿ ‘ಬಾ*ಡ್ಸ್ ಆಫ್ ಬಾಲಿವುಡ್’ನಲ್ಲೂ ಕೆಲಸ ಮಾಡಿದ್ದರು. ಸದ್ಯ ಟೈಟಲ್ ಅನೌನ್ಸ್ ಮಾಡಿರುವ ಚಿತ್ರತಂಡ ಮುಂದಿನ ದಿನಗಳಲ್ಲಿ ತಾರಾಬಳಗ ಹಾಗೂ ತಾಂತ್ರಿಕ ವರ್ಗದ ಬಗ್ಗೆ ಮಾಹಿತಿ ನೀಡಲಿದೆ.
ಅಂದಹಾಗೆ, ಮುಂದಿನ ವರ್ಷದ ಮಧ್ಯಭಾಗದಲ್ಲಿ ಈ ಬಹುನಿರೀಕ್ಷಿತ ‘ವಿಜಯಂ’ ಚಿತ್ರ ಮಲೆಯಾಳಂ ಜೊತೆಗೆ ಭಾರತದ ವಿವಿಧ ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಗೆ ಬರಲಿದೆ ಎನ್ನಲಾಗುತ್ತಿದೆ.















