‘ಮೋಡ ಕವಿದ ವಾತಾವರಣ’ದಲ್ಲಿ ಅರಳಿದ ಪ್ರೇಮಕಥೆ!
ಮತ್ತೊಂದು ತ್ರಿಕೋನ ಪ್ರೇಮಕಥೆ ಹೇಳಿದ ಸುನಿ
ಸೈಂಟಿಫಿಕ್ ಥ್ರಿಲ್ಲರ್ ಜೊತೆ ‘ಸುನಿ’ಯ ಮತ್ತೊಂದು ‘ಸಿಂಪಲ್’ ಲವ್ ಸ್ಟೋರಿ
ತುಂತುರು ಮಳೆಯ ನಡುವೆ ಪ್ರೇಮ್ ಕಹಾನಿ…
ಚಿತ್ರ: ‘ಮೋಡ ಕವಿದ ವಾತಾವರಣ’
ನಿರ್ಮಾಣ: ‘ಶ್ರೀರಾಮ್ ಮೂವೀಸ್’,
ತಾರಾಗಣ: ಶೀಲಂ ಎಂ. ಸ್ವಾಮಿ, ಮೋಕ್ಷಾ ಕುಶಾಲ್, ಸಾತ್ವಿಕಾ, ರಿಷಿ, ಸ್ಪರ್ಶ ರೇಖಾ ಮತ್ತಿತರರು,
ನಿರ್ದೇಶನ: ಸುನಿ,
ಬಿಡುಗಡೆ: 26 ಜೂನ್ 2026,
ರೇಟಿಂಗ್: 3.5/5
ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’, ‘ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ’, ‘ಒಂದು ಸರಳ ಪ್ರೇಮಕಥೆ’ ಹೀಗೆ ‘ಸಿಂಪಲ್’ ರೊಮ್ಯಾಂಟಿಕ್ ಲವ್ ಸ್ಟೋರಿ ಸಿನೆಮಾಗಳ ಮೂಲಕವೇ ಸಿನಿಪ್ರಿಯರ ಮನ ಮತ್ತು ಗಮನ ಸೆಳೆದವರು ನಿರ್ದೇಶಕ ಸಿಂಪಲ್ ಸುನಿ. ಈ ಬಾರಿ ಸಿಂಪಲ್ ಸುನಿ ಅಂಥದ್ದೇ ಮತ್ತೊಂದು ‘ಸಿಂಪಲ್’ ರೊಮ್ಯಾಂಟಿಕ್ ಲವ್ ಸ್ಟೋರಿಯನ್ನು ಕೊಂಚ ಸೈಂಟಿಫಿಕ್ ಥ್ರಿಲ್ಲರ್ ಟಚ್ ಕೊಟ್ಟು ಪ್ರೇಕ್ಷಕರ ಮುಂದೆ ತಂದಿದ್ದಾರೆ. ಅದರ ಹೆಸರೇ ‘ಮೋಡ ಕವಿದ ವಾತಾವರಣ’. ಆರಂಭದಲ್ಲೇ ಸಿನೆಮಾದ ಟೈಟಲ್ ಮೂಲಕವೇ ಒಂದಷ್ಟು ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದ್ದ ‘ಮೋಡ ಕವಿದ ವಾತಾವರಣ’ ಚಿತ್ರ ಇದೇ 2026ರ ಜೂನ್ 26ರ (ಕೊನೆಯ ಶುಕ್ರವಾರ) ತೆರೆಗೆ ಬಂದಿದೆ. 
ಏನಿದು ‘ಮೋಡ ಕವಿದ ವಾತಾವರಣ’…?
ನಮ್ಮ ನಡುವೆಯೇ ನಡೆದಿರುವ, ನಡೆಯುವ ಅಥವಾ ನಡೆಯಬಹುದಾದ ಹುಡುಗ-ಹುಡುಗಿಯರ ಸರಳ ಪ್ರೇಮಕಥೆಗಳನ್ನು ಎತ್ತಿಕೊಂಡು ಅದನ್ನು ಹ್ಯೂಮರಸ್ ಆಗಿ ಕಟ್ಟಿಕೊಡುವುದರಲ್ಲಿ ಸಿಂಪಲ್ ಸುನಿ ಸಿದ್ಧಹಸ್ತರು. ಅಂಥದ್ದೇ ಒಂದು ‘ಸಿಂಪಲ್’ ಲವ್ ಸ್ಟೋರಿಯನ್ನು ‘ಮೋಡ ಕವಿದ ವಾತಾವರಣ’ದಲ್ಲೂ ನಿರೀಕ್ಷಿಸಬಹುದು. ಚರೀಶ್, ಸೌಪರ್ಣಿಕ ಮತ್ತು ಸಾತ್ವಿಕಾ ಎಂಬ ಮೂರು ಪಾತ್ರಗಳನ್ನು ಇಟ್ಟುಕೊಂಡು ಸುನಿ ‘ಮೋಡ ಕವಿದ ವಾತಾವರಣ’ ಚಿತ್ರದಲ್ಲಿ ತ್ರಿಕೋನ ಪ್ರೇಮಕಥೆಯನ್ನು ತೆರೆಮೇಲೆ ತೆರೆದಿಟ್ಟಿದ್ದಾರೆ.
ಬೆಂಗಳೂರಿನಿಂದ ದೂರದ ಸುಂದರ ರೆಸಾರ್ಟ್ ಒಂದಕ್ಕೆ ಬರುವ ಎರಡು ಜೋಡಿಗಳ ಮೂಲಕ ‘ಮೋಡ ಕವಿದ ವಾತಾವರಣ’ ಚಿತ್ರದ ಕಥಾಹಂದರ ತೆರೆದುಕೊಳ್ಳುತ್ತದೆ. ‘ಯಯಾತಿ’ಯ ಮೋಹಕ ಗುಣಗಳ ನಡುವೆಯೇ ಚಿತ್ರದ ಪಾತ್ರಗಳ ಪರಿಚಯವಾಗಿ, ಮಧ್ಯಂತರದ ವೇಳೆಗೆ ‘ಮೋಡ ಕವಿದ ವಾತಾವರಣ’ದಲ್ಲಿ ಒಂದು ಸಸ್ಪೆನ್ಸ್-ಥ್ರಿಲ್ಲರ್ ಮಿಂಚು ಸಂಚಾರವಾಗುತ್ತದೆ. ಪ್ರೀತಿ, ಸ್ನೇಹ, ಹುಡುಕಾಟದ ಜೊತೆಗೆ ಸ್ಲ್ಪಿಟ್ ಪರ್ಸನಾಟಿಲಿ ಎಂಬ ಮನೋವೈಜ್ಞಾನಿಕ ವಿಷಯವೊಂದನ್ನು ಹಿಂದಿಟ್ಟುಕೊಂಡು ನಿರ್ದೇಶಕ ಸುನಿ ‘ಮೋಡ ಕವಿದ ವಾತಾವರಣ’ದಲ್ಲಿ ಪ್ರೇಮದ ಮಳೆ ಸುರಿಸುವ ಪ್ರಯತ್ನ ಮಾಡಿದ್ದಾರೆ. ಕ್ಲೈಮ್ಯಾಕ್ಸ್‌ನಲ್ಲಿ ಆರಂಭದಿಂದ ತಾವು ಕಾಯ್ದಿರಿಸಿಕೊಂಡಿದ್ದ ಎಲ್ಲ ಸಸ್ಪೆನ್ಸ್‌ಗಳಿಗೂ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ಹೇಗಿದೆ ‘ಮೋಡ ಕವಿದ ವಾತಾವರಣ’..?
ಒಂದೇ ಮಾತಿನಲ್ಲಿ ಹೇಳುವುದಾದರೆ, ಇದು ಔಟ್ ಅಂಡ್ ಔಟ್ ನಿರ್ದೇಶಕ ಸಿಂಪಲ್ ಸುನಿ ಸ್ಟೈಲಿನ ಟಿಪಿಕಲ್ ಸಿನೆಮಾ. ಚಿತ್ರದ ಪ್ರತಿ ಫ್ರೇಮ್‌ನಲ್ಲೂ ಸುನಿ ಸ್ಟೈಲ್ ಹಾಸುಹೊಕ್ಕಾಗಿದೆ. ಅಲ್ಲಿಲ್ಲಿ ಕಚಗುಳಿಯಿಡುವ ಡೈಲಾಗ್ಸ್, ನಡುವೆ ವಾತಾವರಣಕ್ಕೆ ತಂಪೆರೆದು ಹೋಗುವ ಹಾಡುಗಳು, ಕಾಮಿಡಿ ಸನ್ನಿವೇಶಗಳು, ಸುಂದರ ಲೊಕೇಶನ್ ಎಲ್ಲವನ್ನೂ ‘ಮೋಡ ಕವಿದ ವಾತಾವರಣ’ದಲ್ಲಿ ಕಾಣಬಹುದು. ಮೊದಲರ್ಧ ಕುತೂಹಲದ ಜೊತೆಗೆ ಸಾಗುವ ಚಿತ್ರ, ದ್ವಿತೀಯಾರ್ಧದಲ್ಲಿ ಕುತೂಹಲಗಳಿಗೆ ಉತ್ತರ ನೀಡುತ್ತ ಸಾಗುತ್ತದೆ.
ಹೇಗಿದೆ ಕಲಾವಿದರ ಅಭಿನಯ, ತಂತ್ರಜ್ಞರ ಕೆಲಸ?
‘ಮೋಡ ಕವಿದ ವಾತಾವರಣ’ದಲ್ಲಿ ನವ ನಾಯಕ ನಟ ಶೀಲಂ ತಮ್ಮ ಅಭಿನಯದಲ್ಲಿ ಗಮನ ಸೆಳೆಯುತ್ತಾರೆ. ಮನೋವೈದ್ಯನಾಗಿ ಮತ್ತು ಪ್ರೀತಿಯನ್ನು ಪಡೆದುಕೊಳ್ಳಲು ಪರಿತಪಿಸುವ ಪ್ರೇಮಿಯಾಗಿ ಶೀಲಂ ತೆರೆಮೇಲೆ ತಮ್ಮ ಲವಲವಿಕೆಯ ಅಭಿನಯಕ್ಕೆ ಫುಲ್ ಮಾರ್ಕ್ಸ್ ಪಡೆದುಕೊಳ್ಳುತ್ತಾರೆ. ಇನ್ನು ನಾಯಕಿಯರಾದ ಮೋಕ್ಷಾ ಕುಶಾಲ್ ಮತ್ತು ಸಾತ್ವಿಕಾ ಕೂಡ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಉಳಿದಂತೆ ರಿಷಿ, ಸ್ಪರ್ಶ ರೇಖಾ ಹಾಗೆ ಬಂದು ಹೀಗೆ ಹೋಗುವುದರಿಂದ ಅವರ ಪಾತ್ರಗಳ ಬಗ್ಗೆ ಹೆಚ್ಚೇನೂ ಹೇಳುವಂತಿಲ್ಲ.
ಇನ್ನು ತಾಂತ್ರಿಕವಾಗಿಯೂ ‘ಮೋಡ ಕವಿದ ವಾತಾವರಣ’ ಚಿತ್ರ ಚೆನ್ನಾಗಿ ತೆರೆಮೇಲೆ ಕಾಣುತ್ತದೆ. ಛಾಯಾಗ್ರಹಕ ಸಂತೋಷ್ ರೈ ಪಾತಾಜೆ ಚಿತ್ರದ ದೃಶ್ಯಗಳನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಸಂಗೀತ ನಿರ್ದೇಶಕ ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜನೆಯ ಎರಡು ಹಾಡುಗಳು ಗುನುಗುವಂತಿದೆ. ಸಂಕಲನ, ಕಲರಿಂಗ್, ಸೌಂಡ್ ಡಿಸೈನ್ ಎಲ್ಲವೂ ಚಿತ್ರಕ್ಕೆ ಪೂರಕವಾಗಿದೆ.
ಕೊನೆಯ ಮಾತು
ಯಾವುದೇ ಅತಿಯಾದ ನಿರೀಕ್ಷೆಗಳಿಲ್ಲದೆ ತೆರೆ ಮುಂದೆ ಕೂತರೆ ‘ಮೋಡ ಕವಿದ ವಾತಾವರಣ’ ಮನಸ್ಸಿಗೆ ಒಂದಷ್ಟು ಮುದ ನೀಡುವುದರಲ್ಲಿ ಎರಡು ಮಾತಿಲ್ಲ. ಮಲೆಯಾಳಂನ ‘ಮಣಿ ಚಿತ್ರತಾಳ್’, ತಮಿಳಿನ ‘ಚಂದ್ರಮುಖಿ’, ಕನ್ನಡದ ‘ಆಪ್ತಮಿತ್ರ’ ಹೀಗೆ ಒಂದಷ್ಟು ಸಿನೆಮಾಗಳ ಮೂಲಕಥೆಯ ಛಾಯೆ ‘ಮೋಡ ಕವಿದ ವಾತಾವರಣ’ ಚಿತ್ರದಲ್ಲೂ ಕಾಣುತ್ತದೆ. ಹಾಗಂತ ಸಂಪೂರ್ಣವಾಗಿ ಆ ಸಿನೆಮಾಗಳಿಗೆ ಈ ಚಿತ್ರವನ್ನು ಹೋಲಿಕೆ ಕೂಡ ಮಾಡುವಂತಿಲ್ಲ. ಇನ್ನು ‘ಮೋಡ ಕವಿದ ವಾತಾವರಣ’ ಚಿತ್ರಕಥೆಗೆ ಕೊಂಚ ವೇಗ ಸಿಕ್ಕಿದ್ದರೆ, ಚಿತ್ರ ಇನ್ನಷ್ಟು ಬೇಗ ಮುಗಿಯುವುದರ ಜೊತೆಗೆ ನೋಡುಗರ ಮನಸ್ಸಿನ ಆಳಕ್ಕೆ ಇಳಿಯುವ ಸಾಧ್ಯತೆಗಳಿದ್ದವು. ಇಂಥ ಕೆಲ ಒಪ್ಪಬಹುದಾದ ಸಂಗತಿಗಳನ್ನು ಹೊರತುಪಡಿಸಿದರೆ, ‘ಮೋಡ ಕವಿದ ವಾತಾವರಣ’ ಸುನಿ ಬತ್ತಳಿಕೆಯಿಂದ ಹೊರಬಂದ ಮತ್ತೊಂದು ಲವಲವಿಕೆಯ ಸಿನೆಮಾ ಎನ್ನಲು ಎರಡು ಮಾತಿಲ್ಲ. ರೊಮ್ಯಾಂಟಿಕ್ ಲವ್ ಸ್ಟೋರಿ ಸಿನೆಮಾಗಳನ್ನು ಸಸ್ಪೆನ್ಸ್-ಥ್ರಿಲ್ಲರ್ ಫ್ಲೇವರ್‌ನಲ್ಲಿ ನೋಡಲು ಬಯಸುವವರು, ಒಮ್ಮೆ ಖಂಡಿತವಾಗಿಯೂ ‘ಮೋಡ ಕವಿದ ವಾತಾವರಣ’ದಲ್ಲಿ ಕೂತು ಬರಬಹುದು.















