‘ಜೈ’; ರಾಜಕೀಯ ಬಲೆಯೊಳಗೆ ಕಾಮಿಡಿಯ ಎಳೆ ಬೆಸೆದ ‘ಸೇತುವೆ’ ಕಥೆ!
‘ಸೇತುವೆ’ ಮೇಲೊಂದು ರೂಪೇಶ್ ಶೆಟ್ಟಿ ಸಿನೆಮಾ!
ತುಳುನಾಡ ಕಲಾವಿದರ ಭರಪೂರ ಕಾಮಿಡಿ ಕಚಗುಳಿಗೆ ‘ಜೈ’…
‘ಜೈ’ ಎಂಬ ಕಂಪ್ಲೀಟ್ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಕಹಾನಿ 
ಚಿತ್ರ: ಜೈ ನಿರ್ಮಾಣ: ‘ಶೂಲಿನ್ ಫಿಲಂಸ್’, ‘ಮುಗ್ರೋಡಿ ಪ್ರೊಡಕ್ಷನ್ಸ್’ ನಿರ್ದೇಶನ: ರೂಪೇಶ್ ಶೆಟ್ಟಿ
ತಾರಾಗಣ: ರೂಪೇಶ್ ಶೆಟ್ಟಿ, ಅದ್ವಿತಿ ಶೆಟ್ಟಿ, ಸುನೀಲ್ ಶೆಟ್ಟಿ, ನವೀನ್ ಡಿ. ಪಡೀಲ್, ಅರವಿಂದ್ ಬೋಳಾರ್, ದೇವದಾಸ್ ಕಾಪಿಕಾಡ್, ರಾಜ್ ದೀಪಕ್ ಶೆಟ್ಟಿ ಮತ್ತಿತರರು.
ಬಿಡುಗಡೆ: 14 ನವೆಂಬರ್ 2025 ರೇಟಿಂಗ್: 3.5/5
ಕರ್ನಾಟಕದ ‘ಕೋಸ್ಟಲ್‌ವುಡ್’ನ ‘ರಾಕಿಂಗ್ ಸ್ಟಾರ್’ ರೂಪೇಶ್ ಶೆಟ್ಟಿ ನಿರ್ದೇಶಿಸಿ, ನಾಯಕ ನಟನಾಗಿ ಅಭಿನಯಿಸಿದ ‘ಜೈ’ ಸಿನೆಮಾ ಬಿಡುಗಡೆಯಾಗಿ ತೆರೆಗೆ ಬಂದಿದೆ. ಬಿಡುಗಡೆಗೂ ಮೊದಲೇ ತನ್ನ ತಾರಾಗಣ, ಮೇಕಿಂಗ್, ಕಂಟೆಂಟ್ ಮೂಲಕ ಒಂದಷ್ಟು ಸುದ್ದಿ ಮಾಡಿದ್ದ ‘ಜೈ’ ಸಿನೆಮಾ ಕನ್ನಡ ಮತ್ತು ತುಳು ಎರಡೂ ಭಾಷೆಗಳಲ್ಲೂ ನಿರ್ಮಾಣವಾಗಿದ್ದು, ಏಕಕಾಲಕ್ಕೆ ಎರಡೂ ಭಾಷೆಗಳಲ್ಲೂ ತೆರೆಕಂಡಿದೆ.
ರೂಪೇಶ್ ಶೆಟ್ಟಿ ‘ಜೈ’ ಹಿಂದಿನ ಕಥೆ ಏನು…? 
ಅದು ಕರ್ನಾಟಕದ ಕರಾವಳಿ ಹಿನ್ನೆಲೆಯ ಸುಂದರ ಹಸಿರು ಪರಿಸರವನ್ನು ಹೊದ್ದುಕೊಂಡಿರುವ, ನದಿಯ ಪಕ್ಕದಲ್ಲೇ ಇರುವ ಊರು. ಪ್ರಕೃತಿ ಸೌಂದರ್ಯದ ಜೊತೆಗೆ ತನ್ನದೇ ಆದ ಸಂಸ್ಕೃತಿ, ಜನ-ಜೀವನ ಎಲ್ಲವನ್ನೂ ಹೊಂದಿರುವ ಈ ಊರಿನಲ್ಲಿ ಪ್ರೀತಿ, ಸ್ನೇಹ, ವಿಶ್ವಾಸ, ನೆಮ್ಮದಿ ಯಾವುದಕ್ಕೂ ಕೊರತೆಯಿಲ್ಲ. ಆದರೆ ಇಂಥ ಊರಿಗೆ ಇರುವುದೊಂದೇ ಸಮಸ್ಯೆ! ಅದೇನೆಂದರೆ, ಊರಿನ ಪಕ್ಕದಲ್ಲಿ ಹರಿಯುವ ನದಿಗೆ ಸೇತುವೆ ಇಲ್ಲದಿರುವುದು. ಕೇವಲ ಅರ್ಧ ಗಂಟೆಯಲ್ಲೇ ತಲುಪಬಹುದಾದ ಪಕ್ಕದ ಪಟ್ಟಣಕ್ಕೆ, ಸೇತುವೆ ಇಲ್ಲದಿರುವುದರಿಂದ ಎರಡು-ಮೂರು ಗಂಟೆ ಸುತ್ತಾಡಿಕೊಂಡು ಹೋಗಬೇಕಾದ ಪರಿಸ್ಥಿತಿ ಆ ಊರಿನವರದ್ದು. ನೂರು ಮನೆಗಳಿರುವ ಆ ಊರಿನ ನದಿಗೊಂದು ಸೇತುವೆ ಕಟ್ಟಿಕೊಟ್ಟರೆ ಬಹುತೇಕ ಸಮಸ್ಯೆಗೆ ‘ಪೂರ್ಣವಿರಾಮ’ ಬಿದ್ದಂತೆ. ಆದರೆ, ನಾಲ್ಕೈದು ಬಾರಿ ಗೆದ್ದು ಅಲ್ಲಿನ ಎಂಎಲ್ಎ ಆಗಿರುವವನಿಗೆ ಮಾತ್ರ ಈ ಊರಿಗೆ ಸೇತುವೆ ಕಟ್ಟಿಸಲು ಸುತಾರಾಂ ಮನಸ್ಸಿಲ್ಲ. ಇಂಥ ಪರಿಸ್ಥಿತಿಯಲ್ಲಿ ಅದೇ ಊರಿನ ಹುಡುಗ ಸತ್ಯ (ರೂಪೇಶ್ ಶೆಟ್ಟಿ) ಮತ್ತವನ ಸಂಗಡಿಗರು ಸೇತುವೆ ಕಟ್ಟಿಸಲು ಏನೆಲ್ಲ ಸರ್ಕಸ್ ನಡೆಸುತ್ತಾರೆ ಎಂಬುದೇ ‘ಜೈ’ ಚಿತ್ರದ ಕಥೆಯ ಎಳೆ. ಅಂತಿಮವಾಗಿ ‘ಸತ್ಯ’ನ ಊರಿಗೆ ‘ನ್ಯಾಯ’ ಸಿಗುತ್ತದೆಯಾ..? ಜನ ಸತ್ಯನ ಕೆಲಸಕ್ಕೆ ‘ಜೈ’ ಎನ್ನುತ್ತಾರಾ..? ಎಂಬುದನ್ನು ತಿಳಿಯಬೇಕಾದರೆ, ‘ಜೈ’ ಚಿತ್ರವನ್ನು ಸಂಪೂರ್ಣವಾಗಿ ಕಣ್ತುಂಬಿಕೊಳ್ಳುವುದೇ ಒಳ್ಳೆಯದು.
ಹೀಗಿದೆ ‘ಜೈ’ ಚಿತ್ರಕಥೆ ಮತ್ತು ನಿರೂಪಣೆ..?
ಮೊದಲೇ ಹೇಳಿದಂತೆ ‘ಜೈ’ ಗ್ರಾಮೀಣ ಹುಡುಗ ‘ಸತ್ಯ’ನ ಹೋರಾಟದ ಕಥೆಯನ್ನು ಹೊಂದಿರುವ ಸಿನೆಮಾ. ತನ್ನ ಊರಿಗೆ ಸೇತುವೆಯೊಂದನ್ನು ಮಾಡಿಸಲು ಸತ್ಯ ಹೇಗೆಲ್ಲ ಹೋರಾಟ ಮಾಡುತ್ತಾನೆ ಎಂಬುದೇ ಚಿತ್ರದ ಮೂಲ ಎಳೆ.
ತನ್ನ ಕುಟುಂಬ, ಊರಿನ ಸಮಸ್ಯೆಯನ್ನು ಬಗೆಹರಿಸಲು ಹೋರಾಡುವ ಜನಸಾಮಾನ್ಯನ ಕಥೆ ‘ಜೈ’ ಸಿನೆಮಾದಲ್ಲೂ ಇರುವುದರಿಂದ ಇದು ‘ಜನಸಾಮಾನ್ಯ’ ಚಿತ್ರ-ಕಥೆ ಎನ್ನಲು ಅಡ್ಡಿಯಿಲ್ಲ! ಆದರೆ, ಇಂಥದ್ದೊಂದು ಸಾಮಾನ್ಯ ಕಥೆ ಎಲ್ಲೂ ಬೋರ್ ಆಗದಂತೆ ಚಿತ್ರಕಥೆ ಮತ್ತು ನಿರೂಪಣೆ ಮೂಲಕ ಪ್ರೇಕ್ಷಕರ ಮುಂದೆ ಬಂದಿದೆ. ಇಡೀ ಚಿತ್ರದಲ್ಲಿ ಚಿತ್ರಕಥೆ, ನಿರೂಪಣೆ, ಡೈಲಾಗ್ಸ್, ಕಾಮಿಡಿ, ಒಂದಷ್ಟು ತಿರುವುಗಳ ಕಡೆಗೆ ನಿರ್ದೇಶಕ ರೂಪೇಶ್ ಶೆಟ್ಟಿ ಹೆಚ್ಚು ಗಮನ ನೀಡಿದ್ದರಿಂದ, ಸಾಮಾನ್ಯ ಕಥೆ ಕೂಡ ಅಸಾಮಾನ್ಯವಾಗಿ ತೆರೆಮೇಲೆ ಕಾಣುತ್ತದೆ. ಹೀಗಾಗಿ ‘ಜೈ’ ಕೊನೆವರೆಗೂ ನೋಡುಗರನ್ನು ಸೀಟಿನಲ್ಲೇ ಕೂರುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ.
ಕಲಾವಿದರ ಅಭಿನಯ ಹೇಗಿದೆ..?
‘ಜೈ’ ಸಿನೆಮಾದಲ್ಲಿ ಬೃಹತ್ ಕಲಾವಿದರ ತಾರಾಗಣವೇ ತೆರೆಮೇಲೆ ಕಾಣಲು ಸಿಗುತ್ತದೆ. ನಾಯಕ ನಟ ಕಂ ನಿರ್ದೇಶಕ ರೂಪೇಶ್ ಶೆಟ್ಟಿ ಹಳ್ಳಿಯ ಹೋರಾಟಗಾರನಾಗಿ, ಮನೆಗೊಬ್ಬ ಬೇಜವಾಬ್ದಾರಿ ಮಗನಾಗಿ ತಮ್ಮ ಅಭಿನಯವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ನಾಯಕಿ ಅದ್ವಿತಿ ಶೆಟ್ಟಿ ಕೂಡ ತಮ್ಮ ಅಂದ ಮತ್ತು ಅಭಿನಯದ ಮೂಲಕ ಇಷ್ಟವಾಗುತ್ತಾರೆ. ಉಳಿದಂತೆ ನವೀನ್ ಡಿ. ಪಡೀಲ್ ಗಂಭೀರ ಪಾತ್ರಕ್ಕೆ ಸೀಮಿತವಾದರೆ, ಅರವಿಂದ ಬೋಳಾರ್ ತೆರೆಮೇಲೆ ಇರುವಷ್ಟು ಹೊತ್ತು ನಗುವಿಗೆ ಕೊರತೆಯಿಲ್ಲ. ಖಳನಟನಾಗಿ ದೀಪಕ್ ಶೆಟ್ಟಿ ಗಮನ ಸೆಳೆಯುತ್ತಾರೆ. ಇನ್ನು ಮೊದಲೇ ಚಿತ್ರತಂಡ ಹೇಳಿದಂತೆ, ಬಾಲಿವುಡ್ ನಟ ಸುನೀಲ್ ಶೆಟ್ಟಿ, ಅದೇ ಹೆಸರಿನಲ್ಲಿ ಚಿತ್ರದ ಕೊನೆಯಲ್ಲಿ ಗ್ರ್ಯಾಂಡ್ ಎಂಟ್ರಿಕೊಟ್ಟು ಅಭಿಮಾನಿಗಳಿಗೆ ಒಂದಷ್ಟು ‘ಸಂದೇಶ’ ನೀಡುತ್ತಾರೆ. ಚಿತ್ರದ ಬಹುತೇಕ ಕಲಾವಿದರು ತಮ್ಮ ಪಾತ್ರಕ್ಕೆ ಜೀವತುಂಬಿ ಅಭಿನಯಿಸಿದ್ದು, ಎಲ್ಲರ ಅಭಿನಯ ಕೂಡ ನೋಡುಗರಿಗೆ ಮನರಂಜನೆ ನೀಡುತ್ತದೆ.
ಅಂತಿಮ ಮಾತು… 
ರಾಜಕೀಯ ಇಚ್ಛಾಶಕ್ತಿ ಇಲ್ಲದೆ ಹೋದರೆ ಒಂದೂರನ್ನು ಹೇಗೆ ತುಳಿಯಬಹುದು ಎಂಬುದನ್ನು ಸೂಕ್ಷ್ಮವಾಗಿ ಹೇಳಿರುವುದು ಮತ್ತು ಅದನ್ನು ಮನರಂಜನಾತ್ಮಕವಾಗಿ ನಿರೂಪಿಸಿರುವುದು ‘ಜೈ’ ಸಿನೆಮಾದ ಹೆಚ್ಚಾಗಾರಿಕೆ. ಕಥೆಯಲ್ಲಿ ಬರುವ ನಿರುದ್ಯೋಗಿ ನಾಯಕ, ರಾಜಕೀಯ ಖಳನಾಯಕ, ಪ್ರತೀ ಊರಿಗಾಗಿ ಹೋರಾಡುವ ಯುವಕರ ಪಡೆ, ಆಸೆ-ದುರಾಸೆ, ಸ್ನೇಹ-ಪ್ರೀತಿ, ತಂತ್ರ-ಕುತಂತ್ರ, ದ್ರೋಹ, ಕ್ರೌರ್ಯ ಎಲ್ಲವನ್ನೂ ನೋಡುಗರ ಕಣ್ಣಿಗೆ ಕಟ್ಟುವಂತೆ ತರುವಲ್ಲಿ ನಟ ಕಂ ನಿರ್ದೇಶಕ ರೂಪೇಶ್ ಶೆಟ್ಟಿ ಯಶಸ್ವಿಯಾಗಿದ್ದಾರೆ. ತಾಂತ್ರಿಕವಾಗಿ ಚಿತ್ರದ ಛಾಯಾಗ್ರಹಣ, ಸಂಕಲನ, ಮೇಕಿಂಗ್, ಗುಣಮಟ್ಟ ಎಲ್ಲವೂ ‘ಜೈ’ ಚಿತ್ರ ಅದ್ಧೂರಿಯಾಗಿ ಕಾಣುವಂತೆ ಮಾಡಿದೆ. ಕನ್ನಡದ ಕರಾವಳಿ ಸೊಗಡಿನ ಮತ್ತೊಂದು ಸಿನೆಮಾ ನೋಡಬೇಕು, ಕಂಪ್ಲೀಟ್ ಫ್ಯಾಮಿಲಿ ಎಂಟರ್‌ಟೈನ್ಮೆಂಟ್ ಇರಬೇಕು ಎನ್ನುವವರು ಒಮ್ಮೆ ಥಿಯೇಟರಿನಲ್ಲಿ ಕರಾವಳಿ ಪ್ರತಿಭೆಗಳ ಪ್ರಯತ್ನಕ್ಕೆ ‘ಜೈ’ಕಾರ ಹಾಕಿಬರಬಹುದು.
- ಜಿ. ಎಸ್. ಕಾರ್ತಿಕ ಸುಧನ್,















