Quick ಸುದ್ದಿಗೆ ಒಂದು click

‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ಗೆ ಡಾ. ಜಯಮಾಲಾ ಸಾರಥ್ಯ

ಹಿರಿಯ ನಟಿ ಡಾ. ಜಯಮಾಲಾ ‘ಫಿಲಂ ಚೇಂಬರ್‌’ ನೂತನ ಅಧ್ಯಕ್ಷೆ

ಎರಡನೇ ಬಾರಿಗೆ ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ಯ ಅಧ್ಯಕ್ಷಗಾದಿಗೇರಿದ ‘ಗಿರಿಕನ್ಯೆ’!

ಚುನಾವಣೆಯಲ್ಲಿ ಜಯಮಾಲ ಕೊರಳಿಗೆ ‘ಜಯಮಾಲೆ’

ಜ. 31, ಬೆಂಗಳೂರು; ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ಗೆ ಇಂದು (31 ಜ. 2026) ನಡೆದ ಚುನಾವಣೆಯಲ್ಲಿ ಹಿರಿಯ ನಟಿ, ನಿರ್ಮಾಪಕಿ ಮತ್ತು ರಾಜಕಾರಣಿ ಆಗಿರುವ ಡಾ. ಜಯಮಾಲಾ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ನಟಿ ಜಯಮಾಲಾ ಅವರು ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ ಹೊರಬರುತ್ತಿದ್ದಂತೆ, ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ಯ ಚುನಾವಣಾ ಕಣ ರಂಗೇರಿತ್ತು. ಹಿರಿಯ ನಿರ್ಮಾಪಕ ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ಯ ಮಾಜಿ ಅಧ್ಯಕ್ಷ ಭಾ. ಮ. ಹರೀಶ್‌ ಮತ್ತು ಜಯಮಾಲಾ ಅವರ ನಡುವೆ ತೀವ್ರ ಪೈಪೋಟಿ ಎದುರಾಗಿತ್ತು. ಈ ಬಾರಿ ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ ಅಧ್ಯಕ್ಷ ಸ್ಥಾನ ಯಾರ ಪಾಲಾಗಲಿದೆ? ಎಂಬ ಕುತೂಹಲ ಕೂಡ ಚಿತ್ರರಂಗದಲ್ಲಿ ಗರಿಗೆದರಿತ್ತು. ಅಂತಿಮವಾಗಿ ಜ. 31ರಂದು ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ಯ ಚುನಾವಣೆ ನಡೆದಿದ್ದು, ಅಂದು ಸಂಜೆಯೇ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಹಿರಿಯ ನಟಿ ಜಯಮಾಲಾ ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ಯ ನೂತನ ಅಧ್ಯಕ್ಷರಾಗಿ ವಿಜಯಮಾಲೆಯನ್ನು ಕೊರಳಿಗೆ ಹಾಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಎರಡನೇ ಬಾರಿಗೆ ಜಯಮಾಲಾ ಒಲಿದ ಅಧ್ಯಕ್ಷಗಾದಿ

ಇನ್ನು ಈ ಬಾರಿ ನಡೆದ ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ಯ ಚುನಾವಣೆಯಲ್ಲಿ 843 ಮತಗಳು ಚಲಾವಣೆಯಾಗಿದ್ದು, ಹಿರಿಯ ನಟಿ ಜಯಮಾಲ 512 ಮತಗಳನ್ನು ಪಡೆದು ಭರ್ಜರಿಯಾಗಿ ಜಯಭೇರಿ ಬಾರಿಸಿದ್ದಾರೆ. ಈ ಮೂಲಕ ಅನಾಯಾಸವಾಗಿ ಜಯಮಾಲ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅಂದಹಾಗೆ, ಜಯಮಾಲ 2008ರಲ್ಲಿ ಮೊದಲ ಬಾರಿಗೆ ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅದಾದ ಬಳಿಕ ಸುಮಾರು 18 ವರ್ಷಗಳ ಬಳಿಕ ಜಯಮಾಲ ಎರಡನೇ ಬಾರಿ ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಎರಡನೇ ಬಾರಿಗೆ ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ಯ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಜಯಮಾಲ ದಾಖಲೆಯನ್ನೇ ಬರೆದಿದ್ದಾರೆ.

ಜಯಮಾಲ ಪರ ಚಿತ್ರರಂಗದ ದಿಗ್ಗಜರ ಪ್ರಚಾರ

ಈ ಬಾರಿ ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ಯ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಜಯಮಾಲಾ ಪರವಾಗಿ ಚಿತ್ರರಂಗದ ಅನೇಕ ಖ್ಯಾತನಾಮರು ಭರ್ಜರಿಯಾಗಿ ಪ್ರಚಾರ ನಡೆಸಿದ್ದರು. ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ಯ ಮಾಜಿ ಅಧ್ಯಕ್ಷರಾದ ಸಾ. ರಾ. ಗೋವಿಂದ್‌, ಹಾಲಿ ಅಧ್ಯಕ್ಷರಾದ ನರಸಿಂಹಲು,  ಚಿನ್ನೇಗೌಡ, ಎಂ. ಎನ್‌. ಸುರೇಶ್‌, ಎಂ. ಎನ್‌. ಕುಮಾರ್‌, ಸಂದೇಶ್‌ ನಾಗರಾಜ್‌, ಕಾರ್ಯದರ್ಶಿ ಗಣೇಶ್‌, ರಾಮಕೃಷ್ಣ, ಅಶೋಕ್‌ ಕುಮಾರ್‌, ಹಾಗೂ ಇನ್ನಿತರರು ಜಯಮಾಲಾ ಪರ ಪ್ರಚಾರಕ್ಕೆ ಭಾಗಿಯಾಗಿದ್ದರು. ಚುನಾವಣೆಗೂ ಮುನ್ನ  ಮೈಸೂರಿಗೆ ಆಗಮಿಸಿ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದ ಜಯಮಾಲ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ, ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದರು.

G S Karthik Sudhan

Karthik Sudhan is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Karthik Sudhan has worked in reputed online publications of Kannada.

Related Posts

error: Content is protected !!