Quick ಸುದ್ದಿಗೆ ಒಂದು click

ಆರೇ ದಿನಕ್ಕೆ 900 ಕೋಟಿ ಗಳಿಕೆ! 1000 ಕೋಟಿ ಕ್ಲಬ್‌ನತ್ತ ‘ಧುರಂಧರ್ 2’..!

ಮೊದಲ ವಾರದಲ್ಲೇ ‘ಧುರಂಧರ್ 2’ 900 ಕೋಟಿಗೂ ಅಧಿಕ ಗಳಿಕೆ!

ಸಾವಿರ ಕೋಟಿ ಕ್ಲಬ್‌ ಸೇರುವತ್ತ ದಾಪುಗಾಲಿಡುತ್ತಿರುವ ‘ಧುರಂಧರ್ 2’ 

ಅಡೆತಡೆಗಳನ್ನು ದಾಟಿ ಮುನ್ನುಗ್ಗುತ್ತಿರುವ ‘ಧುರಂಧರ್ 2’ 

ಮಾ. 24, ಮುಂಬೈ; ಇದೇ ವರ್ಷ ಯುಗಾದಿ ಹಬ್ಬದ ಸಂದರ್ಭದಲ್ಲಿ ಬಾಲಿವುಡ್‌ನಲ್ಲಿ ತೆರೆಗೆ ಬಂದಿದ್ದ ಬಹುನಿರೀಕ್ಷಿತ ‘ಧುರಂಧರ್ 2’ ಅಂದುಕೊಂಡಂತೆ, ಬಾಕ್ಸಾಫೀಸ್‌ನಲ್ಲೂ ಭರ್ಜರಿಯಾಗಿ ಕಮಾಲ್‌ ಮಾಡುವಲ್ಲಿ ಯಶಸ್ವಿಯಾಗಿದೆ. ಬಾಲಿವುಡ್‌ ಮೂಲಗಳ ಪ್ರಕಾರ, ‘ಧುರಂಧರ್ 2’ ಚಿತ್ರ ಬಿಡುಗಡೆಯಾಗಿ ಕೇವಲ ಆರು ದಿನಗಳಲ್ಲಿ ಜಾಗತಿಕವಾಗಿ ಬರೋಬ್ಬರಿ 900 ಕೋಟಿ ರೂಪಾಯಿ ಗಳಿಸಿ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದಿದೆ. ಇತ್ತೀಚಿನ ದಿನಗಳಲ್ಲಿ ಹೇಳಿಕೊಳ್ಳುವ ಮಟ್ಟಿಗೆ ಯಶಸ್ಸು ಕಾಣದ ಹಿಂದಿ ಚಿತ್ರರಂಗಕ್ಕೆ ಈ ಭರ್ಜರಿ ಯಶಸ್ಸು ದೊಡ್ಡ ಚೇತರಿಕೆ ನೀಡಿದೆ ಎಂದೇ ಹೇಳಲಾಗುತ್ತಿದೆ.

ಮಿಶ್ರ ಪ್ರತಿಕ್ರಿಯೆ ನಡುವೆಯೂ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಗೆಲುವು

ಇನ್ನು ‘ಧುರಂಧರ್ 2’ ಸಿನೆಮಾಕ್ಕೆ ನೋಡುಗರು ಮತ್ತು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ‘ಧುರಂಧರ್ 2’ ಸಿನೆಮಾದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರೆ, ಇನ್ನು ಕೆಲವರು ಚಿತ್ರದ ಕಥಾಹಂದರದ ಬಗ್ಗೆ ವಿರೋಧಾಬಾಸದ ಮಾತುಗಳನ್ನಾಡುತ್ತಿದ್ದಾರೆ. ಇವೆಲ್ಲದರ ನಡುವೆಯೂ, ‘ಧುರಂಧರ್ 2’ ಸಿನೆಮಾ ಬಾಕ್ಸ್ ಆಫೀಸ್​​ನಲ್ಲಿ ಊಹೆಗೂ ಮೀರಿ ಕಲೆಕ್ಷನ್ ಮಾಡುತ್ತಿದೆ. ಬಾಲಿವುಡ್‌ ಮೂಲಗಳ ಪ್ರಕಾರ, ಸಿನೆಮಾದ ಒಟ್ಟಾರೆ ಕಲೆಕ್ಷನ್ ಮೊದಲ ಆರು ದಿನಗಳಲ್ಲೇ ವಿಶ್ವಮಟ್ಟದಲ್ಲಿ ಬರೋಬ್ಬರಿ 900 ಕೋಟಿ ರೂಪಾಯಿ ಆಗಿದೆ. ಚಿತ್ರತಂಡದ ಲೆಕ್ಕಚಾರದ ಪ್ರಕಾರ, ಎಲ್ಲವೂ ನಡೆದರೆ ಮೊದಲ ಹತ್ತು ದಿನಗಳಲ್ಲೇ ‘ಧುರಂಧರ್ 2’ ಸಿನೆಮಾ ಬರೋಬ್ಬರಿ 1000 ಕೋಟಿ ದಾಟುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ.

ಡಬ್ಬಿಂಗ್‌ ಆವೃತ್ತಿ ನಿರಾಶದಾಯಕ…

ಇನ್ನು ‘ಧುರಂಧರ್ 2’ ಸಿನೆಮಾದ ಭಾರತದ ಗ್ರಾಸ್ ಕಲೆಕ್ಷನ್ 600 ಕೋಟಿ ರೂಪಾಯಿ ದಾಟಿದೆ. ಹಿಂದಿ ಚಿತ್ರವೊಂದು ಈ ಮಟ್ಟದಲ್ಲಿ ಗಳಿಕೆ ಮಾಡುತ್ತಿರುವುದು ಇದೇ ಮೊದಲು. ಇದು ಚಿತ್ರತಂಡದ ಖುಷಿ ಹೆಚ್ಚಿಸಿದೆ. ಆದರೆ, ಕನ್ನಡ ಸೇರಿದಂತೆ ಸ್ಥಳೀಯ ಭಾಷೆಗಳಿಗೆ ಡಬ್ ಆದ ಆವೃತ್ತಿಗಳು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿವೆ. ಕನ್ನಡ ವರ್ಷನ್ ತಡವಾಗಿ ಬಿಡುಗಡೆಯಾದ ಕಾರಣ ಪ್ರೇಕ್ಷಕರನ್ನು ತಲುಪಲು ಹೆಣಗಾಡಿದೆ. ಈ ಸಿನೆಮಾ ಅರಬ್ ರಾಷ್ಟ್ರಗಳಲ್ಲಿ ಬ್ಯಾನ್ ಆಗಿದೆ. ಆದಾಗ್ಯೂ ಸಿನೆಮಾದ ಗಳಿಕೆಗೆ ಯಾವುದೇ ತೊಂದರೆ ಆಗಿಲ್ಲ.

‘ಧುರಂಧರ್ 2’ ಸಿನೆಮಾವನ್ನು ಆದಿತ್ಯಧಾರ್ ನಿರ್ದೇಶನ ಮಾಡಿದ್ದಾರೆ. ಈ ಸಿನೆಮಾಗೆ ರಣವೀರ್ ಸಿಂಗ್ ಹೀರೋ. ಸಾರಾ ಅರ್ಜುನ್ ಚಿತ್ರದ ನಾಯಕಿ. ‘ಧುರಂಧರ್’ ಸಿನೆಮಾ ರಿಲೀಸ್​​ಗೂ ಮೊದಲೇ ಸಾಕಷ್ಟು ನೆಗೆಟಿವ್ ಅಭಿಪ್ರಾಯಗಳನ್ನು ಪಡೆದುಕೊಂಡಿತ್ತು. ಆದರೆ, ಸಿನೆಮಾ ಗೆಲ್ಲುವಲ್ಲಿ ಯಶಸ್ವಿ ಆಯಿತು. ಮೊದಲ ಭಾಗದ ಕಲೆಕ್ಷನ್ 1300 ಕೋಟಿ ರೂಪಾಯಿ ಆಗಿತ್ತು. ಈಗ ಚಿತ್ರದ ಸೀಕ್ವೆಲ್ ಆರೇ ದಿನಕ್ಕೆ 900 ಕೋಟಿ ರೂಪಾಯಿ ತಲುಪಿದೆ. ಇನ್ನು ಕೆಲವೇ ದಿನಗಳಲ್ಲಿ ಮೊದಲ ಭಾಗದ ಕಲೆಕ್ಷನ್ ಹಿಂದಿಕ್ಕಲಿದೆ ಎಂಬ ನಿರೀಕ್ಷೆ ಬಾಲಿವುಡ್‌ ನಲ್ಲಿದೆ.

Related Posts

error: Content is protected !!