ಅಭಿಮಾನಿಗಳಿಂದ ‘ಸಾಹಸಸಿಂಹ’ನಿಗೆ ಅಭಿಮಾನದ ಕ್ಷೇತ್ರ!
ಅಭಿಮಾನಿಗಳಿಂದಲೇ ನಟ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ
‘ಡಾ. ವಿಷ್ಣುವರ್ಧನ್ ಅಭಿಮಾನ ಕ್ಷೇತ್ರ’ದ ನೀಲನಕ್ಷೆ ಬಿಡುಗಡೆ
ವಿಷ್ಣುವರ್ಧನ್ 75ನೇ ಜನ್ಮದಿನ ಪ್ರಯುಕ್ತ ಅಭಿಮಾನಿಗಳ ಹೊಸ ಕಾರ್ಯ
ಬೆಂಗಳೂರು, 18 ಸೆ. 2025; ಕನ್ನಡ ಚಿತ್ರರಂಗದ ‘ಸಾಹಸಸಿಂಹ’ ಖ್ಯಾತಿಯ ನಟ ಡಾ. ವಿಷ್ಣುವರ್ಧನ್ ಅವರ ಪುಣ್ಯಭೂಮಿ ಹೋರಾಟ ಇಂದಿನದಲ್ಲ. ಅದನ್ನು ಉಳಿಸಿಕೊಳ್ಳುವುದಕ್ಕಾಗಿ ಮಾಡದ ಹೋರಾಟಗಳಿಲ್ಲ, ಮಾಡದ ಪ್ರಯತ್ನಗಳಿಲ್ಲ, ನಡೆದ ಸಂಧಾನ ಸಭೆಗಳಿಲ್ಲ. ಆದರೂ ಅದು ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ. ಈ ವರ್ಷದ 75ನೇ ಅಮೃತ ಮಹೋತ್ಸವದ ಸಂದರ್ಭದಲ್ಲೂ ಡಾ. ವಿಷ್ಣುವರ್ಧನ್ ಅವರ ಜನ್ಮದಿನ ಆಚರಣೆಗೆ ಒಂದು ಸೂಕ್ತ ಸ್ಥಳ ಇಲ್ಲದೆ ಹೋದದ್ದು ದುರಂತ.

ಅದಕ್ಕಾಗಿ ‘ಸಾಹಸಸಿಂಹ’ ವಿಷ್ಣುವರ್ಧನ್ ಅವರ ಅಭಿಮಾನಿಗಳು ತನ್ನ ಮೆಚ್ಚಿನ ನಟನಿಗಾಗಿ ‘ಡಾ. ವಿಷ್ಣುವರ್ಧನ್ ಅಭಿಮಾನ ಕ್ಷೇತ್ರ’ ಕಟ್ಟಲು ಮುಂದಾಗಿದ್ದಾರೆ. ಕಲಾವಿದರೊಬ್ಬರ ಹೆಸರಿನಲ್ಲಿ ಅವರ ಅಭಿಮಾನಿಗಳು ನಿರ್ಮಿಸುತ್ತಿರುವ ದೇಶದ ಮೊಟ್ಟ ಮೊದಲ ಅಭಿಮಾನ ಕ್ಷೇತ್ರ ಎಂಬ ಹೆಗ್ಗಳಿಕೆ ಇದರದ್ದಾಗಿದೆ. ಈ ಅಭಿಮಾನ ಕ್ಷೇತ್ರಕ್ಕೆ ನಟ ಕಿಚ್ಚ ಸುದೀಪ್, ಉದ್ಯಮಿ ಅಶೋಕ್ ಖೇಣಿ, ‘ಕರ್ನಾಟಕ ರಕ್ಷಣಾ ವೇದಿಕೆ’ಯ ನಾರಾಯಣಗೌಡ, ನೈಸ್ ಸಂಸ್ಥೆಯ ಎಂ. ರುದ್ರೇಶ್ ಸೇರಿದಂತೆ ಅನೇಕರು ಕೈ ಜೋಡಿಸಿದ್ದಾರೆ. ಇವರಲ್ಲದೆ ರಾಜ್ಯದಾದ್ಯಂತ ಸಾವಿರಾರು ಅಭಿಮಾನಿಗಳು ಈ ಒಂದು ಅಭಿಮಾನ ಕ್ಷೇತ್ರದ ಭಾಗವಾಗುತ್ತಿದ್ದಾರೆ.
‘ಜ್ಞಾನ, ಧ್ಯಾನ ಮತ್ತು ದರ್ಶನ’ದ ಪರಿಕಲ್ಪನೆ..!
ವಿಷ್ಣುವರ್ಧನ್ ಅವರ 75ನೇ ಜನ್ಮದಿನದ ಸಂದರ್ಭದಲ್ಲಿ, ‘ಡಾ. ವಿಷ್ಣುವರ್ಧನ್ ಅಭಿಮಾನ ಕ್ಷೇತ್ರ’ದ ನೀಲಿ ನಕ್ಷೆಯನ್ನು ಬೆಂಗಳೂರಿನ ಕಲಾವಿದರ ಸಂಘದಲ್ಲಿ ಬಿಡುಗಡೆ ಮಾಡಲಾಯಿತು. ಈ ಅಭಿಮಾನ ಕ್ಷೇತ್ರದ ವಿಶೇಷ ಅಡಿಬರಹ ‘ಜ್ಞಾನ, ಧ್ಯಾನ ಮತ್ತು ದರ್ಶನ’. ಇಲ್ಲಿ ಡಾ. ವಿಷ್ಣುವರ್ಧನ್ ಅವರ 25 ಅಡಿಯ ಪ್ರತಿಮೆಯ ಜೊತೆಗೆ ಧ್ಯಾನ ಮಂದಿರವಿದೆ. ಜೊತೆಗೆ ಒಂದು ದೊಡ್ಡ ಪುಸ್ತಕ ಭಂಡಾರ ಇರಲಿದೆ. ಈ ಧ್ಯಾನ ಮಂದಿರದ ವಿಶೇಷತೆ ಏನೆಂದರೆ, ಮಧ್ಯಾಹ್ನ ಎರಡು ಗಂಟೆಗೆ ಸಮಯಕ್ಕೆ ಸೂರ್ಯನ ಕಿರಣಗಳು ಡಾ. ವಿಷ್ಣುವರ್ಧನ್ ಅವರ ಅಮೃತ ಶಿಲೆಯ ಮೇಲೆ ಮೂಡುವಂತೆ ಇದನ್ನು ವಿನ್ಯಾಸ ಮಾಡಲಾಗಿದೆ. ಜೊತೆಗೆ ಅವರ ಫೋಟೋ ಗ್ಯಾಲರಿ ಕೂಡ ವಿಶೇಷವಾಗಿ ವಿನ್ಯಾಸಗೊಂಡಿದೆ. ಜೊತೆಗೆ ಪ್ರತಿದಿನ ಸಂಜೆ ಆರು ಗಂಟೆ ಮೂವತ್ತು ನಿಮಿಷಕ್ಕೆ ಲೇಸರ್ ಶೋ ನಡೆಯುವಂತೆ ವ್ಯವಸ್ಥೆಯನ್ನು ಮಾಡಲಾಗಿದೆ.
‘ಡಾ. ವಿಷ್ಣುವರ್ಧನ್ ಅಭಿಮಾನ ಕ್ಷೇತ್ರ’ದ ಜಾಗದ ಮಾಹಿತಿ ರಹಸ್ಯ!
‘ಡಾ. ವಿಷ್ಣುವರ್ಧನ್ ಅಭಿಮಾನ ಕ್ಷೇತ್ರ’ದ ನೀಲನಕ್ಷೆಯನ್ನು ಬಿಡುಗಡೆ ಮಾಡಿ ಮಾತನಾಡಿದ, ವೀರಕಪುತ್ರ ಶ್ರೀನಿವಾಸ್, ‘ಇದು ಮುಂದಿನ ಒಂದು ವರ್ಷದಲ್ಲಿ ಮುಗಿಯುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಲಾಗುತ್ತಿದ್ದು, ಈಗ ಸದ್ಯಕ್ಕೆ ಜಾಗದ ಕುರಿತಾಗಿ ಯಾವುದೇ ಮಾಹಿತಿಯನ್ನು ನೀಡಲಾಗುವುದಿಲ್ಲ ಎಂದು ತಿಳಿಸಿದರು. ಏಕೆಂದರೆ ಆ ಜಾಗದ ಮಾಹಿತಿ ಸಿಕ್ಕಿದ ತಕ್ಷಣ ವಿಷ್ಣುವರ್ಧನ್ ಅವರ ವಿಷಯದಲ್ಲಿ ವಿವಾದಗಳು ಇದ್ದೇ ಇರುತ್ತವೆ ಎಂಬ ಕಾರಣಕ್ಕೆ ಮುಂಜಾಗ್ರತೆ ಕ್ರಮವಾಗಿ ಆ ಜಾಗವನ್ನು ಈಗ ಬಹಿರಂಗಪಡಿಸಲಾಗುವುದಿಲ್ಲ ಎಂದು ತಿಳಿಸಿದರು. ಇದರ ಖರ್ಚು ವೆಚ್ಚಗಳು ಮತ್ತು ಹಣಕಾಸು ನಿರ್ವಹಣೆ ಮುಂತಾದ ವಿಷಯಗಳು ನಿವೃತ್ತ ನ್ಯಾಯಮೂರ್ತಿಯ ನೇತೃತ್ವದಲ್ಲಿ ಜರುಗಲಿವೆ’ ಎಂದು ತಿಳಿಸಿದ್ದಾರೆ.















