ಡಿ. 20ಕ್ಕೆ ಹುಬ್ಬಳ್ಳಿಯಲ್ಲಿ ಕಿಚ್ಚನ ‘ಮಾರ್ಕ್’ ಪ್ರೀ-ರಿಲೀಸ್ ಇವೆಂಟ್
ಇದೇ ಡಿ. 20ರಂದು ಹುಬ್ಬಳ್ಳಿಯಲ್ಲಿ ‘ಮಾರ್ಕ್’ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮ
ಗಂಡು ಮೆಟ್ಟಿದನಾಡಲ್ಲಿ ಅಭಿಮಾನಿಗಳೊಂದಿಗೆ ‘ಮಾರ್ಕ್’ ಬಿಡುಗಡೆ ಸಂಭ್ರಮ
ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಅದ್ಧೂರಿ ಕಾರ್ಯಕ್ರಮ
ಹುಬ್ಬಳ್ಳಿ, ಡಿ. 17; ನಟ ಕಿಚ್ಚ ಸುದೀಪ್ ಅಭಿನಯದ ‘ಮಾರ್ಕ್’ ಸಿನೆಮಾದ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ. ಇದೇ 2025ರ ಡಿ. 25 ರಂದು ‘ಮಾರ್ಕ್’ ಚಿತ್ರ ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಸದ್ಯ ‘ಮಾರ್ಕ್’ ಚಿತ್ರದ ಪ್ರಚಾರ ಕಾರ್ಯ ಜೋರಾಗಿ ಸಾಗುತ್ತಿದೆ. ಈಗಾಗಲೇ ‘ಮಾರ್ಕ್’ ಚಿತ್ರದ ಟ್ರೇಲರ್ ಮತ್ತು ಹಾಡುಗಳ ಬಿಡುಗಡೆಯ ಮೂಲಕ ಪ್ರೇಕ್ಷಕರಿಗೆ ಆಮಂತ್ರಣ ಕೊಟ್ಟಿರುವ ಚಿತ್ರತಂಡ, ಇದೀಗ ಉತ್ತರ ಕರ್ನಾಟಕದ ಸಿನಿಪ್ರಿಯರನ್ನು ಭೇಟಿಯಾಗಲು ಹುಬ್ಬಳ್ಳಿಯತ್ತ ಮುಖ ಮಾಡಿದೆ. 
ಹೌದು, ‘ಮಾರ್ಕ್’ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಇದೇ ಡಿ. 20ರಂದು ನಡೆಯಲಿದ್ದು, ಈ ಬಾರಿ ನಟ ಸುದೀಪ್ ಮತ್ತು ಚಿತ್ರತಂಡ ತಮ್ಮ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಅನ್ನು ಗಂಡುಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ನಡೆಸಲು ನಿರ್ಧರಿಸಿದ್ದಾರೆ. ಹುಬ್ಬಳ್ಳಿಯಲ್ಲಿ ‘ಮಾರ್ಕ್’ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ನಗರದ ನೆಹರು ಮೈದಾನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
‘ಮಾರ್ಕ್’ ಪ್ರೀ-ರಿಲೀಸ್‌ನಲ್ಲಿ ತಾರೆಯರ ದಂಡು!
ಇನ್ನು ‘ಮಾರ್ಕ್’ ಸಿನೆಮಾದ ಪ್ರೀ-ರಿಲೀಸ್ ಇವೆಂಟ್ ಕಾರ್ಯಕ್ರಮದಲ್ಲಿ ನಾಯಕ ನಟ ಕಿಚ್ಚ ಸುದೀಪ್ ಸೇರಿದಂತೆ ‘ಮಾರ್ಕ್’ ಸಿನೆಮಾದ ಬಹುತೇಕ ಎಲ್ಲ ಕಲಾವಿದರು ಮತ್ತು ತಂತ್ರಜ್ಞರು ಭಾಗಿಯಾಗಲಿದ್ದಾರೆ. ಜೊತೆಗೆ ಚಿತ್ರರಂಗದ ಹಾಗೂ ವಿವಿಧ ಕ್ಷೇತ್ರಗಳ ಅನೇಕ ಗಣ್ಯರು ಕೂಡ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗಿಯಾಗಲಿದ್ದಾರೆ.
ಡಿ. 20ರ ಶನಿವಾರ ಸಂಜೆ 6.00 ಗಂಟೆಗೆ ‘ಮಾರ್ಕ್’ ಸಿನೆಮಾದ ಪ್ರೀ-ರಿಲೀಸ್ ಇವೆಂಟ್ ಕಾರ್ಯಕ್ರಮ ಆರಂಭವಾಗಲಿ, ವರ್ಣರಂಜಿತವಾಗಿ ‘ಮಾರ್ಕ್’ ಪ್ರೀ-ರಿಲೀಸ್ ಇವೆಂಟ್ ಸಮಾರಂಭ ನಡೆಯಲಿದೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.
ಡಿ. 25ಕ್ಕೆ ‘ಮಾರ್ಕ್’ ಎಂಟ್ರಿ
‘ಮಾರ್ಕ್’ ಚಿತ್ರ ಇದೇ ಡಿಸೆಂಬರ್ ತಿಂಗಳ 25ರಂದು ದೊಡ್ಟಮಟ್ಟದಲ್ಲಿ ಬಿಡುಗಡೆಯಾಗಲಿದೆ. ಈ ಹಿಂದೆ ಕಿಚ್ಚ ಸುದೀಪ್ ಅಭಿನಯದ ‘ಮ್ಯಾಕ್ಸ್’ ಸಿನೆಮಾವನ್ನು ನಿರ್ದೇಶನ ಮಾಡಿದ್ದ ವಿಜಯ್ ಕಾರ್ತಿಕೇಯ ಈ ಸಿನೆಮಾವನ್ನು ನಿರ್ದೇಶನ ಮಾಡಿದ್ದಾರೆ. ತಮಿಳಿನ ‘ಸತ್ಯ ಜ್ಯೋತಿ ಫಿಲಂಸ್’ ಮತ್ತು ‘ಕಿಚ್ಚ ಕ್ರಿಯೇಷನ್’ ಬ್ಯಾನರ್ ಮೂಲಕ ‘ಮಾರ್ಕ್’ ಸಿನೆಮಾ ಜಂಟಿಯಾಗಿ ನಿರ್ಮಾಣವಾಗಿದೆ. ‘ಮಾರ್ಕ್’ ಚಿತ್ರದಲ್ಲಿ ನಾಯಕ ನಟ ಸುದೀಪ್ ಜೊತೆಗೆ ದೀಪ್ಷಿಕಾ, ನವೀನ್ ಚಂದ್ರ, ರೋಶಿನಿ ಪ್ರಕಾಶ್, ಗುರು ಸೋಮಸುಂದರಂ, ಗೋಪಾಲಕೃಷ್ಣ ದೇಶಪಾಂಡೆ, ಡ್ರ್ಯಾಗನ್ ಮಂಜು, ಅರ್ಚನಾ ಕೊಟ್ಟಿಗೆ, ಮಹಾಂತೇಶ್ ಹಿರೇಮಠ್, ಶೈನ್ ಟಾಮ್ ಚಾಕೋ, ಯೋಗಿ ಬಾಬು ಮುಂತಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.















