‘ತ್ರಿಬಲ್’ ಧಮಾಕಾ… ’45’ ಟ್ರೇಲರ್ ಔಟ್!
ಅದ್ಧೂರಿಯಾಗಿ ಹೊರಬಂತು ’45’ ಟ್ರೇಲರ್
ಮೂವರು ಸ್ಟಾರ್ಸ್… ಮೂರು ಗೆಟಪ್… ಫ್ಯಾನ್ಸ್‌ಗೆ ‘ತ್ರಿಬಲ್’ ಸರ್‌ಪ್ರೈಸ್…
ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ದಿನಗಣನೆ
ಈ ವರ್ಷದ ಬಹುನಿರೀಕ್ಷಿತ ಸಿನೆಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ’45’ ಸಿನೆಮಾದ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಇದೇ 2025ರ ಡಿಸೆಂಬರ್ 25ರ ಕ್ರಿಸ್‌ಮಸ್ ಹಬ್ಬದ ಸಂದರ್ಭದಲ್ಲಿ ’45’ ಸಿನೆಮಾ ಅದ್ಧೂರಿಯಾಗಿ ಬಿಡುಗಡೆಗೊಂಡು ತೆರೆಗೆ ಬರುತ್ತಿದೆ. ಈಗಾಗಲೇ ಭರ್ಜರಿಯಾಗಿ ’45’ ಸಿನೆಮಾದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇತ್ತೀಚೆಗೆ ಅಷ್ಟೇ ಅದ್ಧೂರಿಯಾಗಿ ’45’ ಸಿನೆಮಾದ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ.
ಹೇಗಿದೆ ’45’ ಸಿನೆಮಾದ ಟ್ರೇಲರ್…?
ಆರಂಭದಲ್ಲಿಯೇ ಚಿತ್ರತಂಡ ಹೇಳಿರುವಂತೆ, ಮೂರು ಪ್ರಮುಖ ಪಾತ್ರಗಳ ಸುತ್ತ ’45’ ಸಿನೆಮಾದ ಕಥೆ ಸಾಗುತ್ತದೆ. ಈ ಮೂರು ಪ್ರಮುಖ ಪಾತ್ರಗಳಲ್ಲಿ ನಟರಾದ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಾಜ್ ಬಿ. ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಮೂರೂ ಪಾತ್ರಗಳಿಗೂ ’45’ ಟ್ರೇಲರಿನಲ್ಲಿ ಸಮಾನ ಸ್ಥಾನ ಕಲ್ಪಿಸಿಕೊಡಲಾಗಿದ್ದು, ಪ್ರತಿ ಪಾತ್ರಗಳು ವಿಭಿನ್ನ ರೀತಿಯಲ್ಲಿ ಗಮನ ಸೆಳೆಯುತ್ತಿವೆ. ರಾಜ್ ಬಿ ಶೆಟ್ಟಿ, ಶಿವರಾಜ್‌ಕುಮಾರ್ ಹಾಗೂ ಉಪೇಂದ್ರ ಪಾತ್ರಗಳು ಟ್ರೇಲರ್ನಲ್ಲಿ ಹೈಲೈಟ್ ಆಗಿವೆ. ಗೋರಿ ಮೇಲೆ ಹುಟ್ಟಿದ ದಿನಾಂಕ, ಹಾಗೂ ಸಾಯುವ ದಿನಾಂಕ ಬರೆದಿರುತ್ತಾರೆ. ಮಧ್ಯದಲ್ಲಿ ಒಂದು ಸಣ್ಣ ಗೆರೆ ಇರುತ್ತೇ. ಅದುವೇ ಜೀವನ ಎಂದು ಉಪ್ಪಿ ಹೇಳುವ ಡೈಲಾಗ್ ಗಮನ ಸೆಳೆದಿದೆ. ಟ್ರೇಲರ್ ಕೊನೆಯಲ್ಲಿ ಶಿವರಾಜ್‌ಕುಮಾರ್ ತಾಳುವ ಅವತಾರ ಮೆಚ್ಚುಗೆ ಪಡೆದಿದೆ. ಅದರಲ್ಲೂ ನಟ ಶಿವರಾಜ್‌ಕುಮಾರ್ ಗೆಟಪ್ ಅಂತೂ ಸಿನಿಪ್ರಿಯರ ಕುತೂಹಲ ಕೆರಳಿಸುವಂತಿದ್ದು, ಶಿವಣ್ಣ ಅವರ ಪಾತ್ರ ಸೀರೆ ಉಟ್ಟು ಎಲ್ಲರ ಹುಬ್ಬೇರುವಂತೆ ಮಾಡಿದೆ!
’45’ ಸಿನೆಮಾದ ಟ್ರೇಲರ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
ಒಟ್ಟಾರೆ ತನ್ನ ಕಂಟೆಂಟ್ ಮತ್ತು ಮೇಕಿಂಗ್ ಮೂಲಕ ’45’ ಟ್ರೇಲರ್ ಸಿನಿಪ್ರಿಯರ ಕುತೂಹಲ ಮತ್ತು ನಿರೀಕ್ಷೆ ಎರಡನ್ನೂ ದುಪ್ಪಟ್ಟು ಮಾಡಿರುವುದಂತೂ ಸುಳ್ಳಲ್ಲ. ‘ಆನಂದ ಆಡಿಯೋ’ ಯು-ಟ್ಯೂಬ್ ಚಾನೆಲ್‌ನಲ್ಲಿ ’45’ ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಟ್ರೇಲರ್ ಸೋಶಿಯಲ್ ಮೀಡಿಯಾಗಳಲ್ಲಿ ಜೋರಾಗಿ ಹರಿದಾಡುತ್ತಿದೆ.
ಇದೇ ಕ್ರಿಸ್‌ಮಸ್‌ಗೆ ’45’ ಕಮಾಲ್
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇದೇ ಆಗಸ್ಟ್ ತಿಂಗಳಲ್ಲೇ ’45’ ಸಿನೆಮಾ ರಿಲೀಸ್ ಆಗಬೇಕಿತ್ತು. ಆದರೆ, ಗ್ರಾಫಿಕ್ಸ್ ಕೆಲಸಗಳ ಕಾರಣಕ್ಕೆ ಸಿನಿಮಾದ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿತ್ತು. ಈಗ ಟ್ರೇಲರ್ ನೋಡಿದವರಿಗೆ ಅದು ಸ್ಪಷ್ಟವಾಗಿದೆ. ’45’ ಚಿತ್ರದ ಟ್ರೇಲರ್ ಉದ್ದಕ್ಕೂ ಗ್ರಾಫಿಕ್ಸ್ ಹೈಲೈಟ್ ಆಗಿದೆ. ಅಂದಹಾಗೆ, ಇದೇ 2025ರ ಡಿಸೆಂಬರ್ 25ರಂದು ’45’ ಸಿನೆಮಾ ಬಿಡುಗಡೆಯಾಗಿ ತೆರೆಗೆ ಬರುತ್ತಿದೆ.















