‘ಪ್ರೇಮದ ಊರಲಿ’ ಶ್ರೀರಾಮ್ ಪ್ರೇಮಕಥೆ…!
ಇಬ್ಬರು ನಾಯಕಿಯರ ಜೊತೆ ‘ಪ್ರೇಮದ ಊರಲಿ’ ಶ್ರೀರಾಮ್ ಯಾನ…
ನಟ ಶ್ರೀರಾಮ್, ತಪಸ್ವಿನಿ, ರಮಿಕಾ ಕಾಂಬಿನೇಶನ್‌ನಲ್ಲಿ ಹೊಸಚಿತ್ರ
ಟೈಟಲ್ ಟೀಸರ್ ಮೂಲಕ ಸಿನೆಮಾ ಅನೌನ್ಸ್
ಯುವ ನಟ ಶ್ರೀರಾಮ್ ಈ ಬಾರಿ ಹೊಸ ಪ್ರೇಮಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರುವ ತಯಾರಿ ಮಾಡಿಕೊಂಡಿದ್ದಾರೆ. ಶ್ರೀರಾಮ್ ಪ್ರೇಕ್ಷಕರ ಮುಂದೆ ಹೇಳಲು ಹೊರಟಿರುವ ಹೊಸ ಪ್ರೇಮಕಥೆಗೆ ‘ಪ್ರೇಮದ ಊರಲಿ’ ಎಂದು ಟೈಟಲ್ ಇಡಲಾಗಿದ್ದು, ಇತ್ತೀಚೆಗೆ ‘ಪ್ರೇಮದ ಊರಲಿ’ ಚಿತ್ರದ ಟೈಟಲ್ ಟೀಸರ್ ಬಿಡುಗಡೆಯಾಗಿದೆ.
ಈ ಹಿಂದೆ ‘ಅಕ್ಷಿ’ ಎಂಬ ಸಿನೆಮಾ ಮಾಡಿ ‘ರಾಷ್ಟ್ರ ಪ್ರಶಸ್ತಿ’ ಪಡೆದಿರುವ ನಿರ್ದೇಶಕ ಮನೋಜ್ ಕುಮಾರ್ ಈ ಹೊಸ ಮ್ಯೂಸಿಕ್ ಲವ್ ಸ್ಟೋರಿಗೆ ನಿರ್ದೇಶನ ಮಾಡುತ್ತಿದ್ದಾರೆ.
ಹಳ್ಳಿ ಸೊಗಡಿನ ಕಥೆಯಲ್ಲಿ ಶ್ರೀರಾಮ್
ಅಂದಹಾಗೆ, ಶ್ರೀರಾಮ್ ನಾಯಕ ನಟನಾಗಿ ಅಭಿನಯಿಸುತ್ತಿರುವ ‘ಪ್ರೇಮದ ಊರಲಿ’ ಸಿನೆಮಾ ಒಂದು ಹಳ್ಳಿಯ ಹಿನ್ನೆಲೆಯಲ್ಲಿ ನಡೆಯುವ ಕಥಾಹಂದರವನ್ನು ಹೊಂದಿದ್ದು, ಈ ಸಿನೆಮಾದಲ್ಲಿ ನಾಯಕ ನಟ ಶ್ರೀರಾಮ್ ಹಳ್ಳಿ ಹುಡುಗನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಚಿತ್ರತಂಡ ‘ಪ್ರೇಮದ ಊರಲಿ’ ಟೀಸರ್ ಬಿಡುಗಡೆ ಮಾಡುವ ಮೂಲಕ ಸಿನೆಮಾದ ಟೈಟಲ್ ಅನ್ನು ಅಧಿಕೃತವಾಗಿ ಘೋಷಣೆ ಮಾಡಿದೆ.
ಹೊಸಬರ ಜೊತೆ ರಂಗಾಯಣ ರಘು…
‘ಪ್ರೇಮದ ಊರಲಿ’ ಚಿತ್ರದಲ್ಲಿ ಹಿರಿಯ ನಟ ರಂಗಾಯಣ ರಘು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಪ್ರೇಮದ ಊರಲಿ’ ಚಿತ್ರದ ಟೀಸರ್ ಬಿಡುಗಡೆ ಟೀಸರ್ ಬಿಡುಗಡೆ ವೇಳೆ ಮಾತನಾಡಿದ ನಟ ರಂಗಾಯಣ ರಘು,
‘ತಪ್ಪುಗಳನ್ನು ಮಾಡ್ತಾ ಹೋಗಿ ಜೀವನ ಕಲಿಯುವ ಪಾತ್ರದಲ್ಲಿ ನಾನು ನಟಿಸಿದ್ದೇನೆ. ಶ್ರೀ ಮೊದಲು ಫೋನ್ ಮಾಡಿ ಹಳ್ಳಿ ಕಥೆ ಇದು ಹೇಳಿದರು. ನನಗೆ ಹಳ್ಳಿ ಕಥೆ ಇಷ್ಟವಾಗುತ್ತದೆ. ಹಾಗಾಗಿ ಖುಷಿಯಿಂದ ಈ ಸಿನೆಮಾದ ಕಥೆ ಕೇಳಿ ಪಾತ್ರ ಮಾಡಲು ಒಪ್ಪಿಕೊಂಡೆ. ಸಿನೆಮಾದ ಶೂಟಿಂಗ್ ಮಾಡಿದ ಜಾಗ ತುಂಬಾನೇ ಸೊಗಸಾಗಿತ್ತು. ನಾನು ಶೂಟಿಂಗ್ ಮುಗಿಸಿದ ಬಳಿಕ ನಾನು ಕೂಡ ಅಲ್ಲಿನ ಹಳ್ಳಿಯವನೇ ಆಹಿ ಹೋದೆ. ನಿರ್ದೇಶಕರು ಕೆಲಸ ಮಾಡುವ ರೀತಿ ನನಗೆ ಇಷ್ಟವಾಯ್ತು. ಇದೊಂದು ಅಪ್ಪಟ ಹಳ್ಳಿ ಸೊಗಡಿನ ಕಥೆ. ಎಲ್ಲರ ಪ್ರೀತಿ, ಸಹಕಾರ ನಮ್ಮಈ ಚಿತ್ರದ ಮೇಲೆ ಇರಲಿ’ ಎಂದರು.
‘ಪ್ರೇಮದ ಊರಲಿ’ ಮ್ಯೂಸಿಕಲ್ ಲವ್ ಸ್ಟೋರಿ…
‘ಪ್ರೇಮದ ಊರಲಿ’ ಚಿತ್ರದ ಬಗ್ಗೆ ಮಾತನಾಡಿರುವ ಚಿತ್ರದ ನಿರ್ದೇಶಕ ಮನೋಜ್ ಕುಮಾರ್, ‘ಹಿರಿಯ ನಟ ರಂಗಾಯಣ ರಘು ಈ ಸಿನೆಮಾಗೆ ಹಾಗೂ ನನಗೆ ಬೆಳಕು. ಅವರ ಅಭಿನಯದ ಬಗ್ಗೆ ಮಾತಾಡುವಷ್ಟು ನಾನು ದೊಡ್ಡವನಲ್ಲ.
ಅವರು ಒಂದು ವಿಶಿಷ್ಟವಾದ ಪಾತ್ರದಲ್ಲಿ ನಟಿಸಿದ್ದಾರೆ. ಹಾಸನದ ಸದಾ ಮಳೆ ಬರುವ ಜಾಗದಲ್ಲಿ ಶೂಟಿಂಗ್ ಮಾಡಿದ್ದೇವೆ. ಹೀರೋ ಚಿತ್ರಕ್ಕೆ ಸಾಕಷ್ಟು ಶ್ರಮ ಹಾಕಿದ್ದಾರೆ. ನಾಯಕಿರು ಅದ್ಭುತವಾಗಿ ನಟಿಸಿದ್ದಾರೆ. ನನಗೆ ಈ ಅವಕಾಶ ಕೊಟ್ಟ ನಿರ್ಮಾಪಕರಿಗೆ ಧನ್ಯವಾದಗಳು. ಚಿತ್ರಕ್ಕೆ ಏನು ಬೇಕು ಎಲ್ಲವನ್ನೂ ನೀಡಿದ್ದಾರೆ. ಸಂಪೂರ್ಣ ಬೆಂಬಲ ಕೊಟ್ಟಿದ್ದಾರೆ. ‘ಪ್ರೇಮದ ಊರಲಿ’ ಸಿನೆಮಾದಲ್ಲಿ ಒಂದು ಅಪ್ಪಟ ಮ್ಯೂಸಿಕಲ್ ಲವ್ ಸ್ಟೋರಿ ಇದೆ. ಚಿತ್ರದ ಹಿನ್ನೆಲೆ ಸಂಗೀತ ಅದ್ಭುತವಾಗಿದೆ. ಟೀಸರ್ ನೋಡಿದ್ರೆ ಗೊತ್ತಗುತ್ತದೆ ಇದು ನಾಗಣ್ಣ ಹಾಗೂ ಸಂತುವಿನ ಪುಟ್ಟ ಲೋಕ. ಊರು ಅಂದರೆ ಸಾವಿರ ಮನೆ, ನೂರು ಮನೆ ಇರಬೇಕು ಎಂಬುದು ಇಲ್ಲ. ಒಂದು ಮನೆಯಲ್ಲಿ ಎಲ್ಲರೂ ಲವಲವಿಕೆಯಿಂದ, ಖುಷಿಯಿಂದ, ಪ್ರೀತಿಯಿಂದ ಇದ್ದರೆ ಅದೇ ನಮಗೆ ದೊಡ್ಡ ಊರು. ಅದನ್ನು ‘ಪ್ರೇಮದ ಊರಲಿ’ ಕಾಣಬಹುದು. ಈ ಚಿತ್ರದ ಮೇಲೆ ಇಡೀ ತಂಡಕ್ಕೆ ಸಾಕಷ್ಟು ನಿರೀಕ್ಷೆಯಿದೆ. ನೋಡುಗರಿಗೆ ಈ ಸಿನೆಮಾ ಖಂಡಿತವಾಗಿಯೂ ಹೊಸ ಅನುಭವ ಕೊಡಲಿದೆ’ ಎಂದು ಹೇಳಿದರು.
ಶೀಘ್ರದಲ್ಲಿಯೇ ‘ಪ್ರೇಮದ ಊರಲಿ’ ಪ್ರೇಕ್ಷಕರ ಮುಂದೆ…
‘ಪ್ರೇಮದ ಊರಲಿ’ ಚಿತ್ರದಲ್ಲಿ ನಟ ಶ್ರೀರಾಮ್ ಚಿತ್ರದ ನಾಯಕನಾಗಿ ನಟಿಸಿದ್ದು, ತಪಸ್ವಿನಿ ಪೂಣಚ್ಚ ಹಾಗೂ ರಮಿಕಾ ಶಿವು ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ಶ್ರೀರಾಮ್ ತಂದೆ ಪಾತ್ರದಲ್ಲಿ ರಂಗಾಯಣ ರಘು ನಟಿಸಿದ್ದಾರೆ. ‘ಪ್ರೇಮದ ಊರಲಿ’ ಚಿತ್ರವನ್ನು ‘ವೆನಿಲ್ಲಾ ಎಂಟರ್ಟೈನ್ಮೆಂಟ್ಸ್’ ಮತ್ತು ‘ಜಾನಕಮ್ಮ ಪ್ರೊಡಕ್ಷನ್’ ನಡಿ ಮಮತಾ ದೇವೇಂದ್ರ, ಪ್ರಶಾಂತ್ ಹಾಗೂ ರಮೇಶ್ ಅವರು ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ‘ಪ್ರೇಮದ ಊರಲಿ’ ಚಿತ್ರದ ಹಾಡುಗಳಿಗೆ ಸುನಾದ ಗೌತಮ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ರಾಜ್ಕಾಂತ್ ಎಸ್. ಕೆ ಛಾಯಾಗ್ರಹಣ, ಹರ್ಷಿತ್ ಪ್ರಭು ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ‘ಪ್ರೇಮದ ಊರಲಿ’ ಚಿತ್ರದ ಅಂತಿಮ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿರುವ ಚಿತ್ರತಂಡ, ಶೀಘ್ರದಲ್ಲಿಯೇ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆ ಹಾಕಿಕೊಂಡಿದೆ.















