ವಿಕ್ಟರಿ ವೆಂಕಟೇಶ್ – ನಂದಮೂರಿ ಕಲ್ಯಾಣ್ ರಾಮ್ ಹೊಸಚಿತ್ರಕ್ಕೆ ಕ್ಲಾಪ್
ಟಾಲಿವುಡ್‌ನ ಮತ್ತೊಂದು ಬಿಗ್ ಸ್ಟಾರ್ಸ್ ಚಿತ್ರಕ್ಕೆ ತಯಾರಿ
ವಿಕ್ಟರಿ – ನಂದಮೂರಿ ಜೋಡಿ ಹೊಸಚಿತ್ರಕ್ಕೆ ಅನಿಲ್ ರವಿಪುಡಿ ಆಕ್ಷನ್ ಕಟ್
‘ಮಿಷನ್’ ನಿರ್ದೇಶಕನ ಹೊಸ ವಿಷನ್!
ಈ ಹಿಂದೆ ತೆಲುಗಿನಲ್ಲಿ ‘ಮಿಷನ್’ ಎಂಬ ಸೂಪರ್ ಹಿಟ್ ಸಿನೆಮಾವನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿರುವ ನಿರ್ದೇಶಕ ಅನಿಲ್ ರವಿಪುಡಿ, ಈ ಬಾರಿ ಮತ್ತೊಂದು ಮಲ್ಟಿಸ್ಟಾರ್ ಸಿನೆಮಾವನ್ನು ತೆರೆಗೆ ತರಲು ತಯಾರಿ ಮಾಡಿಕೊಂಡಿದ್ದಾರೆ. ಹೌದು, ಅನಿಲ್ ರವಿಪುಡಿ ನಿರ್ದೇಶನದ ಹೊಸಚಿತ್ರದಲ್ಲಿ ವಿಕ್ಟರಿ ವೆಂಕಟೇಶ್, ನಂದಮೂರಿ ಕಲ್ಯಾಣ್ ರಾಮ್ ನಾಯಕರಾಗಿ ನಟಿಸುತ್ತಿದ್ದು, ಕೀರ್ತಿ ಸುರೇಶ್ ಮತ್ತು ಕೃತಿ ಶೆಟ್ಟಿ ನಾಯಕಿಯರಾಗಿ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. 
ಬಿಗ್ ಬಜೆಟ್, ಬಿಗ್ ಸ್ಟಾರ್ಸ್ ಸಿನೆಮಾ…
ಇನ್ನು ಅನಿಲ್ ರವಿಪುಡಿ ನಿರ್ದೇಶನದ ಈ ಹೊಸ ಸಿನೆಮಾಕ್ಕೆ ಇನ್ನು ಟೈಟಲ್ ಅಂತಿಮವಾಗಿಲ್ಲ. ಈಗಾಗಲೇ ಈ ಸಿನೆಮಾದ ಪ್ರೀ-ಪ್ರೊಡಕ್ಷನ್ಸ್ ಕೆಲಸಗಳು ಪೂರ್ಣಗೊಂಡಿದ್ದು, ಇತ್ತೀಚೆಗೆ ಹೈದರಾಬಾದ್‌ನಲ್ಲಿ ಈ ಸಿನೆಮಾದ ಮುಹೂರ್ತ ಕೂಡ ಅದ್ಧೂರಿಯಾಗಿ ನೆರವೇರಿತು. ಟಾಲಿವುಡ್‌ನ ಖ್ಯಾತ ನಿರ್ಮಾಪಕ ದಿಲ್ ರಾಜು ಮತ್ತು ಸಿರೀಶ್, ಈ ಸಿನೆಮಾದ ಸ್ಕ್ರಿಪ್ಟ್ ಅನ್ನು ನಿರ್ದೇಶಕ ಅನಿಲ್ ರವಿಪುಡಿ ಮತ್ತು ನಿರ್ಮಾಪಕ ಸಾಹು ಗರಪತಿ ಅವರಿಗೆ ಹಸ್ತಾಂತರಿಸಿದರು. ಅದ್ದೂರಿ ಮುಹೂರ್ತ ಸಮಾರಂಭದಲ್ಲಿ, ವಿಕ್ಟರಿ ವೆಂಕಟೇಶ್, ಕಲ್ಯಾಣ್ ರಾಮ್, ಕೀರ್ತಿ ಸುರೇಶ್ ಮತ್ತು ಕೃತಿ ಶೆಟ್ಟಿ ನಟಿಸಿರುವ ಮೊದಲ ಶಾಟ್‌ಗೆ ತೆಲುಗಿನ ಹಿರಿಯ ನಿರ್ಮಾಪಕ ಅಲ್ಲು ಅರವಿಂದ್ ಕ್ಲಾಪ್ ಮಾಡಿದರು. ಸುರೇಶ್ ಬಾಬು ಕ್ಯಾಮೆರಾ ಸ್ವಿಚ್ ಗೆ ಚಾಲನೆ ಕೊಟ್ಟರು. ಖ್ಯಾತ ನಿರ್ಮಾಪಕ ಕೆ. ರಾಘವೇಂದ್ರ ರಾವ್ ಈ ಸಿನೆಮಾದ ಮುಹೂರ್ತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 
ಮುಂದಿನ ವರ್ಷ ಚಿತ್ರ ತೆರೆಗೆ…
‘ಶೈನ್ ಸ್ಕ್ರೀನ್ಸ್’ ಬ್ಯಾನರ್ ಅಡಿಯಲ್ಲಿ ಸಾಹು ಗರಪತಿ ನಿರ್ಮಿಸುತ್ತಿರುವ ಈ ಪ್ರಾಜೆಕ್ಟ್ ನ್ನು ‘ಸುರೇಶ್ ಪ್ರೊಡಕ್ಷನ್ಸ್’, ಅರ್ಚನಾ ಮತ್ತು ‘ಜೀ ಸ್ಟುಡಿಯೋಸ್’ ಪ್ರಸ್ತುತಪಡಿಸುತ್ತಿವೆ. ಅಂದಹಾಗೇ, ಇದು ಪಕ್ಕ ಕಾಮಿಡಿ ಎಂಟರ್ಟೈನರ್ ಸಿನೆಮಾ. 2027ರ ಸಂಕ್ರಾಂತಿ ವೇಳೆಗೆ ಈ ಚಿತ್ರ ಬಿಡುಗಡೆಯಾಗಲಿದೆ ಎಂಬುದು ಚಿತ್ರತಂಡದ ಮೂಲಗಳ ಮಾಹಿತಿ. ಅನುಭವಿ ತಾಂತ್ರಿಕ ವರ್ಗ ಚಿತ್ರದಲ್ಲಿದೆ. ಜಿ. ವಿ. ಪ್ರಕಾಶ್ ಕುಮಾರ್ ಸಂಗೀತ ಒದಗಿಸುತ್ತಿದ್ದು, ಸಮೀರ್ ರೆಡ್ಡಿ ಛಾಯಾಗ್ರಹಣ, ತಮ್ಮಿರಾಜು ಸಂಕಲನ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಎ. ಎಸ್. ಪ್ರಕಾಶ್ ಕಲಾ ನಿರ್ದೇಶನ ಚಿತ್ರಕ್ಕಿದೆ. ಇದೇ ಜುಲೈ ಮೊದಲ ವಾರದಿಂದ ಈ ಹೊಸ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಉಳಿದಂತೆ ಈ ಚಿತ್ರದ ಇತರ ಕಲಾವಿದರು ಮತ್ತು ತಂತ್ರಜ್ಞರ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.















