Telewalk

‘ಕಾಲಘಟ್ಟ’ ಚಿತ್ರದ ಮೂಲಕ ಕಿರುತೆರೆಯಿಂದ ಹಿರಿತೆರೆಯತ್ತ ಅಭಿ ದಾಸ್‌…

ಸೀರಿಯಲ್‌ನಿಂದ ಸಿನೆಮಾದತ್ತ ಅಭಿ ದಾಸ್‌

‘ನಂದಗೋಕುಲ’ ಸೀರಿಯಲ್ ಖ್ಯಾತಿಯ ಅಭಿ ದಾಸ್ ಸಿನೆಮಾ ಬಿಡುಗಡೆ

‘ಕಾಲಘಟ್ಟ’ ಚಿತ್ರದ ಮೂಲಕ ಹೀರೋ ಆದ ಅಭಿ

ಕನ್ನಡ ಕಿರುತೆರೆಯಲ್ಲಿ ‘ನಂದ ಗೋಕುಲ’ ಧಾರಾವಾಹಿಯ ಮೂಲಕ ನಟನಾಗಿ ಗುರುತಿಸಿಕೊಂಡಿದ್ದ ಯುವ ನಟ ಅಭಿದಾಸ್, ಇದೀಗ ಕಿರುತೆರೆಯಿಂದ ಹಿರಿತೆರೆಗೆ ನಾಯಕ ನಟನಾಗಿ ಅಡಿಯಿಟ್ಟಿದ್ದಾರೆ. ಹೌದು, ಅಭಿದಾಸ್‌ ನಾಯಕ ನಟನಾಗಿ ಅಭಿನಯಿಸಿರುವ ಹೊಸಚಿತ್ರಕ್ಕೆ ‘ಕಾಲಘಟ್ಟ’ ಎಂದು ಹೆಸರಿಡಲಾಗಿದ್ದು, ಇದೇ 2026ರ ಜೂನ್‌. 19ಕ್ಕೆ ಈ ಸಿನೆಮಾ ತೆರೆಗೆ ಬಂದಿದೆ.

‘ಕಾಲಘಟ್ಟ’ ಸಿನೆಮಾದ ಬಗ್ಗೆ ಮಾತನಾಡಿರುವ ನಾಯಕ ನಟ ಅಭಿ ದಾಸ್‌, ‘ಈ ಸಿನೆಮಾದಲ್ಲಿನಾನು ಹೀರೋ ಆಗಿ ನಟನೆ ಮಾಡಿದ್ದೇನೆ. ಪಾತ್ರ ತುಂಬಾ ವಿಭಿನ್ನವಾಗಿದೆ. 1995 ಹಾಗೂ 2025ರಲ್ಲಿ ಎರಡು ಟೈಮ್ ನಲ್ಲಿ ನಡೆಯುವ ಕಥೆ. ನನ್ನದು 1990ರಲ್ಲಿ ಬರುವ ಪಾತ್ರ. ಮೊದಲ ಬಾರಿಗೆ ಹಳ್ಳಿ ಹುಡುಗನ ಪಾತ್ರ ಮಾಡಿದ್ದೇನೆ. ‘ಕಿರಾತಕ’ ಸಿನೆಮಾದಲ್ಲಿ ಯಶ್ ಸರ್ ಮಾಡಿರುವ ಪಾತ್ರದ ರೆಫರೆನ್ಸ್ ತರ ಇದೆ. ನನ್ನ ಪಾತ್ರ ಚೆನ್ನಾಗಿ ಬಂದಿದೆ ಎಂದುಕೊಳ್ಳುತ್ತೇನೆ. ನಿರ್ಮಾಪಕರು ಕೃಷಿಕರು. ಅವರಿಗೆ ಸಿನೆಮಾ ಮೇಲೆ ಆಸಕ್ತಿ ಬಂದಿರುವುದು ಖುಷಿ ವಿಚಾರ. ನನ್ನ ಪಾತ್ರಕ್ಕೆ ನೋಡುಗರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ’ ಎಂದಿದ್ದಾರೆ.

ಕಿರುತೆರೆಯಲ್ಲಿ ಖ್ಯಾತಿಗಳಿಸಿರುವ ಅಭಿದಾಸ್ ಹಾಗೂ ನಿತಿನ್ ಇಬ್ಬರೂ ‘ಕಾಲಘಟ್ಟ’ ಚಿತ್ರದಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದು, ಇವರಿಗೆ ಮೇಘಾ ಮತ್ತು ಖುಷಿ ನಾಯಕಿಯರಾಗಿ ಅಭಿನಯಿಸಿದ್ದಾರೆ. ಉಳಿದಂತೆ ಹಿರಿಯ ಕಲಾವಿದರಾದ ಶೋಭ ರಾಜ್, ಭವ್ಯ, ಪ್ರಶಾಂತ್ ಹಾಗೂ ಅನೇಕ ರಂಗಭೂಮಿ ಕಲಾವಿದರು ಈ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಈ ಹಿಂದೆ ‘ಖಾಲಿ ಡಬ್ಬ’ ಎಂಬ ಸಿನೆಮಾವನನ್ನು ನಿರ್ದೇಶನ ಮಾಡಿದ್ದ ನಿರ್ದೇಶಕ ಕೆ. ಪ್ರಕಾಶ್ ಅಂಬಳೆ ‘ಕಾಲಘಟ್ಟ’ ಸಿನೆಮಾವನ್ನು ನಿರ್ದೇಶಿಸಿ ಪ್ರೇಕ್ಷಕರ ಮುಂದೆ ತಂದಿದ್ದಾರೆ. ನಿರ್ದೇಶಕ ಕೆ. ಪ್ರಕಾಶ್ ಅಂಬಳೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ‘ಕಾಲಘಟ್ಟ’ ಚಿತ್ರಕ್ಕೆ ಸದಾಶಿವ ಹಿರೇಮಠ ಹಾಗೂ ರಾಜ್ ಕಡೂರ್ ಛಾಯಾಗ್ರಹಣ, ಎ. ಎಂ. ನೀಲ್ ಸಂಗೀತ ನಿರ್ದೇಶನ, ವೆಂಕಿ ಯು.ಡಿ.ವಿ. ಸಂಕಲನ ಹಾಗೂ ಮಾಸ್ ಮಾದ ಸಾಹಸ ನಿರ್ದೇಶನವಿದೆ.

ಜನಪದ ಚಿತ್ರಕ್ಕೆ ಕಮರ್ಷಿಯಲ್‌ ಟಚ್‌…!

ಇಂದಿನ ಕಮರ್ಷಿಯಲ್ ಚಿತ್ರಗಳ ನಡುವೆ ಜಾನಪದ ಹಾಗೂ ಗೊರವನ ಸಂಸ್ಕೃತಿ ಇಟ್ಕೊಂಡು ಕಮರ್ಷಿಯಲ್ ಟಚ್ ಕೊಟ್ಟು ಚಿತ್ರ ಮಾಡಿದರೆ ಯಾರು ಹಣ ಹಾಕ್ತಾರೆ ಎಂಬ ಯೋಚನೆಯಲ್ಲಿ ನಿರ್ದೇಶಕರು ಇರುವಾಗಲೇ,  ನಿರ್ಮಾಪಕರು ಕಥೆ ಕೇಳಿ ಇಷ್ಟಪಟ್ಟು, ‘ಈ ಕಥೆ ಚೆನ್ನಾಗಿದೆ ಚಿತ್ರ ಮಾಡೋಣ’ ಎಂದು ಧೈರ್ಯ ಕೊಟ್ಟರಂತೆ. ‘ಅವರ ಧೈರ್ಯದಿಂದ ಈ ಚಿತ್ರವಾಗಿದೆ. ಅಲ್ಲಿಂದ ಶುರುವಾದ ಜರ್ನಿ ಈಗ ಚಿತ್ರ ಬಿಡುಗಡೆಯಾಗಿ ಪ್ರೇಕ್ಷಕರ ಮುಂದೆ ಬಂದು ನಿಂತಿದೆ’ ಎಂಬುದು ಚಿತ್ರತಂಡದ ಮಾತು. ಹೆಸರೇ ಹೇಳುವಂತೆ, ಇದು ಎರಡು ‘ಕಾಲಘಟ್ಟ’ ಗಳಲ್ಲಿ ನಡೆಯುವ ಕಥೆ. ಪೂರ್ವಾರ್ಧ ಮೂವತ್ತು ವರ್ಷಗಳ ಹಿಂದೆ , ದ್ವಿತೀಯಾರ್ಧ ಪ್ರಸ್ತುತ ಕಾಲಘಟ್ಟದಲ್ಲಿ ನಡೆಯುತ್ತದೆ. ಗ್ರಾಮೀಣ ಸೊಗಡಿನ ಜಾನಪದ ಕಲೆಯ ಬಗ್ಗೆ ಕೂಡ ಈ ಚಿತ್ರದಲ್ಲಿ ತೋರಿಸಲಾಗಿದೆ. ಲಯನ್ ಚಿಕ್ಕೇಗೌಡ ಹಾಗೂ ಟಿ. ಸಿ. ತಳಗವಾಡಿ ಚಿತ್ರಕ್ಕೆ ಹಣ ಹಾಕಿದ್ದು, ಇದೇ 2026 ರ ಜೂನ್ ತಿಂಗಳ‌ 19ಕ್ಕೆ ‘ಕಾಲಘಟ್ಟ’ ಸಿನೆಮಾ ತೆರೆಗೆ ಬಂದಿದೆ.

Related Posts

error: Content is protected !!