Street Beat

ಮಾನ್ಸೂನ್‌ ಜೊತೆಗೇ ‘ಮೋಡ ಕವಿದ ವಾತಾವರಣ’ ಕೂಡ ಬಂದಾಯ್ತು..!

ಮತ್ತೊಂದು ಪ್ರೇಮಕಥೆ ಹೊತ್ತು ಬಂದ ನಿರ್ದೇಶಕ ಸಿಂಪಲ್ ಸುನಿ

‘ಶಿಷ್ಯನಿಗಾಗಿ ಮೋಡ ಕವಿದ ವಾತಾವರಣ’ ಸೃಷ್ಟಿಸಿದ ಸಿಂಪಲ್ ಡೈರೆಕ್ಟರ್

ನಾಯಕ ನಟನಾಗಿ ಅಡಿಯಿಡಲು ಶೀಲಮ್ ರೆಡಿ

‘ಒಂದು ಸರಳ ಪ್ರೇಮಕಥೆ’, ‘ಗತ ವೈಭವ’ ಸಿನೆಮಾಗಳ ಬಳಿಕ ನಿರ್ದೇಶಕ ಸಿಂಪಲ್ ಸುನಿ ಮತ್ತೊಂದು ಸಿನೆಮಾವನ್ನು ಪ್ರೇಕ್ಷಕರ ಮುಂದೆ ತರಲು ಭರದ ತಯಾರಿ ಮಾಡಿಕೊಂಡಿದ್ದಾರೆ. ಹೌದು, ಸಿಂಪಲ್‌ ಸುನಿ ನಿರ್ದೇಶನದ ‘ಮೋಡ ಕವಿದ ವಾತಾವರಣ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಇದೇ 2026ರ ಜೂ. 26ರಂದು ಚಿತ್ರ ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಇನ್ನು ‘ಮೋಡ ಕವಿದ ವಾತಾವರಣ’ ಚಿತ್ರದ ಬಿಡುಗಡೆಗೂ ಮುನ್ನ ಚಿತ್ರದ ನಾಯಕ ನಟನ ಸ್ಪೆಷಲ್‌ ಟೀಸರ್‌ ಬಿಡುಗಡೆ ಮಾಡಿರುವ ನಿರ್ದೇಶಕ ಸಿಂಪಲ್‌ ಸುನಿ ಮತ್ತು ತಂಡ ಭರದಿಂದ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದೆ. ಇದೇ ವೇಳೆ ಮಾಧ್ಯಮಗಳ ಮುಂದೆ ಬಂದಿದ್ದ ಸುನಿ ಟೀಮ್‌, ‘ಮೋಡ ಕವಿದ ವಾತಾವರಣ’ ಬಗ್ಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿತು.

ತಮ್ಮ ಗರಡಿ ಹುಡುಗನನ್ನೇ ಫೀಲ್ಡ್‌ಗಿಳಿಸಲು ‘ಸಿಂಪಲ್‌’ ಪ್ಲಾನ್‌!

ಇಲ್ಲಿಯವರೆಗೆ ಹಲವು ನಾಯಕ ನಟರಿಗೆ ಆಕ್ಷನ್‌-ಕಟ್‌ ಹೇಳಿರುವ, ಹಲವು ಹೊಸ ಪ್ರತಿಭೆಗಳನ್ನು ತಮ್ಮ ಸಿನೆಮಾದ ಮೂಲಕ ಹೀರೋ ಆಗಿ ಚಿತ್ರರಂಗಕ್ಕೆ ಪರಿಚಯಿಸಿರುವ ನಿರ್ದೇಶಕ ಸಿಂಪಲ್‌ ಸುನಿ, ಈ ಬಾರಿ ತಮ್ಮ ಗರಡಿಯಲ್ಲೇ ಪಳಗಿರುವ ಯುವ ಪ್ರತಿಭೆ ಶೀಲಂ ಅವರನ್ನು ನಾಯಕ ನಟನಾಗಿ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಕೆಲ ವರ್ಷಗಳಿಂದ ನಿರ್ದೇಶಕ ಸಿಂಪಲ್‌ ಸುನಿ ಅವರ ಜೊತೆಗೆ ಕೆಲಸ ಮಾಡಿರುವ ಅವರ ನಿರ್ದೇಶನದ ಹಲವು ಚಿತ್ರಗಳಲ್ಲಿ ಚಿಕ್ಕ-ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಶೀಲಂ ಅವರನ್ನು ‘ಮೋಡ ಕವಿದ ವಾತಾವರಣ’ ಚಿತ್ರದ ಮೂಲಕ ನಿರ್ದೇಶಕ ಸುನಿ ಗಾಂಧಿನಗರದಲ್ಲಿ ಫೀಲ್ಡ್‌ಗೆ ಇಳಿಸುವ ‘ಸಿಂಪಲ್‌’ ಪ್ಲಾನ್‌ ಮಾಡಿಕೊಂಡಿದ್ದಾರೆ! ಈ ಮೂಲಕ ಮತ್ತೊಬ್ಬ ಹೊಸ ಹೀರೋವನ್ನು ಸುನಿ ತಮ್ಮ ಗರಡಿಯಿಂದ ಕಣಕ್ಕಿಳಿಸುತ್ತಿದ್ದಾರೆ.

‘ಮೋಡ ಕವಿದ ವಾತಾವರಣ’ದ ಬಗ್ಗೆ ಸುನಿ ಏನಂತಾರೆ..? 

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ‘ಮೋಡ ಕವಿದ ವಾತಾವರಣ’ ಸಿನೆಮಾದ ಹೀರೋ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ವೇಳೆ ಮಾತನಾಡಿದ ನಿರ್ದೇಶಕ ಸಿಂಪಲ್‌ ಸುನಿ, ‘ಇದು ನನ್ನ ವೃತ್ತಿ ಜೀವನದ ಸ್ಪೆಷಲ್ ಸಿನೆಮಾ. ‘ಒಂದು ಸರಳ ಪ್ರೇಮ ಕಥೆ’ ಆದ್ಮೇಲೆ ನಿರ್ಮಾಪಕ ರಮೇಶ್ ಸರ್ ನಮ್ಮ ಟೀಂ ಜೊತೆ ಕೈ ಜೋಡಿಸಿರುವುದಕ್ಕೆ ಪಾಸಿಟಿವ್ ವೈಬ್ಸ್ ಇದೆ. ನನ್ನ ಸಿನೆಮಾದಲ್ಲಿ ಟ್ರೇಲರ್ ಚೆನ್ನಾಗಿ ಕಟ್ ಮಾಡುತ್ತೇನೆ ಎಂದು ಎಲ್ಲರೂ ಹೇಳುತ್ತಾರೆ. ಆದ್ರೆ ಈ ಚಿತ್ರದ ಚಾಲೆಂಜ್ ಏನೂ ಎಂದರೆ ಟ್ರೇಲರ್ ಕಟ್ ಚೆನ್ನಾಗಿ ಮಾಡಲು ಆಗುವುದಿಲ್ಲ ಎನ್ನುವುದು ಗೊತ್ತು. ಚಿತ್ರದ ಅರ್ಧ ಪಾರ್ಟ್ ನಾನು ಥಿಯೇಟರ್ ನಲ್ಲೇ ರಿವೀಲ್ ಮಾಡುವುದು. ಸಿನೆಮಾದಲ್ಲಿ ಏನೋ ಒಂದು ಅಂಶವಿದೆ. ಅದನ್ನು ಥಿಯೇಟರ್ ನಲ್ಲಿಯೇ ನೋಡಬೇಕು. ಹೀಗಾಗಿ ಅರ್ಧ ಸಿನೆಮಾದಲ್ಲಿ ಟ್ರೇಲರ್ ಕಟ್ ಮಾಡಬೇಕು. ನಾಯಕ ಶೀಲಮ್ ಚೆನ್ನಾಗಿ ನಟಿಸಿದ್ದಾರೆ. ಪ್ರೇಕ್ಷಕರು ನೋಡಿ ಹಾರೈಸಬೇಕು’ ಎಂದರು.

ಶೀಲಂಗೆ ಹೀರೋ ಆಗಿದ್ದೇ ಪವಾಡವಂತೆ…

ನಾಯಕ ಶೀಲಮ್ ಮಾತನಾಡಿ, ‘ನಿಜವಾಗಿಯೂ ನಾನು ಈ ಸಿನೆಮಾಕ್ಕೆ ಹೀರೋ ಆಗಿರುವುದೇ ಪವಾಡ. ಯಾಕೆಂದರೆ ಎಲ್ಲರೂ ಹೀರೋ ಆಗಲು ಆಗುವುದಿಲ್ಲ. ಎಷ್ಟೇ ದುಡ್ಡಿದ್ದರು, ಎಷ್ಟೇ ಆಕ್ಟಿಂಗ್ ಸ್ಕಿಲ್ ಇದ್ದರೂ ಆಗಲು ಆಗುವುದಿಲ್ಲ. ಡ್ಯಾನ್ಸ್, ಫೈಟ್ ಬರುತ್ತೆ. ನೋಡಲು ಚೆನ್ನಾಗಿದ್ದರೂ ಆಗಲ್ಲ. ಆದರೆ ಎಲ್ಲವನ್ನೂ ದಾಟಿ ಪವಾಡ ಆಗಬೇಕು. ನನ್ನ ಜೀವನದಲ್ಲಿ ಕೂಡ ಅಂಥದ್ದೇ ಪವಾಡ ಆಗಿದೆ. ಇದಕ್ಕೆ ಕಾರಣ ನಿರ್ದೇಶಕ ಸುನಿ ಸರ್. ನನ್ನ ಸಿನಿ ಜರ್ನಿಯಲ್ಲಿ ಏನೇ ಸಾಧಿಸಿದ್ದರು ನಾನು ಆ ಕ್ರೆಡಿಟ್ ಅವರಿಗೆ ಕೊಡುತ್ತೇನೆ. ‘ಮೋಡ ಕವಿದ ವಾತಾವರಣ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಹೀರೋ ಆಗಿ ಪಾದಾರ್ಪಣೆ ಮಾಡುತ್ತಿದ್ದೇನೆ. ಹೀರೋ ಟೀಸರ್ ಎಲ್ಲರಿಗೂ ಇಷ್ಟವಾಗಿದೆ ಎಂದುಕೊಳ್ಳುತ್ತೇನೆ. ನಿರ್ಮಾಪಕ ರಮೇಶ್ ಸರ್ ಈ ಚಿತ್ರಕ್ಕೆ ಸಾಥ್ ಕೊಟ್ಟಿದ್ದಾರೆ. ಈ ಟೀಮ್ ಸೂಪರ್ ಸ್ಟಾರ್ಸ್ ಗೆ ಸಿನೆಮಾ ಮಾಡುವ ತಂಡ. ಆದರೆ ನನ್ನನ್ನು ಹಾಕಿಕೊಂಡು ಚಿತ್ರ ಮಾಡಿದ್ದಾರೆ. ಅದು ನನ್ನ ಪುಣ್ಯ. ನನ್ನ ಇಡೀ ತಂಡಕ್ಕೆ ಧನ್ಯವಾದ’ ಎಂದಿದ್ದಾರೆ.

ಇದೇ ತಿಂಗಳಾಂತ್ಯಕ್ಕೆ ‘ಮೋಡ ಕವಿದ ವಾತಾವರಣ’ದ ರಿಸಲ್ಟ್‌…

ಸೈಂಟಿಫಿಕ್‌ ಫಿಕ್ಷನ್‌ ಲವ್ ಸ್ಟೋರಿ ಹೊಂದಿರುವ ‘ಮೋಡ ಕವಿದ ವಾತಾವರಣ’ ಚಿತ್ರದಲ್ಲಿ ಯುವ ನಟ ಶೀಲಂ ಗೆ ಜೋಡಿಯಾಗಿ ಸಾತ್ವಿಕಾ ಹಾಗೂ ಮೋಕ್ಷಾ ಕುಶಾಲ್ ಜೋಡಿಯಾಗಿ ನಟಿಸಿದ್ದಾರೆ. ಈ ಹಿಂದೆ ವಿನಯ್‌ ರಾಜಕುಮಾರ್‌ ಅಭಿನಯಿಸಿದ್ದ ‘ಒಂದು ಸರಳ ಪ್ರೇಮಕಥೆ’ ಸಿನೆಮಾವನ್ನು ನಿರ್ಮಾಣ ಮಾಡಿದ್ದ ‘ರಾಮ್‌ ಮೂವೀಸ್’ ಬ್ಯಾನರಿನನಲ್ಲಿ ಈ ಸಿನೆಮಾ ನಿರ್ಮಾಣವಾಗಿದೆ. ಮೈಸೂರು ರಮೇಶ್, ಶ್ರೀರಂಗರಾಜು, ಲೋಕೇಶ್ ಬೆಳವಾಡಿ ಹಾಗೂ ಗೋವಾ ರಮೇಶ್ ಜಂಟಿಯಾಗಿ ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ. ‘ಮೋಡ ಕವಿದ ವಾತಾವರಣ’ ಚಿತ್ರಕ್ಕೆ ಸಂತೋಷ್ ರೈ ಪಾತಾಜೆ ಕ್ಯಾಮೆರಾ ಹಿಡಿದಿದ್ದು, ಆದಿತ್ಯ ಕಶ್ಯಪ್‌ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ‘ಮೋಡ ಕವಿದ ವಾತಾವರಣ’ ಚಿತ್ರದ ಹಾಡುಗಳಿಗೆ ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಇದೇ 2026ರ ಜೂ. 26ಕ್ಕೆ ಈ ಚಿತ್ರ ಬಿಡುಗಡೆಯಾಗಿ ತೆರೆಗೆ ಬರುತ್ತಿದೆ. ಈಗಾಗಲೇ ‘ಮೋಡ ಕವಿದ ವಾತಾವರಣ’ ಚಿತ್ರದ ಹಾಡುಗಳು ಮತ್ತು ಟೀಸರಿಗೆ ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಚಿತ್ರ ಥಿಯೇಟರಿನಲ್ಲಿ ಎಷ್ಟರ ಮಟ್ಟಿಗೆ ಪ್ರೇಕ್ಷಕರ ಮನ ಗೆಲ್ಲಲಿದೆ ಎಂಬುದು ಇದೇ 2026ರ ಜೂನ್‌ ಅಂತ್ಯಕ್ಕೆ ಗೊತ್ತಾಗಲಿದೆ.

Related Posts

error: Content is protected !!